ದಿನದ ಸುದ್ದಿ

ಗೋವುಗಳ ಪಾಲನೆ ಪೋಷಣೆಗೆ ಸರ್ಕಾರದ ಪ್ರೋತ್ಸಾಹ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Published

on

ಸುದ್ದಿದಿನ,ಧಾರವಾಡ‌ : ಗೋವುಗಳ ಪಾಲನೆ,ಪೋಷಣೆ,ಹೈನುಗಾರಿಕೆ ಚಟುವಟಿಕೆಗಳಿಗೆ ಸರ್ಕಾರದ ಪ್ರೋತ್ಸಾಹ, ವಿದ್ಯಾವಂತರು ಪಶುಸಂಗೋಪನೆ ಮೂಲಕ‌ ಆರ್ಥಿಕ ಸ್ವಾವಲಂಬಿಗಳಾಗಲಿ.ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ನಿರ್ಮಾಣವಾಗಲಿರುವ ಗೋಶಾಲೆಗೆ ರೈತರಿಗೆ ಪ್ರಯೋಜನವಾಗಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ, ಮಾದನಭಾವಿ ಗ್ರಾಮದ 9 ಎಕರೆ 30 ಗುಂಟೆ ಜಾಗೆಯಲ್ಲಿ 53.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗೋಶಾಲೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶೂನ್ಯ ಬಂಡವಾಳ ಮತ್ತು ನೈಸರ್ಗಿಕ ಕೃಷಿ ಪ್ರೋತ್ಸಾಹಿಸಲು ರಾಜ್ಯ ಸರಕಾರ ಕೈಗೊಂಡಿರುವ ಜಿಲ್ಲೆಗೊಂದು ಗೋ ಶಾಲೆ ಯೋಜನೆ ಅತ್ಯಂತ ಉಪಯುಕ್ತವಾಗಿದೆ .ಗೋ ತಳಿಗಳನ್ನು ಅಭಿವೃದ್ದಿ ಪಡಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಎಲ್ಲರೂ ನೌಕರಿಗಾಗಿ ಕಾಯುತ್ತ ಕುಳಿತುಕೊಳ್ಳದೇ , ವಿದ್ಯಾಂತರು ಹೈನುಗಾರಿಕೆಯಲ್ಲಿ ತೋಡಗಿಸಿಕೊಂಡರೆ ಯಶಸ್ವಿಯಾಗುವುದು ನಿಶ್ಚಿತ.

ಉತ್ತಮವಾದ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡಿದರೆ ಹೆಚ್ಚಿನ ಬೇಡಿಕೆ ಮತ್ತು ಲಾಭ ಇರುತ್ತದೆ. ಗುಜರಾತಿನ ಅಮುಲ್ ಕ್ಷೀರಕ್ರಾಂತಿಯಲ್ಲಿ ಮಾಡಿದ ಉದಾಹರಣೆ ಜಗತ್ತಿಗೆ ಮಾದರಿಯಾಗಿದೆ. ಗೋವು ರಕ್ಷಣೆಯ ಸಾಧಕ ಭಾದಕಗಳ ಅಧ್ಯಯನ ನಡೆಸಿಯೇ ಜಿಲ್ಲೆಗೊಂದು ಗೋಶಾಲೆ ಎಂಬ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ರೈತರ ಪಾಲ್ಗೊಳ್ಳುವಿಕೆ ಅಧಿಕವಾಗಿರಬೇಕು. ಸ್ಥಳೀಯ ರೈತರು ಗೋಶಾಲೆಗೆ ಸಹಕಾರ ನೀಡಿದರೆ ಯೋಜನೆವು ಯಶಸ್ವಿಯಾಗೊಳ್ಳಲು ಸಾದ್ಯವಾಗುತ್ತದೆ ಎಂದರು.

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮಾತನಾಡಿ, ಗೋವುಗಳು ರೈತರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಗೋವುಗಳು ಭಾರತೀಯ ಸಂಸ್ಕೃತಿಯ ಪ್ರತಿಕ. ಗೋವು ಹತ್ಯೆ ತಡೆಯಲು ಮತ್ತು ಅವುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರವು ಜಿಲ್ಲೆಗೊಂದು ಗೋಶಾಲೆ ಯೋಜನೆಯನ್ನು ಜಾರಿಗೆ ತಂದಿದೆ. ಧಾರವಾಡ ತಾಲೂಕಿನಲ್ಲಿ ಗೋಶಾಲೆ ತೆಗೆಯಬೇಕೆಂಬ ಕನಸು ಇಂದು ನನಸಾಗಿದೆ. ಈ ಯೋಜನೆಗೆ ರೈತರ ಸಹಕಾರ ಅಗತ್ಯವಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ(ಪಶ್ಚಿಮ) ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಗೋವುಗಳು ಅಶಕ್ತವಾದಾಗ ಸಣ್ಣ ಹಿಡುವಳಿ ರೈತರು ಒಲ್ಲದ ಮನಸ್ಸಿನಿಂದ ಅವುಗಳನ್ನು ಕಸಾಯಿ ಖಾನೆಗೆ ನೀಡುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ಗೋ ಮಾತೆಗೆ ಆದ್ಯತೆ ಇದೆ. ರೈತರ ಅಸಹಾಯಕತೆಗೆ ಊರುಗೋಲಾಗಲು ರಾಜ್ಯ ಸರ್ಕಾರವು ಜಿಲ್ಲೆಗೊಂದು ಗೋಶಾಲೆ ಯೋಜನೆಯನ್ನು ಜಾರಿಗೆ ತಂದಿದೆ. ಮಾದನಭಾವಿಯಲ್ಲಿ ತೆರೆಯುತ್ತಿರುವ ಗೋಶಾಲೆ ಯಿಂದಾಗಿ ಈ ಭಾಗದಲ್ಲಿ ಇರುವ ಗೋವುಗಳಿಗೆ ನೆಲೆ ಸಿಕ್ಕಂತಾಗಿದೆ. ಇದೇ ರೀತಿ ಎಲ್ಲ ಜಿಲ್ಲೆಗಳ ಗೋವುಗಳಿಗೆ ರಕ್ಷಣೆ ಸಿಗುವಂತಾಗಲಿ ಎಂದು ಹೇಳಿದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮನಗುಂಡಿಯ ಬಸವಾನಂದ ಸ್ವಾಮೀಜಿ,ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಪಿ. ಕೃಷ್ಣಕಾಂತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೆವಾ ಇಲಾಖೆಯ ಉಪನಿರ್ದೇಶಕ ಡಾ. ಉಮೇಶ ಎನ್. ಕೊಂಡಿ ತಹಶೀಲ್ದಾರ್ ಡಾ.ಸಂತೋಷ ಕುಮಾರ ಬಿರಾದಾರ ಇದ್ದರು.

ಪಾಲಿಕ್ಲಿನಿಕ್ ಉದ್ಘಾಟನೆ

ಧಾರವಾಡದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ನಬಾರ್ಡ ಅರ್ ಐ ಡಿ ಎಫ್ ಟ್ಯಾಂಚ್ 22 ರ ಯೋಜನೆಯಡಿ 2.15 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ
ನೂತನ ಜಿಲ್ಲಾ ಪಾಲಿಕ್ಲಿನಿಕ್ ಕಟ್ಟಡವನ್ನು ಕೇಂದ್ರ ಸಚಿವರು ಹಾಗೂ ಶಾಸಕರು ಉದ್ಘಾಟಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version