ಅಂತರಂಗ
‘ಚಾತುರ್ವರ್ಣ’ವೆಂಬ ಮೋಸದ ಬಲೆ : ಡಾ.ಬಿ.ಆರ್. ಅಂಬೇಡ್ಕರ್
ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. ತಾವು ಆರ್ಯ ಸಮಾಜದವರೆಂದು ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ ವೇ ಚೌಕಟ್ಟು; ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾವಿರ ಜಾತಿಗಳಿಗೆ ಬದಲಾಗಿ ನಾಲ್ವೇ ವರ್ಗಗಳಲ್ಲಿ ಸಮಾಜವನ್ನು ವಿಭಾಗಿಸುವುದು ಅವರ ಯೋಜನೆ.
ತಮ್ಮ ಈ ಯೋಜನೆ ಹೆಚ್ಚು ಆಕರ್ಷಕವಾಗಿ ತೋರಲೆಂದು ಹಾಗೂ ಆಕ್ಷೇಪಣೆಗಳಿಗೆ ಅವಕಾಶವಿರಬಾರದೆಂದು ಅವರೇನು ಹೇಳುತ್ತಾರೆಂದರೆ ಈ ಚಾತುರ್ವರ್ಣದ ಆಧಾರ ಜನ್ಮವಲ್ಲ, ಗುಣ ( ಯೋಗ್ಯತೆ ). ಮೊದಲೇ ಹೇಳಿಬಿಡುತ್ತೇನೆ ಈ ಆದರ್ಶವನ್ನು ನಾನು ಒಪ್ಪಲಾರೆನೆಂದು. ಮೊದಲನೆಯದಾಗಿ ಆರ್ಯ ಸಮಾಜದವರ ಈ ಚಾತುರ್ವರ್ಣ ದ ಮೇರೆಗೆ ಹಿಂದೂ ಸಮಾಜದಲ್ಲಿ ಯೋಗ್ಯತೆಗೆ ಅನುಗುಣವಾಗಿಯೇ ವ್ಯಕ್ತಿಯ ಸ್ಥಾನ ನಿಗದಿಯಾವುದಿದ್ದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಹಣೆಪಟ್ಟಿಗಳಿಂದ ಮನುಷ್ಯರನ್ನು ಗುರುತಿಸುವುದೇಕೆಂದು ನನಗೆ ತಿಳಿಯದು. ( ವಿದ್ವಾಂಸನನ್ನು ಬ್ರಾಹ್ಮಣನೆಂದು ಕರೆಯದೆ ಗುರುತಿಸಬಹುದು . ಯೋಧನನ್ನು ಕ್ಷತ್ರಿಯನೆಂದು ನಿರ್ದೇಶಿಸದೆ ಕೂಡ ಗೌರವಿಸಬಹುದು.)
ಯೂರೋಪಿಯನ್ ಸಮಾಜದಲ್ಲಿ ಇಂತಹ ಖಾಯಂ ವರ್ಗನಾಮವಿಲ್ಲದೆ ವಿದ್ವಾಂಸರೂ , ಯೋಧರೂ ಗೌರವಿಸಲ್ಪಡುತ್ತಿರುವಾಗ ಹಿಂದೂ ಸಮಾಜದಲ್ಲಿ ಈ ಹಣೆ ಪಟ್ಟಿಯೇಕೆ ಬಂತು ? ಆರ್ಯ ಸಮಾಜದವರು ಈ ಪ್ರಶ್ನೆಯನ್ನು ವಿಚಾರಿಸಲು ಹೋಗಿಲ್ಲ. ಬ್ರಾಹ್ಮಣ ಕ್ಷತ್ರಿಯಾದಿ ಹೆಸರುಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಇನ್ನೊಂದು ಆಕ್ಷೇಪಣೆಯಿದೆ. ಸುಧಾರಣೆಯೆಂದಮೇಲೆ ಯಾವುದೇ ಇರಲಿ, ವಸ್ತುವಿಷಯಗಳ ಹಾಗೂ ಜನರ ಬಗೆಗೆ ನಾವು ತಾಳುವ ಭಾವನೆ ಮತ್ತು ಮನೋವೃತ್ತಿಯಲ್ಲಿ ವ್ಯತ್ಯಾಸವನ್ನುಂಟುಮಾಡುತ್ತದೆ. ಕೆಲಕೆಲವು ಹೆಸರುಗಳು ತಮ್ಮ ಸುತ್ತಲೂ ನಿರ್ದಿಷ್ಟವಾದ ಕಲ್ಪನೆ ವಿಚಾರಗಳನ್ನು, ವಿಶಿಷ್ಟ ಭಾವನೆಗಳನ್ನು ಕಟ್ಟಿಕೊಂಡು ಬಂದಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಈ ಹೆಸರುಗಳು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ನಿರ್ದಿಷ್ಟವಾದ ಹಾಗೂ ಸ್ಥಿರವಾದ ಚಿತ್ರವನ್ನು ನಿರ್ಮಿಸಿಕೊಟ್ಟಿದೆ.
ಜನ್ಮಸಿದ್ಧವಾಗಿ ಒಂದು ಮೇಲು ಇನ್ನೊಂದು ಅದಕ್ಕಿಂತ ಕೆಳಗೆ, ಮತ್ತೊಂದು ಇನ್ನೂ ಕೆಳಗೆ, ಹೀಗೆ ಒಂದು ತಾರತಮ್ಯದ ಶ್ರೇಣೀಕರಣದ ಮನೋಭಾವವನ್ನು ನೆಲೆಗೊಳಿಸಿದೆ. ಈ ಹೆಸರುಗಳನ್ನು ಮುಂದುವರಿಸಿದರೆ ಈ ಮನೋಭಾವವನ್ನು ಮುಂದುವರಿಸಿದಂತೆಯೆ ಸರಿ. ಈ ಮೇಲು – ಕೀಳಿನ ಮನೋಭಾವವನ್ನು ಹಿಂದೂಗಳ ಮನಸ್ಸಿನಿಂದ ಕಿತ್ತು ಹಾಕಬೇಕು. ಹೊಸ ಮನೋವೃತ್ತಿಯನ್ನು ಉಂಟುಮಾಡಬೇಕಾದರೆ ಹೊಸ ಹೆಸರುಗಳೇ ಬೇಕು. ಬ್ರಾಹ್ಮಣಾದಿಯಾಗಿ ಹೆಸರುಗಳುಳ್ಳ ಚಾತುರ್ವರ್ಣ ಒಂದು ಮೋಸದ ಬಲೆ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಇದನ್ನೂ ಓದಿ
https://suddidina.com/column/bahiranga/ambedkar-writings/
ಸುದ್ದಿದಿನ.ಕಾಂ|ವಾಟ್ಸಾಪ್|9986715401