ಅಂತರಂಗ
ಹಿಂದೂ ಧರ್ಮ, ಜಾತಿ, ಮತಾಂತರ ಮತ್ತು ಪ್ರಚಾರ : ಡಾ.ಬಿ.ಆರ್.ಅಂಬೇಡ್ಕರ್ ಹೇಳಿರೋ ವಿಚಾರವಿಷ್ಟು ; ಒಮ್ಮೆ ಓದಿ
ಹಿಂದೂ ಧರ್ಮವು ಪ್ರಚಾರಕ ಧರ್ಮವಾಗಿತ್ತೇ ಅಥವಾ ಇಲ್ಲವೆ ಎಂಬುದು ವಾದಗ್ರಸ್ತ ವಿಷಯ ಅದು ಎಂದೂ ಪ್ರಚಾರಕ ಧರ್ಮವಾಗಿರಲಿಲ್ಲವೆಂದು ಕೆಲವರೂ, ಪ್ರಚಾರಕವಾಗಿತ್ತೆಂದು ಇತರರು ವಾದಿಸುತ್ತಾರೆ . ಒಂದು ಕಾಲಕ್ಕೆ ಹಿಂದೂಧರ್ಮ ಪ್ರಚಾರಕವಾಗಿತ್ತೆಂದು ಒಪ್ಪಬೇಕಾಗುತ್ತದೆ . ಪ್ರಚಾರಕ ಧರ್ಮವಾಗಿಲ್ಲದಿದ್ದರೆ ಅದು ಭಾರತದಲ್ಲೆಲ್ಲ ಹಬ್ಬುತ್ತಿರಲಿಲ್ಲ. ಈಗಿನ ಕಾಲದಲ್ಲಿ ಅದು ಪ್ರಚಾರಕ ಧರ್ಮವಾಗಿಲ್ಲ ಎಂದುದೂ ಅಷ್ಟೇ ಸತ್ಯವಾದ ವಿಷಯ .
ಆದುದರಿಂದ ಹಿಂದೂಧರ್ಮ ಪ್ರಚಾರಕವಾಗಿತ್ತೆ ಇಲ್ಲವೇ ಎಂಬುದಕ್ಕಿಂತ ನಿಜವಾದ ಪ್ರಶ್ನೆಯೆಂದರೆ ಹಿಂದೂಧರ್ಮ ಪ್ರಚಾರಕವಾಗಿ ಏಕೆ ಮುಂದುವರಿಯಲಿಲ್ಲ ಎಂಬುದಾಗಿದೆ . ಇದಕ್ಕೆ ನನ್ನ ಉತ್ತರ ಹೀಗಿದೆ : ಹಿಂದೂಗಳಲ್ಲಿ ಜಾತಿಪದ್ಧತಿ ಬೆಳೆದುದರಿಂದ ಹಿಂದೂಧರ್ಮದ ಪ್ರಚಾರ ನಿಂತುಹೋಯಿತು. ಮತಾಂತರವನ್ನು ಜಾತಿ ಒಪ್ಪುವುದಿಲ್ಲ. ಮತಾಂತರದಲ್ಲಿ ನಂಬಿಕೆಗಳನ್ನೂ ತತ್ವಗಳನ್ನೂ ಬೋಧಿಸುವುದಷ್ಟೇ ಸಮಸ್ಯೆಯಲ್ಲ . ಧರ್ಮಾಂತರಗೊಂಡು ಒಳಸೇರುವ ವ್ಯಕ್ತಿಗೆ ಜಾತಿಯ ಸಾಮಾಜಿಕ ಜೀವನದಲ್ಲಿ ಸ್ಥಾನ ನೀಡಬೇಕಲ್ಲವೆ ? ಇದರಿಂದ ತುಂಬ ಕಠಿಣವಾದ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಈ ಹೊಸಬನನ್ನು ಯಾವ ಜಾತಿಗೆ ಸೇರಿಸಿಕೊಳ್ಳಬೇಕು ? ಪರಕೀಯರನ್ನು ಮತಾಂತರಗೊಳಿಸಿ ತಮ್ಮೊಳಗೆ ಸೇರಿಸಿಕೊಳ್ಳಬೇಕೆಂಬ ಹಿಂದೂಗಳಿಗೆ ಇದು ತಲೆ ತಿನ್ನುವ ಸಮಸ್ಯೆಯೇ ಸರಿ.
ಕಬ್ಬಿನ ಸದಸ್ಯತ್ವದಂತೆ ಜಾತಿಯ ಸದಸ್ಯತ್ವವನ್ನು ಯಾರಿಗೆ ಬೇಕಾದರೂ ಕೊಡುವಂತಹುದಲ್ಲ . ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರ ಜಾತಿಯ ಸದಸ್ಯತ್ವ ಸಿಕ್ಕುತ್ತದೆ. ಜಾತಿಗಳು ಸ್ವಾಯತ್ತಾಧಿಕಾರಿಗಳುಳ್ಳ ಸಂಸ್ಥೆಗಳು , ಹೊಸಬರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹಿಂದೂ ಸಮಾಜ ಜಾತಿಗಳ ಒಂದು ಸಮುದಾಯವಾಗಿಬಹುದು, ಪ್ರತಿಯೊಂದು ಜಾತಿಯೂ ಸ್ವಾಯತ್ತ ಸಂಸ್ಥೆಯಂತೆ ಇರುವುದರಿಂದ ಮತಾಂತರ ಹೊಂದಿ ಬರಬೇಕೆನ್ನುವವರಿಗೆ ಅದರಲ್ಲಿ ಸ್ಥಾನವಿಲ್ಲ . ಹಿಂದುಗಳು ತಮ್ಮ ಧರ್ಮವನ್ನು ವಿಸ್ತರಿಸುವುದಕ್ಕೂ ಇತರ ಧರ್ಮದವರನ್ನು ತಮ್ಮಲ್ಲಿ ಸೇರಿಸಿಕೊಳ್ಳುವುದಕ್ಕೂ ಅವರ ಜಾತಿಯೇ ಅಡ್ಡ ಬಂದಿದೆ . ಜಾತಿಗಳು ಇರುವವರೆಗೆ ಹಿಂದೂಧರ್ಮ ಪ್ರಚಾರಕ ಧರ್ಮವಾಗಲಾರದು ಮತ್ತು ‘ ಶುದ್ಧಿ ‘ ಎನ್ನುವುದು ಕೇವಲ ಅವಿವೇಕದ ಹಾಗೂ ನಿರರ್ಥಕ ಪರಿಕಲ್ಪನೆಯಾಗುತ್ತದೆ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401