ಬಹಿರಂಗ
ಬ್ರಾಹ್ಮಣ, ಪೌರೋಹಿತ್ಯ ಮತ್ತು ವೃತ್ತಿ ದುರುಪಯೋಗ : ಡಾ.ಬಿ.ಆರ್. ಅಂಬೇಡ್ಕರ್ ಈ ಬರಹ ತಪ್ಪದೆ ಓದಿ
ಜೀವನಾಂತ್ಯದವರೆಗೆ ಬ್ರಾಹ್ಮಣರಾಗಿಯೇ ಉಳಿಯಲು ಬಯಸದಂತಹ ಬ್ರಾಹ್ಮಣರು ಅನೇಕರಿದ್ದಾರೆಂಬುದು ವಸ್ತುಸ್ಥಿತಿ. ಆ ಮಾತು ಹಾಗಿರಲಿ, ತಮ್ಮ ಕುಲಪರಂಪರಾಗತ ವೃತ್ತಿಯಾದ ಪೌರೋಹಿತ್ಯ ಅಥವಾ ಪೂಜಾರಿತನಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಬ್ರಾಹ್ಮಣರ ವಿಷಯವಾಗಿ ಏನನ್ನೋಣ? ಇದು ಪ್ರಾಚೀನ ಕಾಲದಿಂದ ನಡೆದುಬಂದ ತಮ್ಮ ಕುಲವೃತ್ತಿಯೆಂಬ ಶ್ರದ್ದೆಯಿಂದ ಅದನ್ನು ಅವರು ನಡೆಸುವರೆ? ಅಥವಾ ಧನಲಾಭದ ದುರಾಸೆಯಿಂದ ಆ ವೃತ್ತಿಗೆ ಅಂಟಿಕೊಂಡಿರುವರೇ? ಇಂತಹ ಪ್ರಶ್ನೆಗಳನ್ನು ಮಹಾತ್ಮರು ವಿಚಾರಿಸುವುದಕ್ಕೆ ಹೋಗುವುದಿಲ್ಲ. ಧಾರಾಳವಾಗಿ ಕೊಟ್ಟ ದಾನದಿಂದ ಜೀವಿಸುತ್ತಾ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಜನಕ್ಕೆ ಬೀರುತ್ತಾ ಇರುವ ನಿಜವಾದ ಬ್ರಾಹ್ಮಣರು ಇದ್ದಾರೆಂಬುದು ಮಹಾತ್ಮರಿಗೆ ತೃಪ್ತಿಕರವಾಗಿದೆ.
ಜನಕ್ಕೆ ಆಧ್ಯಾತ್ಮಿಕ ಸಂಪತ್ತನ್ನು ಒಯ್ದು ಮುಟ್ಟಿಸುವ ಕಾರ್ಯದಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣನ ಇನ್ನೊಂದು ಚಿತ್ರಣವನ್ನು ನಾವು ಕೊಡಬಲ್ಲೆವು. ಬ್ರಾಹ್ಮಣನು ಪ್ರೇಮದೇವತೆಯಾದ ವಿಷ್ಣುವಿಗೆ ಪೂಜಾರಿಯಾಗಬಲ್ಲನು.ಪ್ರಳಯದೇವತೆಯಾದ ಶಂಕರನಿಗೂ ಅವನು ಪೂಜಾರಿಯಾಗಬಲ್ಲನು. ಜಗತ್ತಿಗೆ ಪ್ರೇಮದ ಸಂದೇಶವನ್ನು ಬೀರಿದ ಮಹಾಗುರು ಬುದ್ಧನಿಗೂ ಅವನು ಪೂಜಾರಿಯಾಗಬಲ್ಲನು. ಪ್ರತಿದಿನ ಪಶುಬಲಿಯನ್ನು ಬೇಡುವ ಕಾಳಿದೇವಿಗೂ ಅವನು ಪೂಜಾರಿ, ಕ್ಷತ್ರಿಯ ದೇವನಾದ ರಾಮನಿಗೆ ಅವನು ಪೂಜಾರಿ, ಕ್ಷತ್ರಿಯರ ನಾಶಕ್ಕೆ ಅವತಾರವೆತ್ತಿದ ಪರಶುರಾಮನಿಗೂ ಅವನು ಪೂಜಾರಿ, ಸೃಷ್ಟಿಕರ್ತನಾದ ಬ್ರಹ್ಮದೇವರಿಗೂ ಅವನು ಪೂಜಾರಿಯಾಗುತ್ತಾನೆ. ಬ್ರಹ್ಮನಿಗೆ ವಿರೋಧಿಯಾದ ಅಲ್ಲಾ ದೇವರಿಗೆ ಕೂಡ ಇವನು ಪೂಜಾರಿಯಾಗಬಲ್ಲನು, ಇದು ಸತ್ಯದ ಚಿತ್ರಣವಲ್ಲವೆಂದು ಯಾರೂ ಹೇಳಲಾರರು.
ಪರಸ್ಪರ ವಿರುದ್ಧ ಗುಣಗಳುಳ್ಳ ವಿವಿಧ ದೇವತೆಗಳಿಗೆಲ್ಲಾ ನಿಷ್ಠೆ ತೋರುವವನಾದರೆ ಆ ಮನುಷ್ಯ ಪ್ರಾಮಾಣಿಕ ಭಕ್ತನೆಂದು ಹೇಳಲಾಗದು. ಇದು ತಮ್ಮ ಧರ್ಮದಲ್ಲಿರುವ ಔದಾರ್ಯ ಭಾವನೆಗೆ ಸಹಿಷ್ಣುತಾ ಭಾವಕ್ಕೆ ಸಾಕ್ಷಿಯೆಂದು ಹಿಂದೂಗಳು ನಂಬುತ್ತಾರೆ. ಇದು ಸಹಿಷ್ಣುತೆಯಾಗಿರದೆ ಎಲ್ಲ ದೇವರ ಬಗೆಗೆ ತಾಳಿರುವ ಉಪೇಕ್ಷೆ ಅಥವಾ ಅಶಕ್ತನು ತೋರುವ ಉದಾಸೀನ ಪ್ರವೃತ್ತಿ ಆಗಿರಬಹುದು .ಈ ಎರಡು ಮನೋವೃತ್ತಿಗಳು ಹೊರನೋಟಕ್ಕೆ ಒಂದೇ ಎಂಬಂತೆ ತೋರಬಹುದು. ಆದರೆ ಪರೀಕ್ಷಿಸಿ ನೋಡಿದಾಗ ಅವೆರಡರಲ್ಲಿ ಮೂಲಭೂತವಾದ ಭೇದವನ್ನು ಕಾಣಬಹುದು. ಅನೇಕ ದೇವತೆಗಳಿಗೆ ಪೂಜೆ ಸಲ್ಲಿಸುವುದು ಸಹಿಷ್ಣುತೆಗೆ ಅಥವಾ ಉದಾರ ಭಾವನೆಗೆ ನಿದರ್ಶನವೆಂದು ಹೇಳಲಾಗುತ್ತದೆ.
ಸಂದರ್ಭಕ್ಕೆ ತಕ್ಕಂತೆ ಅನುಕೂಲಸಿಂಧುವನ್ನಾಶ್ರಯಿಸುವ ವಂಚಕ ವೃತ್ತಿಗೂ ಇದು ನಿದರ್ಶನವಾಗಬಹುದಲ್ಲವೆ? ಈ ಸಹಿಷ್ಣುತೆ ಕೇವಲ ಕಪಟಾಚರಣೆಯೆಂದು ನನಗೆ ಖಾತ್ರಿಯಾಗಿದೆ. ತನಗೆ ಲಾಭಕರವಾಗುವಂತಿದ್ದರೆ ಯಾವ ದೇವರನ್ನಾದರೂ ಪೂಜಿಸಲು, ಯಾವ ದೇವರಿಗಾದರೂ ಭಕ್ತನಾಗಲು ಸಿದ್ದನಾಗುವಂತಹ ಮನುಷ್ಯನಲ್ಲಿ ಅದೆಂತಹ ಆಧ್ಯಾತ್ಮಿಕ ಸಂಪತ್ತು ತುಂಬಿದ್ದೀತು? ಇಂತಹವರಲ್ಲಿ ಆಧ್ಯಾತ್ಮಿಕ ಸಂಪತ್ತಿಲ್ಲವೆಂಬುದಷ್ಟೇ ಅಲ್ಲ, ಶ್ರದ್ದೆಯಿಲ್ಲದೆ , ನಿಷ್ಠೆಯಿಲ್ಲದೆ, ತಂದೆಯಿಂದ ಮಗನಿಗೆ ಪರಂಪರಾಗತವಾಗಿ ಬಂದ ಯಾಂತ್ರಿಕ ವೃತ್ತಿಯೆಂದು ಅದನ್ನು ಪಾಲಿಸುತ್ತಾ ಬರುವುದು ಸದ್ಗುಣವಲ್ಲ. ಸಚ್ಚಾರಿತ್ರವೂ ಅಲ್ಲ ; ಅದು ಧರ್ಮದ ಸೇವೆಯಾಗಿರುವ ಒಂದು ಉದಾತ್ತ ವೃತ್ತಿಯ ದುರುಪಯೋಗವೇ ಆಗಿದೆ.
–ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401