ಲೋಕಾರೂಢಿ

ಸ್ವತಂತ್ರೋತ್ಸವದ ಈ‌ ಸಂದರ್ಭದಲ್ಲಿ..!

Published

on

ಬ್ರಿಟಿಷರು ವ್ಯಾಪರದ ನೆಪದಲ್ಲಿ ಭಾರತಕ್ಕೆ ಬಂದು ನಮ್ಮನೆಲ್ಲ ತಮ್ಮ ಕರಾಳ ಕಪಿಮುಷ್ಟಿಯಲ್ಲಿಟ್ಟುಕೊಂಡು ಸುಮಾರು ಎರಡುವರೆ ಶತಮಾನಗಳ ಕಾಲ ನಮ್ಮನ್ನು ಆಳಿದ್ದೇ ಒಂದು ಅಳಿಸಲಾಗದ ಇತಿಹಾಸ.

ಭಾರತದ ಪವಿತ್ರ ಮಣ್ಣಿನಲ್ಲಿ ಉದಹಿಸಿದ ಕಲಿಗಳ ತ್ಯಾಗ, ಬಲಿದಾನ ಹಾಗೂ ಅವಿರತ ಹೋರಾಟಗಳ ಫಲವಾಗಿ 1947ರ ಆಗಸ್ಟ್ 15 ರಂದು ಮಧ್ಯರಾತ್ರಿಯಲ್ಲಿ ಬ್ರಿಟಿಷರು ಭಾರತದಿಂದ ಪಲಾಯನ ಕೈಗೊಂಡರು. ಆ ದಿನವನ್ನೇ ನಾವು ಸ್ವಾತಂತ್ರೋತ್ಸವವೆಂದು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಇಂದು ಈ ಆಚರಣೆ ಹಾಗೂ ದೇಶಭಕ್ತಿ ಕೇವಲ ಒಂದು ದಿನದ ಮಟ್ಟಿಗೆ ಮಾತ್ರ ಎಂಬುದು ಕೆಲ ವಿಪರ್ಯಾಸಗಳಿಂದ ಸಾಬೀತಾಗುತ್ತದೆ.

ಪ್ರತಿ ವರ್ಷದಂತೆಯೇ ಈ ವರ್ಷವೂ ಸ್ವತಂತ್ರ್ಯೊತ್ಸವವನ್ನು ವಿಜೃಂಭಣೆಯಿಂದ ಸಂಭ್ರಮಿಸುತ್ತಿದ್ದೇವೆ. ಆದರೆ ಈ 73 ರ ಸ್ವಾತಂತ್ರ್ಯದ ಸಂಭ್ರಮಾಚರಣೆಯನ್ನು ಆಚರಿಸುವುದಕ್ಕು ಮುಂಚೆ ಈ ಬಾರಿ ದೇಶದ ಹಲವು ರಾಜ್ಯಗಳು ವರುಣನ ರೌದ್ರತೆಗೆ ಕೊಚ್ಚಿ ಹೋಗಿವೆ. ಇಲ್ಲಿ ಜನ ತಮ್ಮ ಜೀವನವನ್ನು ಉಳಿಸಿಕೊಳ್ಳಲು ಹೋರಾಡುವಂತಾಗಿದೆ ಎಂಬುದನ್ನು ಕೊಂಚ ಗಮನಿಸಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ.

ಪ್ರಕೃತಿಯ ವಿಕೋಪಕ್ಕೆ ಸಿಲುಕಿ ನಲುಗುತ್ತಿರುವ ಜನಕ್ಕೆ ಈಗ ಬೇಕಾಗಿರುವುದು ಆಶ್ರಯ ಮತ್ತು ಸಹಕಾರ. ಸದ್ಯದ ಸ್ಥಿತಿಯಲ್ಲಿ ಮನೆ ಮಠ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡ ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಂತು ಧೈರ್ಯ ತುಂಬಬೇಕಾದ ಬಹು ದೊಡ್ಡ ಜವಬ್ದಾರಿ ನಮ್ಮ ಮೇಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ನಾಯಕರು ಒಟ್ಟಾಗಿ ದೇಶಕ್ಕೆ ಒದಗಿ ಬಂದ ಸಂಕಷ್ಟವನ್ನು ಪರಿಹರಿಸುವಲ್ಲಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನ ಮಡಬೇಕಾಗಿದೆ. ರಾಜ್ಯಕ್ಕೆ ರಾಜ್ಯವೇ ನೀರಿನಲ್ಲಿ ಕೊಚ್ಚಿಹೋಗುತ್ತಿದೆ. ಮತ್ತೊಂದು ಕಡೆ ಮಳೆಯಲ್ಲಿ ಎಲ್ಲವನ್ನು ಕಳೆದುಕೊಂಡು ನಿರ್ಗತಿಕವಾಗಿರುವ ಕುಟುಂಬಗಳು ತುತ್ತು ಅನ್ನಬೇಡುತ್ತಿವೆ. ಹೀಗಿರುವಾಗ ನಾಯಕರು, ಸಾರ್ವಜನಿಕರು ಅವರ ಪರ ನಿಂತು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

ಪ್ರಚಲಿತ ನಮ್ಮ ಭಾರತದ ಸ್ಥಿತಿ ಹೀಗಿದ್ದರು ಸಹ ಅದೆಷ್ಟೋ ಪ್ರಜೆಗಳು ತಮಗೆ ಇದರ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಶ್ರೀಮಂತ ಭಾರತೀಯ ಪ್ರಜೆಗಳು ತಮ್ಮಲ್ಲಿಯ ಸ್ವಾರ್ಥ, ಅಸೂಹೆ, ದ್ವೇಷ ಇತ್ಯಾದಿಗಳನ್ನೆಲ್ಲ ಪ್ರದರ್ಶಿಸುತ್ತಿದ್ದಾರೆ. ಇನ್ನೂ ರಾಜಕಾರಣಿಗಳು ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ, ದೇಶವನ್ನು ನಿಂದಿಸುತ್ತಾ ವ್ಯರ್ಥ ಕಾಲಹರಣ ಮಾಡುತ್ತಾ, ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪಿಸುತ್ತಾ ಹಗ್ಗಜಗ್ಗಾಟ ಮಾಡುತ್ತಿದ್ದಾರೆ.
ಇದನ್ನೆಲ್ಲಾ ನೋಡುತ್ತಿದ್ದರೆ ಒಮ್ಮೆಲೆ ನೆನಪಾಗುವುದು ಸಿದ್ದಲಿಂಗಯ್ಯ ಬರೆದಂತಹ ಸಾಲುಗಳು, ಅದೆಂದರೆ
“ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ? ಟಾಟ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೊಣೆಗೆ ಬಂತು. ಆದರೆ ಬಡವನ ಮನೆಗೆ ಬರಲಿಲ್ಲ ಬೆಳಕ ತರಲಿಲ್ಲ” ಎಂಬ ಸಾಲುಗಳು ಅಕ್ಷರಶಃ ಸತ್ಯವೆನಿಸುತ್ತಿದೆ.
ನಮಗಂದು ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಬರೀ ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಎಚ್ಚರವಿದ್ದರು. ಉಳಿದವರೆಲ್ಲರೂ ಹಾಯಾಗಿ ಮಲಗಿಕೊಂಡಿದ್ದರು. ಇವಾಗಲೂ ಅಷ್ಟೇ ಅವರು ಮಲಗಿಕೊಂಡೆ ಇದಾರೆ.

ಸತ್ಪ್ರಜೆಗಳಾಗಿ ದೇಶಕಟ್ಟಲು ಶ್ರಮಿಸುವ ಬದಲು ಸತ್ತ ಪ್ರಜೆಗಳಾಗಿ ವಿಶ್ರಮಿಸುತ್ತಿದ್ದಾರೆ. ಅಲ್ಲದೇ ತಮ್ಮ ದೇಶದಲ್ಲಿರುವ ಸಂಪನ್ಮೂಲಗಳನ್ನು ರಕ್ಷಿಸಿಟ್ಟುಕೊಳ್ಳಲು ತಲೆ ಕೆಡಿಸಿಕೊಳ್ಳುವ ಬದಲು, ನಮ್ಮಲ್ಲಿ ಅದಿಲ್ಲ, ಇದಿಲ್ಲ ಎಂದು ದೇಶವನ್ನು ತೆಗಳುತ್ತಾ ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಎಲ್ಲವೂ ಇದೆ. ಆದರೆ ಅದನ್ನು ಬಳಸಿಕೊಳ್ಳುವ ಕಲೆ ನಮಗೆ ಮಾತ್ರ ಗೊತ್ತಾಗದೆ ಹೋಗಿದೆ.

ರಾಮರಾಜ್ಯವಾಗಬೇಕಿದ್ದ ಭಾರತ ಕಾಮರಾಜ್ಯವಾಗಿದೆ. ನಿಷ್ಟನಾಗಬೇಕಿದ್ದ ಭಾರತೀಯ ಭ್ರಷ್ಟನಾಗಿದ್ದಾನೆ. ಜಗತ್ತಿಗೆ ಉಪದೇಶ ನೀಡುತ್ತಾ, ಜಗತ್ತನ್ನು ಸರಿ ದಾರಿಯಲ್ಲಿ ಮುನ್ನಡೆಸಬೇಕಿದ್ದ ಭಾರತೀಯ ತನಗೆ ದಾರಿಕಾಣದೆ ಪರದಾಡುತ್ತಿದ್ದಾನೆ. ತಲೆಯೆತ್ತಿ ಮೆರೆದಾಡಬೇಕಿದ್ದ ಭಾರತೀಯ ತಲೆತಗ್ಗಿಸಿಕೊಂಡು ಕೂಡುವಂಥಹ ಹೀನ ಕೃತ್ಯಗಳಿಗೆ ಕೈಹಾಕುತ್ತಿದ್ದಾನೆ. ‘ನಾನೇಕೆ ಹೀಗಾದೆ?’ ಎಂಬುದನ್ನು ಸ್ವತಃ ಅವನೇ ತನ್ನನ್ನು ತಾನು ಕೇಳಿಕೊಳ್ಳಬೇಕು.

ಸ್ವಾತಂತ್ರ್ಯ ಸಿಕ್ಕು 72 ವರ್ಷ ಉರುಳಿದರು ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆಯೇ?

ಇವತ್ತು ಸ್ವಾತಂತ್ರ್ಯ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಎಲ್ಲವೂ ಅಭಿವೃದ್ಧಿ ದಿಕ್ಕಿನಡೆಗೆ ಸಾಗಿದೆಯಾ? ಸಾಗಿಲ್ಲವಾದರೆ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆಯೂ ಚಿಂತೆ ಮಾಡಬೇಕಾದ ಕಾಲ ಬಂದಿದೆ. ಯುವಕರಿಗೆ ಉದ್ಯೋಗ.. ಬೆಳೆಬೆಳೆದ ರೈತನಿಗೆ ಉತ್ತಮ ದರ.. ಶ್ರಮಜೀವಿಗಳಿಗೆ ತಕ್ಕಂತೆ ಫಲ.. ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಬೇಕಾದ ವಾತಾವರಣ.. ಅಪರಾಧ ಕೃತ್ಯಗಳಿಗೆ ಕಡಿವಾಣ.. ಭ್ರಷ್ಟಚಾರ ನಿಗ್ರಹ.. ಹೀಗೆ ಒಂದೇ ಎರಡೇ ಆಗಬೇಕಾಗಿದ್ದು ಬಹಳಷ್ಟಿದೆ. ಇದೆಲ್ಲವೂ ಸರಿಹೋದ ದಿನ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ. ಇಲ್ಲದೆ ಹೋದರೆ ಆಚರಣೆಗಷ್ಟೆ ಸೀಮಿತವಾಗುವುದು. ಹಾಗಾಗದಿರಲಿ ಎಂಬುದೇ ನಮ್ಮ ಆಶಯ.

ಯಂಗ್ ಇಂಡಿಯಾದಲ್ಲಿ ಶಕ್ತಿ ವ್ಯರ್ಥ ಮಾಡುತ್ತಿರುವ ನಮ್ಮ ಯುವಜನತೆಗೆ ಏನಾಗಿದೆ..?

ಭಗತ್‍ಸಿಂಗ್, ಸುಖದೇವ್, ರಾಜಗುರ್, ಸುಭಾಶ್‍ಚಂದ್ರ ಭೋಸ್, ಚಂದ್ರಶೇಕರ್ ಅಜಾದ್ ಸೇರಿದಂತೆ ಅನೇಕರು ನಮ್ಮ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಅಂದಿನ ಯುವ ಜನಾಂಗದ ತ್ಯಾಗ ಮಹನೀಯ. ಆದರಿಂದು ‘ಯಂಗ್ ಇಂಡಿಯಾ’ ಎಂದೇ ಖ್ಯಾತಿ ಪಡೆದ ನಮ್ಮ ದೇಶದೊಳಗಿರುವ ಯುವ ಜನರು ಭೋಗ ಜೀವನ ಅನುಭವಿಸುವ ಸಲುವಾಗಿ ಕೆಲವರು ಹತಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರತಿಭಾವಂತರು ಐ.ಟಿ, ಬಿ.ಟಿಗಳ ಸಂಸ್ಕøತಿಯ ಗುಂಗಿನಲ್ಲಿ ಮುಳುಗಿ ಹಣಗಳಿಸುವ ದಂಧೆಯನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ರಾಷ್ಟ್ರ ವಿರೋಧಿ ಭಯೋತ್ಪಾದನೆ ಮತ್ತು ಇತರ ಸಮಾಜಘಾತಕ ಶಕ್ತಿಗಳ ಕಪಿಮುಷ್ಠಿಯಲ್ಲಿ ಬಂಧಿತರಾಗಿದ್ದಾರೆ. ಹಲವಾರು ಮಜ, ಮದಿರೆ, ಮಾನನಿಯರ ಮಮಕಾರಗಳಿಗೆ ಒಳಗಾಗಿ ಪ್ರಪತಕ್ಕಿಳಿದಿದ್ದಾರೆ.

ನಮ್ಮ ದೇಶದಲ್ಲಿ ನಡೆಯುತ್ತಿರುವ ಆತ್ಮಹತ್ಯೆ, ಲೈಂಗಿಕ ದೌರ್ಜನ್ಯ, ಭ್ರಷ್ಟಚಾರ, ಜಾತೀಯತೆ, ಕೋಮುವಾದಿತನ, ಉಗ್ರವಾದಿತನ, ಕಾರ್ಮಿಕರ ಅರೆಬರೆ ಹೊಟ್ಟೆ ಇವು ಯಾವುವೂ ಯುವ ಜನಾಂಗದ ಎದೆಯ ಬಾಗಿಲನ್ನು ತಟ್ಟಿಲ್ಲ. ಇವೆಲ್ಲವನ್ನು ನೋಡಿದರೆ ಅನಿಸುತ್ತದೆ ಅಂದು ಆ ಮಹನೀಯರು ಇಂತಹ ಯುವ ಪೀಳಿಗೆಗಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಎಲ್ಲಿ ಅಡಗಿದೆ ಈ ಯಂಗ್ ಇಂಡಿಯಾದ ಯೌವ್ವನ? ಏನಯ್ತು ನಮ್ಮ ಶಕ್ತಿ? ನಿಮ್ಮ ಮೌಲ್ಯಗಳು ಏನದವು? ಯುವಕರೇ ಇನ್ನಾದರೂ ಎಚ್ಚೆತ್ತುಕೊಂಡು ಹೊಸ ಚಿಂತನೆ, ಆಲೋಚನೆ ಹಾಗೂ ಅತ್ಮವಿಶ್ವಾಸ ಬೆಳೆಸಿಕೊಳ್ಳಬೇಕಾಗಿದೆ.

ಯಾವುದೋ ಕುಲುಮೆ ಅಥವಾ ಕಾರ್ಖಾನೆಗಳಲ್ಲಿ ನಯಕತ್ವ ತಯಾರಾಗುವುದಿಲ್ಲ, ಇಲ್ಲಿರುವ ಪ್ರತಿಯೊಬ್ಬ ಯುವಕ ಯುವತಿ ಸಹ ನಾಯಕರೇ.. ಆ ನಾಯಕತ್ವ ಗುಣ ನಮ್ಮಹೃದಯಾಂತರಾಳದಿಂದ ಹುಟ್ಟಬೇಕು. ನೊಂದವರಿಗೆ, ಕಷ್ಟದಲ್ಲಿರುವವರಿಗೆ ಅಂತಃಕರಣದಿಂದ ಸಹಾಯ ಮಾಡುವ ತುಡಿತವೇ ನಾಯಕನ ಪ್ರಧಾನ ಗುಣ. ಇದನ್ನು ಬೆಳೆಸಿಕೊಂಡು, ಜೊತೆಗೆ ನಮ್ಮ ವ್ಯಕ್ತಿತ್ವ ವಿಕಾಸ, ಮೌಲ್ಯವನ್ನು ಅರಿತುಕೊಂಡು ಇನ್ನಾದರೂ ನಮ್ಮ ದೇಶಕ್ಕಾಗಿ ಚಿಂತಿಸೋಣ.

ಒಟ್ಟಾರೆಯಾಗಿ ಹೇಳುವುದಾದರೆ ತ್ಯಾಗಿಗಳಿಂದ ಪಡೆದ ಸ್ವಾತಂತ್ರ್ಯವನ್ನು ಹಾಳುಗೆಡಹದೆ ಕಾಪಾಡಿಕೊಳ್ಳಬೇಕು. ಬರಿ ಒಂದು ದಿನದ ಮಟ್ಟಿಗೆ ತೋರಿಕೆಯ ದೇಶಪ್ರೇಮ ಪ್ರದರ್ಶಿಸದೇ ನಿಜವಾದ ದೇಶಪ್ರೇಮಿಗಳಾಗಿ ದೇಶವನ್ನು ರಕ್ಷಿಸಿ, ಪ್ರೀತಿಸಿ. ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸಲು ಪ್ರಾಮಾಣಿಕವಾಗಿ ಶ್ರಮಿಸಿ. “ಹೆತ್ತಮ್ಮನಿಗ ಹೆಗ್ಗಣ ಮುದ್ದು” ಎಂಬಂತೆ ನಮ್ಮ ದೇಶದಲ್ಲಿ ಏನೇ ಕುಂದು ಕೊರತೆಗಳಿದ್ದರೂ ನಮ್ಮ ದೇಶವನ್ನು ಪ್ರೀತಿಸಿರಿ, ಪೂಜಿಸಿರಿ. ಏಕೆಂದರೆ ಭಾರತ ಸೂರ್ಯ- ಚಂದ್ರರಿರುವರೆಗೂ ಚಿನ್ನದ ಗುಬ್ಬಚ್ಚಿ.

ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ, ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version