/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಕೊಡಗಿನಲ್ಲಿ ವರುಣನ ಅರ್ಭಟ ಕ್ಕೆ ಜಲಾವೃತಗೊಂಡ ಭಾಗಮಂಡಲ..!

Published

on

ಸುದ್ದಿದಿನ ಡೆಸ್ಕ್ : ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲೆಯ ಜನ ತತ್ತರಿಸಿದ್ದಾರೆ. ಎಡೆಬಿಡದೆ ಮಳೆ ಸುರಿಯುತ್ತಿರೋದ್ರಿಂದ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳ ಸೇತುವೆ, ರಸ್ತೆಗಳು ಸೇರಿದಂತೆ ದಕ್ಷಿಣ ಕಾಶಿ ಖ್ಯಾತಿಯ ತಲಕಾವೇರಿ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಜಲಾವೃತವಾಗಿದೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗೂ ನೀರು ಬಂದಿದ್ದು, ಮಡಿಕೇರಿ-ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯರು ಹಾಗೂ ಯಾತ್ರಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಹನಿ ತುಂಡಾಗದಂತೆ ಎಡೆಬಿಡದೆ ಧೋ ಎಂದು ಸುರಿಯುತ್ತಿರೋ ಮಳೆ. ಉಕ್ಕಿ ಹರಿಯುತ್ತಿರುವ ಜಲಧಾರೆಗಳು. ನೀರಿನಿಂದ ಆವೃತವಾಗಿರುವ ರಸ್ತೆ-ಸೇತುವೆಗಳು. ಜಲಾವೃತಗೊಂಡು ದ್ವೀಪದಂತಾಗಿರುವ ಗ್ರಾಮಗಳು. ಮುಳುಗಡೆಯಾಗಿರುವ ರಸ್ತೆಯಲ್ಲಿ ಸಾಗಲು ಜನರ ಪರದಾಟ. ಅಲ್ಲಲ್ಲಿ ಧರೆಗುರುಳಿರೋ ಬೃಹದಾಕಾರದ ಮರಗಳು.ಕುಸಿದಿರುವ ರಸ್ತೆಗಳು. ತೀರ್ಥ ಕ್ಷೇತ್ರದ ಭೇಟಿ ಬಂದು ಸಂಕಷ್ಟದಲ್ಲಿ ಸಿಲುಕಿರೋ ಯಾತ್ರಾರ್ಥಿಗಳು.ಭರದಿಂದ ನಡೆಯುತ್ತಿರೋ ರಕ್ಷಣಾ ಕಾರ್ಯಾಚರಣೆ. ಕಣ್ಣೆತ್ತಿ ನೋಡಿದಷ್ಟೂ ದೂರ ನೀರೋ ನೀರು. ಇಂತಹ ದೃಷ್ಯಕ್ಕೆ ಸಾಕ್ಷಿಯಾಗ್ತಿರೋದು ಕೊಡಗು ಜಿಲ್ಲೆ. ಕೊಡಗಿನಲ್ಲಿ ಕಳೆದ 1 ವಾರದಿಂದ ಎಡೆಬಿಡದೆ ಸುರಿಯುತ್ತಿರೋ ಮಳೆಯಿಂದ ಇಡೀ ಜಿಲ್ಲೆ ತತ್ತರಿಸಿದೆ. ಮುಂಗಾರಿನ ಅಬ್ಬರ ಹಲವು ಅನಾಹುತಗಳನ್ನೇ ಸೃಷ್ಟಿಸಿದೆ. ರಸ್ತೆಗಳು ಬಂದ್ ಆಗಿವೆ. ಹಲವು ಗ್ರಾಮಗಳು ಜಲಾವೃತಗೊಂಡು, ಕರೆಂಟ್ ಇಲ್ಲದೆ ಕತ್ತಲಲ್ಲಿ ಮುಳುಗಿವೆ. ಅದ್ರಲ್ಲೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ, ಕನ್ನಿಕೆ, ಸುಜೋತಿ ನಡಿಗಳು ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ ಭಗಂಡೇಶ್ವರ ದೇವಾಲಯದ ಪ್ರದೇಶ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಮಡಿಕೇರಿ-ಭಾಗಮಂಡಲ-ತಲಕಾವೇರಿ ಹಾಗೂ ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆಯಾದ ಪರಿಣಾಮ ಕಾವೇರಿ , ಕನ್ನಿಕೆ ಹಾಗೂ ಸುಜೋತಿ ನದಿಗಳು ಉಕ್ಕಿ ಹರಿಯುತ್ತಿವೆ. 3 ನದಿಗಳು ಸಂಗಮವಾಗುವ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಾಣ ಪ್ರಸಿದ್ಧ ಭಾಗಮಂಡಲ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗೂ ನೀರು ನುಗ್ಗಿದೆ. ರಸ್ತೆಯ ಮೇಲೆ ನಾಲ್ಕೈದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿರೋದ್ರಿಂದ ತಲಕಾವೇರಿ ಭಾಗದ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಇನ್ನು ಭಾಗಮಂಡಲ-ತಲಕಾವೇರಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಯಾತ್ರಾರ್ಥಿಗಳು ಸೇರಿದಂತೆ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತ ಮೋಟಾರ್ ಬೋಟ್ ಹಾಗೂ ರ‍್ಯಾಫ್ಟಿಂಗ್ ಬೋಟ್ ಗಳ ಮೂಲಕ ಯಾತ್ರಾರ್ಥಿಗಳು ಹಾಗೂ ಸ್ಥಳೀಯರನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಕರೆದೊಯ್ದು ಕರೆತರುವ ಕಾರ್ಯದಲ್ಲಿ ನಿರತವಾಗಿದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಬೀಡು ಬಿಟ್ಟು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಪರಿಣಾಮ ಇಲ್ಲಿಗೆ ಭೇಟಿ ನೀಡೋ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಜಲಾವೃತವಾಗುವ ತ್ರಿವೇಣಿ ಸಂಗಮದ ಬಳಿ ಬಹುಕೋಟಿಯ ಮೇಲ್ಸೇತುವೆ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬರದಿರೋದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ.

ಕೇವಲ ಭಾಗಮಂಡಲ ಮಾತ್ರವಲ್ಲದೆ ಜಿಲ್ಲೆಯ ಇತರೆಡೆಯ ತಗ್ಗು ಪ್ರದೇಶ ಹಾಗೂ ನದಿ ತಟದಲ್ಲಿರೋ ಗ್ರಾಮಗಳೂ ನೀರಿನಿಂದ ಮುಳುಗುತ್ತಿವೆ. ಕಳೆದ ರಾತ್ರಿ ಮಡಿಕೇರಿಯಲ್ಲಿ ಸುರಿದ ಭಾರೀ ಮಳೆಗೆ ಕಾರಿನ ಮೇಲೆ ಮಣ್ಣು ಕುಸಿದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇನ್ನೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾಕುಟ್ಟ ರಸ್ತೆಯ ಮೇಲೆ ನೆನ್ನೆ ಮರ ಸಹಿತ ಗುಡ್ಡಗಳು ಕುಸಿದ ಪರಿಣಾಮ ಓರ್ವನ ಬಲಿಯಾಗಿದ್ದು, ಈ ಮಾರ್ಗದಲ್ಲಿ ರಸ್ತೆ ಸಂಚಾರವನ್ನು ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ದೆ ವಿರಾಜಪೇಟೆ-ಹುಣಸೂರು-ಮೈಸೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ವಿರಾಜಪೇಟೆ ತಾಲೂಕಿನ ತಿತಿಮತಿ ಎಂಬಲ್ಲಿ ಸೇತುವೆ ಕುಸಿತು ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಒಟ್ನಲ್ಲಿ ಮುಂಗಾರಿನ ಅಬ್ಬರ ಕೊಡಗಿನಲ್ಲಿ ಹಲವು ಅನಾಹುತಗಳನ್ನು ಸೃಷ್ಠಿಸೋ ಮೂಲಕ ಜಿಲ್ಲೆಯ ಜನತೆಯನ್ನು ಹೈರಾಣಾಗಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version