ಅಂತರಂಗ
ಧರ್ಮಾಂಧತೆಯ ಕಾಲಾಳುಗಳಿಗೆ ತಿಳಿಸಿಕೊಡಬೇಕಿದೆ
ಇಸ್ಲಾಮೋಫೋಭಿಯಾದಿಂದ ನರಳುತ್ತಿರುವ, ಅಯ್ಯಪ್ಪ ಸಾಬರ ಸಂಖ್ಯೆ ಜಾಸ್ತಿ ಆಯ್ತು ಅಂತ ಕನಸಲ್ಲೂ ಬಡಬಡಿಸುವವರಲ್ಲಿ ಯಾವ ವರ್ಗದ, ಯಾವ ಜಾತಿಯ ಜನರು ಹೆಚ್ಚು ಎಂಬುದರ ಬಗ್ಗೆ ಚರ್ಚೆ ಆಗಬೇಕು.ನನಗೆ ತಿಳಿದಿರುವ ಮಟ್ಟಿಗೆ ಕೆಳವರ್ಗದವರು ಸಾಬರೊಂದಿಗೆ ತೀರಾ ಸಹಜವಾಗಿ ಸ್ನೇಹ ಸಂಬಂಧ, ವ್ಯಾಪಾರ ವಹಿವಾಟು ಇಟ್ಟುಕೊಂಡಿರುತ್ತಾರೆ.
ನಮ್ಮ ಹಳ್ಳಿಗಳಲ್ಲಿ ದಲಿತರು, ಕುರುಬರು, ಲಿಂಗಾಯತರಂತೆ ಸಾಬರು ಕೂಡ ಒಂದು ಜಾತಿ ಎಂದೇ ಪರಿಗಣಿಸಲಾಗುತ್ತಿತ್ತು. ಅಲ್ಲಿ ಯಾವುದೇ ವಿಶೇಷ ಆತಂಕ, ಆಸ್ಥೆ ಇರಲಿಲ್ಲ ಈಗಲೂ ಇಲ್ಲ ಕೂಡ. ಏಕಾಏಕಿ ಈ ಭಯ, ನಾವು ಬೇರೆ ಅವರು ಬೇರೆ ಅನ್ನೋದನ್ನು ತುಂಬಿದ್ದು ಯಾರು ಮತ್ತು ಹೇಗೆ ಎಂಬುದನ್ನ ಧರ್ಮಾಂದತೆಯ ಕಾಲಾಳುಗಳಿಗೆ ತಿಳಿಸಿಕೊಡಬೇಕಿದೆ. ಇದು ಕೇವಲ ಧರ್ಮದ ವಿಷಯವಲ್ಲ, ಇದರೊಟ್ಟಿಗೆ ಜಾತಿ ವ್ಯವಸ್ಥೆಯ ಸಿಕ್ಕುಗಳಿವೆ. ಮೈಮನಸ್ಸಿನ ತುಂಬಾ ಮುಸ್ಲಿಮರ ಬಗೆಗಿನ ದ್ವೇಷ ಅಸೂಹೆಯನ್ನು ತುಂಬಿಕೊಂಡು, ನಾವು ಜಾತ್ಯಾತಿತರು, ನಾವು ಜಾತಿ ವ್ಯವಸ್ಥೆಯ ಭಾಗವಲ್ಲ, ನಾವೆಲ್ಲ ಹಿಂದೂ ನಾವೆಲ್ಲ ಮುಂದು (ಬರೀ ಹಿಂದೂಗಳು ಮಾತ್ರ ಸಾಬರಿಗೆ ನೋ ಎಂಟ್ರಿ) ಅನ್ನೋದು ಅಪ್ಪಟ ಬೂಟಾಟಿಕೆ.
ಉತ್ತರ ಕರ್ನಾಟಕದವಳಾದ ನನಗೆ ಈ ಮುಸ್ಲಿಂ ದ್ವೇಷ ತೀರಾ ಅಸಹ್ಯ ಮತ್ತೆ ಆಶ್ಚರ್ಯವನ್ನು ಉಂಟು ಮಾಡುತ್ತೆ. ನಮ್ಮ ನೆಲದಲ್ಲಿ ನಾವೆಲ್ಲರೂ ರೊಟ್ಟಿ,ಬದನೇಕಾಯಿ ಪಲ್ಯದಷ್ಟೇ ಸಹಜವಾಗಿ ಇದ್ದೇವೆ. ನಿಜ ಹೇಳಬೇಕೆಂದರೆ ನಮ್ಮೂರಲ್ಲಿ ಮಾಂಸ ತಿನ್ನುವ ಲಿಂಗಾಯತರ ಮರ್ಯಾದಿ ಉಳಿಸೋದು ಸಾಬರು, ಸಾಬರ ಹೋಳಿಗೆ ಕಡುಬಿನ ಬಯಕೆ ತೀರಿಸೋದು ಹಿಂದೂ ತಾಯಂದಿರು. ಪ್ರತಿ ರಮ್ಜಾನಿನ ಶೀರ್ ಕುರ್ಮಾಕ್ಕೆ, ಇಫ್ತಾರ್ ಆಮಂತ್ರಣಕ್ಕೆ ಕಾಯೋದು, ದೀಪಾವಳಿ ಹಬ್ಬಕ್ಕೆ ಮುಸ್ಲಿಂ ಸ್ನೇಹಿತರನ್ನು ಕರೆಯೋದು.
( ಈ ಸರ್ತಿ ದೀಪಾವಳಿ ಆರತಿಗೆ ಪಕ್ಕದ ಮನೆ ಮುಸ್ಲಿಂ ಹುಡುಗಿ ಇರಲಿಲ್ಲ ಅಂತ ಅಮ್ಮಾ ಎಷ್ಟು ನೊಂದುಕೊಂಡಿದ್ದಳು), ಊಟಕ್ಕೆ ಬಂದ ತಮ್ಮನ ಸ್ನೇಹಿತರಿಗೆ ನಮ್ಮಮ್ಮ “ಹುಚ್ಚ ತಿನ್ನೋದನ್ನ ಲೆಕ್ಕ ಹಾಕಬಾರದು” ಅನ್ನುತ್ತಲೇ ಮತ್ತೆರಡು ಕಡುಬು ಬಡಿಸೋದು ನನ್ನ ಊರಿನ ಬದುಕು ಮತ್ತೆ ನೆನಪುಗಳ ಅವಿಭಾಜ್ಯ ಅಂಗ. ಅಂತಹ ನೆಲದಲ್ಲಿ ಈಗೊಂದು ಐದಾರು ವರ್ಷಗಳಿಂದ ಹಸಿರು, ಕೇಸರಿ ಬಾವುಟಗಳ ನೆಪಕ್ಕೆ ಹೊಡೆದಾಟಗಳಾಗುತ್ತೆ. ಬಾಳಿ ಬದುಕಬೇಕಾದ ಅಣ್ಣ ತಮ್ಮಂದಿರು ಹಾದಿ ಹೆಣಗಳಾಗ್ತಿದ್ದಾರೆ. ಇದೆಲ್ಲಾ ಯಾವ ಹುನ್ನಾರ, ಯಾರ ಹುನ್ನಾರ ? ಯಾರ ಲಾಭಕ್ಕೆ ನಮ್ಮ ಮಕ್ಕಳನ್ನು ಬಲಿಕೊಡಬೇಕು ನಾವುಗಳು ? ಎಲ್ಲಾ ಶೂದ್ರಾತಿ ಶೂದ್ರ ಹಿಂದು ಹುಲಿಗಳ ಕಿವಿ ಎಳೆದು ಈ ಪಾಟ ಕಲಿಸೋರು.
–ಮೇಘ ಎಲಿಗಾರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243