ಸಿನಿ ಸುದ್ದಿ

ಜಂಟಲ್ಮನ್ ಕರ್ಣನಲ್ಲ ; ಕುಂಬಕರ್ಣ..!

Published

on

  • ಮಾಸ್ತಿ

ಚೆನ್ನಾಗಿ ನಿದ್ದೆ ಮಾಡಿದ್ರೆ ಯಾವುದೇ ಖಾಯಿಲೆನಾದ್ರೂ ವಾಸಿ ಆಗುತ್ತೆ ಅದ್ರೆ ಮಲಗಿರೋದೇ ಖಾಯಿಲೆ ಆದ್ರೆ ?
ಡಾಕ್ಟ್ರು ಹೇಳ್ತಾರೆ ಇವನಿಗೆ ಮಾರಕ ಖಾಯಿಲೆ ಇದೆ ದಿನದ ಇಪ್ಪತ್ನಾಲ್ಕು ತಾಸಲ್ಲಿ ಬರೋಬ್ಬರಿ ಹದಿನೆಂಟು ತಾಸು ಮಲಗಿರ್ತಾನೆ ಬರೀ ಆರು ತಾಸು ಮಾತ್ರ ಎದ್ದಿರ್ತಾನೆ ಅಂತ , ಆಗೊಬ್ಬ ಕೇಳ್ತಾನೆ ಅಲಾರಂ ಇಟ್ರು ಎದ್ದೇಳಲ್ವಾ ಅಂತ ? ಅದಕ್ಕೆ ಡಾಕ್ಟರ್ ‘ ಅಲಾರಂ ಅಲ್ಲ ಅಲ್ಲಾ ರಾಮ್ ಇಬ್ರು ಬಂದ್ರು ಇವನು ಎದ್ದೇಳಲ್ಲ !.

ಇದನ್ನ ಮಾರಕ ಖಾಯಿಲೆ ಅಂತೇಳೋ ಬದಲು ಮಂಪರು ಖಾಯಿಲೆ ಅಂತನ್ನಬಹುದು .ಬರೀ ಆರು ತಾಸಲ್ಲಿ ಅವನು ರೆಡಿಯಾಗ್ಬೇಕು ಕೆಲಸಕ್ಕೋಗ್ಬೇಕು ತಿನ್ನಬೇಕು ಟ್ರೀಟ್ಮೆಂಟ್ ತಗೋಬೇಕು ಒಂದಾ ಎರಡಾ, ಇವನಿಗೊಂದು ಸಣ್ಣ ಕುಟುಂಬ , ಇದರ ಮದ್ಯೆ ಇವನದೊಂದು ಲವ್ ಸ್ಟೋರಿ , ಸಮಯ ಒದಗಿಸಲಕ್ಕಾಗದೇ ಕೆಲಸ ಬಿಡ್ತಾನೆ , ಬಾಸ್ ಕೇಳ್ತಾನೆ ಅಲ್ಲಯ್ಯ ಯಾರಾದ್ರೂ ಲವ್ ಗೋಸ್ಕರ ಕೆಲಸ ಬಿಡ್ತಾರ ? ಅದಕ್ಕೆ ಹೀರೋ ಹೇಳ್ತಾನೆ ಲವ್ಗೋಸ್ಕರ ಪ್ರಾಣಾನೇ ಬಿಡ್ತಾರೆ ಅಂತದ್ರಲ್ಲಿ ಕೆಲಸ ಬಿಟ್ರೆ ಏನು ?. ದೇವರೇ ಅನ್ಯಾಯವೆಸಗಿರುವ ಈ ರೋಗಿಯ ಬದುಕಿನಲ್ಲಿ ಎದುರಾಗುವ ಸವಾಲುಗಳೇನು ಅದನ್ನವನು ಎದುರಿಸುವ ರೀತಿ ಏನು ಇದೇ ಈ ಸಿನಿಮಾದ ತಿರುಳು.

ಜಡೇಶ್ ಕುಮಾರ್ ಹಂಪಿ ವಯಸ್ಸಲ್ಲಿ ಅಂತಹ ಹಿರಿಯನಲ್ಲದಿದ್ದರೂ ಈ ತರಹದ ಮೆಚ್ಯೂರ್ಡ್ ಥ್ರಿಲ್ಲಿಂಗ್ ಸ್ಟೋರಿ ಮಾಡಿಕೊಂಡು ಚೆಂದದ ಸಿನಿಮಾ ಮಾಡಿದ್ದಾರೆ, ಅದಕ್ಕೆ ಅವರ ಗುರುಗಳಾದ ಗುರುದೇಶ್ಪಾಂಡೆ ಅವರೇ ಹಣ ಹೂಡಿದ್ದಾರೆ, ಪ್ರಜ್ವಲ್ ಈ ಸಿನಿಮಾದಲ್ಲಿ ತುಂಬಾನೇ ಚೆನ್ನಾಗಿ ಕಾಣ್ತಾರೆ, ಪಾತ್ರದಲ್ಲಿ ಮಲಗಿದ್ರೂ ಪಾತ್ರಪೋಷಣೆಯಲ್ಲಿ ಮಿಂದೆದ್ದಿದ್ದಾರೆ, ಪಾತ್ರದಲ್ಲಿ ಮಾಗಿದ್ದಾರೆ ಪಾತ್ರಕ್ಕಾಗಿ ಬಾಗಿದ್ದಾರೆ.

ನಿಶ್ವಿಕ ಅಪರೂಪದ ಅಲಾರಂ ಪೀಸ್ನಂತೆ ಸುಂದರವಾಗಿ, ಇಂಚರದಷ್ಟೇ ಇಂಪಾಗಿ ಸದ್ದು ಮಾಡುತ್ತಾರೆ. ಆರೂರು ಸುಧಾಕರ್ ಶೆಟ್ಟರ ಸಿನಿಮಾಟೋಗ್ರಫಿ ನೂರೂರಿನವರನ್ನು ಒಪ್ಪಿಸುವಂತಿದೆ, ತಾಂತ್ರಿಕತೆ ಉತ್ಕೃಷ್ಟವಾಗಿದೆ, ಅವರೇನು ಅಂತೇಳಲು ಸೆಲ್ಫಿ ಫೈಟ್ನಲ್ಲಿ ಅವರು ಮಾಡಿರುವ ಲೈಟಿಂಗ್ ಮತ್ತು ಕ್ಯಾಮರಾವನ್ನಾಡಿಸಿರುವ ರೀತಿಯೇ ಉದಾಹರಣೆ, ಸಾಹಸದಲ್ಲಾಗಲೀ ಸಂಗೀತದಲ್ಲಾಗಲಿ , ಹಾಸ್ಯದಲ್ಲಾಗಲಿ ಲಾಸ್ಯದಲ್ಲಾಗಲೀ, ಗಾತ್ರದ ಕ್ಯಾಮರಾವನ್ನು ಪಾತ್ರವನ್ನಾಗಿಸಿದ್ದಾರೆ.

ಸಿಕ್ಕ ಸಮಯದಲ್ಲೇ ಕತ್ತಲನ್ನೂತು ಬೆಳಕನ್ನು ಬೆಳೆದಿದ್ದಾರೆಂದರೆ ಸೋಜಿಗವಲ್ಲ. ಅಜನೀಶರ ಸಂಗೀತ ನಿಜಕ್ಕೂ ನಿದ್ದೆಕತೆಯಲ್ಲೂ ಲಾಲಿ ಹಾಡಿಸುತ್ತೆ, ಮಂಪರಲ್ಲೂ ಮನರಂಜಿಸುತ್ತೆ, ಹಿನ್ನೆಲೆಸಂಗೀತದಲ್ಲಿ ನಿಮ್ಮಿಂದೆ ನಾನಿದೀನಿ ಅಂತ ಧೈರ್ಯ ತುಂಬುತ್ತೆ , ಸಂಚಿತ್ ಹೆಗ್ಗಡೆಯೆಂಬ ” ಉಸಿರಾಡುವ ಮೈಕು ” ಕಿವಿಗಲ್ಲ ಮನಸ್ಸಿಗಿಡಿಸುವಂತಾಡಿದ್ದಾನೆ.

ಬರುವ ಎಲ್ಲಾ ಪಾತ್ರಗಳೂ ಅವಶ್ಯಕಥೆಯ ಹಾಗೂ ಜಡೇಶರ ಕಥೆಯ ಚೌಕಟ್ಟಿನಲ್ಲೇ ಇದೆ. ಸಂಚಾರಿ ವಿಜಯ್ ಖಾಕಿ ತೊಟ್ಟು ಖಡಕ್ ಪಾತ್ರದಲ್ಲಿ ಕಾಣಿಸಿದ್ದಾರೆ. ಮನೆಯಲ್ಲೊಂದು ಮಗು ಇದ್ದರೆ ಎಂಥಾವ್ರಿಗೂ ಮನೆ ಕಡೆ ಹೋಗ್ಬೇಕನ್ನಿಸುತ್ತದೆ ಹಾಗೆಯೇ ಬೇಬಿ ಅರಾಧ್ಯ ಎಂಬ ಆರು ವರುಷದ ಮಗು ಒಂದು ಪಾತ್ರ ಮಾಡಿದೆ ನಿಜಕ್ಕೂ ಆ ಪುಟ್ಟ ಪಾತ್ರಕ್ಕೆ ಈ ಹುಡುಗಿ ದೊಡ್ಡ ಮೆರಗು ತುಂಬಿದ್ದಾಳೆ. ಭಾವುಕಳಾದರಂತೂ ನಿರ್ಭಾವುಕರ ಕಣ್ಣಲ್ಲಿಯೂ ನೀರು ತುಂಬಿಸುತ್ತಾಳೆ .

ಕಿರುತೆರೆಯ ನಟ ಅರ್ಜುನ್ ಹಿರಿತೆರೆಯಲ್ಲಿ ಆರ್ಭಟಿಸಿದ್ದಾರೆ. ಅನಿಲ್ ಯಾದವ್ ಚಿಕ್ಕ ಪಾತ್ರವನ್ನು ಚೊಕ್ಕವಾಗಿಸಿದ್ದರೆ ಪ್ರಶಾಂತ್ ಪಾತ್ರವನ್ನು ಸಿದ್ದಿಸಿದ್ದಾರೆ. ಮಿಕ್ಕಂತೆ ಜಡೇಶ್ ವೆಂಕಿಯ ಸಂಕಲನವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಜಂಟಲ್ಮನ್ ಅಂದ್ರೆ ಸಂಭಾವಿತ, ಸಭ್ಯಸ್ಥ , ಸುಸಂಸ್ಕೃತ. ನಂಬಿ ಈ ಸಿನಿಮಾ ಸಹ ಇವುಗಳಷ್ಟೇ ಅರ್ಥಗರ್ಭಿತವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version