ಬಹಿರಂಗ
ಸಮಾನತೆ ಮತ್ತು ಪರಿವರ್ತನಶೀಲತೆ : ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಿಷ್ಟು..!
ಪ್ರತಿಯೊಬ್ಬನೂ ತನ್ನ ಪರಂಪರಾಗತ ಕುಲವೃತ್ತಿಯನ್ನೇ ಪಾಲಿಸಿಕೊಂಡು ಬರಬೇಕೆಂಬ ತತ್ವಕ್ಕೆ ಮಹಾತ್ಮರು ಅದೇಕೆ ಅಂಟಿಕೊಳ್ಳುತ್ತಾರೆ ? ಅದಕ್ಕೆ ಎಲ್ಲಿಯೂ ಅವರು ಕಾರಣಗಳನ್ನು ವಿವರಿಸಿಲ್ಲ . ಅವರು ಹೇಳದಿದ್ದರೂ ಅದಕ್ಕೆ ಏನೋ ಕಾರಣವಿದ್ದಿರಲೇಬೇಕು . ಕೆಲವರ್ಷಗಳ ಹಿಂದೆ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ‘ ಜಾತಿ ಮತ್ತು ವರ್ಗ ‘ ಎಂಬ ವಿಷಯವಾಗಿ ಬರೆಯುತ್ತಾ , ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ವರ್ಗಕ್ಕಿಂತ ಜಾತಿಯೇ ಹೆಚ್ಚು ಸಮರ್ಪಕವಾಗಿ ಹೊಂದಾಣಿಕೆ ಮಾಡಬಲ್ಲದಾದುದರಿಂದ ವರ್ಗಕ್ಕಿಂತ ಜಾತಿಯೇ ಮೇಲೆಂದು ಅವರು ವಾದಿಸಿದ್ದರು.
ಕುಲವೃತ್ತಿಯನ್ನೇ ಪಾಲಿಸಬೇಕೆಂಬ ಅವರ ವಾದಕ್ಕೆ ಇದೇ ಕಾರಣವಾಗಿದ್ದರೆ, ಸಾಮಾಜಿಕ ಜೀವನದ ಬಗೆಗೆ ಅವರ ಅಭಿಪ್ರಾಯ ತಪ್ಪೆಂದು ಹೇಳಬೇಕಾಗುತ್ತದೆ. ಸಾಮಾಜಿಕ ಭದ್ರತೆಯನ್ನು ಎಲ್ಲರೂ ಅಪೇಕ್ಷಿಸುತ್ತಾರೆ ; ಭದ್ರತೆ ಬೇಕಾದರೆ ವ್ಯಕ್ತಿವ್ಯಕ್ತಿಗಳ ನಡುವೆ ಮತ್ತು ವರ್ಗವರ್ಗಗಳ ನಡುವೆ ಇರುವ ಸಂಬಂಧಗಳಲ್ಲಿ ಅಷ್ಟಿಷ್ಟು ಹೊಂದಾಣಿಕೆಯನ್ನು ಸಾಧಿಸಲೇಬೇಕಾಗುತ್ತದೆ.ಆದರೆ ಪ್ರತಿಯೊಬ್ಬರಿಗೂ ಬೇಡವಾದ ಎರಡು ಅಂಶಗಳಿವೆ.
- ಮೊದಲನೆಯದಾಗಿ, ಬದಲಾವಣೆ ಮಾಡಲಾಗದಂತೆ ಎಲ್ಲಾ ಕಾಲಕ್ಕೂ ಸ್ಥಿರವಾಗಿ ಅಚಲವಾಗಿರುವಂತಹ ಸಂಬಂಧ ಬೇಡವಾಗಿದೆ. ಭದ್ರತೆ ಬೇಕು, ಆದರೆ ಬದಲಾವಣೆ ಅವಶ್ಯಕವಾದಾಗಲೂ ಅದಕ್ಕೆ ಆಸ್ಪದವಿಯದಂತಹ ವ್ಯವಸ್ಥೆಯಿಂದ ಆದಾಗುವುದಾದರೆ ಬೇಡ.
- ಎರಡನೆಯದಾಗಿ, ಕೇವಲ ಹೊಂದಾಣಿಕೆ ಯಾರಿಗೂ ಬೇಡವಾಗಿದೆ. ಹೊಂದಾಣಿಕೆ ಬೇಕು , ಆದರೆ ಅದರಿಂದ ಸಾಮಾಜಿಕ ನ್ಯಾಯಕ್ಕೆ ಚ್ಯುತಿಯಾಗಕೂಡದು.
ಜಾತಿಪದ್ಧತಿಯಿಂದ ಎಂದರೆ ಪರಂಪರಾಗತ ಕುಲವೃತ್ತಿಯ ಪಾಲನೆಯಿಂದ ಸಾಮಾಜಿಕ ಸಂಬಂಧದ ಹೊಂದಾಣಿಕೆ ಮಾಡಹೊರಟರೆ ಈ ಎರಡು ಅನಿಷ್ಟಗಳನ್ನು ತಪ್ಪಿಸಲಾದೀತೆ ? ಆಗದೆಂದೇ ನನಗೆ ಮನವರಿಕೆ, ಸಾಮಾಜಿಕ ಹೊಂದಾಣಿಕೆಯ ಮುಖ್ಯ ತತ್ವಗಳಾದ ಸಮಾನತೆ ಹಾಗೂ ಪರಿವರ್ತನಶೀಲತೆ ಇವೆರಡಕ್ಕೂ ವಿರೋಧವೊಡುವುದಾದ್ದರಿಂದ ಇದು ಹೊಂದಾಣಿಕೆಯ ಉತ್ತಮ ಉಪಾಯವಾಗುವುದಿಲ್ಲ ,
ಬದಲಿಗೆ ಅತ್ಯಂತ ಕೆಟ್ಟ ಉಪಾಯವಾಗುತ್ತದೆ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401