ಬಹಿರಂಗ
‘ಧರ್ಮದ ಬಗೆಗಿನ ತಪ್ಪು ಕಲ್ಪನೆಗಳು’ : ಡಾ. ಬಿ.ಆರ್. ಅಂಬೇಡ್ಕರ್ ಈ ಬರಹ ನಿಮಗಾಗಿ
ಧರ್ಮನಾಶವೆಂದರೆ ಅದಕ್ಕೆ ನನ್ನ ಅರ್ಥವೇನೆಂದು ಕೆಲವರಿಗೆ ತಿಳಿಯಲಿಕ್ಕಿಲ್ಲ. ನನ್ನ ಈ ವಿಚಾರವೇ ಕೆಲವರಿಗೆ ಜಿಗುಪ್ಪೆ ಉಂಟುಮಾಡಿರಬಹುದು. ಕೆಲವರಿಗೆ ಅದು ಕ್ರಾಂತಿಕಾರಿಯೆಂದೂ ಅನ್ನಿಸೀತು. ಆದುದರಿಂದ ನನ್ನ ಅಭಿಪ್ರಾಯವನ್ನು ಇಲ್ಲಿ ತಿಳಿಸಿ ಸ್ಪಷ್ಟಪಡಿಸುತ್ತೇನೆ. ತತ್ವಗಳು ಬೇರೆ , ನಿಯಮಗಳು ಬೇರೆ. ಇದನ್ನು ನೀವು ಒಪ್ಪುತ್ತೀರೋ ಇಲ್ಲವೋ ನಾನಂತೂ ಒಪ್ಪುತ್ತೇನೆ. ನಿಯಮಗಳು ವ್ಯಾವಹಾರಿಕ ; ವಿಧಿಸಿದ ರೀತಿಯಲ್ಲಿ ನಡೆದುಕೊಳ್ಳುವ ರೂಢಿಯ ಕ್ರಮಗಳು. ಆದರೆ ತತ್ವಗಳು ಬೌದ್ಧಿಕವಾಗಿರುತ್ತವೆ. ಸಾರಾಸಾರ ವಿವೇಚನೆಯಿಂದ ನಿರ್ಣಯಿಸುವ ಸಾಧನಗಳವು. ಈ ಕ್ರಮದಲ್ಲಿ ಹೋಗೆಂದು ತಿಳಿಸುವುದು ನಿಯಮಗಳ ರೀತಿ, ತತ್ವಗಳು ನಿರ್ದಿಷ್ಟ ಕ್ರಮವನ್ನು ಹೇಳುವುದಿಲ್ಲ .
ನಿಯಮಗಳು ಪಾಕಶಾಸ್ತ್ರದ ಕ್ರಮಸೂಚನೆಯಂತೆ ಏನನ್ನು ಮಾಡಬೇಕು ಹೇಗೆ ಮಾಡಬೇಕು ಎಂದು ಹೇಳುತ್ತವೆ. ನ್ಯಾಯದಂತಹ ಒಂದು ತತ್ವ ಬೌದ್ಧಿಕ ಹಾಗೂ ಭಾವನಾತ್ಮಕ ಗುಣವನ್ನು ಒದಗಿಸುತ್ತದೆ. ಅದರಿಂದ ವ್ಯಕ್ತಿ ತನ್ನ ಬಯಕೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುತ್ತಾನೆ. ಯಾವುದನ್ನು ಮುಖ್ಯವಾಗಿ ಗಮನಿಸಬೇಕೆಂಬುದಕ್ಕೆ ಅವನಿಗೆ ಅದು ಮಾರ್ಗದರ್ಶಿಯಾಗುತ್ತದೆ. ನಿಯಮಗಳು ಹಾಗೂ ತತ್ವಗಳಿಗೆ ಇರುವ ಈ ಭೇದದ ಮೂಲಕ ಅವುಗಳನ್ನು ಅನುಸರಿಸಿ ಮಾಡುವ ಕಾರ್ಯಗಳೂ ಭಿನ್ನವಾಗುತ್ತವೆ. ನಿಯಮಗಳು ಒಳ್ಳೆಯದೆಂದು ಹೇಳಿದ್ದನ್ನು ಮಾಡುವುದು ಬೇರೆ, ತತ್ವದೃಷ್ಟಿಯಿಂದ ಒಳ್ಳೆಯದೆಂದು ತಿಳಿದಿದ್ದನ್ನು ಮಾಡುವುದು ಬೇರೆ. ತತ್ವ ತಪ್ಪಿರಬಹುದು. ಆದರೆ ಕೃತಿ ಪ್ರಜ್ಞಾಪೂರ್ವಕವಾಗಿದ್ದು ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನಿಯಮ ಸರಿಯಾಗಿರಬಹುದು ಅದನ್ನನುಸರಿಸಿ ಕೃತಿ ಯಾಂತ್ರಿಕವಾಗಿರುತ್ತದೆ. ಧಾರ್ಮಿಕ ಕ್ರಿಯೆ ಕೆಲವೊಮ್ಮೆ ಸರಿಯಾದ ಕ್ರಿಯೆಯಾಗದಿರಬಹುದು, ಆದರೆ ಹೊಣೆಗಾರಿಕೆಯ ಧರ್ಮ ಮುಖ್ಯವಾಗಿ ತತ್ವಗಳ ಮಾತೇ ಆಗತಕ್ಕದ್ದು. ಅದು ನಿಯಮಗಳ ಮಾತಲ್ಲ. ಧರ್ಮ ಕೇವಲ ನಿಯಮಗಳೆಂಬ ಅವಸ್ಥೆಗೆ ಇಳಿದಾಕ್ಷಣ ಅದು ಧರ್ಮವಾಗಿ ಉಳಿಯದು. ಏಕೆಂದರೆ ಧರ್ಮದ ಸಾರವಾದ ಹೊಣೆಗಾರಿಕೆಯು ಆಗ ನಾಶವಾಗುತ್ತದೆ.
ಈ ಹಿಂದೂ ಧರ್ಮವೆಂದರೇನು ? ಅದೊಂದು ತತ್ವಗಳ ಕಟ್ಟೋ ಅಥವಾ ನಿಯಮಾವಳಿಯೋ ? ವೇದ, ಸ್ಮೃತಿಗಳಲ್ಲಿ ಉಕ್ತವಾದ ಹಿಂದೂ ಧರ್ಮವೆಂದರೆ ಯಾಜಿಕ, ಸಾಮಾಜಿಕ, ರಾಜಕೀಯ ಮತ್ತು ಆರೋಗ್ಯ ರಕ್ಷಣಾತ್ಮಕ ನಿಯಮಗಳ ಒಂದು ಕಲಸುಮೇಲೋಗರವಾಗಿದೆ. ಹಿಂದೂಗಳು ಧರ್ಮವೆಂದು ಯಾವುದನ್ನು ಕರೆಯುತ್ತಾರೋ ಅದು ವಿಧಿನಿಷೇಧಗಳ ಒಂದು ಸಂಚಯವೇ ಹೊರತು ಬೇರೇನೂ ಅಲ್ಲ. ನಿಜವಾಗಿಯೂ ವಿಶ್ವಾಸಾತ್ಮಕವಾದ ಎಲ್ಲ ದೇಶಗಳಿಗೂ ಎಲ್ಲ ಜನಾಂಗಗಳಿಗೂ ಎಲ್ಲ ಕಾಲಕ್ಕೂ ಅನ್ವಯಿಸುವಂತಹ ತತ್ವಗಳನ್ನುಳ್ಳದ್ದು ಎಂಬರ್ಥದಲ್ಲಿ ಅದು ಧರ್ಮವೇ ಅಲ್ಲ, ವಿಧಿನಿಷೇಧಗಳೇ ಧರ್ಮವೆಂಬರ್ಥ ಬರುವಂತೆ ವೇದ, ಸತಿಗಳಲ್ಲೂ ಧರ್ಮ ಎಂಬ ಪದವನ್ನು ಬಳಸಲಾಗಿದೆ. ವೇದದಲ್ಲಿ ಧರ್ಮವೆಂಬ ಪದವನ್ನು ಆಚಾರ ಶಾಸನಗಳೆಂಬರ್ಥದಲ್ಲಿ ಅನೇಕ ಸಲ ಬಳಸಲಾಗಿದೆ. ಜೈಮಿನಿ ತನ್ನ ಪೂರ್ವ ಮೀಮಾಂಸೆಯಲ್ಲಿ ಆಗಮಗಳಲ್ಲಿ ಉಕ್ತವಾದ ಶ್ರೇಯವೇ ಧರ್ಮವೆಂದು ವ್ಯಾಖ್ಯಾನಿಸಿದ್ದಾನೆ. ಸರಳವಾದ ಮಾತುಗಳಲ್ಲಿ ಹೇಳುವುದಾದರೆ ಹಿಂದೂಗಳು ಹೇಳುವ ಧರ್ಮವೆಂದರೆ ಕಾನೂನು ಅಥವಾ ಕಾನೂನಿನ ಕ್ರಮಕ್ಕೆ ಒಳಪಡಿಸಿದ ವರ್ಗನೀತಿ. ಇದು ಧರ್ಮವೆಂದು ನಾನು ಒಪಲಾರೆ, ಕಟ್ಟುನಿಟ್ಟಾದ ನಿಯಮಾವಳಿಗಳೇ ಧರ್ಮವೆಂದು ಬಳಸಲಡುವುದರಿಂದ ನೈತಿಕ ಸ್ವಾತಂತ್ರ್ಯ ನಾಶವಾಗುತ್ತದೆ.
ಮನಃಪೂರ್ವಕವಾದ ನಡವಳಿಕೆಗೆ ಬದಲಾಗಿ ಹೊರಗಿನಿಂದ ಹೇರಿದ ನಿಯಮಗಳನ್ನು ಗುಲಾಮರಾಗಿ ಜನ ಪಾಲಿಸಬೇಕಾಗುತ್ತದೆ. ಈ ವಿಧಿನಿಷೇಧಗಳ ಅತ್ಯಂತ ದುಷ ಅಂಶವೆಂದರೆ ಅವು ಸರ್ವ ಕಾಲಕ್ಕೂ ಇದ್ದಂತೆಯೇ ಪಾಲಿಸಲಡಬೇಕೆಂಬುದು. ಎಲ್ಲಾ ವರ್ಗಗಳಿಗೆ ಅವು ಸಮಾನವಾಗಿಯೂ ಇಲ್ಲ. ಒಂದೊಂದಕ್ಕೆ ಒಂದೊಂದು ಬಗೆಯಾಗಿವೆ. ಅವು ಸಾರ್ವಕಾಲಿಕವೆಂದು ಹೇಳಿರುವುದರಿಂದ ಈ ಅಸಮಾನತೆಯೂ ಶಾಶ್ವತವಾಗಿದೆ. ಈ ಶಾಸನಗಳನ್ನು ವಿಧಿಸಿದವರು ಇಂತಿಂತಹ ದ್ರಷ್ಟಾರರೆಂದು ನಾವು ಅವುಗಳನ್ನು ವಿರೋಧಿಸುವುದಲ್ಲ, ಇವು ಸಿದ್ದಾಂತವೆಂಬಂತೆ ಸ್ಥಿರೀಕೃತವಾಗಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪವಿದೆ. ಮನುಷ್ಯ ಸುಖ ಆತನ ಪರಿಸ್ಥಿತಿಗೆ ಅನುಸಾರವಾಗಿ ಬದಲಾಗುತ್ತದೆ. ಹೀಗಿರುವಾಗ ಈ ಬಗೆಯ ಶಾಶ್ವತವಾದ ನಿಯಮ ಅಥವಾ ಶಾಸನಗಳನ್ನು ಜನತೆ ಅವ್ಯಾಹತ ಹೇಗೆ ಸಹಿಸಿಕೊಳ್ಳಬಲ್ಲದು ? ಆದುದರಿಂದ ಇಂತಹ ಧರ್ಮವನ್ನು ನಾಶಪಡಿಸಿದರೆ ಅದು ಯಾವ ರೀತಿಯಿಂದಲೂ ಅಧರ್ಮವಲ್ಲವೆಂದು ಹೇಳುತ್ತೇನೆ. ಆ ಧರ್ಮದ ಮುಖಕ್ಕೆ ತೊಡಿಸಿದ ಈ ಮುಸುಕನ್ನು ಕಿತ್ತುಹಾಕಿ ಶಾಸನವನ್ನು ಧರ್ಮವೆಂದು ರೂಢಿಗೊಳಿಸಿದ ಅನ್ಯಾಯವನ್ನು ದೂರಗೊಳಿಸುವುದು ನಿಮ್ಮ ಅನಿವಾರ್ಯ ಕರ್ತವ್ಯ. ಇದು ನನ್ನ ಅಭಿಪ್ರಾಯ.
ಧರ್ಮದ ಬಗೆಗೆ ಉಂಟಾಗಿರುವ ಈ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೊರಗೆ ತಳ್ಳಿಬಿಡಿ. ಅವರು ಪಾಲಿಸುತ್ತಿರುವುದು ಧರ್ಮವಲ್ಲ, ಒಂದು ಶಾಸನ ಎಂದು ಮನವರಿಕೆ ಮಾಡಿಬಿಡಿ. ಹಾಗೆ ಮಾಡುವಲ್ಲಿ ನೀವು ಜಯಶಾಲಿಗಳಾದ ಪಕ್ಷದಲ್ಲಿ ಆ ಧರ್ಮವನ್ನು ತಿದ್ದುವುದಕ್ಕೆ ಅಥವಾ ನಾಶಗೊಳಿಸುವುದಕ್ಕೆ ನಿಮಗೆ ಸಾಧ್ಯವಾಗುವುದು, ಎಲ್ಲಿಯವರೆಗೆ ಜನರು ಅದನ್ನು ಧರ್ಮವೆಂದು ಪರಿಗಣಿಸುವುರೋ ಅಲ್ಲಿಯವರೆಗೆ ಅವರು ಅದರ ಬದಲಾವಣೆಗೆ ಸಿದ್ದರಾಗುವುದಿಲ್ಲ. ಯಾಕೆಂದರೆ ಧರ್ಮದಲ್ಲಿ ಬದಲಾವಣೆಯ ಕಲ್ಪನೆಯಿಲ್ಲ. ಆದರೆ ಶಾಸನ ಅಥವಾ ಕಾನೂನು ತಿದ್ದುವಿಕೆಗೆ ಒಳಗಾಗಬಲ್ಲದೆಂದು ಅವರು ಒಪ್ಪುತ್ತಾರೆ. ತಾವು ಧರ್ಮವೆಂದು ಭ್ರಮಿಸಿದ್ದು ನಿಜವಾಗಿಯೂ ಪ್ರಾಚೀನ ಕಾಲದ ಶಾಸನ ಅಥವಾ ಕಾನೂನು ಎಂದು ಅರಿತಾಗ ಅದನ್ನು ಬದಲಿಸಲು ಅವರು ಸಿದ್ದರಾಗುವರು. ಕಾನೂನನ್ನು ಬದಲಿಸಬಹುದೆಂದು ಜನ ಆಗ ಒಪ್ಪುತ್ತಾರೆ.
–ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ -1
ಸುದ್ದಿದಿನ.ಕಾಂ|ವಾಟ್ಸಾಪ್|9986715401