ಲೈಫ್ ಸ್ಟೈಲ್

ಪರಿಸರ ಪಾಠ

Published

on

ಸಾಂದರ್ಭಿಕ ಚಿತ್ರ

ಅಂದು ಮುಂಜಾನೆ ಬೇಗನೆ ಎದ್ದು , ಪರಿಸರ ಅಧ್ಯಯನ ಶಿಬಿರಕ್ಕೆ ಹೋಗಲು ತಯಾರಾದೆ.ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ನಮ್ಮನ್ನು ಬಂಡಿಪುರ ಅರಣ್ಯಕ್ಕೆ ಕರೆದೊಯ್ದಿದ್ದರು . ಈ ಭಾರಿ ಭದ್ರಾ ಅಭಯಾರಣ್ಯಕ್ಕೆ ಹೊರಟಿದ್ದೆವು. ಅಂದು ಮಂಜಿನ ಬೆಳಗ್ಗೆ ಸುಮಾರು ಒಂದು ತಾಸು ನಗರದ ಬೀದಿ ಬೀದಿಗಳಲ್ಲಿ ನನ್ನ ಸ್ನೇಹಿತರು ತಂಗಿದ್ದ ತಾಣವನ್ನೇ ಹುಡುಕಿದೆ. ಹಲವು ಕಟ್ಟಡಗಳ ನಡುವೆ ಅವರಿದ್ದ ಕಟ್ಟಡ ಮರೆಯಾಗಿತ್ತು.

ಹೇಗೋ ನಮ್ಮ ವಿಭಾಗದ ಮೇಷ್ಟ್ರಿಗೆ ಕರೆ ಮಾಡಿ ಶಿಬಿರಕ್ಕೆ ಹೋಗಲೆಂದು ಹೊರಟ್ಟಿದ್ದ ಬಸ್ ಬಳಿ ತಲುಪಿದೆ. ಸಮಯ ಐದಕ್ಕೆ ಸರಿಯಾಗಿ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ನಮ್ಮ ಬಂಡಿ ಸಾಗಿತು. ಇನ್ನು ಚಂದಿರ ಸರಿದಿರದ ಕಾರಣ ನಾವೆಲ್ಲರೂ ನಿದ್ದೆಗೆ ಜಾರಿದೆವು. ದಾರಿ ಹರಿದಂತೆ ಪಯಣದ ಹುಮ್ಮಸ್ಸಿಗಾಗಿ ಡಿ.ಜೆ. ಹಾಡಿಗೆ ಹೆಜ್ಜೆ ಹಾಕ ತೊಡಗಿದೆವು., ಸಮಯ-ಹಾದಿ ಕಳದದ್ದೆ ತಿಳಿಯಲಿಲ್ಲ….!ಸುಮಾರು ಒಂಬತ್ತು ಮೂವತಕ್ಕೆ ಸರಿಯಾಗಿ ಲಕ್ಕವಳ್ಳಿ ತಲುಪಿದೆವು .

ಅರಣ್ಯಕ್ಕೆ ಹೋದಾಕ್ಷಣ ನಮ್ಮೊಳಗೆ ಮೌನ ಆವರಿಸಿತು. ಪರಿಸರದ ಬಗ್ಗೆ , ಕುತೂಹಲ , ಏಕಾಗ್ರತೆ ಹೆಚ್ಚಾಯಿತು, ನಾವೆಲ್ಲರೂ ನಮ್ಮ ಜಂಗಮವಾಣಿಗಳನ್ನು ಬಂದ್ ಮಾಡಿ ಶಿಬಿರದ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗಿಯಾದೆವು . ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಸರ್ವೆ ಸಾಮಾನ್ಯ ಅದೇ ನೈಜ್ಯ ಶಾಲೆಯಾದ ಪರಿಸರದೊಂದಿಗೆ ಕಲಿಯುವುದು ಸಾಕಷ್ಟಿದೆ ಎಂಬುದು ನನಗರಿವಾಯಿತು. ಅಲ್ಲಿನ ಸ್ಥಳೀಯ ಪರಿಸರ ತಜ್ಞರೊಬ್ಬರು ಶಿಬಿರವನ್ನು ಉದ್ಘಾಟಿಸಿ ಭದ್ರಾ ಅಭಯಾರಣ್ಯದಲ್ಲಿರುವ ಸಸ್ಯ ಸಂಕುಲದ ಬಗ್ಗೆ ಪರಿಚಯಿಸಿದರು. ವಿಧ ವಿಧ ಬಗೆಯ ಕೀಟ , ಪ್ರಾಣಿ , ಪಕ್ಷಿ , ಹೂಗಳ ಬಗ್ಗೆ ಮಾಹಿತಿ ನೀಡಿದರು. ಬರೀ ಪಠ್ಯಕ್ರಮಕ್ಕೆ ಸೀಮಿತವಾಗಿ ಕಲಿತುತ್ತಿರುವ ನಮಗೆ ಪಠ್ಯೇತ್ತರ ಪಾಠಗಳನ್ನು ಆಲಿಸುವುದು ಬಹಳ ಹಿತಕರವೆನ್ನಿಸಿತು.

ನಂತರ ಅರಣ್ಯದ ವೈಶಿಷ್ಟ್ಯತೆಯ ಕುರಿತು ವಿಡಿಯೋ ತೋರಿಸುತ್ತಾ ಸಿಗ್ನೇಚರ್ ಎಂಬ ಜೇಡರ ಹುಳಿವಿನ ಬಗ್ಗೆ ವಿವರಿಸಿದರು. ಈ ಜೇಡ ಬಲೆಯಲ್ಲಿ ಒಂದು ರೀತಿಯ ಬಿಳಿ ಗೆರೆ ಹೆಣೆದಿರುತ್ತದೆ ಎಂದು ತಿಳಿಸಿದರು. ಅದಾದ ಮೇಲೆ ಹೀಗೆ ಸಫಾರಿ ಹೋಗಲು ಹೊರಡುವ ಮುನ್ನ ಅತ್ತಿತ್ತ ಸುತ್ತಾಡುತ್ತಾ ಇದ್ದಾಗ ಅಲ್ಲಿಯೇ ಲೈಟು ಕಂಬಕ್ಕೆ ಬಲೆಯೊಂದು ಹೆಣೆದಿತ್ತು . ಅದು ತಜ್ಞರು ವಿವರಿಸಿದ ಸಿಗ್ನೇಚರ್ ಜೇಡ ಒಂದು ರೀತಿಯ ಅಪರೂಪದ ಕೀಟವಾಗಿತ್ತು.ಅದರ ವೈಶಿಷ್ಟ್ಯತೆ ಹಾಗು ಕುಶಲತೆಯನ್ನು ಕಂಡು ಅಚ್ಚರಿಯಾಯಿತು.

ನಮ್ಮನ್ನು ಸಫಾರಿ ಕರೆದುಕೊಂಡು ಹೋದರು. ಸಫಾರಿಯಲ್ಲಿ ಮೊದಮೊದಲು ಖಾಲಿ ಕಾಡು ಕಾಣಿಸಿತಾದರೂ ಮುಂದೆ ದಾರಿ ಸವೆದಂತೆ ಲಂಗೂರ್, ಸಾಂಬಾರ್, ಕಾಡು ಎಮ್ಮೆ- ಕೋಣ , ಗುಳ್ಳೇ ನರಿ , ವಿಶಿಷ್ಟ ಕೆಂಪು ಬಾಲದ ಅಳಿಲು , ಉಲಿವ ನವಿಲು , ಉಡ, ಕಾಡು ಹಂದಿ ಎಲ್ಲವೂ ನೋಡಲು ಸಿಕ್ಕವು. ಆ ರಾತ್ರಿ ಸಫಾರಿಯಿಂದ ವಾಪ್ಪಸ್ಸಾದಾಗ ಮೇಷ್ಟ್ರು ಹೇಳಿದ ಮಾತಿನಂತೆ ಇಡೀ ರಾತ್ರಿ ಅನುಭವ ಲೇಖನ ವನ್ನು ಬರೆಯುತ್ತಿದ್ದವು.ಅಲ್ಲಿನ ಚಳಿಗೆ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ. ಬೆಳಗಾದಾಗ ಭದ್ರಾ ನದಿಯ ಹಿನ್ನೋಟ ನಮ್ಮೆಲ್ಲರ ಕಣ್ ಸೆಳೆಯಿತು . ಬಂದ್ ಮಾಡಿದ್ದ ಮೊಬೈಲ್ ಗಳ ತೆಗೆದುಕೊಂಡು ಸುಂದರ ಪಟಗಳ ತೆಗೆಯುವಲ್ಲಿ-ತೆಗೆದುಕೊಳ್ಲುವಲ್ಲಿ ನಿರತರಾದೆವು . ಮುಂದೆ ನಮ್ಮ ಪಯಣ ಹತ್ತಿರದ ಸಕ್ಕರೆಬೈಲು ಆನೆ ಶಿಬಿರಕ್ಕೆ ಭೇಟಿ ನೀಡಿದೆವು . ಅಲ್ಲಿ ಆನೆಗಳಿಗೆ ತಾಲೀಮು ಮಾಡುತ್ತಿದ್ದದ್ದನ್ನು ಹತ್ತಿರದಿಂದ ಗಮನಿಸಿದೆವು.

ಮಾವುತರ ಆದೇಶದಂತೆ ಆನೆಗಳು ಶಿಸ್ತು ಭದ್ದವಾಗಿ ವರ್ತಿಸುತ್ತಿದ್ದವು, ಮಕ್ಕಳಂತೆ ಚೆಂಡಾಟ ಆಡುತ್ತಾ, ಪ್ರವಾಸಿಗರಿಗೆ ಸೊಂಡಿಲಲ್ಲಿ ನಮಿಸುತ್ತಾ ಲವಲವಿಕೆಯಿಂದ ಇದ್ದವು. ಮನುಷ್ಯನ ದುರಾಸೆಯಿಂದಾಗಿಯೇ ಎಷ್ಟೋ ಕಾಡು ನಾಶವಾಗುತ್ತದೆ. ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡಲು ಕೆಲವೊಮ್ಮೆ ಮಾನವನೇ ಕಾರಣಕರ್ತರಾಗಿದ್ದಾನೆ. ಇಂತಹ ವಿಚಾರಗಳನ್ನು ನಾವೂ ಪರಿಸರದೊಳಗೆ ಪರಿಸರ ಜೀವಿಯಾದಾಗ ಮಾತ್ರ ಅರಿವಾಗುತ್ತದೆ ಹೊರತು ಕಾಂಕ್ರೀಟ್ ಕಾಡೊಳಗೆ ಬಾವಿ ಕಪ್ಪೆಗಳಂತೆ ಇದ್ದರೆ ಪ್ರಕೃತಿಯ ಬಗ್ಗೆ ಕಿಂಚಿತ್ತು ತಿಳಿಯಲಾಗುವುದಿಲ್ಲ.

ಸಕ್ಕರೆಬೈಲಿನಲ್ಲಿ ಸಂವೇದನೀಯ ವಿಚಾರಗಳು ಮಸ್ತಕದಲ್ಲಿ ಮೂಡಿದವು. ಮಧ್ಯಾಹ್ನ ನಮ್ಮ ನಾಡಿನ ಹೆಮ್ಮೆಯ ಕವಿ ಮನೆಗೆ (ಕುಪ್ಪಳಿಯ ಕವಿಶೈಲಕ್ಕೆ) ಭೇಟಿ ನೀಡಿದೆವು . ಮನೆಯಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆ ಪುರಾತನ ಬದುಕಿನ ಶೈಲಿಯ ಬಗ್ಗೆ ಕುತೂಹಲ ಮೂಡಿತು. ಹೇಮಾವತಿ ಅಮ್ಮನವರ ಅಡುಗೆ ಮನೆಯ ಸಾಮಗ್ರಿಗಳನ್ನು ಕಂಡು ಅವರು ಪಡುತ್ತಿದ್ದ ಶ್ರಮ ಕಾಯಕ ಕಣ್ಮುಂದೆ ಗೋಚರಿಸಿತು. ಅಂದಿನ ಬದುಕಿನ ಶೈಲಿ , ಸಂಸ್ಕøತಿಯನ್ನು ಗಮನಿಸಿ ಕನಿಷ್ಟ ಪದ್ಧತಿ, ಬದುಕಿನ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳಬೇಕಿನಿಸಿತು. ನಂತರ ಪ್ರವಾಸಿಗರ ಅನಿಸಿಕೆ ಪುಸ್ತಕದಲ್ಲಿ ಕವಿಮನೆ ನನ್ನ ಕನಸು ಎಂದು ಬರೆದೆ. ತೇಜಸ್ವಿಯವರ ಸಮಾಧಿಯ ಬಳಿ ಹೋಗುವ ಮುನ್ನ ಕವಿ ಶೈಲದ ಗುಡ್ಡದಲ್ಲಿ ಕುಳಿತು ಕುವೆಂಪುರವರ ಒಂದೆರಡು ಭಾವಗೀತೆಗಳನ್ನು ಧ್ಯಾನಸ್ತಳಾಗಿ ಹಾಡಿದೆ. ಮನಸ್ಸಿಗೆ ನೆಮ್ಮದಿಯಾಯಿತು, ಮನ ನಿರಾಳವಾಯಿತು.

ತೇಜಸ್ವಿಯವರು ಗತಿಸಿದ ದಿನ ನಾನು ಚಿಕ್ಕವಳಿದ್ದೆ ನನ್ನಪ್ಪ(ಎನ್ಕೆ),ಅಪ್ಪನ ಸ್ನೇಹಿತರಾದ ಎಸ್. ಗಂಗಾಧರಯ್ಯ ಮತ್ತು ಇನ್ನಿತ್ತರ ಜೊತೆ ಅವರ ಕೊನೆ ಭಾರಿ ನೋಡಲು ಹೋಗಿದ್ದೆವು . ಅದು ಮುಸುಕು ಮುಸುಕು ನೆನಪು ಅದಾದ ಬಳಿಕ ಅವರ ಸಮಾಧಿಯ ನೋಡುವ ಅವಕಾಶ ಒದಗಿರಲಿಲ್ಲ…..ಜಾತಿ – ಧರ್ಮವ ಮೀರಿದ ಮನುಜರಾಗಿದ್ದ ತೇಜಸ್ವಿಯವರು ಪ್ರಕೃತಿಯ ಒಡಲಿನಲ್ಲಿ ದೀರ್ಘಕಾಲ ವಿಶ್ರಮಿಸುತ್ತಿರುವುದ ಕಂಡ ಒಂದು ರೀತಿಯ ಸಾತ್ವಿಕ ಭಾವ ಮೂಡಿತು. ಬದುಕಿದರೆ
ಕುವೆಂಪು,ತೇಜಸ್ವಿಯವರಂತೆ ಆದರ್ಶ ಬದುಕನ್ನು ಜೀವಿಸಬೇಕೆಂದು ನಿರ್ಧರಿಸಿದೆ.ಮಾನವ ನಿರ್ಮಿತ ಕಟ್ಟುಪಾಡುಗಳನ್ನು ಮೀರಿ ನಿಷ್ಕಲ್ಮಶ ಮನಸ್ಸಿನಿಂದ ಇರುವ ಕಾಲ ಒಳಿತು ಮಾಡುವತ್ತ ಸಾಗೋಣ ಎನಿಸಿತು.

-ಸಂಘಮಿತ್ರೆ ಹೆಚ್.ಎಸ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version