ಬಹಿರಂಗ

ಸಂವಿಧಾನ ರಚನೆಗೆ ಅವಕಾಶ ದೊರೆತಾಗ..!

Published

on

  • ರಘೋತ್ತಮ ಹೊ.ಬ

1946 ಡಿಸೆಂಬರ್ 9 ರಂದು ಈ ದೇಶದ ಸಂವಿಧಾನ ಸಭೆ ಪ್ರಪ್ರಥಮವಾಗಿ ಸಮಾವೇಶಗೊಂಡಾಗ ಸ್ವಾತಂತ್ರ್ಯ ಇನ್ನೂ ಸಿಗದಿದ್ದ ಆ ದಿನಗಳಲ್ಲಿ ಅಂದಿನ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಜವಾಹರಲಾಲ್ ನೆಹರೂರವರು ಮೊದಲ ದಿನ ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಒಳಗೊಂಡ ಒಂದು ನಿರ್ಣಯವನ್ನು ಮಂಡಿಸಿದರು.

ಆ ನಿರ್ಣಯದ ಮೇಲೆ ಚರ್ಚೆಯೂ ಪ್ರಾರಂಭವಾಯಿತು. ಹಾಗೆ ಚರ್ಚೆಯು ನಡೆಯುತ್ತಿರಬೇಕಾದರೆ ಡಿಸೆಂಬರ್ 16 ರಂದು ಸದಸ್ಯರಾದ ಎಂ.ಆರ್.ಜಯಕರ್ ಎಂಬುವವರು ಸಂವಿಧಾನದ ಈ ನಿರ್ಣಯದ ಮೇಲಿನ ಚರ್ಚೆಯನ್ನು ಸಭೆಯನ್ನು ಬಹಿಷ್ಕರಿಸಿದ್ದ ಮುಸ್ಲಿಂ ಲೀಗ್ ಪಾಲ್ಗೊಳ್ಳುವವರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು ಮತ್ತು ಜಯಕರ್ ರವರು ಹೀಗೆ ಹೇಳುತ್ತಲೇ ಇಡೀ ಸಂವಿಧಾನ ಸಭೆಯೇ ಗೊಂದಲಕ್ಕೆ ದೂಡಲ್ಪಟ್ಟಿತು. ಒಂದರ್ಥದಲ್ಲಿ ಕೋಲಾಹಲವುಂಟಾಗಿ ಒಟ್ಟಾರೆ ಸಂವಿಧಾನ ರಚನಾ ಪ್ರಕ್ರಿಯೆಯೇ ನೆನೆಗುದಿಗೆ ಬೀಳುತ್ತದೆಯೇನೋ ಎಂಬ ಆತಂಕ ಸದಸ್ಯರನ್ನು ಕಾಡಿತು.

ಆದರೆ ಮಾರನೇ ದಿನ ಅಂದರೆ ಡಿಸೆಂಬರ್ 17 ರಂದು ಸಭೆ ಸೇರುತ್ತಲೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ರವರು ಅಂಬೇಡ್ಕರರನ್ನು ಮಾತನಾಡಲು ಆಹ್ವಾನಿಸಿದರು. ಈ ನಿಟ್ಟಿನಲ್ಲಿ ರಾಜೇಂದ್ರ ಪ್ರಸಾದ್ ರ ಈ ಆಹ್ವಾನ ಸ್ವತಃ ಅಂಬೇಡ್ಕರರಿಗೂ ಅಚ್ಚರಿ ತಂದಿತ್ತು.

ಏಕೆಂದರೆ ಸಭೆಯಲ್ಲಿ ಅವರಿಗಿಂತಲೂ ಹಿರಿಯ ಇನ್ನೂ 20 ರಿಂದ 22 ಮಂದಿ ಸರದಿಯಲ್ಲಿ ಬಹಳ ಮುಂದಿದ್ದರು. ಅವರ ನಂತರವೇ ನನಗೆ ಅವಕಾಶ ಬರುವುದೆಂದು ಅಂಬೇಡ್ಕರರು ಅಂದುಕೊಂಡಿದ್ದರು. ಆದರೆ ಹೀಗೆ ದಿಢೀರನೆ ಮಾತನಾಡಲು ಕರೆದಾಗ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪಾತ್ರವಹಿಸಲು ಆಹ್ವಾನವಿತ್ತಾಗ ಅಂಬೇಡ್ಕರರು ಜಯಕರ್ ರಿಂದ ಉಂಟಾಗಿದ್ದ ಗೊಂದಲವನ್ನು ತಮ್ಮ ಅದ್ಭುತ ವಾಗ್ಝರಿಯ ಮೂಲಕ ತಹಬಂದಿಗೆ ತಂದರು. ಒಂದು ಸ್ಪಷ್ಟ ದಿಕ್ಕಿನಲ್ಲಿ ಇಡೀ ಸಂವಿಧಾನ ರಚನೆ ಸಾಗುವಂತೆ ಮಾರ್ಗ ತೋರಿದರು. In fact ತಾವೇ ಆ ಸಂವಿಧಾನದ ಶಿಲ್ಪಿಯೂ ಆದರು!

ಯಾಕೆ ಈ ಘಟನೆಯನ್ನು ಉಲ್ಲೇಖಿಸಬೇಕಾಯಿತೆಂದರೆ ಅವಕಾಶಗಳು ನಮಗೆ ದಿಢೀರ್ ಎಂದು ದೊರೆಯಬಹುದು, ಹೇಗಾದರೂ ಸಿಗಬಹುದು. ಆದರೆ ಅದನ್ನು ಅಂಬೇಡ್ಕರರಂತೆ ಬಳಸಿಕೊಳ್ಳುವುದಿದೆಯಲ್ಲ ಅದು ಟ್ಯಾಲೆಂಟ್‌. ಈ ನಿಟ್ಟಿನಲ್ಲಿ ಅಂಬೇಡ್ಕರರ ಬದುಕಿನ ಅವಕಾಶದ ಈ ಘಟನೆ ಮತ್ತು ಅದನ್ನು ಅವರು ಉಪಯೋಗಿಸಿಕೊಂಡ ರೀತಿ ಆದರ್ಶನೀಯ, ಪ್ರತಿಯೊಬ್ಬರೂ ಅರಿಯಬೇಕಾದುದು ನೋಡಿ ಕಲಿಯಬೇಕಾದುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version