ಅಂತರಂಗ
ಲಕ್ಷ್ಮಿನಾರಾಯಣ ಭಟ್ಟರಿಗೊಂದು ಭಾವ ನಮನ
- ನಾಗರಾಜ ಸಿರಿಗೆರೆ,ಕನ್ನಡ ಅದ್ಯಾಪಕರು,ದಾವಣಗೆರೆ
ನಮಸ್ಕಾರ ಸರ್,
ತಮಗೆ ನೆನಪಿದೆಯ ಸರ್, ಅದು 90ರ ದಶಕ. ನಮ್ಮೂರಿನಲ್ಲಿ ಮೈಸೂರು ಮಲ್ಲಿಗೆಯ ಕವಿ ನರಸಿಂಹಸ್ವಾಮಿಯವರಿಗೆ ಅಭಿನಂದನಾ ಸಮಾರಂಭ. ಅಭಿನಂದನಾ ಭಾಷಣ ಮಾಡಲು ತಮ್ಮನ್ನು ಆಹ್ವಾನಿಸಲು ಮನೆಗೆ ಬಂದಿದ್ದೆ. ಆಗ ತಮ್ಮ ಮಗನ ಮದುವೆ ಸಂಭ್ರಮದಲ್ಲಿದ್ದೀರಿ. ಹಾಗಾಗಿ ತಾವು ಬಾರದೆ, ಮತ್ತೋರ್ವ ಕವಿ ವ್ಯಾಸರಾಯರನ್ನು ಒಪ್ಪಿಸಿ, ಕಳುಹಿಸಿಕೊಟ್ಟಿದ್ದಿರಿ.
ಅಲ್ಲಿಂದ ನನಗೆ ತಮ್ಮೊಡನೆ ಒಂದಿಷ್ಟು ನೇರವಾದ ಒಡನಾಟ ಬೆಳೆದಿತ್ತು. ಅದಕ್ಕೂ ಮೊದಲು ತಮ್ಮ ಭಾವಗೀತೆಗಳ ಮೂಲಕ, ವಿಶೇಷವಾಗಿ `ಭಾವ ಸಂಗಮ”ದ ಮಾಧುರ್ಯದ ಗುಂಗು ತಲೆತುಂಬಿತ್ತು. ಅಲ್ಲಿರುವ ಮಾಸ್ತಿ, ಕುವೆಂಪು, ಅಡಿಗ, ಡಿವಿಜಿಯವರ ಗೀತೆಗಳು ನನ್ನನ್ನು ಭಾವಪರವಶ ಮಾಡಿದ್ದು ಸುಳ್ಳಲ್ಲ. ಒಂದೊಂದು ಗೀತೆಯೂ ಅಮರ ಮಧುರ. ಆಗಿನ್ನು ನಾನು ಬಿ ಎ ತರಗತಿಯ ವಿದ್ಯಾರ್ಥಿ. ತಾವು ಹೊರತಂದ `ಸಮ್ಮಿಲನ’ ಧ್ವನಿ ಸುರಳಿಯ ಪರಿಚಯ ಪತ್ರಿಕೆಯಲ್ಲಿ ಓದಿದ್ದೆ.
ಅದನ್ನು ಖರೀದಿಸಲು ದಾವಣಗೆರೆಯ ಕ್ಯಾಸೆಟ್ ಅಂಗಡಿಗಳನ್ನೆಲ್ಲ ಸುಡು ಬಿಸಿಲಲ್ಲಿ ತಿರುಗಿದ್ದೆ. ಗಾಂಧಿ ಸರ್ಕಲ್ ಮೂಲೆಯ ಕ್ಯಾಸೆಟ್ ಅಂಗಡಿ ಮಾಲಿಕ ನನ್ನ ಕುತೂಹಲ, ಆಸಕ್ತಿಯನ್ನು ಅರಿತು ಆ ಕ್ಯಾಸೆಟ್ಟನ್ನು ನನಗಾಗಿ ತರಿಸಿಕೊಟ್ಟಿದ್ದ. ಅದರಲ್ಲಿ ಕನ್ನಡದ ಹೆಸರಾಂತ ಹತ್ತು ಜನ ಕವಿಗಳ ಕವಿತಾ ವಾಚನ ಅದ್ಬುತ. ಅದರಲ್ಲಿ ಸ್ವತಃ ಪುತಿನ, ಅಡಿಗ, ನರಸಿಂಹಸ್ವಾಮಿಯವರು ತಮ್ಮ ವೃದ್ಧಾಪ್ಯದಲ್ಲೂ ಒಂದೊಂದು ಕವನವನ್ನು ವಾಚಿಸಿದ್ದರು, ತಾವೂ ಸೇರಿದಂತೆ ಜಿ ಎಸ್ ಎಸ್, ಕಂಬಾರ, ನಿಸಾರ್, ಬಿ ಆರ್ ಎಲ್, ಎಚ್ ಎಸ್ ವಿ, ಸಿದ್ಧಲಿಂಗಯ್ಯನವರ ಎರಡೆರಡು ಕವಿತೆಗಳ ವಾಚನದ ಅಪೂರ್ವ ಸಂಗ್ರಹ ಅದು.
ಆ ಧ್ವನಿ ಸುರಳಿಯನ್ನು ನಾನು ನೂರಾರು ಸಲ ಕೇಳಿ, ಆ ಕವಿತೆಗಳೆಲ್ಲ ಬಾಯಿಪಾಠವಾಗಿದ್ದವು. ನಿಮ್ಮನ್ನು ಭೇಟಿಯಾದಾಗಲೆಲ್ಲ ಇದರ ಮುಂದುವರಿದ ಭಾಗವಾಗಿ, ಬೇಂದ್ರೆ, ಕುವೆಂಪು, ಮಾಸ್ತಿ, ಡಿವಿಜಿ, ರಾಜರತ್ನಂ ಮುಂತಾದ ಹಿರಿಯ ತಲೆಮಾರಿನ ಕವಿಗಳ ಧ್ವನಿ ಸಂಗ್ರಹವನ್ನು ಹೊರತನ್ನಿ ಎಂದು ಒತ್ತಾಯಿಸುತ್ತಿದ್ದೆ. ಈ ದಿಗ್ಗಜರ ಕವನ ವಾಚನದ ಶೈಲಿ ಕೇಳಬೇಕೆಂಬ ಹಂಬಲ. (ಆಗ ಈಗಿನಂತೆ ಗೂಗಲ್ ಯೂಟ್ಯೂಬ್ ಗಳು ಇಲ್ಲದ ಕಾಲ).
ಇದನ್ನೂ ಓದಿ |ಕವಿತೆ | ಬೆಳಕು ಕತ್ತಲ ನಡುವೆ
ಆದರೆ ಈ ದಿಗ್ಗಜರ ಕವಿತೆಗಳ ವಾಚನದ ಧ್ವನಿಮುದ್ರಣದ ಹಕ್ಕುಗಳನ್ನು ಆಕಾಶವಾಣಿಯಿಂದ ಪಡೆಯುವುದು ಅಷ್ಟು ಸುಲಭವಿರಲಿಲ್ಲ. ಆದರೆ ತಾವು ಹೇಳಿದ ತಾಂತ್ರಿಕ ಕಾರಣಗಳಿಗಿಂತಲೂ ವ್ಯಾವಹಾರಿಕ ಕಾರಣಗಳು ಹೆಚ್ಚಾಗಿದ್ದವು. ಧ್ವನಿಸುರಳಿಗಳ ಕಾಲ ಮುಗಿದು ಸಿಡಿಗಳ ಕಾಲ ಬಂದಾಗ ತಮ್ಮನ್ನು ಭೇಟಿ ಮಾಡಿ, `ಸಮ್ಮಿಲನ’ ಕ್ಯಾಸೆಟ್ಟನ್ನು ಸಿಡಿಗೆ ಪರಿವರ್ತಿಸಲು ಕೇಳಿಕೊಂಡೆ. ಈಗಲೂ ತಾಂತ್ರಿಕ ಕಾರಣಗಳಿಗಿಂತಲೂ ವ್ಯಾವಹಾರಿಕ ಕಾರಣಗಳೇ ಇದ್ದವು.
ತಾವು ಸಾಹಿತ್ಯ ಅಕಾಡಮಿ ಸದಸ್ಯರಾದಾಗ ಕವಿಗಳ ಕವನ ವಾಚನದ ಧ್ವನಿ ಸುರಳಿಗಳನ್ನು ಹೊರತರುವ ಯೋಜನೆಯನ್ನು ಪ್ರಸ್ತಾಪಿಸಿದಾಗ ಬಹುಸಂಖ್ಯಾತ ಸದಸ್ಯರು `ಇದೊಂದು ವ್ಯಾವಹಾರಿಕ ಯೋಜನೆ’ ಎಂದು ನಿಮ್ಮನ್ನು ಗೇಲಿ ಮಾಡಿದವರುಂಟು. ಆದರೆ ನಮ್ಮಂತಹ ಕಾವ್ಯ ಕುತೂಹಲಿಗಳಿಗೆ, ಶಾಲೆಯಲ್ಲಿ ಪಾಠ ಮಾಡುವ ಕನ್ನಡ ಮೇಷ್ಟ್ರುಗಳಿಗೆ ಆ ಧ್ವನಿ ಸುರುಳಿಯ ಮಹತ್ವ, ಅದು ಎಷ್ಟು ಉಪಯೋಗ ಎಂಬುದು ಅಕಾಡಮಿಕ್ ಬುದ್ಧಿಜೀವಿಗಳಿಗೆ ತಿಳಿಯದೆ ಹೋಯಿತು. (ಆದರೆ ಇತ್ತೀಚಿನ ದಿನಗಳಲ್ಲಿ ಅಕಾಡಮಿಯಿಂದ ಕವಿಗಳ ಕಾವ್ಯ ವಾಚನದ ಯೋಜನೆ ಜಾರಿಗೆ ಬಂದು, ಒಂದಿಷ್ಟು ಕವಿಗಳ ಸಿಡಿಗಳು ಹೊರಬಂದವು.
ಆದರೆ ಅವು ಜನಪ್ರಿಯವಾಗಲಿಲ್ಲ. ಅದಕ್ಕೆ ಕಾರಣ 20-30 ವರ್ಷಗಳ ಹಿಂದಿನ ಕಾವು ಸಾಹಿತ್ಯಕ ವಾತಾವರಣ ಈಗ ಇಲ್ಲದೆ ಇರುವುದು) ಸರ್ ತಮ್ಮದು ಬಹುಮುಖ ಪ್ರತಿಭೆ. ಆಬಾಲ ವೃದ್ಧರಾದಿಯಾಗಿ ತಮ್ಮ ಸಾಹಿತ್ಯ ಅಚ್ಚುಮೆಚ್ಚು. `ಬಾಳ ಒಳ್ಳೇರು ನಮ್ಮ ಮಿಸ್, ಏನ್ ಕೇಳಿದರೂ ಎಸ್ಸೆಸ್, ನಗ್ತ ನಗ್ತಾ ಮಾತಾಡ್ತಾರೆ, ಸ್ಕೂಲಿಗೆಲ್ಲಾ ಫೇಮಸ್’… ಎಂಬ ಬಾಲಾಭಾಷೆಯ ನರ್ಸರಿ ಮಕ್ಕಳ ಶಿಶುಗೀತೆಯಿಂದ ಹಿಡಿದು ಶೂದ್ರಕನ ಮೃಚ್ಛಕಟಿಕದವರೆಗೆ ತಮ್ಮ ಸಾಹಿತ್ಯದ ಹರವು.
ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆ, ಸಾಹಿತ್ಯದಲ್ಲಿ ಅಪಾರ ಒಲವು. ಹಾಗಾಗಿ ಕುಮಾರವ್ಯಾಸ-ಕಾಳಿದಾಸ-ಶರೀಫರಿಂದ ಏಟ್ಸ್, ಇಲಿಯೆಟ್, ಶೇಕ್ಸ್ ಫಿಯರ್ ತನಕ ತಮ್ಮ ಬರಹದ ಜಾಡು. ಕನ್ನಡಿಗರ ಪಾಲಿಗೆ ಅಜ್ಞಾತವಾಸದಲ್ಲಿದ್ದ ಶರೀಫ್ ಸಾಹೇಬರನ್ನು ಮತ್ತು ಅವರ ತತ್ತ್ವಪದಗಳನ್ನು ಮೊದಲ ಸಲ ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ತಮ್ಮದು.
ಕನ್ನಡದಲ್ಲಿ ನವ್ಯ ಪರಂಪರೆ ವಿಜೃಂಭಿಸುತ್ತಿದ್ದ ಕಾಲದಲ್ಲಿ ಗೇಯ ಪದ್ಯಗಳನ್ನು ಬರೆದು ಸುಗಮ ಸಂಗೀತ ಲೋಕಕ್ಕೆ ನೀಡಿದ ಕಾಣಿಕೆ ಅನನ್ಯ. `ನಿಂತ ನೀರ ಕಲಕಬೇಡಿ’ , ಎಲ್ಲಿ ಜಾರಿತೋ ಮನವು, ಯಾರು ಜೀವವೆ ಯಾರು ಬಂದವರು, ನಡೆದಿದೆ ಪೂಜಾರತಿ, ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಈ ಭಾನುಈ ಚುಕ್ಕಿ ಈ ಹೂವು, ಮಲಗು ಮಲಗೆನ್ನ ಮರಿಯೇ, ಬನ್ನಿ ಭಾವಗಳೆ ಬನ್ನಿ ….. ಹೀಗೆ ಒಂದೇ ಎರಡೇ ನಿಮ್ಮ ಜನಪ್ರಿಯ ಭಾವಗೀತೆಗಳು.
ಬಹಳ ಮುಖ್ಯವಾಗಿ ಹೇಳಲೇಬೇಕಾದ ಸಂಗತಿಯೆಂದರೆ, ತಮ್ಮ `ಸಾಹಿತ್ಯ ರತ್ನ ಸಂಪುಟ’ ಕುರಿತು. ಈ ಸಂಪುಟದಲ್ಲಿರುವ ಮೂವತ್ತೈದಕ್ಕೂ ಹೆಚ್ಚು ಹೊಸಗನ್ನಡ ಸಾಹಿತಿಗಳ ವ್ಯಕ್ತಿಚಿತ್ರಣಗಳ ಶೈಲಿ ಅಪೂರ್ವವಾದುದು. ಸಾಹಿತಿಗಳ ಬಗ್ಗೆ ಸ್ವಾರಸ್ಯಕರವಾದ ಅಪಾರ ಮಾಹಿತಿಗಳನ್ನೊಳಗೊಂಡ ಕೃತಿಕರಂಡ ಇದು.
ಪ್ರತಿ ಸಾಹಿತಿಯ ವ್ಯಕ್ತಿಚಿತ್ರಣದ ಕೊನೆಗೆ ತಾವೇ ಬರೆದ ಅಥವಾ ಇತರೆಯವರು ಬರೆದ ಕವಿತೆಯನ್ನು ದಾಖಲಿಸಿದ್ದೀರಿ. ಆಮೂಲಕ ವ್ಯಕ್ತಿಚಿತ್ರ ಬರಹಕ್ಕೊಂದು ಸುವರ್ಣ ಚೌಕಟ್ಟಿನ ಹೊಸತನವನ್ನು ತೋರಿದ್ದೀರಿ. ಮತ್ತೊಂದು ಸಂಗತಿಯೆಂದರೆ, `ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಸಿಡಿ ರೂಪದಲ್ಲಿ ಹೊರತಂದಿರುವುದು. ಇದನ್ನು ಪ್ರಯಾಣ ಮಾಡುವಾಗಲು ಕೇಳುತ್ತಾ, ಕನ್ನಡ ಸಾಹಿತ್ಯದ ಸೊಬಗನ್ನು ಆಸ್ವಾದಿಸಬಹುದು.
ಮರೆತೇ ಹೋಗಿದ್ದ ಇನ್ನಂದು ಸಂಗತಿ: ಹೊಸಗನ್ನಡದ ಮುಂಗೋಳಿ ಎನಿಸಿದ್ದ ಮುದ್ದಣನ ಪತ್ನಿ ಕಮಲಾಬಾಯಿಯವರನ್ನು ತಾವು ಕಂಡಿರುವುದು. ಮುದ್ದಣ-ಮನೋರಮೆ ಕನ್ನಡಿಗರ ಪಾಲಿನ ಅನನ್ಯ ಸರಸ ದಂಪತಿಗಳು. ಆತ ಕ್ಷಯ ರೋಗಕ್ಕೆ ಬಲಿಯಾಗಿ ತನ್ನ 31ನೆಯ ವಯಸ್ಸಿನಲ್ಲಿ (1870-1901) ಇಹಲೋಕ ತ್ಯಜಿಸಿದವನು. ಆದರೆ ಆ ವಯಸ್ಸಿಗೆ ಅಮೂಲ್ಯ ಕಾಣಿಕೆಯನ್ನು ಕನ್ನಡಿಗರಿಗೆ ನೀಡಿರುವುದನ್ನು ಮರೆಯಲಾಗದು. `ಪದ್ಯಂ ವದ್ಯ ಗದ್ಯಂ ಹೃದ್ಯಂ’ ಎಂಬ ನಾಣ್ಣುಡಿ ಕೊಟ್ಟು ಗದ್ಯದ ಆಪ್ತತೆ ಬಗ್ಗೆ ಹೇಳಿದ ಮುದ್ದಣ ಹೊಸ ತಲೆಮಾರಿಗೆ ಕೃತಿಗಳ ಮೂಲಕ ಮಾತ್ರ ಪರಿಚಿತ.
ಆದರೆ ತಾವು ಬಾಲಕರಾಗಿದ್ದಾಗ ಶಿವಮೊಗ್ಗದ ತಮ್ಮ ಮನೆಯ ಹತ್ತಿರ ಮುದ್ದಣನ ಸಂಬಂಧಿಕರ ಮನೆ ಇದ್ದುದರ ಬಗ್ಗೆ ಒಂದು ಲೇಖನದಲ್ಲಿ ಬರೆದಿದ್ದಿರಿ. ಮತ್ತು ಆ ಮನೆಯಲ್ಲಿ ಇದ್ದ ಮುದುಕಿಯನ್ನು ಕುರಿತು ಪ್ರಸ್ತಾಪಿಸಿ, ಆ ಮುದುಕಿಯೇ ಮುದ್ದಣನ ಮಡದಿ ಕಮಲಾಬಾಯಿ ಎಂಬುದನ್ನು ಪತ್ತೆಮಾಡಿ ಉಲ್ಲೇಖಿಸಿದ್ದಿರಿ. ನಿಜಕ್ಕೂ ಇದೊಂದು ಸೋಜಿಗದ ಸಂಗತಿಯಲ್ಲವೇ?
ಹೀಗೆ ತಮ್ಮ ಕನ್ನಡ ಸೇವೆಯ ಬಗ್ಗೆ ಹೇಳುತ್ತಾ ಹೋದರೆ ಪುಟಗಳು ಮೀರಿ ಹೊತ್ತಿಗೆಯಾಗಬಲ್ಲದು. ಅದರೂ ಕೊನೆಯಲ್ಲಿ ಹೇಳಲೇಬೇಕಾದ ಸಂಗತಿ ಎಂದರೆ, ತಮ್ಮ ಅಗಲಿಕೆಯ ಹಿಂದಿನ ದಿನವೆ (ಶುಕ್ರವಾರ, ಮಾರ್ಚ್ ಆರು) ನಾನು ಎಂಟನೆಯ ತರಗತಿ ಮಕ್ಕಳಿಗೆ ತಮ್ಮ ಪರಿಚಯ ಮಾಡಿದ್ದೆ. ತಮ್ಮ `ಸಾಹಿತ್ಯ ರತ್ನ ಸಂಪುಟ’ದಿಂದ ಆಯ್ದ ಡಿವಿಜಿಯವರನ್ನು ಕುರಿತ ` ಸಾರ್ಥಕ ಬದುಕಿನ ಸಾಧಕ’ ಎಂಬ ಪಾಠ ಬೋಧನೆಯ ಸಂದರ್ಭ.
ಹಳ್ಳಿಗಾಡಿನ ಮಕ್ಕಳಿಗೆ ಕವಿಗಳನ್ನು, ಲೇಖಕರನ್ನು ಪರಿಚಯಿಸಬೇಕೆಂದರೆ ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಇರಬೇಕು. ಹಾಗಾಗಿ `ಬಾಳ ಒಳ್ಳೇರು ನಮ್ಮ ಮಿಸ್, ಏನ್ ಕೇಳಿದರೂ ಎಸ್ಸೆಸ್, ನಗ್ತ ನಗ್ತಾ ಮಾತಾಡ್ತಾರೆ, ಸ್ಕೂಲಿಗೆಲ್ಲಾ ಫೇಮಸ್…ಎಂಬ ಶಿಶುಗೀತೆ ಹೇಳಿ, ತಮ್ಮೊಂದಿಗೆ ನಾನು ತೆಗೆಸಿಕೊಂಡಿರುವ ಭಾವಚಿತ್ರವನ್ನು ತೋರಿಸಿದಾಗ ಆ ಮಕ್ಕಳ ಮುಖಗಳಲ್ಲಿ ಅರಳಿದ ಮಂದಹಾಸ ಅವರ್ಣನೀಯ.
ಲಕ್ಷ್ಮಿನಾರಾಯಣ ಭಟ್ ಸರ್, ತಾವು ಒಂದೂವರೆ ವರ್ಷದವರಿದ್ದಾಗಲೇ ತಮ್ಮ ತಂದೆ ತೀರಿದ್ದರು.
ಮುಂದೆ ತಾಯಿಯ ಆಶ್ರಯದಲ್ಲಿ ಬೆಳೆದು, ಮೈಸೂರಿನಲ್ಲಿ ವಾರಾನ್ನದ ವಿದ್ಯಾರ್ಥಿಯಾಗಿ ವಿದ್ಯೆ ಸಂಪಾದಿಸಿದಿರಿ. ಮುಂದೆ ಕನ್ನಡ ಸಾರಸ್ವತ ಲೋಕದಲ್ಲಿ ಮಾಸದ ಹೆಜ್ಜೆ ಗುರುತು ಮೂಡಿಸಿದ ಸಾಧಕರಾಗಿದ್ದೀರಿ. ಯಾರು ಏನೇ ಹೇಳಲಿ, ತಮ್ಮನ್ನು ಕ್ಯಾಸೆಟ್ ಕವಿ ಎಂದು ಗೇಲಿ ಮಾಡಲಿ! ಆದರೆ ತಾವು ಕನ್ನಡಿಗರಿಗೆ ಭಾವಗೀತೆಯ ಗುಂಜಾರವದ ಹುಚ್ಚ್ವನ್ನು ಹಚ್ಚಿಸಿದ್ದು ಮಾತ್ರ ಕರೆ. ಗುರು ಗೋವಿಂದ ಮತ್ತು ಶರೀಫರ ಭಾವೈಕ್ಯದ ತೇರಿಗೆ ಮಿಣೆ ಹಚ್ಚಿ ನಾಡ ತುಂಬ ಎಳೆದಿರಿ. ತಮ್ಮೀ ಕನ್ನಡದ ಕಲಿತನಕೆ ಶರಣು ಶರಣು.
ಸುದ್ದಿದಿನ.ಕಾಂ|ವಾಟ್ಸಾಪ್|9980346243