ಬಹಿರಂಗ

ಮನುಸ್ಮೃತಿ ಯಾಕೆ ಬೇಡ ? ಡಾ.ಬಿ.ಆರ್.ಅಂಬೇಡ್ಕರ್ ಹೇಳಿರೋದಿಷ್ಟು..!

Published

on

  • ಡಾ.ಬಿ.ಆರ್. ಅಂಬೇಡ್ಕರ್

ಹಿಂದೂಗಳನ್ನು ತರ್ಕದಿಂದ ಮನವೊಲಿಸಿ , ತರ್ಕವಿರುದ್ಧವಾದ ಕಾರಣ ಜಾತಿಪದ್ಧತಿಯನ್ನು ತೊರೆಯಲು ಹೇಳಬಲ್ಲಿರಾ ? ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ, ತರ್ಕ ಮಾಡುವ ಸ್ವಾತಂತ್ರ್ಯ ಹಿಂದೂವಿಗೆ ಇದೆಯೆ ? ಆಚಾರ ವಿಷಯದಲ್ಲಿ ಪಾಲಿಸಬೇಕಾದರೆ ಮೂರು ಶಾಸನಗಳನ್ನು. ಮನುಸ್ಮೃತಿ ವಿಧಿಸಿದೆ .“ ವೇದ, ಶೃತಿಃ, ಸದಾಚಾರಃ ಸ್ವಸ್ಯಚಃ ಪ್ರಿಯಮಾತ್ಮಾನಃ ”,
ತರ್ಕ ಮಾಡುವ ಬುದ್ಧಿಗೆ ಇಲ್ಲಿ ಆಸ್ಪದವೇ ಇಲ್ಲ.
ಸದಾಚಾರ ಇವುಗಳನ್ನುಳಿದ ಬೇರೆ ಯಾವುದನ್ನೂ ಹಿಂದೂವು ಅನುಸರಿಸಕೂಡದು. ಮೊದಲನೆಯದಾಗಿ, ವೇದಗಳಲ್ಲಿ ಅಥವಾ ಸೃತಿಗಳಲ್ಲಿ ಹೇಳಿರುವ ಮಾತುಗಳನ್ನು ಅರ್ಥ ಮಾಡುವಾಗ ಸಂಶಯ ಹುಟ್ಟಿಕೊಂಡರೆ ಹೇಗೆ ? ಈ ವಿಷಯದಲ್ಲಿ ಮನುವಿನ ಅಭಿಪ್ರಾಯ ಸ್ಪಷ್ಟವಾಗಿದೆ. ಮನು ಹೇಳುತ್ತಾನೆ ,

ಯೋ ವ ಮನೈತ ತೇ ಮೂಲೇ ಹೇತು ಶಾಸ್ತಾಶ್ರ ಯಾದ್ವಿಜಃ |
ಸ ಸಾಧುಭಿರ್ಬಹಿಷ್ಕಾರ್ಯೊ ನಾಸ್ತಿಕೋ ವೇದನಿಂದಕಃಃ||

ಈ ವಿಧಿಯ ಮೇರೆಗೆ ವೇದ, ಸೃತಿಗಳ ಅರ್ಥ ವಿವರಣೆಯಲ್ಲಿ ಸ್ವತಂತ್ರ ಬುದ್ಧಿಯಿಂದ ತರ್ಕ ಹೂಡುವುದು ನಿಷಿದ್ಧ. ಹೀಗಿರುವುದರಿಂದ ವೇದಗಳಲ್ಲಿ, ಸ್ಮೃತಿಗಳಲ್ಲಿ ಹೇಳಿರುವ ವಿಷಯಕ್ಕೆ ಸುಮ್ಮನೆ ತಲೆದೂಗಬೇಕು ; ತರ್ಕಿಸಕೂಡದು. ವೇದಗಳ ಉಕ್ತಿಗೂ ಸತಿಗಳ ಉಕ್ತಿಗೂ ಪರಸ್ಪರ ವಿರೋಧ ಕಂಡುಬಂದಿತೆನ್ನಿ, ಆ ಪ್ರಸಂಗದಲ್ಲಿ ಕೂಡ ಸ್ವಂತ ಬುದ್ದಿಯಿಂದ ವಿಚಾರ ಮಾಡುವಂತಿಲ್ಲ. ಎರಡು ಸ್ಮೃತಿಗಳ ಪರಸ್ಪರ ವಿರೋಧವಾದ ಮಾತುಗಳನ್ನು ಹೇಳಿದ್ದರೆ ಅವೆರಡೂ ಸಮಾನವಾದ ಶಾಸನಗಳೇ. ಅವೆರಡರಲ್ಲಿ ಯಾವುದನ್ನು ಅನುಸರಿಸಿದರೂ ದೋಷವಿಲ್ಲ . ಬುದ್ಧಿಶಕ್ತಿಯಿಂದ ತೂಗಿನೋಡಿ ಯಾವುದು ಸರಿಯೆಂದು ನಿರ್ಧರಿಸುವ ಪ್ರಯತ್ನ ಮಾಡಕೂಡದು. ಮನು ಸ್ಪಷ್ಟವಾಗಿ ಸಾರುತ್ತಾನೆ,

ಶ್ರುತಿಧಂ ತು ಯತ್ರ ಸ್ಯಾತ್ತತ್ರ ಧರ್ಮಾವುಬೇ ಸೃತೌಜ||

ಶ್ರುತಿ ಹಾಗೂ ಸ್ಮತಿ ಇವೆರಡರಲ್ಲಿ ಪರಸ್ಪರ ವಿರೋಧ ಕಂಡರೆ ಶ್ರುತಿಯ ಮಾತೇ ಪ್ರಮಾಣ . ಆದರೆ ಇಲ್ಲಿ ಕೂಡ ಇವೆರಡರಲ್ಲಿ ಯಾವುದು ಬುದ್ದಿ ಸಮ್ಮತವೆಂದು ನೋಡಲು ಪ್ರಯತ್ನಿಸಕೂಡದು. ಇದನ್ನು ಮನುವೇ ಹೀಗೆ ಹೇಳಿದ್ದಾರೆ.

ಯಾ ವೇದಬಾಹ್ಯಾಃ ಸ್ಮೃತಯೋ ಯಾಶ್ಚ ಕಾಶ್ಚ ಕುದೃಷ್ಟಃ | |
ಸರ್ವಾಯ್ತಾ ನಿಷ್ಪಲಾಃ ಪ್ರೇತ್ಯ ತಮೋನಿಷಾ ಹಿ ತಂ ಸೃತಾಃ |

ಎರಡು ಸೃತಿಗಳಲ್ಲಿ ವಿರೋಧ ಕಂಡರೆ ಮನುಸ್ಮೃತಿಯೇ ಪ್ರಮಾಣ. ಇಲ್ಲಿ ಕೂಡ ಸ್ವತಂತ್ರವಾಗಿ ತರ್ಕಿಸಕೂಡದು. ಬೃಹಸ್ಪತಿ ಈ ಕೆಳಗಿನಂತೆ ಹೇಳಿದ್ದಾನೆ.

ವೇದಾಯತ್ಯೋಪ ನನ್ನ ನಿಬಂಧೃತ್ವಾತ್ ಪ್ರಮಾಣ್ಯಂ ಹಿ ಮನೋಸ್ಕೃತಂ |
ಮರ್ನ್ವಥವಿಪರೀತಾ ತು ಯಾ ಸ್ಮತಿಃ ಸಾರ ನ ಶಸ್ಯತೇ||

ಶ್ರುತಿ ಮತ್ತು ಸೃತಿಗಳು ಹೇಳಿಬಿಟ್ಟ ಮೇಲೆ ಮುಗಿದು ಹೋಯಿತು. ಹಿಂದೂವಾದವನು ತನ್ನ ಬುದ್ಧಿಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಮಹಾಭಾರತದಲ್ಲಿ ಕೂಡ ಇದೇ ಮಾತನ್ನು ಹೇಳಲಾಗಿದೆ.

ಪುರಾಣಂ ಮಾನವೋ ಧರ್ಮಃ ಸಾಂಗೋ ವೇದಶ್ಚಿಕಿತಂ | ಆಜ್ಞಾಸಿದ್ಧಾನಿ ಚತ್ವಾತಿ ನ ಹಂತವ್ಯಾನಿ ಹೇತುಭಿಃ | |

ಜಾತಿ ಮತ್ತು ವರ್ಣ ಇವೆರಡನ್ನೂ ಕುರಿತು
ವೇದಗಳಲ್ಲಿಯೂ ಸ್ಪತಿಗಳಲ್ಲಿಯೂ ವಿಧಿನಿಷೇಧಗಳನ್ನು ಹೇಳಿರುವುದರಿಂದ ಹಿಂದೂವಾದವನಿಗೆ ಸ್ವತಂತ್ರ ವಿಚಾರಶಕ್ತಿಯ ಅವಕಾಶವೇ ಇಲ್ಲ. ರೈಲ್ವೆ ಪ್ರವಾಸ ಮತ್ತು ವಿದೇಶ ಯಾತ್ರೆಗಳಂತಹ ಪ್ರಸಂಗಗಳಲ್ಲಿ ಜಾತಿ ನಿಯಮಗಳನ್ನು ಮುರಿಯಬೇಕಾಗಿ‌ ಬಂದರೂ ಮತ್ತೆ ಜಾತಿ ನಿಯಮಗಳಿಗೆ ನಿಷ್ಠೆ ತೋರುವ ಹಿಂದೂಗಳನ್ನು ಕಂಡು ಹಿಂದೂಗಳಲ್ಲದವರು ನಗುತ್ತಿರಬಹುದು.

ಹಿಂದೂಗಳ ವಿಚಾರಶಕ್ತಿಗೆ ತೊಡಿಸಿದ ಇನ್ನೊಂದು ಸಂಕೋಲೆಯನ್ನು ಈ ಸಂಗತಿ ಪ್ರಕಟಿಸುತ್ತದೆ. ಮನುಷ್ಯನ ಜೀವನ ಕೇವಲ ಅಭ್ಯಾಸಬಲದಿಂದ, ವಿಚಾರ ಮಾಡುವ ಅವಶ್ಯಕತೆಯಿಲ್ಲದೆಯೆ ಸಾಮಾನ್ಯವಾಗಿ ಸಾಗುತ್ತದೆ. ಯಾವುದೋ ಒಂದು ನಿರ್ದಿಷ್ಟವಾದ ನಂಬಿಕೆ ಅಥವಾ ತಿಳುವಳಿಕೆ ಸರಿಯೋ ತಪ್ಪೋ ಎಂಬುದನ್ನು ಸಾಧಕಬಾಧಕ ಪ್ರಮಾಣಗಳಿಂದ ಪರಿಶೀಲಿಸಿ ನೋಡಿ, ಆಳವಾಗಿ ಚಿಂತಿಸಿ ನಿರ್ಣಯಕ್ಕೆ ಬರುವ ಪ್ರಸಂಗ ತೀರ ಅಪರೂಪ.

ಒಂದು ಸಂಕಟಕಾಲ ಅಥವಾ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ವಿಚಾರಶಕ್ತಿ ಈ ಕ್ರಿಯೆಯಲ್ಲಿ ತೊಡಗಬಹುದು. ರೈಲ್ವೆ ಪ್ರವಾಸವಾಗಲಿ, ವಿದೇಶ ಪ್ರಯಾಣವಾಗಲಿ ಹಿಂದೂವಿನ ಜೀವನದಲ್ಲಿ ಒಂದು ದಿವ್ಯ ಪರೀಕ್ಷೆಯ ಸಂದರ್ಭವೇ ಆಗುತ್ತದೆ ; ಎಲ್ಲಾ ಕಾಲದಲ್ಲಿ ಪಾಲಿಸಲಾಗದಿದ್ದರೆ ಜಾತಿ ನಿಯಮಗಳನ್ನು ಪಾಲಿಸುವುದಾದರೂ ಯಾತಕ್ಕೆ ಎಂಬ ಪ್ರಶ್ನೆ ಹಿಂದೂವಿಗೆ ಬರಬೇಕಷ್ಟೆ. ಆದರೆ ಆ ಪ್ರಶ್ನೆ ಅವನಿಗೆ ಬರುವುದೇ ಇಲ್ಲ.
ಒಂದು ಹೆಜ್ಜೆಯಲ್ಲಿ ಜಾತಿಯನ್ನು ಉಲ್ಲಂಘಿಸುತ್ತಾನೆ, ಮುಂದಿನ ಹೆಜ್ಜೆಯಲ್ಲಿ ಏನೂ ಆಗಿಲ್ಲವೆಂಬಂತೆ ಜಾತಿಯ ನಿಯಮವನ್ನು ಪಾಲಿಸುತ್ತಾನೆ.

ಈ ವಿಚಿತ್ರವಾದ ನಡವಳಿಕೆಗೆ ಉತ್ತರ ಶಾಸ್ತ್ರಗಳ ಶಾಸನದಲ್ಲಿದೆ . “ ಸಾಧ್ಯವಾದಷ್ಟು ಮಟ್ಟಿಗೆ ಜಾತಿ ನಿಯಮಗಳನ್ನು ಪಾಲಿಸು , ಮೀರಬೇಕಾಗಿ ಬಂದರೆ ಪ್ರಾಯಶ್ಚಿತ್ತದಿಂದ ಶುದ್ದಿ ಮಾಡಿಕೊ ” ಎಂದು ಶಾಸ್ತ್ರಗಳು ಹೇಳುತ್ತವೆ . ಈ ಪ್ರಾಯಶ್ಚಿತ್ತ ವಿಧಾನದಿಂದ ಜಾತಿಪದ್ಧತಿ ನಿರಾತಂಕವಾಗಿ ಮುಂದುವರಿಯಲು ಅನುಕೂಲವಾಗಿದೆ. ವಿಚಾರ ಮಾಡುವ ಅವಕಾಶವನ್ನು ತಪ್ಪಿಸಿ ಜಾತಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಗಿದೆ.

ಜಾತಿ ಹಾಗೂ ಅಸ್ಪಶ್ಯತೆಗಳ ನಿರ್ಮೂಲನೆಗಾಗಿ ಹಲವಾರು ಜನರು ಈ ಮೊದಲೇ ಪ್ರಯತ್ನಿಸಿದ್ದುಂಟು. ಇಂಥವರಲ್ಲಿ ರಾಮಾನುಜ, ಕಬೀರ ಮೊದಲಾದವರನ್ನು ಮುಖ್ಯವಾಗಿ ಹೆಸರಿಸಬಹುದು. ಈ ಸುಧಾರಕರ ಪ್ರಯತ್ನಗಳನ್ನು ವಿವರಿಸಿ , ಅವರನ್ನು ಅನುಸರಿಸಿರೆಂದು ಹಿಂದೂಗಳಿಗೆ ಹೇಳಬಲ್ಲಿರಾ ? ಶ್ರುತಿ , ಸ್ಮೃತಿಗಳ ಜೊತೆಗೆ ಸದಾಚಾರವೆಂಬುದನ್ನೂ ಶಾಸನಗಳ ಸಾಲಿನಲ್ಲಿ ಮನು ಸೇರಿಸಿದ್ದಾನೆ . ಶಾಸ್ತ್ರಗಳಿಗಿಂತ ಸದಾಚಾರವೇ ಹೆಚ್ಚಿನದೆಂದೂ ಹೇಳಲಾಗಿದೆ.

ಯದ್ಯದಾಚರ್ಯತೇ ಯೇನ ಧರ್ಮ್ಮಂ ವಾ ಧರ್ಮ್ಮಮೇವ ವಾ | ದೇಶಾಚರಣಂ ನಿತ್ಯಂ ಚರಿತ್ರಂ ತದ್ದಿ ಕೀರ್ತಿತಮ್ ||

ಈ ಮಾತಿನ ಮೇರೆಗೆ, ಧರ್ಮವಾಗಿರಲಿ, ಅಧರ್ಮವಾಗಿರಲಿ, ಶಾಸ್ತಾನುಸಾರವಾಗಿರಲಿ, ಶಾಸ್ತ್ರ ವಿರುದ್ದವೇ ಆಗಿರಲಿ , ಸದಾಚಾರವನ್ನೇ ಪಾಲಿಸತಕ್ಕದ್ದು. ಆದರೆ ಸದಾಚಾರವೆಂದರೇನು ? ಒಳ್ಳೆಯ ನಡತೆ, ಸರಿಯಾದ ನಡತೆಯೆಂದಾಗಲೀ ಸಜ್ಜನರ ನಡತೆಯೆಂದಾಗಲೀ ಭಾವಿಸಿದರೆ ತಪ್ಪು, ಸದಾಚಾರದ ಅರ್ಥ ಹಾಗಲ್ಲ . ಒಳ್ಳೆಯದೂ , ಪುರಾತನ ಕಾಲದಿಂದ ನಡೆದುಬಂದ ಆಚಾರವೇ ಸದಾಚಾರ, ಕೆಳಗಿನ ಶ್ಲೋಕ ಇದನ್ನು ಸ್ಪಷ್ಟಪಡಿಸುತ್ತದೆ :

ಯಸ್ಕನ್ ದೇಶೇ ಯ ಆಚಾರಃ ಪಾರಂಪರ್ಯ ಕ್ರಮಾಗತಃ | ವರ್ಣಾನಾಂ ಕಿಲ ಸರ್ವೆಷಾಂ ಸ ಸದಾಚಾರ ಉಚ್ಯತೇ |

ಸದಾಚಾರವೆಂದರೆ ಒಳೆಯ ಆಚಾರವೆಂಬ ಅಥವಾ ಸಜ್ಜನರ ಆಚಾರವೆಂಬ ಗ್ರಹಿಕೆಯಿಂದ, ಸಜ್ಜನರನ್ನೇ ಅನುಕರಿಸಿಯಾರೆಂಬ ಭೀತಿಯಿಂದಲೋ ಏನೋ ಸ್ಪತಿಗಳು ಸ್ಪಷ್ಟವಾಗಿ ಹೀಗೆ ವಿಧಿಸುತ್ತವೆ “ ಶ್ರುತಿ, ಸೃತಿ, ಸದಾಚಾರಗಳಿಗೆ ವ್ಯತಿರಿಕ್ತವಾದ ನಡತೆ ದೇವತೆಗಳಿಂದಾದರೂ ಅದು ಆಚರಣೆ ಯೋಗ್ಯವಲ್ಲ. ಇದು ಅತಿ ವಿಚಿತ್ರವೆನಿಸಬಹುದು, ಅಬದ್ದ ಎನಿಸಬಹುದು. ಆದರೆ ವಸ್ತುಸ್ಥಿತಿ ಹಾಗಿದೆ.

‘ನ ದೇವಚರಿತಂ ಚರೇತ್‌ ‘ ಎಂಬುದು ಶಾಸ್ತ್ರಗಳು ವಿಧಿಸಿದ ಶಾಸನ , ಬುದ್ಧಿಶಕ್ತಿ ಮತ್ತು ನೀತಿ ಇವೆರಡು ಸುಧಾರಕನ ಬತ್ತಳಿಕೆಯಲ್ಲಿರುವ ಮಹಾಸ್ತ್ರ ಗಳು. ಇವೆರಡನ್ನೂ ಕಿತ್ತುಕೊಂಡುಬಿಟ್ಟರೆ ಅವನೇನು ಮಾಡಬಲ್ಲ ? ಬುದ್ದಿಯ ಉಪಯೋಗ ಮಾಡಲು ಜನರಿಗೆ ಸ್ವಾತಂತ್ರ್ಯವೇ ಇಲ್ಲವೆಂದರೆ ನೀವು ಜಾತಿಯನ್ನು ನಾಶ ಪಡಿಸುವುದು ಹೇಗೆ ? ಜಾತಿಯೆಂಬುದು ನೀತಿ ಸಮ್ಮತವೋ ಅಲ್ಲವೋ ಎನ್ನುವುದನ್ನು ವಿಚಾರಿಸುವ ಸ್ವಾತಂತ್ರ್ಯ ಜನರಿಗೆ ಇಲ್ಲವೆಂದರೆ ನೀವು ಜಾತಿಯನ್ನು ಉಚ್ಚಾಟಿಸುವುದೆಂತು ? ಜಾತಿ ಕಟ್ಟಿಕೊಂಡ ಕೋಟೆ ದುರ್ಭೇದ್ಯವಾಗಿದೆ.

ಬುದ್ದಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಇನ್ನೂ ಒಂದು ಮಾತನ್ನು ನೆನಪಿಡಿ. ಈ ದುರ್ಗದ ಒಳಗಡೆ ಬುದ್ದಿವಂತ ವರ್ಗವಾದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಇದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ತನ್ನ ಮಾತೃಭೂಮಿಯನ್ನು ರಕ್ಷಿಸಲು ನಿಂತ ಸೈನ್ಯವಾಗಿದೆ. ಹೀಗಿರುವುದರಿಂದಲೇ ನಾನು ಹೇಳುತ್ತೇನೆ ಹಿಂದೂಗಳಲ್ಲಿಯ ಜಾತಿಗಳನ್ನು ಹೊಡೆದಟ್ಟುವುದು ಅಸಾಧ್ಯವಾದುದು. ಈ ಕೋಟೆಯಲ್ಲಿ ಒಂದು ತೂತು ಮಾಡುವುದಕ್ಕೆ ಒಂದು ಸುದೀರ್ಘ ಯುಗವೇ ಬೇಕಾದೀತು.

ಈ ಕಾರ್ಯಕ್ಕೆ ದೀರ್ಘಾವಧಿಯೇ ಬೇಕಾಗಲಿ, ಅಲ್ಪಾವಧಿಯೇ ಸಾಕಾಗಲಿ ನೀವು ಮರೆಯದಿರಬೇಕಾದ ಒಂದು ಮಾತಿದೆ. ವೈಚಾರಿಕತೆಯನ್ನು ನಿರಾಕರಿಸುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು, ನೀತಿಗೂ ಬುದ್ದಿಗೂ ಅವಕಾಶವೀಯದಿರುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು ನೀವು ಅನುಸರಿಸದೆ ಇರಬೇಕು. ಶ್ರುತಿ ಮತ್ತು ಸ್ಮೃತಿಗಳ ವಿಷಯಗಳು ಸಂಕುಚಿತವಾದವು. ಬೇರೆ ಉಪಾಯವೇ ಇಲ್ಲ. ಇದು ಈ ವಿಷಯದಲ್ಲಿ ನನ್ನ ಖಚಿತವಾದ ಅಭಿಪ್ರಾಯ .

(ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version