ಬಹಿರಂಗ
ಅಸ್ಪೃಶ್ಯತಾಚರಣೆಯನ್ನು ಸಂವಿಧಾನದ ಮೂಲಕವೇ ನಿಷೇಧಿಸಿದ ಡಾ.ಅಂಬೇಡ್ಕರ್
- ರಘೋತ್ತಮ ಹೊ.ಬ
ಅಸ್ಪೃಶ್ಯತಾಚರಣೆ ಅದು ಈ ದೇಶದಲ್ಲಿ ಇರುವುದು ಕಣ್ಣಿಗೆ ನಿತ್ಯ ಕಾಣುವ ಸತ್ಯ. ಕೆಲವರು “ಇಲ್ಲಾ, ನಾವು ಅಕ್ಕಪಕ್ಕನೇ ಕುಳಿತಿಲ್ವ? ಮದುವೆ ಮಾಡಿಕೊಂಡಿಲ್ವ? ಒಟ್ಟಿಗೆ ಊಟ ಮಾಡ್ತಿಲ್ಬ? ಒಟ್ಟಿಗೆ ಟೀ ಕುಡಿತಿಲ್ವ?” ಹೀಗೆ ಹೇಳುತ್ತಾ ಅಸ್ಪೃಶ್ಯತೆಯೂ ಇಲ್ಲ ಏನೂ ಇಲ್ಲ ಎಂದು ಸಾಧಿಸುತ್ತಾರೆ. ಅಂದಹಾಗೆ ಸಂವಿಧಾನ ಶಿಲ್ಪಿಗಳ ಉದ್ದೇಶ ಏನಾಗಿತ್ತೆಂದರೆ ಮೇಲೆ ಹೇಳಿದ ರೀತಿ ಜನ ಬದುಕಬೇಕು ಯಾರನ್ನು ಅಸ್ಪೃಶ್ಯತಾಚರಣೆಯ ದೃಷ್ಟಿಯಿಂದ ನೋಡಬಾರದು, ಯಾರ ಮೇಲು ಅಸ್ಪೃಶ್ಯತಾಚರಣೆ ಆಚರಿಸಬಾರದು ಎಂಬುದಾಗಿತ್ತು.
ಈ ಸಂಬಂಧ ಸಂವಿಧಾನದಲ್ಲಿ ಇರುವ ಅನುಚ್ಛೇದ ವೆಂದರೆ “ಅಸ್ಪೃಶ್ಯತಾಚರಣೆಯನ್ನು ರದ್ದುಗೊಳಿಸಲಾಗಿದೆ ಮತ್ತು ಅದರ ಯಾವುದೇ ಬಗೆಯ ಆಚರಣೆಯನ್ನು ನಿಷೇಧಿಸಲಾಗಿದೆ.ಅಸ್ಪೃಶ್ಯತಾಚರಣೆಯ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಯಾವುದೇ ಬಗೆಯ ತಾರತಮ್ಯ/ ದೌರ್ಜನ್ಯವನ್ನು ಯಾರಾದರ ಮೇಲೆ ಹೇರಿದರೆ ಎಸಗಿದರೆ ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ” (ಅನುಚ್ಛೇದ 17).
ಈ ಅನುಚ್ಛೇದದ ವಿಶೇಷತೆಯನ್ನು ಗಮನಿಸಬೇಕು. ಅದೆಂದರೆ ಸ್ವತಃ ಸಂವಿಧಾನವೇ ಇಂತಹ ಅನುಚ್ಛೇದದ ಮೂಲಕ ಇಂತಹ ಒಂದು ಕಾನೂನನ್ನು ಮಾಡಿರುವುದು ಮತ್ತು ಅಂತಹ ಕಾನೂನು ಮಾಡಬೇಕು ಎಂದು ಅದು ಸಂಸತ್ತಿಗೆ ಅಥವಾ ರಾಜ್ಯ ಸರ್ಕಾರಗಳಿಗೆ ಅದು ಸೂಚಿಸಲು , ಅವಕಾಶ ನೀಡಲು ಹೋಗಿಲ್ಲ, ಸ್ವತಃ ಭಾರತದ ಸಂವಿಧಾನವೇ ಆ ಕೆಲಸ ಮಾಡಿದೆ ಎಂಬುದು. ಈ ಸಂಬಂಧ ಈ ಅನುಚ್ಛೇದದ ಚರ್ಚೆಯ ಕುರಿತ ಅಂಬೇಡ್ಕರರ ಮಾತುಗಳನ್ನು ಇಲ್ಲಿ ದಾಖಲಿಸುವುದಾದರೆ “ಅಸ್ಪೃಶ್ಯತಾಚರಣೆ: ಅದನ್ನು ಒಂದು ಅಪರಾಧ ಎಂದು ಘೋಷಿಸಬಹುದಾದ ಪ್ರಶ್ನೆಯನ್ನು ಸಂಸತ್ತಿಗೆ ಅಥವಾ ರಾಜ್ಯ ಸರ್ಕಾರಗಳಿಗೆ ಬಿಡುವ ಬದಲು ಸಂವಿಧಾನವೇ ಆ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಅನುಚ್ಛೇದ ದ ಮೂಲಕ ಅಸ್ಪೃಶ್ಯರ ಹಕ್ಕುಗಳಿಗೆ ಧಕ್ಕೆ ತರುವುದನ್ನು, ಅವರ ಹಕ್ಕುಗಳ ಸಂಬಂಧ ಮಧ್ಯ ಪ್ರವೇಶಿಸುವುದನ್ನು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ”. (Dr.Ambedkar writings and speeches, Vol.13, Pp.110)
ಹಾಗಿದ್ದರೆ ಸಂವಿಧಾನ ಶಿಲ್ಪಿಗಳೇಕೆ ಹೀಗೆ ಮಾಡಿದರು? ಅವರು ಏಕೆ ಸಂಸತ್ತಿಗೆ ಅಥವಾ ರಾಜ್ಯ ಸರ್ಕಾರಗಳಿಗೆ ಇಂತಹ ಅವಕಾಶ ನೀಡಲಿಲ್ಲ? ಅವುಗಳ ವಿವೇಚನೆಗೆ ಬಿಡಲಿಲ್ಲ? ಯಾಕೆಂದರೆ ಸಂಸತ್ತು ಅಥವಾ ರಾಜ್ಯ ಸರ್ಕಾರಗಳು ಸಂವಿಧಾನ ಮಾಡಿರುವ ಈ ಕೆಲಸವನ್ನು ಮಾಡುತ್ತಿದ್ದವೆ? ಖಂಡಿತ ಇಲ್ಲ. ಹಾಗೆ ಮಾಡುವುದೇ ಆಗಿದ್ದರೆ ಈ ಕೆಲಸವನ್ನು ಅದೆಂದೋ ಈ ದೇಶದ ರಾಜನೊಬ್ಬ, ನವಾಬನೊಬ್ಬ, ವೈಸರಾಯ್ ಒಬ್ಬ ಮಾಡಿರುತ್ತಿದ್ದ. ಈ ನಿಟ್ಟಿನಲ್ಲಿ ಅಂತಹ ಇತಿಹಾಸ ಇಲ್ಲದ್ದರಿಂದಲೇ ಸಂವಿಧಾನ ಈ ಕೆಲಸ ಮಾಡಬೇಕಾಯಿತು.
ಹಾಗೆ ಇಲ್ಲಿ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ ಎಂದರೆ ಸಂಸತ್ತು ಅಂಗೀಕರಿಸುವ ಕೆಲ ಮಸೂದೆಗಳನ್ನು ರಾತ್ರೋ ರಾತ್ರಿ ಜಾರಿಗೆ ತರಲು ಯುದ್ಧೋಪಾದಿಯಲ್ಲಿ ಕಣಕ್ಕಿಳಿಯುವ ಸರ್ಕಾರಗಳು ಅದೇ ಸ್ವತಃ ಸಂವಿಧಾನವೇ ಅಂತಹ ಒಂದು ಕಾನೂನು ಮಾಡಿದ್ದರೂ ಯಾಕೆ ಅದನ್ನು ಅಷ್ಟೇ ಹುಮ್ಮಸ್ಸಿನಿಂದ ಜಾರಿಗೆ ತರಲು ಯತ್ನಿಸುತ್ತಿಲ್ಲ. ಅಸ್ಪೃಶ್ಯತೆ ಆಚರಿಸಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವುದು ಅದು ಮತ್ತೊಂದು ಮಾತು, ಆದರೆ ಸ್ವಚ್ಛ ಭಾರತ್ ಮಾದರಿಯಲ್ಲಿ ಕಡೆ ಪಕ್ಷ ಜಾಗೃತಿ ಯಾದರೂ ಮೂಡಿಸಬೇಕಲ್ಲವೇ? ಊಹ್ಞೂಂ, ಸರ್ಕಾರಗಳು ಇಂತಹ ಒಂದು ಕಾನೂನು ಸಂವಿಧಾನದಲ್ಲಿ ಇದೆ ಎಂಬುದನ್ನು ಮರೆತಂತಿವೆ.
ಹಾಗೆಯೇ ಜನಸಾಮಾನ್ಯರು ಅಷ್ಟೇ ಇಂತಹ ಒಂದು ಕಾನೂನು ಸಂವಿಧಾನದಲ್ಲೇ ಇದೆ, ಅದರ ಪ್ರಕಾರ ಅಸ್ಪೃಶ್ಯತಾಚರಣೆಯು ಕೊಲೆ, ದರೋಡೆ, ಕಳ್ಳತನ, ವ್ಯಭಿಚಾರದ ಮಾದರಿಯಲ್ಲಿ ಕ್ರೈಮ್, ಅಪರಾಧ ಎಂದು ಅರಿಯಲು ಹೋಗಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜ ಇದನ್ನು ಅರಿಯುವ ಅಗತ್ಯವಿದೆ.ಅಸ್ಪೃಶ್ಯತಾಚರಣೆಯಿಂದ ದೂರ ಇರುವ, ಅದನ್ನು ಯಾವುದೇ ರೂಪದಲ್ಲಿ ಯಾದರೂ ಆಚರಿಸದಿರುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243