ದಿನದ ಸುದ್ದಿ

ಹುಟ್ಟು ಹಬ್ಬ : ‘ವಂದೇ ಮಾತರಂ’ ಬಂಕಿಮ ಚಂದ್ರ ಚಟರ್ಜಿ

Published

on

1905 ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳವನ್ನು ವಿಭಜಿಸುವ ಅತ್ಯಂತ ಕೆಟ್ಟ ನಿರ್ಧಾರಕ್ಕೆ ಕೈ ಹಾಕಿದಾಗ ದೇಶಾದ್ಯಂತ ಎಲ್ಲರನ್ನೂ ಒಂದುಗೂಡಿಸಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಜನರಲ್ಲಿ ಕಿಚ್ಚು ಹಚ್ಚಿದ್ದು ವಂದೇಮಾತರಂ ಗೀತೆ. ಇಂದಿಗೂ ಈ ವಂದೇ ಮಾತರಂ ಗೀತೆ ನಮ್ಮಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತಿದೆ. ಈ ಗೀತೆಯ ಕವಿ ಬಂಕಿಮ ಚಂದ್ರ ಚಟರ್ಜಿಯವರು. ಇಂದು ಅವರ ಜನ್ಮದಿನ ಬನ್ನಿ ಅಪ್ರತಿಮ ದೇಶಭಕ್ತ, ಸ್ವಾತಂತ್ರ ಹೋರಾಟಗಾರ, ಸಮಾಜ ಸುಧಾರಕ ಬಂಕಿಮ ಚಂದ್ರರರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸೋಣ.

ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ(1838-1894). ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು.

ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು ಜನಿಸಿದ ದಿಂದ ಜೂನ್ 27, 1838. ಜನಿಸಿದ ಸ್ಥಳ ನೈಹತಿಯಲ್ಲಿರುವ ಕಂಥಾಲಪಾರ ಎಂಬ ಹಳ್ಳಿ. 1857ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು. 1869ರಲ್ಲಿ ಒಂದು ಕಾನೂನು ಪದವಿಯನ್ನೂ ಗಳಿಸಿದರು. ಮುಂದೆ ತಮ್ಮ ತಂದೆಯ ರೀತಿಯಲ್ಲಿಯೇ ಜೆಸ್ಸೋರ್‌‌‌ನ ಉಪ-ಜಿಲ್ಲಾಧಿಕಾರಿಯಾಗಿ ನೇಮಿಸಲ್ಪಟ್ಟರು; ಓರ್ವ ಉಪ-ನ್ಯಾಯಾಧಿಪತಿಯ ಹುದ್ದೆಗೇರಿದ ಚಟರ್ಜಿಯವರು 1891ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. ಆಡಳಿತ ನಡೆಸುತ್ತಿದ್ದ ಬ್ರಿಟಿಷರೊಂದಿಗೆ ಘರ್ಷಣೆಗೆ ಇಳಿಯಲು ಕಾರಣವಾಗುವಂಥ ಘಟನೆಗಳು ಅವರು ತಮ್ಮ ಕಾರ್ಯಕ್ಷೇತ್ರದಲ್ಲಿದ್ದಾಗಿನ ವರ್ಷಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು.

ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ಒದಗಿಸಿದವು.

ದುರ್ಗೇಶ್‌ನಂದಿನಿ, ಕಪಾಲಕುಂಡಲ, ಮೃಣಾಲಿನಿ, ವಿಷಬೃಕ್ಷ , ಇಂದಿರಾ, ಜುಗಲನ್‌ಗುರಿಯಾ, ರಾಧಾರಾಣಿ, ಚಂದ್ರಶೇಖರ್‌, ಕಮಲಾಕಾಂತೆರ್‌ ದಪ್ತರ್‌ , ರಜನಿ, ಕೃಷ್ಣಾಕಾಂತೆರ್‌ ಉಯಿಲ್, ರಾಜಸಿಂಹ, ಆನಂದಮಠ, ದೇವಿ ಚೌಧುರಾನ, ಕಮಲಾಕಾಂ, ಸೀತಾರಾಮ್, ಮೂಚಿರಾಮ್‌ ಗುರೆರ್‌ ಜೀವನ್‌ಚರಿತಾ ಮುಂತಾದವು ಬಂಕಿಮ ಚಂದ್ರರ ಕಾದಂಬರಿಗಳು.

ಬಂಕಿಮ ಚಂದ್ರ ಧಾರ್ಮಿಕ ವ್ಯಾಖ್ಯಾನಗಳಲ್ಲಿ ಕೃಷ್ಣ ಚರಿತ್ರ, ಧರ್ಮತತ್ವ, ದೇವತತ್ತ್ವ, ಶ್ರೀಮದ್ವಗವತ್‌ ಗೀತಾ , ಭಗವದ್‌ ಗೀತಾದ ಮೇಲಿನ ಒಂದು ವ್ಯಾಖ್ಯಾನ ಪ್ರಸಿದ್ಧವೆನಿಸಿವೆ. ಲಲಿತಾ ಓ ಮಾನಸ್ ಅವರ ಕವನಸಂಗ್ರಹ. ಲೋಕ್‌ ರಹಸ್ಯ, ಬಿಜ್ಞಾನ್‌ ರಹಸ್ಯ, ಬಿಚಿತ್ರ ಪ್ರಬಂಧ , ಸಮ್ಯಾ ಮುಂತಾದವು ಪ್ರಬಂಧಸಂಗ್ರಹಗಳು. ಬಂಕಿಮ ಚಂದ್ರ ಈ ಎಲ್ಲ ಕೃತಿಗಳೂ ಇಂಗ್ಲಿಷ್ ಭಾಷೆ ಸೇರಿದಂತೆ ಇತರ ಭಾಷೆಗಳಲ್ಲಿ ಮೂಡಿಬಂದಿವೆ.

‘ಆನಂದಮಠ’ ಕಾದಂಬರಿಯಲ್ಲಿ ಬರೆದ ‘ಓ ತಾಯಿ, ಭಾರತಿಯೇ, ನಿನಗೆ ನಮನ’ ಎಂದು ಸಾರುವ ‘ವಂದೇ ಮಾತರಂ’ ಭಾರತೀಯರಿಗೆ ಪವಿತ್ರಗೀತೆಯಂತಿದೆ. ಈ ಗೀತೆಗೆ ಸಂಗೀತ ಸಂಯೋಜಿಸಿದವರು ನಮಗೆ ರಾಷ್ಟ್ರಗೀತೆ ನೀಡಿರುವ ಕವಿ ರವೀಂದ್ರನಾಥ್ ಠಾಗೂರರು.

ವಂದೇಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶಾಮಲಾಂ ಮಾತರಾಂ
ವಂದೇಮಾತರಂ

ಶುಬ್ರಜ್ಯೋತ್ಸ್ನಾ ಪುಲಕಿತ ಯಾಮೀನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ !!

ಕೋಟಿ ಕೋಟಿ ಕಂಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭಜೈಧರ್ತಖರ ಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ ಬಹುಬಲಧಾರೀಣಿಂ
ನಮಾಮಿ ತಾರಿಣೀಂ ಮಾತರಂ!!

ತುಮಿ ವಿದ್ಯ ತುಮಿ ಧರ್ಮ
ತುಮಿ ಹ್ರದಿ ತುಮಿ ಮರ್ಮ ತ್ವಂ ಹಿ ಪ್ರಾಣಾ:
ಶರೀರೇ, ಬಾಹುತೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ ಮಂದಿರೇ ಮಂದಿರೇ!!

ತ್ವಂ ಹಿ ದುರ್ಗಾ ದಶಪ್ರಹರಣ ಧಾರೀಣೀಂ
ಕಮಲಾ ಕಮಮಲದಲ ವಿಹಾರಿಣೀ ವಾಣೀವಿದ್ಯಾಯಿನಿ
ನಮಾಮಿ ತ್ಯಾಂ ನಮಾಮಿ ಕಮಲಾಂ ಅಮಲಾಂ
ಆತುಲಾಂ ಸುಜಲಾಂ ಸುಫಲಾಂ ಮಾತರಂ!!

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಮಾತರಂ

ವ೦ದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶಾಮಲಾಂ ಮಾತರಾಂ

ಬಂಕಿಮ ಚಂದ್ರರು ಈ ಲೋಕದಿಂದ ಅಗಲಿದ ದಿನ ಏಪ್ರಿಲ್ 8, 1894. ಭಾರತಮಾತೆಯ ಈ ಸುಪುತ್ರ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಎಂಬ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.

ರಘುನಾಥ್ ಕುಲಗಟ್ಟೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version