ದಿನದ ಸುದ್ದಿ

ಎನ್‌ಎಸ್‌ಎಸ್‌ನಿಂದ ರಾಷ್ಟ್ರೀಯ ಭಾವೈಕ್ಯತೆ ಕಲಿಕೆ ಸಾಧ್ಯ : ಡಾ.ಅಶೋಕ ವೀ.ಪಾಳೇದ

Published

on

ಸುದ್ದಿದಿನ,ಹರಿಹರ:ರಾಷ್ಟ್ರೀಯ ಸೇವಾ ಯೋಜನೆಯು ದೇಶೀಯ ಭಾವೈಕ್ಯತೆ, ಏಕತೆ, ಸಮಗ್ರತೆ ಕಲಿಸುವುದರೊಂದಿಗೆ, ಶ್ರಮದಾನದ ಉದ್ದೇಶದಿಂದಲೂ ಕಾರ್ಯನಿರ್ವಹಿಸುತ್ತಿದೆ. ಯುವಜನತೆ ಸೇವಾ ಮನೋಭಾವದ ಜೊತೆ ಕೌಶಲ್ಯಯು ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ವೀ.ಪಾಳೇದ ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-1 ಮತ್ತು 2 ರ ವತಿಯಿಂದ ಸಮೀಪದ ಸಲಗನಹಳ್ಳಿ ಗ್ರಾಮದಲ್ಲಿ 7 ದಿನಗಳ ಕಾಲ ಆಯೋಜಿಸಿರುವ ‘ವಿಕಸಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ’ ಎಂಬ ಧ್ಯೇಯದ ವಾರ್ಷಿಕ ಶಿಬಿರವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ನಾಯತ್ವದ ಗುಣ ಕಲಿಸುತ್ತದೆ. ಯುವಜನತೆಯಲ್ಲಿ ಅಡಗಿರುವ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್‌ನ ಪ್ರತಿಯೊಂದು ಕಾರ್ಯದಲ್ಲಿ ತೊಡಗೊಕೊಳ್ಳುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಮಾತನಾಡಿ, ದೇಶದ ಅಭಿವೃದ್ಧಿಗೆ ಗ್ರಾಮಗಳ ವಿಕಾಸ ಬಹು ಮುಖ್ಯ ಈ ಹಿನ್ನೆಲೆಯಲ್ಲಿ ಇಂತಹ ಶಿಬಿರಗಳ ಆಯೋಜನೆ, ಯುವಜನತೆಯಲ್ಲಿ ಗ್ರಾಮೀಣ ಅಭಿವೃದ್ಧಿಯ ಪರಿಕಲ್ಪನೆ, ಇಲ್ಲಿನ ಸಮಸ್ಯೆಗಳನ್ನು ಅರಿತು ಪರಿಹಾರದ ಅರಿವು ಮೂಡಿಸಲು ಸಹಕಾರಿಯಾಗುತ್ತವೆ. ನಮ್ಮ ಹಳ್ಳಿಯ ಜನತೆ, ಅವರ ಜೀವನಕ್ರಮ, ಆಚಾರ-ವಿಚಾರಗಳ ಕುರಿತು ಯುವಜನತೆ ಜಾಗೃತರಾಗಬೇಕು. ಆ ಮೂಲಕ ದೇಶದ ಉನ್ನತಿಗೆ ತಮ್ಮ ಯೋಗದಾನ ನೀಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್ ಹೆಚ್.ಪಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ಅರಿತು, ಅದಕ್ಕೆ ಅಗತ್ಯ ಇರುವ ಪರಿಹಾರಗಳನ್ನು ತಿಳಿಯುವುದು ಇಂದಿನ ಯುವಶಕ್ತಿಗೆ ಅಗತ್ಯವಾಗಿದೆ. ಗ್ರಾಮೀಣರ ಸಹಬಾಳ್ವೆ ಮತ್ತು ಸರಳ ಬದುಕು ನಮ್ಮ ಶಿಭಿರಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿ, 7 ದಿನದ ಶಿಬಿರ ಸುಸೂತ್ರವಾಗಿ ನಡೆಯಲ್ಲಿ ಎಂದು ಹಾರೈಸಿದರು.

ಕೆ.ಬೇವಿನಹಳ್ಳಿ ಗ್ರಾ.ಪಂನ ಅಧ್ಯಕ್ಷರಾದ ಶ್ರೀಮತಿ ಯಶೋಧ ಉಮಾಮಹೇಶ್ವರಪ್ಪ, ಸಲಗನಹಳ್ಳಿಯ ಗ್ರಾಪಂ ಸದಸ್ಯರುಗಳಾದ ವಿಜಯ.ಕೆ.ಡಿ, ನಾಗೇನಹಳ್ಳಿ ಗಂಗಮ್ಮ ಲೋಕಪ್ಪ, ಕೆ.ಜಯಪ್ಪ, ಡಿ.ರಾಜಪ್ಪ ಹಾಗೂ ಇನ್ನಿತರ ಗ್ರಾಮದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಎನ್‌ಎಸ್‌ಎಸ್ ಘಟಕ-2ರ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ, ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಕೆ.ಮಂಜುನಾಥ್, ಗಣಿತ ವಿಭಾಗದ ಮುಖ್ಯಸ್ಥರಾದ ಡಾ.ಯೋಗೀಶ್.ಕೆ.ಎಂ, ಐ.ಕ್ಯೂ.ಎಸ್.ಸಿ ಸಹಸಂಯೋಜಕರಾದ ಅಬ್ದುಲ್ ಬಷೀರ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಎಂ.ಕುಮಾರ್, ಪರಿಸರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಎಸ್, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು ಕೆ.ಎ ಅವರುಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿದ್ಯಾರ್ಥಿನಿ ಕು.ಅರ್ಪಿತಾ.ಎನ್.ಹೆಚ್ ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ.ಗಂಗರಾಜು.ಎಸ್ ಸ್ವಾಗತಿಸಿದರು. ಉಪನ್ಯಾಕರಾದ ಡಾ.ತೇಜಸ್ವಿನಿ.ಜೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕರಾದ ರಾಜಪ್ಪ.ಎ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version