ಬಹಿರಂಗ

ಧರ್ಮ, ಮಹಾತ್ಮ, ಯೋಗ್ಯತೆ ; ಅಯ್ಯೋಗ್ಯತೆ : ಡಾ. ಬಿ.ಅರ್. ಅಂಬೇಡ್ಕರ್ ಹೇಳಿದ್ದಿಷ್ಟು..!

Published

on

ಚೈತನ್ಯ, ಜ್ಞಾನದೇವ, ತುಕಾರಾಮ, ತಿರುವಳ್ಳುವರ್, ರಾಮಕೃಷ್ಣ ಪರಮಹಂಸ ಮುಂತಾದವರು ತಮ್ಮದೆಂದು ಒಪ್ಪಿಕೊಂಡ ಧರ್ಮ ಯೋಗ್ಯತೆಯಿಲ್ಲದುದಲ್ಲವೆಂಬುದೂ, ಧರ್ಮದ ಯೋಗ್ಯತೆಯನ್ನು ಅಳೆಯಬೇಕಾದದ್ದು ಅದರ ಅಯೋಗ್ಯ ಮಾದರಿಗಳಿಂದ ಅಲ್ಲ. ಅತ್ಯುತ್ತಮ ಮಾದರಿಗಳಿಂದ ಎಂಬುದೂ ಮಹಾತ್ಮರು ಹೇಳುವ ಮೂರನೆಯ ಮಾತು. ಅವರ ಈ ಹೇಳಿಕೆಯ ಪ್ರತಿಯೊಂದು ಶಬ್ದವನ್ನೂ ನಾನು ಒಪ್ಪುತ್ತೇನೆ. ಆದರೆ ಇದರಿಂದ ಮಹಾತ್ಮರು ಏನನ್ನು ಸಿದ್ದ ಮಾಡಬಯಸುತ್ತಾರೋ ನನಗೆ ತಿಳಿಯದು.

||ಅಂತ್ಯಜಾಚಾ ವಿಟಾಳ ಜ್ಞಾಸೀ ಗಂಗಾಸ್ನಾನೇ ಶುದ್ದ ತ್ಯಾಸೀ | ಏಕನಾಥ ಭಾಗವತ ೨೮ – ೧೯೧

ಧರ್ಮವನ್ನು ಅದರ ಅತ್ಯುನ್ನತ ವ್ಯಕ್ತಿಗಳಿಂದ ಬೆಲೆಗಟ್ಟಬೇಕೆಂಬುದೇನೋ ನಿಜ. ಆದರೆ ಅಷ್ಟರಿಂದ ಎಲ್ಲಾ ಮುಗಿದಂತಾಯಿತೆ ? ಮುಗಿಯಲಿಲ್ಲವೆಂದೇ ಹೇಳುತ್ತೇನೆ. ಅಯೋಗ್ಯ ಅಥವಾ ಕೀಳು ಮಾದರಿಗಳೇ ಇಷ್ಟೊಂದು ಹೆಚ್ಚಾಗಿ, ಉತ್ತಮ ಮಾದರಿ ಇಷ್ಟು ವಿರಳವಾದುದೇಕೆ ? ಈ ಪ್ರಶ್ನೆ ನಿಂತುಕೊಂಡಿದೆ. ಈ ಪ್ರಶ್ನೆಗೆ ಎರಡು ಉತ್ತರಗಳನ್ನು ಕಲ್ಪಿಸಬಹುದು.

  1. ಕೀಳು ಮಾದರಿಗಳಾಗಿರುವವರು ಜನ್ಮಜಾತವಾದ ಯಾವುದೋ ಒಂದು ವಿಕ್ಷಿಪ್ತತೆಯ ಕಾರಣ ನೈತಿಕ ಶಿಕ್ಷಣವನ್ನು ಅರಗಿಸಿಕೊಳ್ಳಲಾರದವರಾಗಿರುತ್ತಾರೆ , ಅದರಿಂದಾಗಿ ಧಾರ್ಮಿಕ ಆದರ್ಶದತ್ತ ಒಂದು ಹೆಜ್ಜೆಯನ್ನಾದರೂ ಇಡಲು ಅವರು ಅಸಮರ್ಥರಿರುತ್ತಾರೆ. ಅಥವಾ
  2. ಧಾರ್ಮಿಕ ಆದರ್ಶವೇ ಸಂಪೂರ್ಣವಾಗಿ ಯುಕ್ತವಲ್ಲದ ಆದರ್ಶವಾಗಿದ್ದು , ಅನೇಕರ ಬದುಕಿಗೆ ಅಯೋಗ್ಯವಾದ ನೈತಿಕ ತಿರುವನ್ನು ಒದಗಿಸಿರಬೇಕು . ಕೆಲವರು ಅತ್ಯುತ್ತಮ ವ್ಯಕ್ತಿಗಳಾಗಿ ಉಳಿದಿದ್ದರೆ ಆ ಅಯೋಗ್ಯ ನೈತಿಕ ತಿರುವನ್ನು ಸರಿಪಡಿಸಿ, ಯೋಗ್ಯಪಥಕ್ಕೆ ಹೊರಳಿಸಿಕೊಂಡಿರಬೇಕು.

ಇವೆರಡು ಸಂಭಾವ್ಯ ಕಾರಣಗಳಲ್ಲಿ ಮೊದಲನೆಯದನ್ನು ನಾನು ಸ್ವೀಕರಿಸಲಾರೆ; ಮಹಾತ್ಮರು ಕೂಡ ಇದನ್ನು ಸ್ವೀಕರಿಸಲಾರರು. ನನ್ನ ಅಭಿಪ್ರಾಯದಲ್ಲಿ ಎರಡನೆಯ ಕಾರಣವೇ ಯುಕ್ತಾಯುಕ್ತವಾಗಿ ತೋರುತ್ತದೆ. ಇನ್ನು ಮೂರನೆಯ ಕಾರಣವೊಂದು ಮಹಾತ್ಮರಿಗೆ ಹೊಳೆದರೆ ಆ ಮಾತು ಬೇರೆ. ಹೀಗಿರುವುದರಿಂದ ಅತ್ಯುತ್ತಮ ಮಾದರಿಗಳಿಂದಲೇ ಧರ್ಮದ ಯೋಗ್ಯತೆಯನ್ನು ಅಳೆಯಬೇಕೆಂಬ ಮಹಾತ್ಮರ ವಾದ ನಿಷ್ಪಲವಾಗುತ್ತದೆ. ಅಯೋಗ್ಯ ಆದರ್ಶವನ್ನು ಪೂಜಿಸುತ್ತ ಅಡ್ಡದಾರಿ ಹಿಡಿದ ಬಹುಸಂಖ್ಯಾತ ಜನರನ್ನು ಕಂಡು ಅಯ್ಯೋ ಪಾಪ ಎನ್ನುವುದಕ್ಕಿಂತ ಹೆಚ್ಚಿಗೇನೂ ಮಾಡಿದಂತಾಗುವುದಿಲ್ಲ.

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version