ಲೈಫ್ ಸ್ಟೈಲ್
ಪಿಓಪಿ ವಿಗ್ರಹ ತ್ಯಜಿಸೋಣ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ
ಪ್ರತಿ ವರ್ಷದಂತೆ ಈ ವರ್ಷವೂ ಆನೆ ಸೊಂಡಿಲಿನ ಗಣಪನನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತುರದಲ್ಲಿದ್ದಾರೆ. ಡೊಳ್ಳು ಹೊಟ್ಟೆ ಗಣಪ ಮಕ್ಕಳಿಗೆ ಹಾಗೂ ಯುವಕರಿಗೆ ಪ್ರಿಯವಾದವ. ಹಾಗಾಗಿ ಅವನ ಬರುವಿಕೆಗೆ ಈಗಾಗಲೇ ತಯಾರಿ ನಡೆದಿದೆ. ಆದರೆ ಈ ಬಾರಿ ಪರಿಸರಕ್ಕೆ ಅಪಾಯಕಾರಿಯಾದ ಪಿಓಪಿ ಗಣೇಶ ಮೂರ್ತಿ ತ್ಯಜಿಸಿ. ಪರಿಸರ ಸ್ನೇಹಿಯಾಗಿ ಮೂಷಕನನ್ನು ವಾಹನವನ್ನಾಗಿಸಿಕೊಂಡ ಗಣಪನನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುವುದರೊಂದಿಗೆ, ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಕಾರ್ಯವನ್ನು ಮಾಡಬೇಕಿದೆ.
ಪರಿಸರ ಮತ್ತು ಜಲಚರಗಳಿಗೆ ಅಪಾಯಕಾರಿಯಲ್ಲದ ಜೇಡಿ ಮಣ್ಣಿನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ, ಮನೆಯ ಬಕೆಟ್ ನೀರಿನಲ್ಲಿಯೇ ವಿಸರ್ಜಿಸಿದರೆ ಪರಿಸರ ಸ್ನೇಹಿ ಹಬ್ಬ ಆಚರಿಸಿದಂತಾಗುತ್ತದೆ.
ಏನಿದು ಪಿಒಪಿ ಗಣೇಶ ಮೂರ್ತಿ..?
ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸುವ ಗಣೇಶ ಮೂರ್ತಿಗಳು ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತವೆ. ಹೀಗಾಗಿ ಪಿಒಪಿ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಿದಾಗ ಅದು ಕರಗದೆ ಜಲಮೂಲಗಳು ಕಲುಷಿತಗೊಂಡು ನೀರಿನಲ್ಲಿನ ಜಲಚರಗಳಿಗೂ ಮತ್ತು ಪರಿಸರಕ್ಕೂ ಹಾನಿಯುಂಟು ಮಾಡುತ್ತವೆ.
ಅಪಾಯಕಾರಿಯಾದ ಪಿಒಪಿ ಮೂರ್ತಿ
ಪಿಒಪಿ ಗಣೇಶ ಮೂರ್ತಿಗಳಲ್ಲಿ ಕ್ಯಾಲ್ಸಿಯಂ ಸಲ್ಫೇಟ್ ಅಂಶವಿರುತ್ತದೆ. ಅದಲ್ಲದೆ ವಿಗ್ರಹ ತಯಾರಿಸಲು ಬಳಸುವ ರಾಸಾಯನಿಕ ಬಣ್ಣಗಳು, ಪಾದರಸ, ಕ್ರೋಮಿಯಂ, ಸೀಸದಂಥ ಭಾರ ಲೋಹದ ಅಂಶಗಳು ಪಿಒಪಿ ಮೂರ್ತಿಗಳಲ್ಲಿ ಇರುತ್ತವೆ. ಈ ಅಂಶ ಹೊಂದಿರುವ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿದಾಗ ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಭಾರದ ಲೋಹಗಳು ನೀರಿನ ತಳವನ್ನು ಸೇರುತ್ತವೆ. ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ ನೀರಿನಲ್ಲಿ ಕಬ್ಬಿಣದ ಅಂಶ 10 ಪಟ್ಟು ಮತ್ತು ತಾಮ್ರದ ಅಂಶವೂ 20 ಪಟ್ಟು ಜಾಸ್ತಿಯಾಗುತ್ತದೆ ಹೀಗಾಗಿಯೇ ನೀರು ಕಲುಷಿತಗೊಂಡು ನೀರಿನಲ್ಲಿ ಇರುವ ಜಲಚರಗಳಿಗೆ ಅಪಾಯ ಉಂಟಾಗುತ್ತದೆ.
ಜನರಲ್ಲಿ ಜಾಗೃತಿ
ಪಿಒಪಿ ವಿಗ್ರಹಗಳಿಂದಾಗುವ ಹಾನಿಯ ಕುರಿತು ಜಿಲ್ಲಾಡಳಿತ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಘ ಸಂಸ್ಥೆಗಳು, ಪರಿಸರವಾದಿಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಪಿಓಪಿ ವಿಗ್ರಹ ಬಿಟ್ಟು ಮಣ್ಣಿನಿಂದ ಮಾಡಿದ ನೈಸರ್ಗಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಪೂಜಿಸಿ ಹಬ್ಬ ಆಚರಿಸಿದರೆ ಸಂಭ್ರಮಕ್ಕೆ ಕೊರತೆಯುಂಟಾಗುವುದಿಲ್ಲ ಹಾಗೂ ಪರಿಸರಕ್ಕೂ ಧಕ್ಕೆ ಆಗುವುದಿಲ್ಲ. ಪ್ರಕೃತಿ ವಿರುದ್ಧವಾಗಿ ನಡೆದರೆ ಅದರಿಂದ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಅರಿತು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಸನ್ನದ್ಧರಾಗೋಣ.
ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ನೋವು ಇನ್ನೂ ಮಾಸಿಲ್ಲ. ಪರಿಸರವನ್ನು ರಕ್ಷಿಸದೇ ನಾಶ ಮಾಡುತ್ತಿರುವುದರಿಂದ ಇಂತಹ ಪ್ರಕೃತಿ ವಿಕೋಪಗಳು ನಡೆಯುತ್ತವೆ. ಪ್ರಕೃತಿಗೆ ಮಾರಕವಾದದ್ದನ್ನೇ ಮನುಷ್ಯ ಮಾಡಲು ಹೊರಟಿದ್ದಾನೆ. ಹೀಗಾಗಿ ಪ್ರಕೃತಿಯೇ ಮನುಷ್ಯನಿಗೆ ಪಾಠ ಕಲಿಸುತ್ತಿದೆ ಎಂಬುದನ್ನು ಅರಿಯಬೇಕು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಪ್ರತಿಜ್ಞೆ ಮಾಡೋಣ.
ಪಿಓಪಿ ವಿಗ್ರಹಗಳು ಕಂಡುಬಂದರೆ ಹೀಗೆ ಮಾಡಿ
ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಪಿಓಪಿ ವಿಗ್ರಹಗಳ ನಿಷೇಧಕ್ಕೆ ಈಗಾಗಲೇ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆ ನಡೆಸಿ ತಿಳುವಳಿಕೆ ನೀಡಿದೆ. ಹೊರ ಜಿಲ್ಲೆಗಳಿಂದ ಆಮದಾಗುವ ಪಿಓಪಿ ಗಣೇಶ ವಿಗ್ರಹಗಳನ್ನು ತಡೆಯಲು ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್, ನಗರ ಸ್ಥಳೀಯ ಸಂಸ್ಥೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನೊಳಗೊಂಡ ತಂಡಗಳನ್ನು ರಚಿಸಿ, ಜಿಲ್ಲೆಯಾದ್ಯಂತ ಗಣೇಶ ವಿಗ್ರಹಗಳ ತಯಾರಕರು ಮತ್ತು ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ತಂಡಗಳಿಗೆ ಪ್ರಜ್ಞಾವಂತ ಸಾರ್ವಜನಿಕರು ಸಹಕಾರ ನೀಡುವುದು ಅಗತ್ಯವಾಗಿದೆ, ಪಿಓಪಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ಕಂಡುಬಂದರೆ ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಯಕುಮಾರ್ ಕಡಕ್‌ಬಾವಿ (9448141262) ಅಥವಾ ಉಪಪರಿಸರ ಅಧಿಕಾರಿ ಶೋಭಾ ಗಜಕೋಶ (9449060674) ದೂರವಾಣಿಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು.
– ಸ್ಮಿತಾ ಅಂಗಡಿ
ಅಪ್ರೆಂಟಿಸ್ ತರಬೇತಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243