ಬಹಿರಂಗ

ಸಂವಿಧಾನ ನಿತ್ಯದ ಪಾಠವಾಗಲಿ..!

Published

on

  • ಸನಾವುಲ್ಲ ನವಿಲೇಹಾಳ್

ನಾನು ಮೊದಲು ಎರಡು ವಿಷಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇನೆ,ಒಂದು;ಆಗಸ್ಟ್ -09-2018 ರಂದು ದೆಹಲಿಯ ಜಂತರ್ ಮಂತರ್ ಎಂಬಲ್ಲಿ ದುಷ್ಟ ಬುದ್ದಿಯ ಕೆಲವರು ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿದರು.

ಎರಡನೆಯದು; ಕರ್ನಾಟಕ ವಿಧಾನ ಸಭೆಯ ಚುನಾವಣ ಪ್ರಚಾರದ ವೇಳೆ ಕೇಂದ್ರ ಮಂತ್ರಿಯೊಬ್ಬರು ‘ಸಂವಿಧಾನವನ್ನು ಬದಲಾಯಿಸಬೇಕು,ಅದಕ್ಕಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ, ಎಂದು ಭಾಷಣಮಾಡಿ ವಿವಾದವೆಬ್ಬಿಸಿದರು.

ನಾವು ಈ ಎರೆಡು ಘಟನೆಗಳನ್ನ ಒಟ್ಟಿಗೆಯಿಟ್ಟು ನೋಡಿದಾಗ ಇಂದು ನಾವು ಅಂಬೇಡ್ಕರ್ ಅವರ ಜನ್ಮದಿನವನ್ನು ಯಾವ ಆಶಯಗಳೊಂದಿಗೆ ಆಚರಿಸಬೇಕು, ಎಂಬ ಪ್ರಶ್ನೆ ನಮ್ಮ ಕಣ್ಣಮುಂದೆ ಬರುತ್ತದೆ. ಸಂವಿಧಾನವನ್ನು ಬದಲಾಯಿಸುವುದು ಬೇರೆ ,ತಿದ್ದುಪಡಿ ಮಾಡುವುದು ಬೇರೆ. 368 ನೆ ವಿಧಿಯಲ್ಲಿ ಸಂವಿಧಾನ ತಿದ್ದುಮಾಡುವ ಅವಕಾಶ ಕಲ್ಪಿಸಲಾಗಿದೆ, ನಾವು ಸಂವಿಧಾನ ಬದಲಾಯಿಸುತ್ತೇವೆ ಎಂಬ ಮಾತಿನಲ್ಲಿ ತಿದ್ದುಪಡಿ ಮಾಡುವ ಅಪೇಕ್ಷೆಯಿಲ್ಲ.

ಈ ತರಹದ ಮಾತುಗಳು ಜನರ ಅಸಹನೆ ಸ್ಪೋಟಗೊಳ್ಳುವಲ್ಲಿ ಸಹಕಾರಿಯಾಗುತ್ತವೆ ಎಂಬುದಕ್ಕೆ ದೆಹಲಿಯಲ್ಲಿ ಸಂವಿಧಾನ ಪ್ರತಿಸುಟ್ಟ ಘಟನೆ ಸಾಕ್ಷಿಯಾಗುತ್ತದೆ. ಅಂಬೇಡ್ಕರ್ ಅವರ 130 ನೆ ಜನ್ಮದಿನದ ಈ ಸಂದರ್ಭದಲ್ಲಿ ಸಂವಿಧಾನ ನಮಗೆ ಎಷ್ಟರ ಮಟ್ಟಿಗೆ ತಿಳಿದಿದೆ ಎಂದು ನಮ್ಮನ್ನು ನಾವೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ, ಈಗ ನನ್ನ ಕಣ್ಣೆದರಿಗೆ ಇರುವ ಬಹುಪಾಲು ಜನರು ಸ್ವತಂತ್ರ ನಂತರ ಅಥವಾ ಸಂವಿಧಾನ ಹುಟ್ಟಿದ ನಂತರ ಹುಟ್ಟಿದವರಿರಬಹುದು ಎಂದು ಭಾವಿಸಿದ್ದೇನೆ.

ಹಾಗಾಗಿ ನಮ್ಮ ದೇಶಕ್ಕೆ ಈ ತೆರೆನಾದ ಸಂವಿಧಾನ ಬೇಕು ಎಂಬ ಅಂಬೇಡ್ಕರ್ ಅವರ ದನಿಯ ಹಿಂದಿನ ಅನುಭವ ಮತ್ತು ಸಂಕಟ ನಮಗ್ಯಾರಿಗೂ ಇರಲಾರದು, ಇದನ್ನು ಅರ್ಥಮಾಡಿಕೊಳ್ಳ ಬೇಕಾದರೆ ನಾವು ಅಂಬೇಡ್ಕರ್ ಅವರ ಬದುಕನ್ನ ಅಧ್ಯಾಯನ ಮಾಡಬೇಕಾಗಿದೆ,ನಂತರ ಸಂವಿಧಾನ ನಮಗೆ ಅರ್ಥವಾಗ ಬಹುದು.

ಅನೇಕ ನಾಯಕರ, ಜನಸಾಮನ್ಯರ,ಹುತಾತ್ಮರ ತ್ಯಾಗ ಬಲಿದಾನದ ಸಾಕಾರದಿಂದ 1947 ಆಗಷ್ಟ್ 15 ರಂದು ಸಿಕ್ಕ ಸ್ವತಂತ್ರದ ಆಶಯವನ್ನು ಸಾಕಾರಗೊಳಿಸಲು,1950-ಜನವರಿ 26 ರಂದು ನಮ್ಮ ದೇಶದಲ್ಲಿ ಸಂವಿಧಾನ ಜಾರಿಗೆ ತರಲಾಯಿತು.
ಒಂದು ದೇಶದ ಸಂವಿಧಾನವೆಂದರೆ ಅದು ಆ ದೇಶದ ಪವಿತ್ರ ಗ್ರಂಥವೆ ಸರಿ, ಸಂವಿಧಾನವನ್ನು ಅಪಮಾನಿಸುವುದು ದೇಶವನ್ನು ಅಪಮಾನಿಸಿದಂತೆ, ಯಾವುದಾದರೂ ಒಂದು ಸಮಾರಂಭದಲ್ಲಿ ಸೇರಿರುವ ಜನರಿಗೆ ಎಷ್ಟು ಮನೆಗಳಲ್ಲಿ ಭಗವದ್ಗೀತೆ ಇದೆ ಅಂತ ನಾನು ಪ್ರಶ್ನೆಕೇಳಿದರೆ, ಕೆಲವು ಹಿಂದೂ ಸ್ನೇಹಿತರು ಕೈ ಎತ್ತಬಹುದು.

ಎಷ್ಟು ಮನೆಗಳಲ್ಲಿ ಕುರಾನ್ ಇದೆ ಎಂದರೆ ಕೆಲವು ಮುಸ್ಲೀಂ ಸ್ನೇಹಿತರು ಕೈ ಎತ್ತ ಬಹುದು, ಅಥವಾ ಕೆಲವು ಮುಸ್ಲೀಂ ಭಾಂದವರು ನಮ್ಮ ಮನೆಯಲ್ಲಿ ಭಗವದ್ಗೀತೆ ಇದೆ ಎನ್ನಬುದು, ಕೆಲವು ಹಿಂದೂ ಬಾಂಧವರು ನಮ್ಮ ಮನೆಯಲ್ಲಿ ಕುರಾನ್ ಇದೆ ಎನ್ನಬಹುದು, ಆದರೆ ಯಾರ ಮನೆಯಲ್ಲಿ ಸಂವಿಧಾನದ ಪ್ರತಿ ಇದೆ ಎಂದು ಕೇಳಿದರೆ ಬಹುಷ್ಯ ಯಾರು ಕೈ ಎತ್ತಲಿಕ್ಕಿಲ್ಲ ಅನ್ನಿಸುತ್ತೆ.

ನಾನು ಮೇಲೆ ಹೇಳುವಾಗ ಸಂವಿಧಾನವನ್ನು ಒಂದು ದೇಶದ ಪವಿತ್ರ ಗ್ರಂಥ ಎಂದು ಹೇಳಿದೆ ಆಗೆಂದ ತಕ್ಷಣ ಅದನ್ನು ಜನರು ಒಂದು ಬಟ್ಟೆಯಲ್ಲಿ ಸುತ್ತಿ ಯಾರಿಗೂ ಸಿಗದ ಹಾಗೆ ಇಡುವ ಅಪಾಯ ಇದೆ, ಹಾಗಾಗಿ ನನ್ನ ವಾಖ್ಯವನ್ನ ಬದಲಿಸುತ್ತೇನೆ, ‘ಸಂವಿಧಾನ ಅದೊಂದು ಮಹತ್ವದ ಗ್ರಂಥ’. ಬೇಕಾದರೆ ಅವರ ಅವರ ಧರ್ಮಗ್ರಂಥಗಳನ್ನ ಬಟ್ಟೆಯಲ್ಲಿ ಸುತ್ತಿಡಲಿ, ಆದರೆ ಸಂವಿಧಾನದಂತ ಮಹತ್ವದ ಗ್ರಂಥವನ್ನು ನಿಮ್ಮ ಮನೆಯವರೆಲ್ಲರಿಗೂ ಕೈಗೆಟುಕುವಂತೆ ಇಟ್ಟು ಓದಿಸುವ ಕೆಲಸ ಮಾಡಿ.

ಸಂವಿಧಾನದ ಪ್ರತಿ ಪುಟಗಳು ಹರಿದು ಹೋಗುವಂತೆ ಓದಿ,ಅದರ ತಾತ್ವಿಕ ನೆಲೆ ಏನು ಎಂಬುದನ್ನು ಎಲ್ಲಾ ಧರ್ಮ,ಜಾತಿಯವರು ಅರ್ಥೈಸಿಕೊಂಡು ಬದುಕಿದರೆ ಮಾತ್ರ ನಾವು ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಿಕ್ಕೆ ಮತ್ತಷ್ಟು ಯೋಗ್ಯತೆಯನ್ನ ಪಡೆದುಕೊಳ್ಳುತ್ತೇವೆ.
ನಮಗೆ ಇವತ್ತು ಆತಂಕದ ವಿಷಯ ಏನು ಅಂತ ಹೇಳಿದರೆ ‘ಯುವ ಜನತೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ’.

ನಮ್ಮನ್ನು ಮುನ್ನಡೆಸಬೇಕಾದ ಸಂವಿದಾನವನ್ನು ನಾವು ಕಪಾಡಿಕೊಳ್ಳಬೇಕಾದ ಸಂದರ್ಭಬಂದಿರುವಂತದ್ದು,ಮತ್ತು ಸಂವಿಧಾನವು ಪ್ರತಿಪಾದಿಸಿದ ಬಹುತ್ವ ಭಾರತೀಯತೆಯ ತತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ’. ಬಹುತ್ವ ಭಾರತ ಎಂದರೆ ಒಂದು ದೇಶದದೊಳಗಿನ ಎಲ್ಲಾ ಧರ್ಮಿಯರನ್ನು, ಸಮುದಾಯಗಳನ್ನು ಸಮಾನತೆ, ಸಮತೆಯಿಂದ ಕಾಣಬೇಕು ಎಂಬುದು ಸಂವಿಧಾನದ ಆಶಯವಾಗಿದೆ, ಆದರೆ ಇಂದು ಹಿಂದುತ್ವದ ಹೆಸರಿನಲ್ಲಿ ಕೆಲವರು ಅನ್ಯಧರ್ಮದ ನಿಂದನೆಯನ್ನ ಮಾಡುವುದನ್ನು ಕಾಣುತ್ತಿದ್ದೇವೆ.

ಇಸ್ಲಾಂ ಧರ್ಮದ ಹೆಸರಿನಲ್ಲಿ ಕೆಲವರು ಅಮಾನವೀಯವಾಗಿ ನಡೆದುಕೊಳ್ಳುವುದನ್ನ ಕಾಣುತ್ತಿದ್ದೇವೆ, ‘ಸರ್ವೆಜನ ಸುಖಿನೋ ಭವಂತೋ’ ಅನ್ನೊ ಭಗವದ್ಗೀತೆ ಮಾತಿಗೆ ಅಪಮಾನವಾಗುತ್ತಿದೆ. ‘ನಮ್ಮ ಮನೆಯ ಪಕ್ಕದ ಮನೆಯವನು ಯಾವ ಧರ್ಮಿಯನೆ ಆಗಿರಲಿ ಅವನ ಹಸಿವು ಕಷ್ಟಗಳಿಗೆ ಸ್ಪಂದಿಸಬೇಕು’ ಎನ್ನುವ ಕುರಾನ್ ನ ಮಾತಿಗೆ ಅಪಮಾನ ಮಾಡುತ್ತಿದ್ದೇವೆ.

ಇಂತವರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಿದೆ, ಎರೆಡು ಧರ್ಮದ ಇಂತಹ ಕೆಲವರಿಂದ ಹಲವು ಒಳ್ಳೆಮನಸುಗಳಿಗೆ ಮುಜುಗರದ ಬದುಕು ಎದುರುಗೊಳ್ಳುತ್ತದೆ.
ಅಂಬೇಡ್ಕರ್ ಕೊಟ್ಟ ಸಂವಿಧಾನ ನಮಗೆ ಜಾತ್ಯಾತೀತವಾಗಿ, ಸಮಾನತೆಯಿಂದ, ಸಮತೆಯಿಂದ,ಸಹೋಧರತೆಯಿಂದ ಬದುಕುವುದನ್ನು ಕಲಿಸುತ್ತದೆ.

ಇದು ಅಂಬೇಡ್ಕರ್ ಅವರು ನಮಗೆ ಸಂವಿಧಾನದ ರೂಪದಲ್ಲಿ ಎಲ್ಲಾ ಧರ್ಮಗಳ ಆಚೆಯಿರುವ ‘ಮಾನವಧರ್ಮ’ವನ್ನು ಕೊಟ್ಟಿರುವಂತದ್ದು, ಮನುಷ್ಯರನ್ನ ಮನುಷ್ಯರಂತೆ ಕಾಣುವುದನ್ನು ಕಲಿಸಿರುವಂತದ್ದನ್ನು ನಾವು ಅರ್ಥೈಸಿಕೊಂಡು ನಡೆಯಬೇಕಾಗಿದೆ.

ಅಂಬೇಡ್ಕರ್ ಅವರಿಗೆ ಈ ತರದ ಆಲೋಚನೆ ಕೇವಲ ಶಕ್ಷಣದಿಂದ ಬಂದದ್ದಲ್ಲ ಸ್ವತ: ಅವರು ಇದನ್ನೆಲ್ಲಾ ತಮ್ಮ ಜೀವನದಲ್ಲಿ ಅನುಭವಿಸಿದ್ದರಿಂದ ಬಂದಿರುವಂತದ್ದು, ‘ಮನುಧರ್ಮ’ದಲ್ಲಿದ್ದಂತ ಸಾಮಾಜಿಕ, ಧಾರ್ಮಿಕ, ಆಚರಣೆಗಳಿಂದ ನೋವುಂಡವರು ಅಂಬೇಡ್ಕರ್ ಅವರು.

ಹಾಗಾಗಿ ಇಂತಹ ಒಂದು ವ್ಯವಸ್ಥೆಯ ವಿರುದ್ದ ತಿರುಗಿಬಿದ್ದು ತಾನು ಅನುಭವಿಸಿದ ಸಂಕಟ,ನೋವು,ಅವಮಾನಗಳು ನನ್ನ ಮುಂದಿನ ತಲೆಮಾರು ಅನುಭವಿಸಭಾರದು ಎಂಬುದು ಅಂಬೇಡ್ಕರ್ ಅವರ ಕನಸ್ಸಾಗಿತ್ತು. ಆದರೆ ಇವತ್ತು ನಾವು ಯಾವ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆಂದು ಆಲೋಚಿಸಿದರೆ ಅಂದಿನ ಆಚರಣೆ,ಸಂಪ್ರದಾಯ,ಧಾರ್ಮಿಕ ನಂಬಿಕೆಗಳ ವಿರುದ್ದ ತಿರುಗಿಬೀಳಲು ಅಂಬೇಡ್ಕರ್ ಅವರ ಹೋರಾಟ ಎಷ್ಟು ಮುಖ್ಯವಾಗಿತ್ತೊ, ಇಂದು ಅವರು ಕೊಟ್ಟ ಸಂವಿಧಾನ ನಮಗೆ ಅಷ್ಟೆ ಮುಖ್ಯವಾಗಿದೆ ಮತ್ತು ಪ್ರಸ್ತುತವಾಗಿದೆ.

1931-ಆಗಷ್ಟ್-14 ನೆ ತಾರೀಕು ಅಂಬೇಡ್ಕರ್ ಅವರು ಮಹತ್ಮಗಾಂಧಿಯವರನ್ನ ಭೇಟಿಮಾಡಿದ ಸಂದರ್ಭದಲ್ಲಿ ತುಂಬಾ ಮನನೊಂದು ಹೀಗೆ ಹೇಳಿದರಂತೆ: ‘ನನಗೆ ಒಂದು ತಾಯ್ನಾಡಿಲ್ಲ ಅಂತ ನಾನು ಹೇಳಲು ಹಿಂಜರಿಯುವುದಿಲ್ಲ ಏಕೆಂದರೆ ನನ್ನನ್ನು ಅತ್ಯಂತ ಕೀಳಾಗಿ ಕಾಣುವ ಈ ನಾಡನ್ನು, ನನ್ನನ್ನೆ ಅತ್ಯಂತ ಕೀಳಾಗಿ ಕಾಣುವ ಈ ಧರ್ಮವನ್ನು ನನ್ನ ನಾಡು,ನನ್ನ ಧರ್ಮ ಅಂತ ಒಪ್ಪಲು ನನಗೆ ಆಗುವುದಿಲ್ಲ ಅಂತ ವಿಷಾದಿಸುತ್ತೇನೆ.

ಒಂದು ವೇಳೆ ಈ ಕಾರಣಕ್ಕೆ ನನ್ನನ್ನು ದೇಶದ್ರೋಹಿ ಅಂತ ಕರೆಯುವುದಾದರೆ ಅದಕ್ಕೆ ನನ್ನ ವಿಷಾದ ಇಲ್ಲ.ಯಾಕೆಂದರೆ ನನ್ನನ್ನು ದೇಶದ್ರೋಹಿಯಾಗಿ ಮಾಡಿದ್ದು ಈ ನಾಡು.’ ಎಂದು ಹೇಳಿದರು. ಇದು ಅಂಬೇಡ್ಕರ್ ಅವರ ಸ್ವಾಭಿಮಾನದ ನುಡಿಗಳೆ ಸರಿ. ಅಂದು ಆಚರಣೆಯಲ್ಲಿದ್ದಂತ ವರ್ಣ ವ್ಯೆವಸ್ಥೆಯಿಂದ ಅವರು ಅನುಭವಿಸಿದ ಯಾತನೆ ಅವರನ್ನ ಹೀಗೆ ಮಾತನಾಡುವಂತೆ ಮಾಡಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ಬಹುಷ್ಯ ಅಂಬೇಡ್ಕರ್ ಅವರು 1956 ಅಕ್ಟೋಬರ್ 14 ರಂದು ಬೌದ್ಧಧರ್ಮವನ್ನು ಸ್ವೀಕಾರ ಮಾಡ್ತಾರೆ. ಅದೆ ಧರ್ಮದಲ್ಲಿ 1956 ಡಿಸೆಂಬರ್ 06 ರಂದು ಅಂಬೇಡ್ಕರ್ ಅವರು ಪರಿನಿರ್ವಾಣವಾಗುತ್ತಾರೆ. ನಮ್ಮ ದೇಶಕ್ಕೆ ಸಂವಿಧಾನದಂತ ಮಾಹಾನ್ ಕೊಡುಗೆ ಕೊಟ್ಟ ಅಂಬೇಡ್ಕರ್ ಅವರಿಗೆ ಭಾರತ ರತ್ನ ಸಿಗೋದಿಕ್ಕೆ 1989/90 ರ ವರೆಗೆ ಕಾಯಬೇಕಾಯಿತು.

ಡಾ. ಬಿ.ಆರ್.ಅಂಬೇಡ್ಕರ್ ಅವರು ಕೇವಲ ಅಸ್ಪøಶ್ಯರ, ದಲಿತರ,ಹೇಳ್ಗೆಗೆ ಮಾತ್ರವಲ್ಲದೆ,ಮಹಿಳೆಯರ ,ಸರ್ಕಾರಿ ನೌಕರರ,ಖಾಸಗಿ ನೌಖರರ,ಕಾರ್ಮಿಕರ,ರೈತರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ಬಹಳ ಮುಖ್ಯವಾಗಿ ನಮ್ಮ ದೇಶ ಮುನ್ನಡೆಯಲು ಒಳ್ಳೆ ಸಂವಿಧಾನವನ್ನು ಕೊಟ್ಟಿದ್ದಾರೆ ಸಂವಿಧಾನದ ಬಗ್ಗೆ ಇಂದು ತೀರ ಅವಶ್ಯಕವಾಗಿ ಜನರಿಗೆ ಸರಳ ಹಾಗೂ ಸ್ಪಷ್ಟ ಮಾಹಿತಿಕೊಡುವ ಅಗತ್ಯವಿದೆ, ಅದು ನಮಗೆ ನಿತ್ಯದ ಪಾಠವಾಗಬೇಕಿದೆ, ಪ್ರಾರ್ಥನೆಯಾಗಬೇಕಿದೆ, ಮಂತ್ರವಾಗಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version