ನೆಲದನಿ
ಇಂಥ ಅವೆಷ್ಟೋ ದಿನಗಳನ್ನು ನಾನು ಆ ಶಾಲೆಯಲ್ಲಿ ಕಳೆದಿದ್ದೇನೆ : ಡಾ.ಬಿ.ಆರ್.ಅಂಬೇಡ್ಕರ್
- ಡಾ.ಬಿ.ಆರ್.ಅಂಬೇಡ್ಕರ್
ಈ ಘಟನೆಗಳಿಗೆ ನನ್ನ ಜೀವನದಲ್ಲಿ ಪ್ರಮುಖ ಸ್ಥಾನವಿದೆ. ಈ ಘಟನೆಗಳು ಸಂಭವಿಸಿದಾಗ ನಾನು ಒಂಬತ್ತು ವರುಷದ ಹುಡುಗ. ನಾನು ಓದುತ್ತಿದ್ದ ಶಾಲೆಯಲ್ಲಿ ನನ್ನ ಸಾಧನೆಯನ್ನು ಅನುಸರಿಸಿ ವಿದ್ಯಾರ್ಥಿಗಳ ಮಧ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕೂಡಲು ನನಗೆ ಅವಕಾಶವಿರಲಿಲ್ಲ. ಒಂದು ಮೂಲೆಯಲ್ಲಿ ಪ್ರತ್ಯೇಕವಾಗಿ ಒಬ್ಬನೇ ಕೂರಬೇಕಾಗಿತ್ತು. ಶಾಲೆಯಲ್ಲಿ ನಾನೇ ಪ್ರತ್ಯೇಕವಾದ ಗೋಣಿಚೀಲ ತಂದು ಅದರ ಮೇಲೆಯೇ ಮುದುಡಿಕೊಂಡು ಕುಳಿತುಕೊಳ್ಳಬೇಕಾಗಿತ್ತು. ನಾನು ದಿನ ತರುತ್ತಿದ್ದ ಗೋಣಿಚೀಲವನ್ನು ಶಾಲೆಯ ಕಸಗುಡಿಸುವ ಸೇವಕನೂ ಕೂಡ ಮುಟ್ಟುತ್ತಿರಲಿಲ್ಲ. ಆ ಗೋಣಿಚೀಲವನ್ನು ಪ್ರತಿದಿನ ಸಾಯಂಕಾಲ ಮನೆಗೆ ಒಯ್ದು ಮರುದಿನ ಮುಂಜಾನೆ ತರಬೇಕಾಗಿತ್ತು.
ಶಾಲೆಯಲ್ಲಿದ್ದಾಗ ಸ್ಪೃಶ್ಯ ಜಾತಿಗಳ ಮಕ್ಕಳು ತಮಗೆ ಬಾಯಾರಿಕೆಯಾದಾಗ ನಲ್ಲಿ ಜೋಡಿಸಿದ ಪೀಪಾಯಿಗೆ ಹೋಗಿ ತಾವೇ ನೀರು ಬಿಟ್ಟು ಕುಡಿದು ತಮ್ಮ ದಾಹವನ್ನು ಹಿಂಗಿಸಿಕೊಳ್ಳುತ್ತಿದ್ದರು. ಆದರೆ, ನನ್ನ ಸ್ಥಿತಿ ಬೇರೆಯೆ ಆಗಿತ್ತು. ನಾನು ಉಳಿದ ಹುಡುಗರಂತೆ ನಲ್ಲಿಯನ್ನು ಮುಟ್ಟುವಂತಿರಲಿಲ್ಲ. ಸ್ಪೃಶ್ಯ ವ್ಯಕ್ತಿ ಬಂದು ನಲ್ಲಿಯನ್ನು ತಿರುಗಿಸಿದಾಗಲೇ ನಾನು ನೀರು ಕುಡಿದು ನನ್ನ ದಾಹವನ್ನು ನೀಗಿಸಿಕೊಳ್ಳಬೇಕಾಗಿತ್ತು. ನಲ್ಲಿ ತಿರುಗಿಸಲು ಯಾರೂ ಸ್ಪೃಶ್ಯ ವ್ಯಕ್ತಿಗಳು ದೊರಕದಿದ್ದರೆ ನಾನು ನೀರಿಲ್ಲದೆ ಕೊರಗಬೇಕಾಗಿತ್ತು. ಇಂಥ ಅವೆಷ್ಟೋ ದಿನಗಳನ್ನು ನಾನು ಆ ಶಾಲೆಯಲ್ಲಿ ಕಳೆದಿದ್ದೇನೆ.
ಕೂದಲು ಕತ್ತರಿಸುವ ಕೆಲಸವನ್ನು ಅಂದರೆ ನನ್ನನ್ನೊಳಗೊಂಡ ಗಂಡುಮಕ್ಕಳ ಕ್ಷೌರವನ್ನು ನನ್ನ ಹಿರಿಯಕ್ಕನೇ ಮಾಡುತ್ತಿದ್ದಳು. ಮಾಡುತ್ತಾ, ಮಾಡುತ್ತಾ ಆಕೆ ಕುಶಲ ಕ್ಷೌರಿಕಳಾಗಿಬಿಟ್ಟಿದ್ದಳು. ಸತಾರಾದಲ್ಲಿ ಕ್ಷೌರಿಕರೇ ಇರಲಿಲ್ಲವೆಂದಲ್ಲ. ಇದ್ದರೂ, ಕ್ಷೌರಿಕನಿಗೆ ದುಡ್ಡು ಕೊಡುವ ಶಕ್ತಿಯೇ ನಮ್ಮಲ್ಲಿ ಇರಲಿಲ್ಲವೆಂತಲೂ ಅಲ್ಲ. ನಾವು ಅಸ್ಪೃಶ್ಯರಾಗಿದ್ದುದರಿಂದ ಯಾವ ಕ್ಷೌರಿಕನೂ ನಮ್ಮ ಕ್ಷೌರ ಮಾಡಲು ಸಮ್ಮತಿಸುತ್ತಿರಲಿಲ್ಲ, ಅಷ್ಟೇ.
ಈ ಘಟನೆಗಳು ನನ್ನ ಮನಸ್ಸಿನ ಮೇಲೆ ಹಿಂದೆಂದೂ ಮಾಡಿರದಂಥ ದೊಡ್ಡ ಆಘಾತವನ್ನುಂಟುಮಾಡಿತು. ಇದು ಅಸ್ಪೃಶ್ಯತೆಯ ಬಗೆಗೆ ನನ್ನನ್ನು ಚಿಂತಿಸುವಂತೆ ಪ್ರೇರೇಪಿಸಿತು. ಈ ಘಟನೆಗಳು ನಡೆಯುವ ಮುನ್ನ ಸ್ಪೃಶ್ಯ-ಅಸ್ಪೃಶ್ಯರ ನಡುವೆ ಇವೆಲ್ಲ ಸಹಜವೆನಿಸಿದ್ದವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243