ಅಂತರಂಗ

ಫೆಮಿನಿಸ್ಟ್ ಹೋರಾಟಗಾರ್ತಿ,ಸಮಾಜ ವಿಜ್ಞಾನಿ ಬರಹಗಾರ್ತಿ,ಕವಿ ಕಮಲಾ ಭಾಸಿನ್

Published

on

ಕಮಲಾ ಭಾಸಿನ್
  • ವಸಂತ ಬನ್ನಾಡಿ

ಕಮಲಾ ಭಾಸಿನ್ ಸೂಕ್ಷ್ಮ ಸಂವೇದನೆಯ ಕವಿ,ಲೇಖಕಿ,ಸ್ತ್ರೀವಾದಿ ಹಾಗೂ ಸಮಾಜ ವಿಜ್ಞಾನಿ. ಇದೇ ಇಪ್ಪತೈದನೇ ತಾರೀಕು ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

ಭಾಸಿನ್ ಹುಟ್ಟಿದ್ದು ಇವತ್ತು ಪಾಕಿಸ್ತಾನಕ್ಕೆ ಸೇರಿರುವ ಪಂಜಾಬ್ ಪ್ರಾಂತ್ಯದಲ್ಲಿ.ತಂದೆ ರಾಜಸ್ಥಾನದಲ್ಲಿ ಡಾಕ್ಟರ್ .ಅನುಕೂಲಸ್ಥರು.ಇದು ಭಾಸಿನ್ ಗೆ ಹಳ್ಳಿ ಹಳ್ಳಿಗಳನ್ನು ತಿರುಗಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುವ ಅವಕಾಶವನ್ನು ಒದಗಿಸಿತು.

ಭಾಸಿನ್ ಪ್ರಾಥಮಿಕ ವಿದ್ಯಾಭ್ಯಾಸ ಜೈಪುರದಲ್ಲಿ ನಡೆಯಿತು. ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಪದವಿ ಮತ್ತು ರಾಜಸ್ಥಾನ್ ಯುನಿವರ್ಸಿಟಿಯಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದ ಬಳಿಕ,ಹೆಚ್ಚಿನ ವ್ಯಾಸಂಗಕ್ಕಾಗಿ ಫೆಲೋಶಿಪ್ ಪಡೆದು ಪಶ್ಚಿಮ ಜರ್ಮನಿಯಲ್ಲಿಯೂ ಇದ್ದು ಬಂದರು.ಮುಂದೆ ನವದೆಹಲಿಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡರು.

ಬದುಕಿನಲ್ಲಿ ತುಂಬಾ ನೋವು ತಿಂದವರು ಕಮಲಾ ಭಾಸಿನ್. ಅವರ ಮಗಳಾದ ಮೀತೋ 2006 ರಲ್ಲಿ ತನ್ನ ಇಪ್ಪತ್ತೇಳನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಮಗ ಜೀತ್ ತಪ್ಪು ವ್ಯಾಕ್ಸಿನ್ ಪ್ರಯೋಗದಿಂದಾಗಿ,ಅಂಗವಿಕಲತೆಗೆ ಒಳಗಾಗಬೇಕಾಯಿತು.ಇದೀಗ 41ವರ್ಷದ ಜೀತ್ ಬೇರೆಯವ ಶುಶ್ರೂಷೆಯಿಂದಲೇ ಬದುಕಬೇಕಾದ ಪರಿಸ್ಥಿತಿ ಇದೆ.ಪತಿ ಪತ್ರಿಕೋದ್ಯಮಿ.ಮೆಚ್ಚಿ ಮದುವೆಯಾಗಿದ್ದವರು. ಗಂಡ ತನ್ನ ಮೇಲೆ ಹಿಂಸೆ ಎಸಗಿದಾಗ ಭಾಸಿನ್ ಡೈವೋರ್ಸ್ ನೀಡುವ ಮೂಲಕ ಮೂವತ್ತು ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದರು.

ವೈಯಕ್ತಿಕ ನೋವುಗಳಿಂದ ಜರ್ಜರಿತರಾದ ಬಾಸಿನ್ ಹಾಡು ಕವಿತೆಗಳ ರಚನೆಯ ಕಡೆಗೆ ಗಮನ ಕೊಟ್ಟರು. ಅವುಗಳನ್ನು ಬಳಸಿ ಜನಜಾಗೃತಿ ಪ್ರೇರೇಪಿಸುವ ಉದ್ದೇಶದಿಂದ ಸಂಪೂರ್ಣವಾಗಿ ಮಹಿಳಾ ವಿಮೋಚನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ದಕ್ಷಿಣ ಏಷ್ಯಾದ ಬಹುಮುಖ್ಯ ಸ್ತ್ರೀವಾದಿ ಸಂಸ್ಥೆಯಾದ ‘ಸಂಗಾತ್ ‘ ಅನ್ನು ಹುಟ್ಟುಹಾಕಿದವರಲ್ಲಿ ಅವರೂ ಒಬ್ಬರು. ಆ ಸಂಸ್ಥೆಯ ಮೂಲಕ ಪ್ರಪಂಚದಾದ್ಯಂತ ಒಂದು ಬಿಲಿಯನ್ ಗೂ ಹೆಚ್ಚು ಸದಸ್ಯರನ್ನು ಸಂಘಟಿಸುವ ಕೆಲಸದ ವ್ಯವಸ್ಥಾಪಕರಾಗಿ ಕೊನೆಯವರೆಗೂ ಕೆಲಸ ಮಾಡಿದರು.

ನೊಂದವರ ಕುರಿತು ಅಪಾರ ಕಾಳಜಿ ಹೊಂದಿದ್ದ ಭಾಸಿನ್ ಆದಿವಾಸಿ ಮತ್ತು ಗ್ರಾಮೀಣ ಮಹಿಳೆಯರ
ನಡುವೆ ಕೆಲಸ ಮಾಡಿದವರು.ಬಂಡವಾಳಶಾಹಿಯು ಪುರುಷಾದಿಪತ್ಯದ ಬಲು ದೊಡ್ಡ ಏಜೆಂಟ್ ಎಂದು ಸ್ಪಷ್ಟವಾಗಿ ಗುರುತಿಸಿದ್ದರು.

ಪುರುಷಾದಿಪತ್ಯದ ಯಜಮಾನ್ಯದ ವಿರುದ್ಧ ಗಟ್ಟಿ ದನಿಯಲ್ಲಿ ಪ್ರತಿರೋದ ತೋರಿದವರು ಭಾಸಿನ್.ಸಾವಿರದ ಒಂಭೈನೂರ ತೊಂಭತ್ತೊಂದರಲ್ಲಿ ಜಾಧವ್ ಪುರ ವಿಶ್ವವಿದ್ಯಾಲಯದಲ್ಲಿ ಡ್ರಮ್ ಬಾರಿಸುತ್ತಾ ಪುರುಷಾದಿಪತ್ಯದ ವಿರುದ್ಧ ಘೋಷಣೆ ಕೂಗಿದವರು.ಅದು ದಲಿತ ಮತ್ತು ಆದಿವಾಸಿಗಳ ಪರವಾದ ದನಿಯೂ ಆಗಿತ್ತು.ಬದುಕಿನ ಕೊನೆಯವರೆಗೂ ತಾನು ನಂಬಿದ ತತ್ವದ ಜೊತೆ ರಾಜಿ ಮಾಡಿಕೊಂಡವರಲ್ಲ.

ಭಾಸಿನ್ ಪ್ರಕಾರ ಫೆಮಿನಿಸಂ ಅನ್ನುವುದು ಗಂಡು ಹೆಣ್ಣಿನ ನಡುವಿನ ಯುದ್ಧವಲ್ಲ. ಅದು ಎರಡು ಐಡಿಯಾಲಜಿಗಳ ನಡುವಿನ ಯುದ್ಧ. ಪೇಟ್ರಿಯಾಟಿಸಮ್ ಎಂಬ ಸಿದ್ಧಾಂತದ ವಿರುದ್ಧ ಯುದ್ಧ. ಪೇಟ್ರಿಯಾಟಿಸಂ ಪುರುಷನಿಗೆ ಹೆಚ್ಚಿನ ಸ್ಥಾನಮಾನವನ್ನೂ ಅಧಿಕಾರವನ್ನೂ ನೀಡುತ್ತದೆ.ಅದಕ್ಕೆ ಪ್ರತಿಯಾಗಿರುವ ಸಿದ್ಧಾಂತ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಆದುದರಿಂದ ಫೆಮಿನಿಸಂ ಇವೆರಡರ ನಡುವಿನ ಯುದ್ಧವೇ ಹೊರತು ಬೇರೇನಲ್ಲ ಎಂದು ಅವರು ಒತ್ತಿ ಹೇಳುತ್ತಾರೆ.

‘ನಾವು ಪಾಶ್ಚಾತ್ಯ ಸಿದ್ಧಾಂತಗಳನ್ನು ಓದಿ ಫೆಮಿನಿಸ್ಟ್ ಆಗಿಲ್ಲ.ಸುತ್ತಮುತ್ತಲಿನ ವಾಸ್ತವ ನೋಡಿ ಫೆಮಿನಿಸ್ಟ್ ಆಗಿದ್ದೇವೆ. ಮನೆಯ ಒಳಗೆ ಮತ್ತು ಹೊರಗೆ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿ.ವರದಕ್ಷಿಣೆ ಆಕೆಗೆ ಏನು ಮಾಡುತ್ತಿದೆ, ಮನೆಯೊಳಗಿನ ಹಿಂಸೆ ಹೇಗೆ ಹೆಚ್ಚುತ್ತಿದೆ ಇತ್ಯಾದಿಗಳನ್ನು ನೋಡಿ’ಎಂದು ಹೇಳಿದ ಭಾಸಿನ್,
ದಲಿತ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ದನಿಯೆತ್ತಿದರು.ಮಥುರಾ ಅತ್ಯಾಚಾರ ಪ್ರಕರಣದಂತಹ ಅನೇಕ ಸಂದರ್ಭದಲ್ಲಿ ಆಕ್ಟಿವಿಸ್ಟ್ ಆಗಿ ಕೆಲಸ ಮಾಡಿದರು.

‘ಫೆಮಿನಿಸಂ, ಜೆಂಡರ್ ಅಸಮಾನತೆಗೆ ಸಂಬಂಧಪಟ್ಟದ್ದೇ ಹೊರತು ರೇಸ್ ,ಕಾಸ್ಟ್ ,ಪರಿಸರ ಇವುಗಳನ್ನು ಒಳಗೊಳ್ಳಬೇಕಾಗಿಲ್ಲ’ಎಂಬ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವರ ಫೆಮಿನಿಸಂ ಜಾತಿ ವಿರೋಧಿ ಹೋರಾಟವನ್ನು ಕೊನೆಯವರೆಗೂ ಒಳಗೊಳ್ಳಲೇ ಇಲ್ಲ ,ಗಂಡು ಹೆಣ್ಣು ಎಂಬ ಬೈನರಿಯನ್ನು ದಾಟಿ ಬೆಳೆಯಲಿಲ್ಲ ಎಂಬುದು ವಿರೋಧಕ್ಕೆ ಮುಖ್ಯ ಕಾರಣವಾಗಿತ್ತು.

ಆದರೂ ಭಾಸಿನ್ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಹೊಂದಿದ್ದ ಫಾಶನ್ ನಿಂದಾಗಿ ಮುಖ್ಯವಾಗುತ್ತಾರೆ.’ಮನಸ್ಥಿತಿಯ ಬದಲಾವಣೆ ಸಾಂಸ್ಕೃತಿಕ ಸುನಾಮಿಯನ್ನು ಬಯಸುತ್ತದೆ ಎಂಬ ನಿಲುವಿಗಾಗಿ ಇಷ್ಟವಾಗುತ್ತಾರೆ.ಬದಲಾವಣೆ ಬರಬೇಕೆಂದರೆ,ಸಹಜವೆಂಬಂತೆ ಕಂಡುಬರುವ ಹಲವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಿಕ ಪ್ರಯೋಗಗಳನ್ನು ಕೈಬಿಡಬೇಕು ಎಂಬುದು ಬಾಸಿನ್ ಒತ್ತಾಯವಾಗಿತ್ತು.ಉದಾಹರಣೆಗೆ ಗಂಡನನ್ನು ‘ಸ್ವಾಮಿ’ ಅಥವಾ ‘ಪತಿ’ಎನ್ನುವುದನ್ನು ನಿಲ್ಲಿಸಬೇಕು’ಎಂಬ ತನ್ನ ನಿಷ್ಠುರ ನಿಲುವನ್ನು ಅವರು ತಳೆದಿದ್ದರು.

ಗಮನಿಸಬೇಕಾದ ಅಂಶವೆಂದರೆ,ಜಿಯಾ-ವುಲ್ -ಹಕ್ ವಿರುದ್ಧ ಪಾಕಿಸ್ತಾನದ ‌ಸ್ತೀವಾದಿಗಳು ಪ್ರಚುರಪಡಿಸಿದ ‘ಆಜಾದಿ ಘೋಷಣೆ’ಯನ್ನು ಮೊದಲ ಬಾರಿ ನಮ್ಮಲ್ಲಿ ತಂದವರು ಭಾಸಿನ್. ಜಾಧವ್ ಪುರ ವಿಶ್ವವಿದ್ಯಾಲಯದ ಆವರಣದಲ್ಲಿ ಅವರು ಮೊಳಗಿಸಿದ ಪುರುಷಾಂಕಾರದ ಯಜಮಾನಿಕೆಯ ವಿರುದ್ಧ ಮೊಳಗಿಸಿದ ‘ಆಜಾದಿ ಘೋಷಣೆ’ಗೆ ಚಾರಿತ್ರಿಕ ಮಹತ್ವವಿದೆ.

ಭಾಸಿನ್ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹೆಚ್ಚಿನ ಪುಸ್ತಕಗಳು ಮಹಿಳಾ ಹಕ್ಕುಗಳ ಬಗ್ಗೆ ಇವೆ. ಹಲವು ಶಿಶು ಗೀತೆಗಳ ಮತ್ತು ಕವಿತೆಯ ಪುಸ್ತಕಗಳನ್ನೂ ಅವರು ಬರೆದಿದ್ದಾರೆ.ಭಾಸಿನ್ ಅವರ ಬಹುಮುಖ್ಯ ಪುಸ್ತಕಗಳೆಂದರೆ,Understanding Gender,What is Patriarchy,Borders and Boundaries ಮತ್ತು How women experienced the partition of India.ಈ ಪೈಕಿ ಮೊದಲ ಎರಡು ಪುಸ್ತಕಗಳು ಮಹಿಳಾ ಚಳುವಳಿಯ ಕೈದೀವಿಗೆಗಳು ಎಂದೇ ಪ್ರಸಿದ್ಧವಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version