ಬಹಿರಂಗ

ಜಾತಿ‌ ಪ್ರಜ್ಞೆ ‌ಮತ್ತು ಮನುಷ್ಯತ್ವ : ಡಾ.ಬಿ.ಆರ್.ಅಂಬೇಡ್ಕರ್ ‌ಈ‌‌ ಬರಹ ಓದಿ

Published

on

ಸಾಧುಸಂತರ ಮೇಲ್ಪಂಕ್ತಿಯನ್ನು ಅನುಸರಿಸಿದ ಪಕ್ಷದಲ್ಲಿ ಹಿಂದೂಧರ್ಮ ಸಹನೀಯವಾಗಬಹುದೆಂಬ ಮಹಾತ್ಮರ ವಾದ ತಪ್ಪೆಂಬುದಕ್ಕೆ ಇನ್ನೂ ಒಂದು ಕಾರಣವಿದೆ. ” ಚೈತನ್ಯ ಮೊದಲಾದ ಪ್ರಖ್ಯಾತರ ಉದಾಹರಣೆಯಿಂದ ಮಹಾತ್ಮರು ಸೂಚಿಸಬಯಸುವುದೇನು ? ಉಚ್ಚಜಾತಿಯ ಜನರೆಲ್ಲರೂ ಕೀಳುಜಾತಿಯ ಜನರೊಡನೆ ಉತ್ತಮ ನೀತಿ ಮಟ್ಟದಲ್ಲಿ ನಡೆದುಕೊಂಡರೆ ಯಾವ ಬದಲಾವಣೆಯೂ ಅವಶ್ಯವಾಗದೆ ಈಗಿರುವ ಸ್ವರೂಪದಲ್ಲಿಯೇ ಹಿಂದೂ ಸಮಾಜವು ಸಹನೀಯವಾಗಬಲ್ಲುದು ಎಂಬುದು ಅವರ ಉದ್ದೇಶ.

ಈ ಬಗೆಯ ವಿಚಾರ ಸರಣಿಗೆ ನಾನು ಸಂಪೂರ್ಣ ವಿರೋಧಿಯಾಗಿದ್ದೇನೆ. ತಮ್ಮ ಜೀವನದಲ್ಲಿ ಉನ್ನತವಾದ ಸಾಮಾಜಿಕ ಆದರ್ಶವನ್ನು ಸಾಧಿಸುತ್ತಿರುವ ಮೇಲುಜಾತಿಯ ಹಿಂದೂಗಳನ್ನು ನಾನು ಗೌರವಿಸಬಲ್ಲೆನು. ಇಂತಹ ವ್ಯಕ್ತಿಗಳಿಲ್ಲದೆ ಹೋದರೆ ಭಾರತ ದೇಶದ ಬದುಕು ಇನ್ನಷ್ಟು ಕಷ್ಟಕರವೂ ಅಸಹ್ಯವೂ ಆದೀತು. ಆದರೆ ವೈಯಕ್ತಿಕ ಚಾರಿತ್ರ್ಯ ಸುಧಾರಣೆಯಿಂದಲೇ ಜಾತಿವಂತ ಹಿಂದೂಗಳನ್ನೆಲ್ಲ ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಪ್ರಯತ್ನವು ಶ್ರಮದ ಅಪವ್ಯಯವಾಗುತ್ತದೆ, ಭ್ರಾಂತಿಗೆ ಜೋತುಬಿದ್ದಂತೆ ಆಗುತ್ತದೆ.

ಆಯುಧಗಳನ್ನು ನಿರ್ಮಿಸುವ ಒಬ್ಬ ಮನುಷ್ಯನಿದ್ದಾನೆಂದು ಇಟ್ಟುಕೊಳ್ಳಿ, ವೈಯಕ್ತಿಕವಾಗಿ ಉತ್ತಮ ಚಾರಿತ್ರ್ಯವಂತನಾದರೆ ಆತನು ಒಳ್ಳೆಯ ಮನುಷ್ಯನಾಗುವನೆ ? ಸಿಡಿಯದಂಥ ಮದ್ದುಗುಂಡುಗಳನ್ನೂ, ವಿಷ ಹರಡದಂತಹ ಗ್ಯಾಸನ್ನೂ ನಿರ್ಮಿಸುವನೆ ? ಅದು ಸಾಧ್ಯವಿಲ್ಲ. ಅದರಂತೆ, ಜಾತಿಪ್ರಜ್ಞೆ ಜಾಗೃತವಾಗಿರುವ ಮನುಷ್ಯನ ಚಾರಿತ್ರ್ಯ ಒಳ್ಳೆಯದಾದರೆ ಅವನು ಒಳ್ಳೆಯ ಮನುಷ್ಯನಾಗುವನೆ ? ಅಂದರೆ ತನ್ನ ನೆರೆಹೊರೆಯವನ್ನೆಲ್ಲ ತನ್ನ ಮಿತ್ರರೆಂದೂ ಸಮಾನರೆಂದೂ ನಡೆಸಿಕೊಳ್ಳುವನೆ ? ತನ್ನ ಸ್ಥಿತಿಗನುಸಾರವಾಗಿ ಅವರಿಗಿಂತ ಮೇಲಿನವನೆಂದೂ ಕೆಳಗಿನವನೆಂದೂ ಅವನು ನಡೆದುಕೊಳ್ಳಬೇಕಾಗುತ್ತದೆ. ಅಂದರೆ ತನ್ನ ಜಾತಿಯವರೊಡನೆ ನಡೆದುಕೊಂಡಂತೆ ಇತರರೊಡನೆ ನಡೆದುಕೊಳ್ಳಲಾಗುವುದಿಲ್ಲ. ಎಲ್ಲರನ್ನೂ ತನ್ನ ಬಂಧುಗಳೆಂದು, ಸಮಾನರೆಂದು ಅವನು ಕಾಣಲಾರನು. ವಾಸ್ತವವಾಗಿ ನೋಡಿದರೆ ತನ್ನ ಜಾತಿಯವರಲ್ಲದ ಜನರೊಡನೆ ಅವರಾರೋ ಪರಕೀಯರೆಂಬಂತೆ ಹಿಂದೂವು ವ್ಯವಹರಿಸುತ್ತಾನೆ. ಏನು ಮಾಡಿದರೂ ಭಯವಿಲ್ಲ. ಎಂತಹ ವಂಚನೆ ಮಾಡಿದರೂ ನಾಚಬೇಕಾಗಿಲ್ಲ ಎಂಬ ಮನೋವೃತ್ತಿ ಅವನ ನಡವಳಿಕೆಯಲ್ಲಿ ಕಾಣುತ್ತದೆ.

ಇತರರಿಗಿಂತ ಉತ್ತಮವಾದ ಹಿಂದೂ ಇರಬಹುದು. ಇತರರಿಗಿಂತ ಕೀಳಾದ ಹಿಂದೂ ಇರಬಹುದು ; ಆದರೆ ಒಳ್ಳೆಯ ಹಿಂದೂ ಇರಲಾರನು. ಅವನ ವೈಯಕ್ತಿಕ ಸ್ವಭಾವ ಅದಕ್ಕೆ ಕಾರಣವಲ್ಲ. ತನ್ನ ದೇಶಬಾಂಧವರೊಡನೆ ಅವನಿಟ್ಟುಕೊಂಡಿರುವ ಸಂಬಂಧದ ಮೂಲಾಧಾರವೇ ತಪ್ಪಾಗಿದೆ. ಈ ಸಂಬಂಧ ತಪ್ಪಾಗಿದ್ದರೆ ಎಂತಹ ಉತ್ತಮ ಮನುಷ್ಯನೂ ನೀತಿವಂತನಾಗಿ ಉಳಿಯಲಾರನು. ಗುಲಾಮರನ್ನು ಇಟ್ಟುಕೊಂಡಿರುವವನು ಇತರರಿಗಿಂತ ಉತ್ತಮನಾಗಿರಬಹುದು, ಅಥವಾ ಕೀಳಾಗಿರಬಹುದು ; ಆದರೆ ಗುಲಾಮನಿಗೆ ಒಳ್ಳೆಯ ಒಡೆಯನಿರುವುದಿಲ್ಲ. ಒಳ್ಳೆಯ ಮನುಷ್ಯನು ಒಡೆಯನಾಗಿರಲಾರ ಮತ್ತು ಒಡೆಯನು ಒಳ್ಳೆಯ ಮನುಷ್ಯನಾಗಿರಲಾರ, ಮೇಲುಜಾತಿ ಹಾಗೂ ಕೆಳಜಾತಿಗಳ ಸಂಬಂಧಕ್ಕೂ ಇದೇ ಮಾತು ಅನ್ವಯಿಸುತ್ತದೆ.

ಮೇಲುಜಾತಿಯವನು ಒಳ್ಳೆಯ ಮನುಷ್ಯನಾಗಿ ಇರಲಾರ, ಏಕೆಂದರೆ ತಾನು ಮೇಲುಜಾತಿಯವನಾಗಿ ಉಳಿಯಬೇಕಾಗಿದ್ದರೆ ಕೆಳಜಾತಿಯೊಂದು ಇದ್ದೇ ಇರಬೇಕಲ್ಲವೆ ? ತನ್ನ ಮೇಲೊಬ್ಬನು ಮೇಲುಜಾತಿಯವನಿದ್ದಾನೆಂಬ ಪ್ರಜ್ಞೆ ಕೆಳಜಾತಿಯವನಿಗೆ ಒಳ್ಳೆಯದಲ್ಲ. ವರ್ಣ ಅಥವಾ ಜಾತಿಪದ್ಧತಿಯನ್ನು ಆಧರಿಸಿದ ಸಮಾಜವು ತಪ್ಪು ಸಂಬಂಧವನ್ನೇ ಆಧರಿಸಿದೆ ಎಂದು ನಾನು ನನ್ನ ಉಪನ್ಯಾಸದಲ್ಲಿ ವಾದಿಸಿದ್ದೇನೆ. ಮಹಾತ್ಮರು ನನ್ನ ವಾದವನ್ನು ಧ್ವಂಸಗೊಳಿಸುವರೆಂದು ನಾನು ನಿರೀಕ್ಷಿಸಿದ್ದೆ. ಅದಕ್ಕೆ ಬದಲಾಗಿ ಅವರು ಚಾತುರ್ವಣ್ಯದಲ್ಲಿ ತಮ್ಮ ನಿಷ್ಠೆಯನ್ನು ಮತ್ತೆ ಮತ್ತೆ ಹೇಳಿದರು, ಅಷ್ಟೆ. ಆದರೆ ಅದಕ್ಕೆ ಆಧಾರವನ್ನು ಕೊಡಲಿಲ್ಲ.

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ-1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version