ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಯ ಸರಾಗ ನೋಂದಣಿಗೆ 51 ಲಕ್ಷದ ಮೈಲಿಗಲ್ಲು

Published

on

ಸುದ್ದಿದಿನ,ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ, ಜೂನ್ 18 ರಿಂದ ಆರಂಭವಾದ ನೋಂದಣಿ ಪ್ರಕ್ರಿಯೆ ಶರವೇಗ ಪಡೆದುಕೊಂಡಿದ್ದು, ಇದೀಗ 50 ಲಕ್ಷ ನೋಂದಣಿಯ ಗಡಿಯನ್ನು ದಾಟಿದೆ. 25.06.2023, ಭಾನುವಾರ ಸಂಜೆ 4 ಗಂಟೆಯವರೆಗೆ 51,17,693 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.

ನೋಂದಣಿ ವಿಧಾನವನ್ನು ಅತ್ಯಂತ ಸುಲಭಗೊಳಿಸಿರುವುದರಿಂದ, ಗ್ರಾಹಕರು ಅತ್ಯಂತ ಉತ್ಸುಕತೆಯನ್ನು ತೋರುತ್ತಿದ್ದು, ಪ್ರತಿದಿನವೂ ಲಕ್ಷದೋಪಾದಿಯಲ್ಲಿ ನೋಂದಣಿಯ ಪ್ರಮಾಣ ಹೆಚ್ಚುತ್ತಿದೆ.

ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಛೇರಿ, ನಾಡಕಛೇರಿ ಹಾಗೂ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಸಂಪೂರ್ಣ ಉಚಿತ.

ಗ್ರಾಹಕರು ಮೇಲ್ಕಂಡ ವೆಬ್’ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್’ಸೈಟ್ ಬಳಸದೇ ಇರುವುದು ಸೂಕ್ತ. ಇದಲ್ಲದೇ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಇ – ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುತ್ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆಗೆ ವೇಗ ದೊರೆತಿದೆ. ಗೃಹ ಜ್ಯೋತಿ ಯೋಜನೆಗೆ ನೋಂದಣಿ ಆರಂಭವಾದಾಗಿನಿಂದ ಪ್ರತಿದಿನದ ಎಸ್ಕಾಂವಾರು ನೋಂದಣಿಯ ವಿವರ ಇಲ್ಲಿದೆ.
ಈ ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್ https://energy.karnataka.gov.in ಗೆ ಭೇಟಿ ನೀಡಿ ಅಥವಾ 24×7 ಸಹಾಯವಾಣಿ 1912 ಕ್ಕೆ ಕರೆಮಾಡಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version