ದಿನದ ಸುದ್ದಿ
ಹುಟ್ಟು ಹಬ್ಬ : ‘ವಂದೇ ಮಾತರಂ’ ಬಂಕಿಮ ಚಂದ್ರ ಚಟರ್ಜಿ
1905 ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳವನ್ನು ವಿಭಜಿಸುವ ಅತ್ಯಂತ ಕೆಟ್ಟ ನಿರ್ಧಾರಕ್ಕೆ ಕೈ ಹಾಕಿದಾಗ ದೇಶಾದ್ಯಂತ ಎಲ್ಲರನ್ನೂ ಒಂದುಗೂಡಿಸಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಜನರಲ್ಲಿ ಕಿಚ್ಚು ಹಚ್ಚಿದ್ದು ವಂದೇಮಾತರಂ ಗೀತೆ. ಇಂದಿಗೂ ಈ ವಂದೇ ಮಾತರಂ ಗೀತೆ ನಮ್ಮಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತಿದೆ. ಈ ಗೀತೆಯ ಕವಿ ಬಂಕಿಮ ಚಂದ್ರ ಚಟರ್ಜಿಯವರು. ಇಂದು ಅವರ ಜನ್ಮದಿನ ಬನ್ನಿ ಅಪ್ರತಿಮ ದೇಶಭಕ್ತ, ಸ್ವಾತಂತ್ರ ಹೋರಾಟಗಾರ, ಸಮಾಜ ಸುಧಾರಕ ಬಂಕಿಮ ಚಂದ್ರರರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸೋಣ.
ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ(1838-1894). ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು.
ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು ಜನಿಸಿದ ದಿಂದ ಜೂನ್ 27, 1838. ಜನಿಸಿದ ಸ್ಥಳ ನೈಹತಿಯಲ್ಲಿರುವ ಕಂಥಾಲಪಾರ ಎಂಬ ಹಳ್ಳಿ. 1857ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು. 1869ರಲ್ಲಿ ಒಂದು ಕಾನೂನು ಪದವಿಯನ್ನೂ ಗಳಿಸಿದರು. ಮುಂದೆ ತಮ್ಮ ತಂದೆಯ ರೀತಿಯಲ್ಲಿಯೇ ಜೆಸ್ಸೋರ್ನ ಉಪ-ಜಿಲ್ಲಾಧಿಕಾರಿಯಾಗಿ ನೇಮಿಸಲ್ಪಟ್ಟರು; ಓರ್ವ ಉಪ-ನ್ಯಾಯಾಧಿಪತಿಯ ಹುದ್ದೆಗೇರಿದ ಚಟರ್ಜಿಯವರು 1891ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. ಆಡಳಿತ ನಡೆಸುತ್ತಿದ್ದ ಬ್ರಿಟಿಷರೊಂದಿಗೆ ಘರ್ಷಣೆಗೆ ಇಳಿಯಲು ಕಾರಣವಾಗುವಂಥ ಘಟನೆಗಳು ಅವರು ತಮ್ಮ ಕಾರ್ಯಕ್ಷೇತ್ರದಲ್ಲಿದ್ದಾಗಿನ ವರ್ಷಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು.
ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ಒದಗಿಸಿದವು.
ದುರ್ಗೇಶ್ನಂದಿನಿ, ಕಪಾಲಕುಂಡಲ, ಮೃಣಾಲಿನಿ, ವಿಷಬೃಕ್ಷ , ಇಂದಿರಾ, ಜುಗಲನ್ಗುರಿಯಾ, ರಾಧಾರಾಣಿ, ಚಂದ್ರಶೇಖರ್, ಕಮಲಾಕಾಂತೆರ್ ದಪ್ತರ್ , ರಜನಿ, ಕೃಷ್ಣಾಕಾಂತೆರ್ ಉಯಿಲ್, ರಾಜಸಿಂಹ, ಆನಂದಮಠ, ದೇವಿ ಚೌಧುರಾನ, ಕಮಲಾಕಾಂ, ಸೀತಾರಾಮ್, ಮೂಚಿರಾಮ್ ಗುರೆರ್ ಜೀವನ್ಚರಿತಾ ಮುಂತಾದವು ಬಂಕಿಮ ಚಂದ್ರರ ಕಾದಂಬರಿಗಳು.
ಬಂಕಿಮ ಚಂದ್ರ ಧಾರ್ಮಿಕ ವ್ಯಾಖ್ಯಾನಗಳಲ್ಲಿ ಕೃಷ್ಣ ಚರಿತ್ರ, ಧರ್ಮತತ್ವ, ದೇವತತ್ತ್ವ, ಶ್ರೀಮದ್ವಗವತ್ ಗೀತಾ , ಭಗವದ್ ಗೀತಾದ ಮೇಲಿನ ಒಂದು ವ್ಯಾಖ್ಯಾನ ಪ್ರಸಿದ್ಧವೆನಿಸಿವೆ. ಲಲಿತಾ ಓ ಮಾನಸ್ ಅವರ ಕವನಸಂಗ್ರಹ. ಲೋಕ್ ರಹಸ್ಯ, ಬಿಜ್ಞಾನ್ ರಹಸ್ಯ, ಬಿಚಿತ್ರ ಪ್ರಬಂಧ , ಸಮ್ಯಾ ಮುಂತಾದವು ಪ್ರಬಂಧಸಂಗ್ರಹಗಳು. ಬಂಕಿಮ ಚಂದ್ರ ಈ ಎಲ್ಲ ಕೃತಿಗಳೂ ಇಂಗ್ಲಿಷ್ ಭಾಷೆ ಸೇರಿದಂತೆ ಇತರ ಭಾಷೆಗಳಲ್ಲಿ ಮೂಡಿಬಂದಿವೆ.
‘ಆನಂದಮಠ’ ಕಾದಂಬರಿಯಲ್ಲಿ ಬರೆದ ‘ಓ ತಾಯಿ, ಭಾರತಿಯೇ, ನಿನಗೆ ನಮನ’ ಎಂದು ಸಾರುವ ‘ವಂದೇ ಮಾತರಂ’ ಭಾರತೀಯರಿಗೆ ಪವಿತ್ರಗೀತೆಯಂತಿದೆ. ಈ ಗೀತೆಗೆ ಸಂಗೀತ ಸಂಯೋಜಿಸಿದವರು ನಮಗೆ ರಾಷ್ಟ್ರಗೀತೆ ನೀಡಿರುವ ಕವಿ ರವೀಂದ್ರನಾಥ್ ಠಾಗೂರರು.
ವಂದೇಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶಾಮಲಾಂ ಮಾತರಾಂ
ವಂದೇಮಾತರಂ
ಶುಬ್ರಜ್ಯೋತ್ಸ್ನಾ ಪುಲಕಿತ ಯಾಮೀನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ !!
ಕೋಟಿ ಕೋಟಿ ಕಂಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭಜೈಧರ್ತಖರ ಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ ಬಹುಬಲಧಾರೀಣಿಂ
ನಮಾಮಿ ತಾರಿಣೀಂ ಮಾತರಂ!!
ತುಮಿ ವಿದ್ಯ ತುಮಿ ಧರ್ಮ
ತುಮಿ ಹ್ರದಿ ತುಮಿ ಮರ್ಮ ತ್ವಂ ಹಿ ಪ್ರಾಣಾ:
ಶರೀರೇ, ಬಾಹುತೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ ಮಂದಿರೇ ಮಂದಿರೇ!!
ತ್ವಂ ಹಿ ದುರ್ಗಾ ದಶಪ್ರಹರಣ ಧಾರೀಣೀಂ
ಕಮಲಾ ಕಮಮಲದಲ ವಿಹಾರಿಣೀ ವಾಣೀವಿದ್ಯಾಯಿನಿ
ನಮಾಮಿ ತ್ಯಾಂ ನಮಾಮಿ ಕಮಲಾಂ ಅಮಲಾಂ
ಆತುಲಾಂ ಸುಜಲಾಂ ಸುಫಲಾಂ ಮಾತರಂ!!
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಮಾತರಂ
ವ೦ದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶಾಮಲಾಂ ಮಾತರಾಂ
ಬಂಕಿಮ ಚಂದ್ರರು ಈ ಲೋಕದಿಂದ ಅಗಲಿದ ದಿನ ಏಪ್ರಿಲ್ 8, 1894. ಭಾರತಮಾತೆಯ ಈ ಸುಪುತ್ರ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಎಂಬ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.
–ರಘುನಾಥ್ ಕುಲಗಟ್ಟೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.
2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.
3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.
7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.
9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್ಗಳ ಸಮತೋಲನಕ್ಕೆ ಬಹಳ ಮುಖ್ಯ.
10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.
ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರ ಪುರಷ್ಕೃತ ಕೃಷಿಯೋನ್ನತಿ ಯೋಜನೆಯಡಿ ‘’ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು’’ (National Mission on Edible Oil – Oilseeds (NMEO-OS) ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಎಣ್ಣೆಕಾಳು ಬೆಳೆಗಾರರು ಮತ್ತು ಮೌಲ್ಯ ಸರಪಳಿ ಪಾಲುದಾರರನ್ನು (Value Chain Partners) ಸಂಸ್ಕರಣಾದಾರರೊಂದಿಗೆ ಸಂಪರ್ಕಿಸಲು ಮತ್ತು ಅವರಿಗೆ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಉತ್ತಮ ಲಾಭವನ್ನು ಪಡೆಯುವಂತೆ ಖಾತ್ರಿಪಡಿಸುವುದು ಯೋಜನೆಯ ಗುರಿಗಳಲ್ಲಿ ಒಂದಾಗಿದೆ.
ಸದರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಶುದ್ಧ ಖಾದ್ಯ ತೈಲ ಉಪಯೋಗಿಸಲು ಅನುಕೂಲವಾಗುವಂತೆ ಪ್ರೇರೇಪಿಸಲು ಸೂಕ್ತವಾಗುವಂತೆ ಹಾಗೂ ಮೌಲ್ಯ ಸರಪಳಿಯನ್ನು ಉತ್ತೇಜಿಸಲು, ಸಂಸ್ಕರಣಾ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಪಡೆಯಲು/ಪ್ರಾಥಮಿಕ ಮತ್ತು ದ್ವಿತೀಯ ಎಣ್ಣೆಕಾಳು ಕೊಯ್ಲೋತ್ತರ ಮೂಲ ಸೌಕರ್ಯ ಸೌಲಭ್ಯ ಪಡೆಯಲು ಗರಿಷ್ಠ ಯೋಜನಾ ವರದಿಯ ಶೇ.33 ರಷ್ಟು ಅಥವಾ ರೂ.9.99 ಲಕ್ಷಕ್ಕೆ ಮೀರದಂತೆ ಅನುದಾನವನ್ನು ನೀಡಲಾಗುವುದು. ಸದರಿ ಯೋಜನೆಯ ಘಟಕದಡಿ ಕಟ್ಟಡ ವೆಚ್ಚ ಮತ್ತು ಭೂಮಿ ಬಾಡಿಗೆಯನ್ನು ಪರಿಗಣಿಸಲಾಗುವುದಿಲ್ಲ.
ಸದರಿ ಯೋಜನೆಯಡಿ ಸೌಲಭ್ಯ ಪಡೆಯಲು ಸರ್ಕಾರ / ಸರ್ಕಾರೇತರ ಸಂಸ್ಥೆಗಳು, FPOs ಗಳು ಜುಲೈ 04 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಫಲಾನುಭವಿ ಆಯ್ಕೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ5 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ5 days agoಕವಿತೆ | ದೇವರ ಹೂವು
-
ದಿನದ ಸುದ್ದಿ7 days agoಗರಿಕೆ ಹುಲ್ಲಿನ ಜ್ಯೂಸ್ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
-
ದಿನದ ಸುದ್ದಿ3 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ3 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

