ಬಹಿರಂಗ
ಜನತೆ ಮತ್ತು ಅವರ ಧರ್ಮ : ಡಾ.ಬಿ.ಆರ್. ಅಂಬೇಡ್ಕರ್ ಈ ಬರಹ ಓದಿ..!
ಹಿಂದೂಗಳು ಹಾಗೂ ಹಿಂದೂಧರ್ಮ ಇವೆರಡಕ್ಕೂ ನಾನು ಅನ್ವಯಿಸಿದ ಅಳತೆಗೋಲು ತೀರ ಕಠೋರವೆಂದೂ, ಆ ಮಾಪಕದಿಂದ ಅಳೆಯ ಹೊರಟರೆ ಈಗಿರುವ ಯಾವ ಧರ್ಮವೂ ಸಮರ್ಪಕವಾಗಲಾರದೆಂದೂ ಮಹಾತ್ಮರು ಹೇಳುತ್ತಾರೆ. ನಾನು ಬಳಸಿದ ಮಾನದಂಡ ಉನ್ನತವೆಂಬುದು ನಿಜವಾಗಿರಬಹುದು. ಆದರೆ ಅದು ದೊಡ್ಡದೋ ಚಿಕ್ಕದೋ ಎಂಬುದು ಪ್ರಶ್ನೆಯಲ್ಲ. ಆ ಮಾಪಕಗಳು ಯೋಗ್ಯವೇ ಅಲ್ಲವೇ ಎಂಬುದು ಮುಖ್ಯ ಪ್ರಶ್ನೆ.
ಒಂದು ಜನತೆ ಮತ್ತು ಅವರ ಧರ್ಮ ಇವೆರಡನ್ನು ಸಾಮಾಜಿಕ ನೀತಿಯನ್ನಾಧರಿಸಿದ ಸಾಮಾಜಿಕ ಮಟ್ಟದಿಂದಲೇ ಬೆಲೆ ಕಟ್ಟಬೇಕಾಗಿತ್ತದೆ . ಜನರ ಕಲ್ಯಾಣಜೀವನಕ್ಕೆ ಧರ್ಮವೊಂದು ಅವಶ್ಯಕ ಘಟಕವಾಗಿದ್ದರೆ ಇದನ್ನು ಬಿಟ್ಟು ಬೇರೆ ಯಾವ ಪ್ರಮಾಣವೂ ಅಗತ್ಯವಾಗದು. ಹಿಂದೂಗಳು ಹಾಗೂ ಹಿಂದೂಧರ್ಮ ಇವೆರಡರ ಯೋಗ್ಯತೆಯನ್ನು ಅಳೆಯಲು ನಾನು ಉಪಯೋಗಿಸಿದ ಮಾನದಂಡ ಅತ್ಯಂತ ಸಮರ್ಪಕವೆಂದೇ ನಾನು ಸಾಧಿಸುತ್ತೇನೆ. ಅದಕ್ಕಿಂತ ಉತ್ತಮವಾದುದು ನನಗೆ ಗೊತ್ತಿಲ್ಲ. ನನ್ನ ಮಾನದಂಡದಿಂದ ಅಳೆದರೆ ಗೊತ್ತಿರುವ ಪ್ರತಿಯೊಂದು ಧರ್ಮವೂ ಅದಕ್ಕೆ ನಿಲುಕದೆ ಸೋತು ಹೋಗುವುದೆಂಬುದು ನಿಜವಾಗಿರಬಹುದು.
ಆದರೆ ಹಿಂದೂಗಳ ಹಾಗೂ ಹಿಂದೂಧರ್ಮದ ಮುಂದಾಳಾಗಿ ನಿಂತ ಮಹಾತ್ಮರಿಗೆ ಇದು ನೆಮ್ಮದಿಯ ಕಾರಣವಾಗಕೂಡದು. ಹಿಂದೂಗಳ ಹಾಗೂ ಹಿಂದೂಧರ್ಮ ಇವೆರಡೂ ಸಮರ್ಪಕವಾದ ಮಟ್ಟದಲ್ಲಿ ಇಲ್ಲವೆಂಬ ಒಂದೇ ಒಂದು ಕಾರಣದಿಂದ ಜಿಗುಪ್ಪೆ ಮತ್ತು ತಿರಸ್ಕಾರ ( ಇವೆರಡೂ ನನ್ನಲ್ಲಿವೆ ಎಂದೇ ಆರೋಪಿಸಲಾಗಿದೆ ) ಹುಟ್ಟಲಿಲ್ಲ. ಈ ಮಾತನ್ನು ಮಹಾತ್ಮರಿಗೆ ನಾನು ಖಂಡಿತವಾಗಿ ಹೇಳಬಯಸುತ್ತೇನೆ. ಜಗತ್ತು ತುಂಬ ದೋಷಯುಕ್ತವಾಗಿದೆಯೆಂದೂ, ಅದರಲ್ಲಿ ಇರಬಯಸುವವರು ಆ ಎಲ್ಲಾ ದೋಷಗಳನ್ನು ಸಹಿಸಿಕೊಳ್ಳಬೇಕೆಂದೂ ನಾನು ಅರಿತಿದ್ದೇನೆ.
ನಾನು ಇರಬೇಕಾಗಿ ಬಂದ ಸಮಾಜದಲ್ಲಿ ಅದರ ದೋಷಗಳನ್ನು ನ್ಯೂನತೆಗಳನ್ನು ಸಹಿಸಲು ಸಿದ್ಧನಾಗಿದ್ದೇನೆ. ಆದರೆ ತಪ್ಪು ಆದರ್ಶಗಳನ್ನೇ ಎತ್ತಿ ಹಿಡಿಯುವ ಅಥವಾ ಸರಿಯಾದ ಆದರ್ಶಗಳನ್ನಿಟ್ಟುಕೊಂಡು ಕೂಡ ಅದಕ್ಕೆ ಅನುಗುಣವಾಗಿ ತನ್ನ ಜೀವನವನ್ನು ತಿದ್ದಿಕೊಳ್ಳಲೊಲ್ಲದ ಸಮಾಜದಲ್ಲಿ ಬದುಕಲು ನಾನು ಒಪ್ಪಲಾರೆ. ಹಿಂದೂಗಳೂ ಹಾಗೂ ಹಿಂದೂಧರ್ಮ ಇವೆರಡರ ಬಗೆಗೂ ನಾನು ಜಿಗುಪ್ಪೆ ಹೊಂದಿದ್ದರೆ ಅವುಗಳು ತಪ್ಪು ಆದರ್ಶಗಳನ್ನಿಟ್ಟುಕೊಂಡು ಅಯೋಗ್ಯವಾದ ಸಾಮಾಜಿಕ ಜೀವನವನ್ನು ನಡೆಸುತ್ತಿರುವುದೇ ಅದಕ್ಕೆ ಕಾರಣವಾಗಿದೆ. ಹಿಂದೂಗಳು ಹಾಗೂ ಹಿಂದೂಧರ್ಮದ ಜೊತೆಗಿರುವ ನನ್ನ ಜಗಳಕ್ಕೆ ಅವುಗಳ ಸಾಮಾಜಿಕ ನಡವಳಿಕೆಯ ನ್ಯೂನತೆ ಕಾರಣವಲ್ಲ, ಇನ್ನೂ ಆಳವಾದ ಮೂಲಭೂತ ಕಾರಣವಿದೆ. ಅದು ಅವರ ಆದರ್ಶಗಳ ವಿಚಾರಕ್ಕೆ ಸೇರಿದ್ದು .
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401