ದಿನದ ಸುದ್ದಿ

‘ನಡುಪಂಥ’ ಎನ್ನುವ ಗುಳ್ಳೇನರಿ ಸಿದ್ದಾಂತ | ಭಾಗ – 1

Published

on

  • ಲೋಕೇಶ್ ಪೂಜಾರಿ, ಬೆಂಗಳೂರು

ಸ್ವಾರ್ಥಸಾಧನೆಯನ್ನು ಚೊಕ್ಕವಾಗಿ ಮಾಡಿ,ಮಾನವೀಯ ಮೌಲ್ಯಗಳನ್ನು ಅಡಿಗೆ ಹಾಕುವವರು ನಡುಪಂಥೀಯರು. ಅವರು ದೋಣಿಯ ನಡುವಲ್ಲಿ ಕೂತಿರುತ್ತಾರೆ.ಎತ್ತ ವಾಲಿದರೂ ಜಾರಿಬೀಳುವುದಿಲ್ಲ.

ಅವರನ್ನು ಗುರುತಿಸುವುದು ಸುಲಭ. ಅವರು ಮಹಾತ್ಮ ಗಾಂಧಿಯವರ ಪೋಟೋ ಹಾಕಿಕೊಂಡು,ಗೋಡ್ಸೆಯನ್ನೂ ಸಮರ್ಥಿಸುತ್ತಾರೆ.ಹಾಗೇ ಮುಂದುವರೆದು ಒಂದು ದಿನ ಕಾಡುಗಳ್ಳ ವೀರಪ್ಪನ್ ನನ್ನು ವಾಲ್ಮೀಕಿಗೂ ಹೋಲಿಸಬಹುದು. ಅದರಿಂದ ಅವರಿಗೆ ಲಾಭ ಇರಬೇಕು ಅಷ್ಟೇ .

ಒಬ್ಬ ಬರೆಯುವ ಬರಹಗಳು ಯುವಜನರಿಗೆ ತಪ್ಪು ಸಂದೇಶ ಕೊಡುತ್ತವೆ ಎಂದು ಯಾರಾದರೂ ಹೇಳಿದಾಗ.. ,ನಾನು ಬರೆಯುವುದು ಸಮಾಜ ಪರಿವರ್ತನೆ ಗೆ ಅಲ್ಲ ಎನ್ನುವಂತಹ ಭೈರಪ್ಪ ಪ್ರೇರಿತ ಉತ್ತರ ಕೊಡುವವರು ಬಹಳ ಜನ ಇದ್ದಾರೆ .
ನಮ್ಮ ಬರವಣಿಗೆಯಿಂದ ಹುಡುಗರು ಹಾಳಾದರೆ ಅದು ಸಮಾಜದ ತಪ್ಪು ಅಥವಾ ರಾಜಕೀಯ ದ ತಪ್ಪು ಎಂದು ತಿಪ್ಪೆ ಸಾರಿಸುವ ಅಂತವರ ಬಳಿ ವಾದ ಮಾಡುವುದು ಕಷ್ಟ.

ಓದು ಮತ್ತು ವಯಸ್ಸಿಗೆ ಬಹಳ ಸಂಬಂಧ ಇದೆ.
ಎಳವೆಯಲ್ಲಿ ಇಷ್ಟ ಪಟ್ಟು ಚಂದಮಾಮ ಓದುತ್ತಿದ್ದವರು ಹೈಸ್ಕೂಲ್ ಸೇರಿದ ಬಳಿಕ ಯೆಂಡಮೂರಿ ವೀರೇಂದ್ರನಾಥರ ಪುಸ್ತಕ ಓದುತ್ತಾರೆ. ಅವರು ಎಷ್ಟು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆಂದರೆ ,ಪ್ರತೀ ಕಾದಂಬರಿನೂ ಹುಡುಕಿ ಹುಡುಕಿ ಓದುತ್ತಾರೆ.
ಆದರೆ‌ ಆ ಸೆಳೆತ ಪಿಯುಸಿ ಮುಗಿದು ಡಿಗ್ರಿ ಓದುವ ತನಕ ಮಾತ್ರ .

ಹದಿನಾರರಿಂದ ಇಪ್ಪತ್ತರ ವಯಸ್ಸಿನ ಹೆಚ್ಚಿನವರು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆ. ಬಳಿಕ ಅವರಿಗೆ ತೇಜಸ್ವಿ ,ಕಾರಂತ ,ಬೈರಪ್ಪ ಇಷ್ಟವಾಗಲು ಶುರುವಾಗುತ್ತದೆ. ತಮ್ಮ ಆಯುಷ್ಯದಲ್ಲಿ ಬಹು ಭಾಗ ಇನ್ನೂ ಕಳೆಯಬೇಕಾಗಿರುವ ಯುವ ಜನರ ಓದುವ ರುಚಿ ಮತ್ತು ಬಹುಭಾಗದ ಆಯುಷ್ಯ ಕಳೆದು ಕೊಂಡು ಜೀವನಾನುಭವ ಪಡೆದು ಕೊಂಡಿರುವವರ ಓದುವ ರುಚಿ ಬೇರೆ ಬೇರೆ ಇರುತ್ತದೆ.

ಹದಿ ಹರೆಯದ ಮನಸ್ಸಿಗೆ ತಿರುಚಿದ ಇತಿಹಾಸ ಓದಲು ಕೊಡಬಾರದು‌. ಪ್ರತಿಯೊಂದಕ್ಕೂ ಪುರಾಣದ ಉದಾಹರಣೆ ಕೊಡಬಾರದು. ಬಹಳಷ್ಟು ನಾಗರೀಕತೆಗಳ ಹುಟ್ಟನ್ನು ಕಂಡ ಸನಾತನ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಪುರಾಣಕತೆಗಳಿವೆ.

ಪತಿಯೊಂದಕ್ಕೂ ಪುರಾಣಕತೆಗಳನ್ನು ಉದಾಹರಣೆ ಕೊಡಬಹುದು. ” ಕಣ್ಣಾ ಮುಚ್ಚೇ , ಕಾಡೇ ಗೂಡೇ… ಉದ್ದಿನ ಮೂಟೆ ಉರುಳೇ ಹೋಯ್ತು'” ಅನ್ನುವುದನ್ನೂ ರಾಮಾಯಣ ಕ್ಕೆ ಲಿಂಕ್ ಮಾಡಿ,
ಧಶರಥ ಕಣ್ಣುಮುಚ್ಚಲಾಗಿ ,ರಾಮನಿಗೆ ಕಾಡೇ ಮನೆಯಾಗಿ ,ಉದ್ದಿನ ಮೂಟೆಯಂತಹಾ ರಾವಣ ಉರುಳೇ ಹೋದ ” ಎಂದು ಬರೆದು ಬಿಡಬಹುದು.

ಆದರೆ ಅದು ವಿತಂಡವಾದ ಅನ್ನಿಸಿಕೊಳ್ಳುತ್ತದೆಯೇ ಹೊರತು ವಾದ ಅಲ್ಲ. ಹಾಗೆ ವಾದ ಮಾಡುವವರು ತಾವು ತುಂಬಾ ಓದಿದ್ದೇವೆ. ತಾವು ಇತಿಹಾಸ ಶಾಸ್ತ್ರ ಜ್ಞರು ಮನಃಶಾಸ್ತ್ರರು ಎಂದೆಲ್ಲಾ ಇಷ್ಟುದ್ದ ಹೇಳಿಕೊಳ್ಳುತ್ತಾರೆ. ಓದಿದವರೆಲ್ಲಾ ಮಹಾ ಮಾನವತಾವಾದಿಗಳಾಗಿರುತ್ತಾರೆ ಎಂದು ಕೊಳ್ಳುವುದೂ ತಪ್ಪು. ಒಸಾಮಾ ಬಿನ್ ಲಾದೆನ್ ಕೂಡಾ ತುಂಬಾ ಓದಿದ್ದ ಇಂಜಿನಿಯರ್ ಆಗಿದ್ದ.

ಒಂದು ಕಡೆ ಮಹಾತ್ಮಾ ಗಾಂಧಿ ಬಗ್ಗೆ ಬರೆಯುತ್ತಾ ,ಇನ್ನೊಂದು ಕಡೆ ಗೋಡ್ಸೆಯನ್ನು ದಾರಿತಪ್ಪಿದ ದೇಶಭಕ್ತ ಎಂದು ಬಲವಾಗಿ ಬಿಂಬಿಸುವವರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ? ಗೋಡ್ಸೆಗೆ ಗಾಂಧಿ ನ ಕೊಲ್ಲಲು ಕಾರಣ ಇತ್ತು . ಹಾಗೆಯೇ ಗೌರಿ ಲಂಕೇಶ್ ,ಪನ್ಸಾರೆ ,ಕಲಬುರ್ಗಿ ಹಂತಕರಿಗೂ ಕಾರಣ ಇತ್ತು.

ಇಂತಹದೇ ಕಾರಣ ಇತ್ತು ಎಂದು ಸಮರ್ಥನೆ ಇಳಿಯುವವರು, ಅಂತಹಾ ಸಮರ್ಥನೆಗಳನ್ನು ಮನಸ್ಸಿಗೆ ತುಂಬಿಕೊಂಡು ಕೊಲೆಗಾರರಾಗುವ ಸಮೂಹವನ್ನೂ ಹುಟ್ಟುಹಾಕುತ್ತಿದ್ದೇವೆ ಎಂದು ಯಾಕೆ ಯೋಚಿಸುತ್ತಿಲ್ಲ. ಅವರ ಯೋಚನೆ ನಡುಪಂಥೀಯ ಇರಬಹುದು ,ಆದರೆ ಅವರುಗಳು ಸೈತಾನಿಯೇ ಹೊರತು ಸನಾತನಿ ಖಂಡಿತಾ ಅಲ್ಲ.

ಬಹಳಷ್ಟು ಜನರ ಪ್ರೊಪೈಲ್ ನಲ್ಲಿ ಗಾಂಧಿ ಪೋಟೋ ಇರುತ್ತದೆ. ಆ ತರಹ ಇಟ್ಟುಕೊಂಡವರಲ್ಲಿ ಎರಡು ವಿಧ,
ಒಂದೇ ಅವರು ಪಕ್ಕಾಗಾಂಧಿವಾದಿಯಾಗಿರುತ್ತಾರೆ .
ಅಥವಾ ಅವರ ಮನಸ್ಸು ತುಂಬಾ ಗೋಡ್ಸೆ ತುಂಬಿರುತ್ತಾನೆ.

ನಮ್ಮೂರಿನ ಕೆಲವರು ಬಿಲ್ಲವ ರಾಜಕಾರಣಿ ಅಥವಾ ಮುಖಂಡನ ಬಗ್ಗೆ ಸಿಕ್ಕಾಪಟ್ಟೆ ತಕರಾರು ಮಾಡಿ ಪೋಸ್ಟ್ ಹಾಕಿದ ಬಳಿಕ ಶ್ರೀ ನಾರಾಯಣ ಗುರುಗಳ ಪೋಟೋ ಪ್ರೊಫೈಲ್ ಗೆ ಹಾಕಿಕೊಳ್ಳುತ್ತಾರೆ. ಶ್ರೀ ನಾರಾಯಣ ಗುರುಗಳು ಒಂದು ಜಾತಿಯ ಗುರು ಅಲ್ಲ ,ಅವರು ವಿಶ್ವಗುರು ಅಂತಾ ಅವರಿಗೂ ಗೊತ್ತು. ಅದರೂ ಯಾವುದೋ ಒಂದು social chemistry ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದು ಅವರ ನರಿಬುದ್ದಿಗೆ ಚೆನ್ನಾಗಿ ಹೊಳೆದಿರುತ್ತದೆ.ಕಾಣದ ಕೈಗಳ ಪ್ರತಿರೋದವನ್ನು ಕಡಿಮೆ ಮಾಡುವ ನರಿಬುದ್ದಿ ಅದು.

ಎಷ್ಟೋ ಜನ ಮೀಸಲಾತಿಯನ್ನು ವಿರೋಧಿಸುವುದರಿಂದ ಹಿಡಿದು ಜಾತಿವಾದವನ್ನು ಪುರಸ್ಕರಿಸುವಷ್ಟು ಮನುವಾದೀ ಮನಸ್ಸು ಹೊಂದಿರುವವರೂ ಅಂಬೇಡ್ಕರ್ ರಂತಹಾ ಮಾನವತಾವಾದಿಯ ಪೋಟೋ ಹಾಕಿಕೊಂಡಿರುತ್ತಾರೆ.

ಯಾರ ಪ್ರೊಫೈಲ್ ನಲ್ಲಿ ಯಾವ ಪೋಟೋ ಇರುತ್ತದೆ ಎನ್ನುವುದರಿಂದ ಅವರ ಸ್ವಭಾವ ಗುಣಲಕ್ಷಣಗಳನ್ನು ಅರಿಯಲು ಸಾದ್ಯವಿಲ್ಲ. ನಡುಪಂಥೀಯ ಗುಳ್ಳೆನರಿಗಳ ಬಗ್ಗೆ ದಿನಕ್ಕೊಂದು ಪೋಸ್ಟ್ ಹಾಕಿದರೂ ವರ್ಷ ಕಳೆದರೂ ಮುಗಿಯದಷ್ಟು ಇದೆ. ಆದರೂ ನೂರು ಎಪಿಸೋಡ್ ಗಳ ಒಳಗೇ ಮುಗಿಸಲು ನೋಡುತ್ತೇನೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version