Connect with us

ದಿನದ ಸುದ್ದಿ

ರಿಹನ್ನಾಗ್ರೇಟಾ; ಮೀನಾ ಗ್ರೇಟಾ, ಮೋದಿ ಗ್ರೇಟಾ..?

Published

on

  • ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರು

[ಮೂವರು ಯುವತಿಯರು ಭಾರತ ಸರಕಾರವನ್ನು ಕಂಗೆಡಿಸಿ ದಂಗುಬಡಿಸಿ, ಭಕ್ತರ ನಿದ್ದೆಗೆಡಿಸಿದ ಕತೆ]

ರೈತರ ಟ್ರ್ಯಾಕ್ಟರ್‌ಗಳು ಮತ್ತೊಮ್ಮೆ ದಿಲ್ಲಿಗೆ ಬಾರದಂತೆ, ಕೇಂದ್ರ ಸರಕಾರ ಮೊಳ ಉದ್ದ ಮೊಳೆಗಳನ್ನು, ಮೈಲುದ್ದದ ಮುಳ್ಳುಬೇಲಿಯನ್ನು ಹಾಕಿದ್ದನ್ನು ನೋಡಿ ಜಗತ್ತೇ ಬೆರಗಾಯಿತು.

ಪ್ರಜಾಪ್ರಭುತ್ವದ ಬಾಯಿಗೇ ಹೊಲಿಗೆ ಹಾಕುವಂತೆ ರೈತರ ಮೊಬೈಲ್‌ಗಳಿಗೆ ಸಿಗ್ನಲ್ಲೇ ಬಾರದಂತೆ ಮಾಡಿ, ರೈತರ ಟಾಯ್ಲೆಟ್‌ಗೂ ನೀರಿಲ್ಲದಂತೆ, ಧ್ವನಿವರ್ಧಕಕ್ಕೂ ಕರೆಂಟ್‌ ಇಲ್ಲದಂತೆ ಮಾಡಿದ್ದನ್ನು ನೋಡಿ ಜಗತ್ತು ದಂಗಾಯಿತು.

“ರೈತ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದು ಮೂವರು ವಿದೇಶೀ ಯುವತಿಯರು ಟ್ಟೀಟ್‌ ಮಾಡಿದ್ದೇ ತಡ, ಸರಕಾರ ಧಿಗ್ಗನೆದ್ದಿತು. ಹೀಗೆ ಟ್ವೀಟ್‌ ಮಾಡಿದ್ದೇ ಭಾರೀ ಕ್ರಿಮಿನಲ್‌ ಕೆಲಸವೆಂಬಂತೆ ದಿಲ್ಲಿ ಪೊಲೀಸರು ಎಫ್‌ಐಆರ್‌ ಹಾಕಿದರು. ಜಗತ್ತು ನಕ್ಕಿತು.

ಟ್ವೀಟ್‌ ಮಾಡಿದ್ದು ಯಾರು? 1. ರೆಹನ್ನಾ ಹೆಸರಿನ ಒಬ್ಬ ಖ್ಯಾತ ಹಾಡುಗಾರ್ತಿ (ಗ್ಯಾರಿ ಸೋಬರ್ಸ್‌ ಎಂಬ ಕ್ರಿಕೆಟಿಗನ ತಾಯ್ನಾಡಾದ ಬಾರ್ಬಡೋಸ್‌ ದೇಶದವಳು). 2. ಹದಿಹರಯದ ಗ್ರೇಟಾ ಥನ್‌ಬರ್ಗ್‌ ಎಂಬ ಪರಿಸರ ಹೋರಾಟಗಾರ್ತಿ; 3ನೆಯವಳು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಸೊಸೆ (ಅಡ್ವೊಕೇಟ್‌) ಮೀನಾ ಹ್ಯಾರಿಸ್‌.

ʼವಿಶ್ವಗುರುʼ ಎನ್ನಿಸಿಕೊಳ್ಳಲು ಪರಿಶ್ರಮಿಸುತ್ತಿರುವ ಭಾರತ ದೇಶ ಈ ಟ್ವೀಟ್‌ಗಳನ್ನು ಕಡೆಗಣಿಸಬಹುದಿತ್ತು. ಇಷ್ಟಕ್ಕೂ ಈ ಮೂವರಲ್ಲಿ ಯಾರೂ ನಮ್ಮ ದೇಶದ ಶಾಂತಿಯನ್ನು ಕದಡುವ ಯತ್ನ ಮಾಡಲಿಲ್ಲ. ದಂಗೆ ಏಳಿರೆಂದು ಕರೆ ಕೊಟ್ಟಿಲ್ಲ. ಶಸ್ತ್ರ ಕೈಗೆತ್ತಿಕೊಳ್ಳಲು ಪ್ರಚೋದನೆ ನೀಡಲಿಲ್ಲ.

ಜಗತ್ತಿನ ಯಾವ ದೇಶದಲ್ಲಾದರೂ ಅಲ್ಲಿನ ಸರಕಾರ ಕೋಟ್ಯಂತರ ಜನರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಸಿದ್ದರೆ ಅಂತಃಕರಣ ಇರುವವರು ಯಾವ ದೇಶದವರಾಗಿದ್ದರೂ ಖಂಡಿಸುತ್ತಾರೆ. ಖಂಡಿಸಬೇಕು. ನಾವು ಮಯನ್ಮಾರ್‌ ವಿದ್ಯಮಾನವನ್ನು ಖಂಡಿಸುತ್ತೇವೆ. ಈ ಮೂವರು ಮಹಿಳೆಯರು ತಮ್ಮ ಟ್ವೀಟ್‌ನಲ್ಲಿ ಯಾರನ್ನೂ ಖಂಡಿಸಲೂ ಇಲ್ಲ. ಸುಮ್ಮನೆ ʼಭಾರತದ ರೈತರ ಶಾಂತಿಪೂರ್ಣ ಹೋರಾಟಕ್ಕೆ ನಮ್ಮ ಬೆಂಬಲವಿದೆʼ ಎಂದರು ಅಷ್ಟೆ.

ಕಳೆದ 75 ದಿನಗಳಿಂದ ಲಕ್ಷಾಂತರ ರೈತರು ತಮ್ಮ ಜಾತಿ, ಧರ್ಮ, ಭಾಷೆ, ಪಕ್ಷ ಪಂಥ ಎಲ್ಲವನ್ನೂ ಮರೆತು ಒಗ್ಗಟ್ಟಿನಿಂದ ಚಳಿಮಳೆಗೂ ಬಗ್ಗದೆ ಹರತಾಳ ಆಚರಿಸುತ್ತಿದ್ದಾರೆ. ಸುಮಾರು 120 ಜನರು ಸಾವಪ್ಪಿದ್ದಾರೆ. ಅನುಕಂಪವುಳ್ಳ ಯಾರಾದರೂ ಹೇಳುವ ಮಾತು ಅದು.

ಅಷ್ಟಕ್ಕೇ ಧಿಗ್ಗನೆದ್ದ ಸರಕಾರ, ವಿದೇಶಾಂಗ ಸಚಿವರ ಮೂಲಕ “ಭಾರತದ ವಿರುದ್ಧ ಅಪ ಪ್ರಚಾರ ಕೂಡದು” ಎಂಬರ್ಥದ ಟ್ವೀಟ್‌ ಮಾಡಿಸಿತು. “ಭಾರತದ ಐಕ್ಯತೆಗೆ ಧಕ್ಕೆ ತರಲೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಭಾರೀ ಕುತಂತ್ರ ಇದು” ಎಂದು ಕಪಿಲ್‌ ಮಿಶ್ರಾ ಎಂಬ ದಿಲ್ಲಿಯ ಬಿಜೆಪಿ ರಾಜಕಾರಣಿ ಘೋಷಿಸಿದರು (ಈತನ ಉದ್ರೇಕಕಾರಿ ಭಾಷಣದಿಂದಾಗಿಯೇ ಕಳೆದ ವರ್ಷ ದಿಲ್ಲಿಯಲ್ಲಿ ಕೋಮುದಂಗೆ ಭುಗಿಲೆದ್ದು 23 ಜನರು ಪ್ರಾಣ ತೆರುವಂತಾಯಿತು-ಅದಿರಲಿ).
ಈ ಯುವತಿಯರ ಟ್ವೀಟ್‌ ನಿಂದ ಭಾರತದ ಐಕ್ಯತೆಗೆ ಈಗ ಅದೇನು ಧಕ್ಕೆ ಬಂತೊ?

ಅಷ್ಟಕ್ಕೇ ಮುಗಿದಿದ್ದರೆ ಬೇರೆ ಮಾತಿರಲಿಲ್ಲ. ಆದರೆ , ಭಾರತ ಸರಕಾರ ಬಾಲಿವುಡ್‌ ಸ್ಟಾರ್‌ಗಳನ್ನು ಹಿಡಿದು ಅವರ ಮೂಲಕ ಮುಯ್ಯಿ ಮರುಟ್ವೀಟ್‌ ಮಾಡಿಸಲು ಮುಂದಾಯಿತು.

“ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೊರಗಿನವರು ಬೇಕಾಗಿಲ್ಲ” ಎಂಬರ್ಥದಲ್ಲಿ ಭಾರತರತ್ನದ್ವಯ ಸಚಿನ್‌ ತೆಂಡೂಲ್ಕರ್‌ ಮತ್ತು ಲತಾ ಮಂಗೇಶ್ಕರ್‌ ಸೇರಿದಂತೆ, ಕ್ರಿಕೆಟಿಗ ಕುಂಬ್ಳೆ, ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟ ಅಕ್ಷಯ ಕುಮಾರ್‌, ಕರಣ್‌ ಜೋಹರ್‌ ಮುಂತಾದವರ ಮೂಲಕ ಆಲ್ಮೋಸ್ಟ್‌ ಏಕರೂಪದ ಟ್ವೀಟ್‌ ಮಾಡಿಸಲಾಯಿತು. ಗ್ರೇತಾ ಥನ್‌ಬರ್ಗ್‌ ವಿರುದ್ಧ ಎಫ್‌ಐಆರ್‌ ಹಾಕಿತು.
ಜಗತ್ತು ಗೊಳ್ಳೆಂದು ನಕ್ಕಿತು.

ಮೂವರು ವನಿತೆಯರಿಂದ ಭಾರತ ಸರಕಾರದ ಜಂಘಾಬಲ ಉಡುಗಿತೆ? ಅಷ್ಟೊಂದು ದುರ್ಬಲವೆ ನಮ್ಮ ದೇಶ? ಕಳೆದ ವರ್ಷ ಇದೇ ದಿನಗಳಲ್ಲಿ ಅಹಮ್ಮದಾಬಾದಿನ ಕೊಳೆಗೇರಿಗಳು ಟ್ರಂಪ್‌ ಕಣ್ಣಿಗೆ ಬೀಳಬಾರದೆಂದು ಉದ್ದುದ್ದ ಗೋಡೆ ಕಟ್ಟುವ ಕೆಲಸ ನಡೆದಿತ್ತು. ಈಗ ಮುಷ್ಕರನಿರತ ರೈತರು ಮಾಧ್ಯಮಗಳ ಕಣ್ಣಿಗೆ ಬೀಳಬಾರದೆಂದು ಬಂಗಾರ ಬಣ್ಣದ ಲೋಹದ ಗೋಡೆಗಳನ್ನು, ದಿಲ್ಲಿಯ ಹೊರವಲಯದಲ್ಲಿ ನಿರ್ಮಿಸಲಾಗಿದೆ. ಚೀನಾ ಗಡಿಯಲ್ಲೂ ಕಾಣಲಾಗದ ಬಿಗಿ ಭದ್ರತೆಯನ್ನು ಹೆದ್ದಾರಿಯಲ್ಲಿ ಜಡಿದು, ಅಂಬುಲೆನ್ಸ್‌ ಕೂಡ ಓಡಾಡಲಾಗದಂತೆ ಮಾಡಲಾಗಿದೆ.

ನಮ್ಮ ದೇಶದ ವಾಸ್ತವಗಳನ್ನು ಮರೆಮಾಚಲು ಹೀಗೆಲ್ಲ ಯತ್ನಿಸಿ ನಗೆಪಾಟಲಿಗೆ ತುತ್ತಾಗುವುದರಿಂದ ರಾಷ್ಟ್ರದ ಘನತೆ ಹೆಚ್ಚುತ್ತದೆಯೆ? ಘನತೆಗೆ ವಿಶೇಷ ಮೆರುಗು ಕೊಡಲೆಂದು ಸಚಿನ್‌ ತೆಂಡೂಲ್ಕರಂಥ ಹೆಕ್ಕಿ ತೆಗೆದ ಹೀರೋಗಳ ಮೂಲಕ ಟ್ವೀಟ್‌ ಮಾಡಿಸಲು ಹೋಗಿ ಅವರನ್ನೂ ನಗೆಪಾಟಲಿಗೆ ತುತ್ತಾಗಿಸಿದ್ದು ಸರಿಯೆ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

Published

on

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.

3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.

5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.

7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.

8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.

9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.

10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.

ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending