ರಾಜಕೀಯ

‘ಗೋದ್ರಾ ಹತ್ಯಾಕಾಂಡ’ ದಲ್ಲಿ ಸಾವಿರಾರು ಅಮಾಯಕರ ಸಾವಿಗೆ ಮೋದಿ ಕಾರಣರಲ್ಲವೇ? : ಸಿದ್ದರಾಮಯ್ಯ

Published

on

ಸುದ್ದಿದಿನ, ಹಾವೇರಿ : ಗೋದ್ರಾ ಹತ್ಯಾಕಾಂಡದಲ್ಲಿನ ಸಾವಿರಾರು ಅಮಾಯಕರ ಸಾವಿಗೆ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕಾರಣರಲ್ಲವೇ? ನಾನು ಮುಖ್ಯಮಂತ್ರಿಯಾಗಿ ಧರ್ಮ-ಜಾತಿಗಳ ಬೇಧವಿಲ್ಲದೆ ಅನ್ನಭಾಗ್ಯ, ವಿದ್ಯಾಸಿರಿ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ಸಾಲಮನ್ನಾ, ಶೂಭಾಗ್ಯ ಯೋಜನೆ ನೀಡಿದ್ದೆ. ಹಾಗಾದರೆ ನಿಜವಾದ ‘ಸಬ್ ಕ ಸಾಥ್ ಸಬ್ ಕ ವಿಕಾಸ್’ ಯಾರದ್ದು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದರು.

ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಆರ್.ಪಾಟೀಲ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಪಾಕಿಸ್ಥಾನದ ಮೇಲೆ ಯುದ್ಧ ಮಾಡಿ 1 ಲಕ್ಷ ಪಾಕ್ ಸೈನಿಕರನ್ನು ಸೆರೆಹಿಡಿದು, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದರು. ಬಿಜೆಪಿಯವರೇ ಆದ ಅಟಲ್ ಬಿಹಾರ್ ವಾಜಪೇಯಿಯವರು ಇಂದಿರಾ ಗಾಂಧಿಯವರನ್ನು ದುರ್ಗೆ ಎಂದು ಹೊಗಳಿದ್ದರು. ಆದರೆ ಇದನ್ನು ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿಕೊಂಡಿರಲಿಲ್ಲ ಎಂದರು.

ಈಶ್ವರಪ್ಪನವರು ಮುಸ್ಲಿಮರ ಮತ ಬಿಜೆಪಿಗೆ ಬೇಡವೇ ಬೇಡ ಎನ್ನುವ ಜೊತೆಗೆ, ಮುಸ್ಲಿಮರಿಗೆ ಬಿಜೆಪಿಯ ಟಿಕೆಟ್ ಬೇಕಾದರೆ ತಮ್ಮ ಕಚೇರಿಯ ಕಸ ಗುಡಿಸಲಿ ಎಂದು ಇಡೀ ಸಮುದಾಯವನ್ನೇ ಅವಮಾನಿಸಿದ್ದಾರೆ. ತೋರುಗಾಣಿಕೆಗೆ ಸರ್ವ ಧರ್ಮವನ್ನು ಗೌರವಿಸುವ ಬಿಜೆಪಿಯ ಮುಖವಾಡದ ಹಿಂದೆ ಅಲ್ಪಸಂಖ್ಯಾತ ವಿರೋಧಿ ಕರಾಳ ಮುಖವಿದೆ ಎಂದು ಕಿಡಿಕಾರಿದರು.

ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಸಹ ಹಿಂದುಳಿದ ವರ್ಗದವರಿಗೆ ನೀಡಿಲ್ಲ. ಇದರಿಂದ ಆ ವರ್ಗದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದ ಹಾಗಲ್ಲವೇ? ಚುನಾವಣೆ ಸಮಯದಲ್ಲಿ ಜಾತಿ ರಾಜಕಾರಣ ಮಾಡುವ ಈಶ್ವರಪ್ಪ ನಿಜವಾಗಿ ಹಿಂದುಳಿದ ಜಾತಿಗೆ ಸೇರಿದವರಾಗಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಬಿಜೆಪಿಗೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು, ಶೋಷಿತ ವರ್ಗದ ಜನರನ್ನು ಕಂಡರೆ ಆಗಲ್ಲ. ಇವರೆಲ್ಲರನ್ನೂ ಅಭಿವೃದ್ಧಿಯಿಂದ ಹೊರಗಿಟ್ಟು ದೇಶ ಉದ್ಧಾರ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿಯವರ ನಿಜವಾದ ವಿಕಾಸ ಬಡವರನ್ನು ತಲುಪದೆ ಅಂಬಾನಿಯಿಂದ ಶುರುವಾಗಿ ಅದಾನಿಗೆ ಕೊನೆಯಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಇವರೆಲ್ಲ ಹೆಸರಿಗೆ ಮಾತ್ರ ಚೌಕಿದಾರರು. ಯಾರು ದೇಶದ ಮೇಲಿನ ಅಭಿಮಾನದಿಂದ ಮೋದಿಯನ್ನು ವಿರೋಧಿಸುತ್ತಾರೋ, ಯಾರು ಪ್ರಜಾಪ್ರಭುತ್ವದ ಉಳಿವಿಗಾಗಿ ಮೋದಿಯನ್ನು ವಿರೋಧಿಸುತ್ತಾರೋ ಅವರು ನಿಜವಾದ ಚೌಕಿದಾರರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವವರು ನಿಜವಾದ ದೇಶದ್ರೋಹಿಗಳು‌ ಎಂದು ಕೆಂಡಾಮಂಡಲವಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version