ಬಹಿರಂಗ
ಗಾಂಧೀಜಿ, ಜಾತಿ ಮತ್ತು ವರ್ಣ : ಡಾ.ಬಿ.ಆರ್. ಅಂಬೇಡ್ಕರ್ ಸ್ಪಷ್ಟನೆ ಹೀಗಿದೆ..!
ಜಾತಿಯನ್ನು ಅಲ್ಲಗಳೆದು ವರ್ಣದಲ್ಲಿ ಮಾತ್ರ ಶ್ರದ್ಧೆ ತಾಳಿರುವುದರಿಂದ ಮಹಾತ್ಮರು ಪ್ರಗತಿ ಸಾಧಿಸಿದ್ದಾರೆಂದು ತೋರಬಹುದು. ಒಂದು ಕಾಲಕ್ಕೆ ಈ ಮಹಾತ್ಮರು ಕಟ್ಟಾ ಸನಾತನ ಹಿಂದೂವಾಗಿದ್ದರೆಂಬುದು ಸತ್ಯ. ವೇದ, ಉಪನಿಷತ್ತು, ಪುರಾಣಗಳು, ಹೀಗೆ ಹಿಂದೂ ಧರ್ಮಗ್ರಂಥಗಳೆಂದು ಯಾವಯಾವುದಕ್ಕೆ ಹೆಸರಿದೆಯೋ ಅಂತಹ ಎಲ್ಲವುಗಳಲ್ಲಿಯೂ ಅವರಿಗೆ ನಂಬಿಕೆಯಿತ್ತು. ಅದರಿಂದಾಗಿ ಅವತಾರಗಳನ್ನೂ, ಪುನರ್ಜನ್ಮಗಳನ್ನೂ ಅವರು ನಂಬಿದ್ದರು. ಜಾತಿಪದ್ಧತಿಯಲ್ಲಿ ಶ್ರದ್ಧೆಯಿಟ್ಟುಕೊಂಡು ಸಂಪ್ರದಾಯಶೀಲರಂತೆ ಜೋರಾಗಿ ಅದನ್ನು ಸಮರ್ಥಿಸುತ್ತಿದ್ದರು.
ಬೇರೆ ಜಾತಿಯವರೊಡನೆ ಊಟ, ಜಲಪಾನ, ಮದುವೆಗಳ ಬೇಡಿಕೆಗಳನ್ನು ಖಂಡಿಸುತ್ತಿದ್ದರು. ಅಂತರ್ಜಾತೀಯ ಭೋಜನ ನಿಷೇಧವು ಸಂಕಲ್ಪ ಬಲದ ಸಂವರ್ಧನೆಗೂ ಕೆಲವು ಸಾಮಾಜಿಕ ಸದ್ಗುಣ ರಕ್ಷಣೆಗೂ ಸಹಾಯಕಾರಿಯೆಂದು ವಾದಿಸುತ್ತಿದ್ದರು. ಈ ಡಂಭಾಚಾರದ ಹುಚ್ಚು ವಿವರಗಳನ್ನೆಲ್ಲ ಈಗ ಅವರು ಖಂಡಿಸಿರುವುದು ಒಳ್ಳೆಯದು. ಜಾತಿಪದ್ಧತಿಯು ಆಧ್ಯಾತ್ಮಿಕ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಆತಂಕಕಾರಿಯೆಂದು ಅವರು ಒಪ್ಪಿರುವುದೂ ಒಳ್ಳೆಯದೆ. ಅವರ ಮಗ ಅಂತರ್ಜಾತೀಯ ವಿವಾಹ ಮಾಡಿಕೊಂಡಿದ್ದು ಈ ಪರಿವರ್ತನೆಗೆ ಸಂಬಂಧಿಸಿಯೋ ಏನೋ. ಆದರೆ ಮಹಾತ್ಮರು ನಿಜವಾಗಿಯೂ ಪ್ರಗತಿ ಹೊಂದಿದ್ದಾರೆಯೇ ? ಮಹಾತ್ಮರು ಎತ್ತಿ ಹಿಡಿಯುವ ಈ ವರ್ಣವೆಂತಹುದು ? ಸ್ವಾಮಿ ದಯಾನಂದ ಸರಸ್ವತಿ ಹಾಗೂ ಅವರ ಅನುಯಾಯಿಗಳಾದ ಆರ್ಯ ಸಮಾಜಿಗಳು ಬೋಧಿಸುವ ವೈದಿಕ ವರ್ಣವೆ ? ವ್ಯಕ್ತಿಯ ನೈಸರ್ಗಿಕ ಪ್ರವೃತ್ತಿ ಅಥವಾ ಸಾಮರ್ಥ್ಯಕ್ಕೆ ಅನುಗುಣವಾದ ವೃತ್ತಿಯನ್ನು ಅನುಸರಿಸಬೇಕೆಂಬುದು ವೈದಿಕ ವರ್ಣದ ಮುಖ್ಯ ತತ್ವ, ನೈಸರ್ಗಿಕ ಪ್ರವೃತ್ತಿಗೆ ಅನುಕೂಲವಾಗಲಿ ಬಿಡಲಿ, ಪರಂಪರಾಗತವಾದ ಕುಲವೃತ್ತಿಯನ್ನೇ ಅನುಸರಿಸಬೇಕೆಂಬುದು ಮಹಾತ್ಮರ ವರ್ಣಕ್ಕಿರುವ ಮುಖ್ಯ ತತ್ವ , ಮಹಾತ್ಮರ ಮೇರೆಗೆ ವರ್ಣ ಮತ್ತು ಜಾತಿ ಇವೆರಡರ ಅಂತರವೇನು ? ಏನೂ ಇದ್ದಂತೆ ತೋರುವುದಿಲ್ಲ.
ಮಹಾತ್ಮರು ನೀಡುವ ವ್ಯಾಖ್ಯೆಯ ಮೇರೆಗೆ ವರ್ಣವೆಂಬುದು ಜಾತಿಯ ಇನ್ನೊಂದು ಹೆಸರಾಗುತ್ತದೆ . ಹೀಗಿರುವುದರಿಂದ ಮಹಾತ್ಮರು ಪ್ರಗತಿ ಹೊಂದುವುದಕ್ಕೆ ಬದಲಾಗಿ ಹಿಂಚಲನೆಯನ್ನು ಹೊಂದಿದ್ದಾರೆ. ವೈದಿಕ ವರ್ಣಕ್ಕೆ ಇದ್ದ ಉದಾತ್ತ ಕಲ್ಪನೆಯನ್ನು ವಿರೂಪಗೊಳಿಸಿ ಮಹಾತ್ಮರು ತಮ್ಮ ಅರ್ಥವಿವರಣೆಯಿಂದ ಅದನ್ನು ಹಾಸ್ಯಾಸ್ಪದವಾಗುವಂತೆ ಮಾಡಿದ್ದಾರೆ. ವರ್ಣವ್ಯವಸ್ಥೆಯನ್ನು ನಾನು ತಿರಸ್ಕರಿಸುತ್ತಿದ್ದು ಅದಕ್ಕೆ ಕಾರಣಗಳೇನೆಂದು ನನ್ನ ಉಪನ್ಯಾಸದಲ್ಲಿ
ವಿವರಿಸಿದ್ದೇನೆ. ಹಾಗಿದ್ದರೂ ಕೂಡ, ಸ್ವಾಮಿ ದಯಾನಂದರೇ ಮೊದಲಾದವರು ವೈದಿಕ ವರ್ಣಕ್ಕೆ ನೀಡುವ ಅರ್ಥ ವಿವರಣೆ ಸಮಂಜಸವೂ ಆಕ್ಷೇಪರಹಿತವೂ ಆಗಿದೆಯೆಂದು ನಾನು ಒಪ್ಪಲೇಬೇಕು. ಸಮಾಜದಲ್ಲಿ ವ್ಯಕ್ತಿಯ ಸ್ಥಾನವನ್ನು ಗೊತ್ತುಪಡಿಸುವಾಗ ಅವನ ಜನ್ಮವನ್ನೇ ಆಧಾರವಾಗಿ ಹಿಡಿಯಲು ಅದು ಅವಕಾಶವೀಯುತ್ತಿರಲಿಲ್ಲ. ವ್ಯಕ್ತಿಯ ಯೋಗ್ಯತೆಯನ್ನಷ್ಟೆ ಅದು ಮನ್ನಿಸುತ್ತಿತ್ತು. ಮಹಾತ್ಮರು ವರ್ಣಕ್ಕೆ ಕೊಡುವ ಅರ್ಥವಿವರಣೆ ವೈದಿಕ ವರ್ಣದ ವಿಪರ್ಯಾಸವಾಗಿದ್ದು ಅಸಹ್ಯವೂ ಆಗಿದೆ. ವರ್ಣ ಮತ್ತು ಜಾತಿ ಎರಡೂ ಸಂಪೂರ್ಣವಾಗಿ ಭಿನ್ನ ಪರಿಕಲ್ಪನೆಗಳು. ವರ್ಣವು ವ್ಯಕ್ತಿಯ ಯೋಗ್ಯತೆಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ, ಜಾತಿಯು ವ್ಯಕ್ತಿಯ ಜನ್ಮವನ್ನು ಆಧರಿಸುತ್ತದೆ. ಇವೆರಡೂ ಭಿನ್ನವೆಂಬುದಷ್ಟೇ ಅಲ್ಲ, ಪರಸ್ಪರ ವಿರುದ್ಧವೂ ಆಗಿದೆ.
ಪ್ರತಿಯೊಬ್ಬರೂ ತಮ್ಮತಮ್ಮ ಕುಲವೃತ್ತಿಯನ್ನು ಅನುಸರಿಸಬೇಕೆಂಬುದರಲ್ಲಿ ಮಹಾತ್ಮರಿಗೆ ನಂಬಿಕೆಯಿರುವುದಾದರೆ ಅವರು ಜಾತಿ ಪದ್ಧತಿಯ ಪ್ರಚಾರವನ್ನೇ ಮಾಡುತ್ತಿದ್ದಾರೆಂದಾಯಿತು. ಮತ್ತು ಅದನ್ನು ವರ್ಣವ್ಯವಸ್ಥೆಯೆಂದು ಅವರು ಹೇಳುತ್ತಿರುವುದು ಸುಳ್ಳು ಮಾತ್ರವಲ್ಲದೆ, ಗೊಂದಲಗೆಟ್ಟ ವಿಚಾರವನ್ನು ಇನ್ನಷ್ಟು ಗೊಂದಲಗೆಡಿಸಿದಂತಾಗಿದೆ. ಅವರ ಈ ಗೊಂದಲಗೆಟ್ಟ ವಿಚಾರಕ್ಕೆ ಕಾರಣವೇನೆಂದರೆ ವರ್ಣ ಯಾವುದು ಹಾಗೂ ಜಾತಿ ಯಾವುದು ಎಂಬುದರ ಸ್ಪಷ್ಟ ಹಾಗೂ ಖಚಿತ ಜ್ಞಾನ ಅವರಿಗಿಲ್ಲ : ಹಿಂದೂಧರ್ಮದ ರಕ್ಷಣೆಗೆ ಅವುಗಳಲ್ಲಿ ಯಾವುದು ಅವಶ್ಯಕವೆಂಬ ನಿಶ್ಚಿಅವರಲ್ಲಿಲ್ಲ. ಜಾತಿ ಹಿಂದೂಧರ್ಮದ ತತ್ವವಲ್ಲವೆಂದು ಅವರು ಹೇಳಿದ್ದಾರೆ. ( ಈ ಅಭಿಪ್ರಾಯವನ್ನು ಕೂಡ ಬದಲಿಸುವುದಕ್ಕೆ ಒಂದು ರಹಸ್ಯ ಕಾರಣ ಅವರಿಗೆ ಕಂಡುಬರಲಿಕ್ಕಿಲ್ಲವೆಂದು ಹಾರೈಸೋಣ ).
ಹಾಗಾದರೆ ವರ್ಣವೆಂಬುದು ಹಿಂದೂಧರ್ಮದ ಮೂಲ ತತ್ವವೇ ? ಇದಕ್ಕೆ ಸ್ಪಷ್ಟ ಉತ್ತರ ಸಾಧ್ಯವಿಲ್ಲ . ‘ ಡಾಕ್ಟರ್ ಅಂಬೇಡ್ಕರ್ ಅವರ ದೋಷಾರೋಪಣೆ ‘ ಎಂಬ ಅವರ ಲೇಖನವನ್ನೋದಿದವರು ‘ ಇಲ್ಲ ‘ ಎಂದೇ ಉತ್ತರಿಸುವರು. ವರ್ಣವು ಹಿಂದೂ ಧರ್ಮದ ಸಾರಭೂತವಾದ ಅಂಗವೆಂದು ಈ ಲೇಖನದಲ್ಲಿ ಅವರು ಹೇಳಿಲ್ಲ. ಅದಕ್ಕೆ ಬದಲಾಗಿ ಅವರು ಹೇಳಿರುವುದು ಹೀಗೆ : “ ಹಿಂದೂಧರ್ಮದ ಮೂಲ ತತ್ವವೆಂದರೆ ಸತ್ಯಸ್ವರೂಪನಾದ ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ಮತ್ತು ಮಾನವ ಕುಟುಂಬದ ಧರ್ಮ ಅಹಿಂಸೆಯೆಂಬುದು”. ಆದರೆ ಶ್ರೀ ಸಂತರಾಮರಿಗೆ ಉತ್ತರವಾಗಿ ಬರೆದ ಲೇಖನವನ್ನು ಓದಿದವರು ‘ ಹೌದು ‘ ಎನ್ನುವರು. ಆ ಲೇಖನದಲ್ಲಿ ಅವರು ಹೀಗೆಂದಿದ್ದಾರೆ : “ ಕುರಾನ್‌ನನ್ನು ಒಪ್ಪದವನು ಮುಸಲ್ಮಾನನಾಗಿ ಉಳಿಯುವುದು ಸಾಧ್ಯವೆ ? ಬೈಬಲ್ಲನ್ನು ನಿರಾಕರಿಸಿದವನು ಕ್ರೈಸ್ತನಾಗಿ ಉಳಿಯುವುದು ಸಾಧ್ಯವೆ ? ವರ್ಣ ಹಾಗೂ ಜಾತಿ ಎರಡೂ ಒಂದೇ ಆಗಿದ್ದ ಪಕ್ಷದಲ್ಲಿ ಮತ್ತು ವರ್ಣವು ಹಿಂದೂ ಧರ್ಮಶಾಸ್ತ್ರಗಳ ಅಖಂಡ ಭಾಗವಾಗಿದ್ದರೆ, ವರ್ಣ ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ಹಿಂದೂಗಳೆಂದು ಅವರು ಹೇಗೆ ಕರೆದುಕೊಳ್ಳಬಲ್ಲರೋ ನಾನರಿಯೆ”.
ನುಣುಚಿಕೊಳ್ಳುವಂತೆ ಈ ಬಗೆಯ ಸಂದಿಗ್ಧ ಮಾತುಗಳೇಕೆ ? ಮಹಾತ್ಮರು ಯಾರ ಕೈಗೂ ಸಿಕ್ಕದಂತೆ ಪ್ರಯತ್ನಿಸುವುದೇಕೆ ? ಯಾರನ್ನು ಮೆಚ್ಚಿಸಬಯಸುತ್ತಾರೆ ? ಈ ಸಂತರಿಗೆ ಸತ್ಯ ಹೊಳೆದಿಲ್ಲವೆ ? ಅಥವಾ ಸಂತನ ಕಾಣೆಗೆ ರಾಜಕಾರಣಿ ಅಡ್ಡವಾಗಿ ನಿಂತಿದ್ದಾನೆಯೆ ? ಮಹಾತ್ಮರಿಗೆ ಉಂಟಾಗಿರುವ ಈ ಗೊಂದಲಗೇಡು ಬಹುಶಃ ಎರಡು ಕಾರಣಗಳಿಂದ ಎಂದು ತೋರುತ್ತದೆ.
ಮೊದಲನೆಯದು ಮಹಾತ್ಮರ ಸ್ವಭಾವ. ಪ್ರತಿಯೊಂದು ವಿಷಯದಲ್ಲಿ ಅವರಿಗೆ ಮಗುವಿನ ಮುಗ್ಧತೆಯಿರುತ್ತದೆ ; ಆತ್ಮವಂಚನೆ ಮಾಡಿಕೊಳ್ಳುವ ಮಗುವಿನ ಸ್ವಭಾವ ಇರುತ್ತದೆ. ಮಗುವಿನಂತೆ ಅವರು ತಮಗೆ ನಂಬಬೇಕೆಂದು ಅನ್ನಿಸಿದ್ದನ್ನು ನಂಬಿಬಿಡುತ್ತಾರೆ. ಜಾತಿಯಲ್ಲಿಯ ನಂಬಿಕೆಯನ್ನು ಬಿಟ್ಟಂತೆ ವರ್ಣದಲ್ಲಿಯ ನಂಬಿಕೆಯನ್ನು ಬಿಡಬೇಕೆಂದು ಅನ್ನಿಸುವವರೆಗೆ ಮಹಾತ್ಮರು ಅದನ್ನು ತೊರೆಯಲಾರರು. ಅಲ್ಲಿಯವರೆಗೆ ನಾವು ಕಾಯಬೇಕು.
ಎರಡನೆಯ ಕಾರಣವೆಂದರೆ
ಮಹಾತ್ಮರು ಆಡಬಯಸಿದ ದ್ವಿಪಾತ್ರ , ಮಹಾತ್ಮಾ ಮತ್ತು ರಾಜಕಾರಣಿ ಎರಡೂ ಆಗಬೇಕೆನ್ನುತ್ತಾರೆ. ಮಹಾತ್ಮರಾಗಿ ನಿಂತು ರಾಜಕಾರಣಿಯನ್ನು ಆಧ್ಯಾತ್ಮಿಕ ಪ್ರಭಾವಕ್ಕೆ ಒಳಪಡಿಸಲು ಅವರು ಪ್ರಯತ್ನಿಸುತ್ತಾ ಇರಬಹುದು. ಅದರಲ್ಲಿ ಅವರಿಗೆ ಸಿದ್ದಿಯಾಗಿದೆಯೋ ಇಲ್ಲವೋ ತಿಳಿಯದು. ಆದರೆ ರಾಜಕಾರಣ ಅವರನ್ನು ನಿಶ್ಚಿತವಾಗಿಯೂ ವ್ಯವಹಾರ ಕುಶಲಿಯಾಗಿ ಮಾರ್ಪಡಿಸಿದೆ. ಸಮಾಜವು ಸಮಗ್ರ ಸತ್ಯವನ್ನು ನುಡಿಯಲಾಗದು. ಸಮಗ್ರ ಸತ್ಯವನ್ನು ಆಡುತ್ತಿದ್ದರೆ ತನ್ನ ರಾಜಕಾರಣಕ್ಕೆ ಅದು ಲೇಸಲ್ಲ . ರಾಜಕಾರಣಿ ಇದನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಜಾತಿ , ವರ್ಣವನ್ನು ಮಹಾತ್ಮರು ಯವಾಗಲೂ ಸಮರ್ಥಿಸುವುದೇಕೆಂದು ಈಗ ತಿಳಿಯಿತಲ್ಲವೆ ? ಅವುಗಳನ್ನು ವಿರೋಧಿಸಿದರೆ ರಾಜಕಾರಣದಲ್ಲಿ ತಮಗೆ ಸ್ಥಾನ ಉಳಿಯದು. ಅದೇನೇ ಇರಲಿ , ವರ್ಣದ ಹೆಸರಿನಿಂದ ಜಾತಿಯನ್ನು ಸಮರ್ಥಿಸುವಲ್ಲಿ ಆತ್ಮವಂಚನೆಯ ಜೊತೆಗೆ ಪರಮವಂಚನೆಯನ್ನೂ ಮಾಡುತ್ತಿದ್ದೀರೆಂದು ಮಹಾತ್ಮರಿಗೆ ನಾವು ಹೇಳಲೇಬೇಕಾಗಿದೆ .
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ -1
ಸುದ್ದಿದಿನ.ಕಾಂ|ವಾಟ್ಸಾಪ್|9986715401