ದಿನದ ಸುದ್ದಿ

ರಿಹನ್ನಾಗ್ರೇಟಾ; ಮೀನಾ ಗ್ರೇಟಾ, ಮೋದಿ ಗ್ರೇಟಾ..?

Published

on

  • ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರು

[ಮೂವರು ಯುವತಿಯರು ಭಾರತ ಸರಕಾರವನ್ನು ಕಂಗೆಡಿಸಿ ದಂಗುಬಡಿಸಿ, ಭಕ್ತರ ನಿದ್ದೆಗೆಡಿಸಿದ ಕತೆ]

ರೈತರ ಟ್ರ್ಯಾಕ್ಟರ್‌ಗಳು ಮತ್ತೊಮ್ಮೆ ದಿಲ್ಲಿಗೆ ಬಾರದಂತೆ, ಕೇಂದ್ರ ಸರಕಾರ ಮೊಳ ಉದ್ದ ಮೊಳೆಗಳನ್ನು, ಮೈಲುದ್ದದ ಮುಳ್ಳುಬೇಲಿಯನ್ನು ಹಾಕಿದ್ದನ್ನು ನೋಡಿ ಜಗತ್ತೇ ಬೆರಗಾಯಿತು.

ಪ್ರಜಾಪ್ರಭುತ್ವದ ಬಾಯಿಗೇ ಹೊಲಿಗೆ ಹಾಕುವಂತೆ ರೈತರ ಮೊಬೈಲ್‌ಗಳಿಗೆ ಸಿಗ್ನಲ್ಲೇ ಬಾರದಂತೆ ಮಾಡಿ, ರೈತರ ಟಾಯ್ಲೆಟ್‌ಗೂ ನೀರಿಲ್ಲದಂತೆ, ಧ್ವನಿವರ್ಧಕಕ್ಕೂ ಕರೆಂಟ್‌ ಇಲ್ಲದಂತೆ ಮಾಡಿದ್ದನ್ನು ನೋಡಿ ಜಗತ್ತು ದಂಗಾಯಿತು.

“ರೈತ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದು ಮೂವರು ವಿದೇಶೀ ಯುವತಿಯರು ಟ್ಟೀಟ್‌ ಮಾಡಿದ್ದೇ ತಡ, ಸರಕಾರ ಧಿಗ್ಗನೆದ್ದಿತು. ಹೀಗೆ ಟ್ವೀಟ್‌ ಮಾಡಿದ್ದೇ ಭಾರೀ ಕ್ರಿಮಿನಲ್‌ ಕೆಲಸವೆಂಬಂತೆ ದಿಲ್ಲಿ ಪೊಲೀಸರು ಎಫ್‌ಐಆರ್‌ ಹಾಕಿದರು. ಜಗತ್ತು ನಕ್ಕಿತು.

ಟ್ವೀಟ್‌ ಮಾಡಿದ್ದು ಯಾರು? 1. ರೆಹನ್ನಾ ಹೆಸರಿನ ಒಬ್ಬ ಖ್ಯಾತ ಹಾಡುಗಾರ್ತಿ (ಗ್ಯಾರಿ ಸೋಬರ್ಸ್‌ ಎಂಬ ಕ್ರಿಕೆಟಿಗನ ತಾಯ್ನಾಡಾದ ಬಾರ್ಬಡೋಸ್‌ ದೇಶದವಳು). 2. ಹದಿಹರಯದ ಗ್ರೇಟಾ ಥನ್‌ಬರ್ಗ್‌ ಎಂಬ ಪರಿಸರ ಹೋರಾಟಗಾರ್ತಿ; 3ನೆಯವಳು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಸೊಸೆ (ಅಡ್ವೊಕೇಟ್‌) ಮೀನಾ ಹ್ಯಾರಿಸ್‌.

ʼವಿಶ್ವಗುರುʼ ಎನ್ನಿಸಿಕೊಳ್ಳಲು ಪರಿಶ್ರಮಿಸುತ್ತಿರುವ ಭಾರತ ದೇಶ ಈ ಟ್ವೀಟ್‌ಗಳನ್ನು ಕಡೆಗಣಿಸಬಹುದಿತ್ತು. ಇಷ್ಟಕ್ಕೂ ಈ ಮೂವರಲ್ಲಿ ಯಾರೂ ನಮ್ಮ ದೇಶದ ಶಾಂತಿಯನ್ನು ಕದಡುವ ಯತ್ನ ಮಾಡಲಿಲ್ಲ. ದಂಗೆ ಏಳಿರೆಂದು ಕರೆ ಕೊಟ್ಟಿಲ್ಲ. ಶಸ್ತ್ರ ಕೈಗೆತ್ತಿಕೊಳ್ಳಲು ಪ್ರಚೋದನೆ ನೀಡಲಿಲ್ಲ.

ಜಗತ್ತಿನ ಯಾವ ದೇಶದಲ್ಲಾದರೂ ಅಲ್ಲಿನ ಸರಕಾರ ಕೋಟ್ಯಂತರ ಜನರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಸಿದ್ದರೆ ಅಂತಃಕರಣ ಇರುವವರು ಯಾವ ದೇಶದವರಾಗಿದ್ದರೂ ಖಂಡಿಸುತ್ತಾರೆ. ಖಂಡಿಸಬೇಕು. ನಾವು ಮಯನ್ಮಾರ್‌ ವಿದ್ಯಮಾನವನ್ನು ಖಂಡಿಸುತ್ತೇವೆ. ಈ ಮೂವರು ಮಹಿಳೆಯರು ತಮ್ಮ ಟ್ವೀಟ್‌ನಲ್ಲಿ ಯಾರನ್ನೂ ಖಂಡಿಸಲೂ ಇಲ್ಲ. ಸುಮ್ಮನೆ ʼಭಾರತದ ರೈತರ ಶಾಂತಿಪೂರ್ಣ ಹೋರಾಟಕ್ಕೆ ನಮ್ಮ ಬೆಂಬಲವಿದೆʼ ಎಂದರು ಅಷ್ಟೆ.

ಕಳೆದ 75 ದಿನಗಳಿಂದ ಲಕ್ಷಾಂತರ ರೈತರು ತಮ್ಮ ಜಾತಿ, ಧರ್ಮ, ಭಾಷೆ, ಪಕ್ಷ ಪಂಥ ಎಲ್ಲವನ್ನೂ ಮರೆತು ಒಗ್ಗಟ್ಟಿನಿಂದ ಚಳಿಮಳೆಗೂ ಬಗ್ಗದೆ ಹರತಾಳ ಆಚರಿಸುತ್ತಿದ್ದಾರೆ. ಸುಮಾರು 120 ಜನರು ಸಾವಪ್ಪಿದ್ದಾರೆ. ಅನುಕಂಪವುಳ್ಳ ಯಾರಾದರೂ ಹೇಳುವ ಮಾತು ಅದು.

ಅಷ್ಟಕ್ಕೇ ಧಿಗ್ಗನೆದ್ದ ಸರಕಾರ, ವಿದೇಶಾಂಗ ಸಚಿವರ ಮೂಲಕ “ಭಾರತದ ವಿರುದ್ಧ ಅಪ ಪ್ರಚಾರ ಕೂಡದು” ಎಂಬರ್ಥದ ಟ್ವೀಟ್‌ ಮಾಡಿಸಿತು. “ಭಾರತದ ಐಕ್ಯತೆಗೆ ಧಕ್ಕೆ ತರಲೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಭಾರೀ ಕುತಂತ್ರ ಇದು” ಎಂದು ಕಪಿಲ್‌ ಮಿಶ್ರಾ ಎಂಬ ದಿಲ್ಲಿಯ ಬಿಜೆಪಿ ರಾಜಕಾರಣಿ ಘೋಷಿಸಿದರು (ಈತನ ಉದ್ರೇಕಕಾರಿ ಭಾಷಣದಿಂದಾಗಿಯೇ ಕಳೆದ ವರ್ಷ ದಿಲ್ಲಿಯಲ್ಲಿ ಕೋಮುದಂಗೆ ಭುಗಿಲೆದ್ದು 23 ಜನರು ಪ್ರಾಣ ತೆರುವಂತಾಯಿತು-ಅದಿರಲಿ).
ಈ ಯುವತಿಯರ ಟ್ವೀಟ್‌ ನಿಂದ ಭಾರತದ ಐಕ್ಯತೆಗೆ ಈಗ ಅದೇನು ಧಕ್ಕೆ ಬಂತೊ?

ಅಷ್ಟಕ್ಕೇ ಮುಗಿದಿದ್ದರೆ ಬೇರೆ ಮಾತಿರಲಿಲ್ಲ. ಆದರೆ , ಭಾರತ ಸರಕಾರ ಬಾಲಿವುಡ್‌ ಸ್ಟಾರ್‌ಗಳನ್ನು ಹಿಡಿದು ಅವರ ಮೂಲಕ ಮುಯ್ಯಿ ಮರುಟ್ವೀಟ್‌ ಮಾಡಿಸಲು ಮುಂದಾಯಿತು.

“ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೊರಗಿನವರು ಬೇಕಾಗಿಲ್ಲ” ಎಂಬರ್ಥದಲ್ಲಿ ಭಾರತರತ್ನದ್ವಯ ಸಚಿನ್‌ ತೆಂಡೂಲ್ಕರ್‌ ಮತ್ತು ಲತಾ ಮಂಗೇಶ್ಕರ್‌ ಸೇರಿದಂತೆ, ಕ್ರಿಕೆಟಿಗ ಕುಂಬ್ಳೆ, ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟ ಅಕ್ಷಯ ಕುಮಾರ್‌, ಕರಣ್‌ ಜೋಹರ್‌ ಮುಂತಾದವರ ಮೂಲಕ ಆಲ್ಮೋಸ್ಟ್‌ ಏಕರೂಪದ ಟ್ವೀಟ್‌ ಮಾಡಿಸಲಾಯಿತು. ಗ್ರೇತಾ ಥನ್‌ಬರ್ಗ್‌ ವಿರುದ್ಧ ಎಫ್‌ಐಆರ್‌ ಹಾಕಿತು.
ಜಗತ್ತು ಗೊಳ್ಳೆಂದು ನಕ್ಕಿತು.

ಮೂವರು ವನಿತೆಯರಿಂದ ಭಾರತ ಸರಕಾರದ ಜಂಘಾಬಲ ಉಡುಗಿತೆ? ಅಷ್ಟೊಂದು ದುರ್ಬಲವೆ ನಮ್ಮ ದೇಶ? ಕಳೆದ ವರ್ಷ ಇದೇ ದಿನಗಳಲ್ಲಿ ಅಹಮ್ಮದಾಬಾದಿನ ಕೊಳೆಗೇರಿಗಳು ಟ್ರಂಪ್‌ ಕಣ್ಣಿಗೆ ಬೀಳಬಾರದೆಂದು ಉದ್ದುದ್ದ ಗೋಡೆ ಕಟ್ಟುವ ಕೆಲಸ ನಡೆದಿತ್ತು. ಈಗ ಮುಷ್ಕರನಿರತ ರೈತರು ಮಾಧ್ಯಮಗಳ ಕಣ್ಣಿಗೆ ಬೀಳಬಾರದೆಂದು ಬಂಗಾರ ಬಣ್ಣದ ಲೋಹದ ಗೋಡೆಗಳನ್ನು, ದಿಲ್ಲಿಯ ಹೊರವಲಯದಲ್ಲಿ ನಿರ್ಮಿಸಲಾಗಿದೆ. ಚೀನಾ ಗಡಿಯಲ್ಲೂ ಕಾಣಲಾಗದ ಬಿಗಿ ಭದ್ರತೆಯನ್ನು ಹೆದ್ದಾರಿಯಲ್ಲಿ ಜಡಿದು, ಅಂಬುಲೆನ್ಸ್‌ ಕೂಡ ಓಡಾಡಲಾಗದಂತೆ ಮಾಡಲಾಗಿದೆ.

ನಮ್ಮ ದೇಶದ ವಾಸ್ತವಗಳನ್ನು ಮರೆಮಾಚಲು ಹೀಗೆಲ್ಲ ಯತ್ನಿಸಿ ನಗೆಪಾಟಲಿಗೆ ತುತ್ತಾಗುವುದರಿಂದ ರಾಷ್ಟ್ರದ ಘನತೆ ಹೆಚ್ಚುತ್ತದೆಯೆ? ಘನತೆಗೆ ವಿಶೇಷ ಮೆರುಗು ಕೊಡಲೆಂದು ಸಚಿನ್‌ ತೆಂಡೂಲ್ಕರಂಥ ಹೆಕ್ಕಿ ತೆಗೆದ ಹೀರೋಗಳ ಮೂಲಕ ಟ್ವೀಟ್‌ ಮಾಡಿಸಲು ಹೋಗಿ ಅವರನ್ನೂ ನಗೆಪಾಟಲಿಗೆ ತುತ್ತಾಗಿಸಿದ್ದು ಸರಿಯೆ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version