ಕ್ರೀಡೆ

ಭಾರತ ಕ್ರೀಡಾಪಟುಗಳ ಉತ್ತಮ ಪರಂಪರೆ ಹೊಂದಿದೆ : ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು : ಕ್ರೀಡೆಗಳು ದೈಹಿಕ ದೃಢತೆ ನೀಡುವುದರ ಜೊತೆಗೆ ಮಾನಸಿಕವಾಗಿಯೂ ಸದೃಢಗೊಳ್ಳಲು ಸಹಕಾರಿ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

ಬೆಂಗಳೂರಿನ ಕಂಠೀವ ಒಳಾಂಗಣ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟ 2021ಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ದೇಶ ಕ್ರೀಡಾಪಟುಗಳ ಉತ್ತಮ ಪರಂಪರೆ ಹೊಂದಿದ್ದು ಈಗ ಮತ್ತೆ ಅದೇ ಸ್ಫೂರ್ತಿ ಕಂಡುಬರುತ್ತಿದೆ. ಗ್ರಾಮೀಣ ಕ್ರೀಡೆಗಳಿಗೂ ಆದ್ಯತೆ ನೀಡುವತ್ತ ಸಂಬಂಧಪಟ್ಟವರು ಗಮನಹರಿಸಬೇಕು. ರಾಜ್ಯಗಳೂ ಕೂಡ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಸಂಗತಿ. ಇದು ದೇಶದ ಪ್ರಗತಿಗೆ ಸಹಕಾರಿ ಎಂದು ಅವರು ಹೇಳಿದರು. ಈಗ ಮತ್ತೆ ಭಾರತಕ್ಕೆ ವಿಶ್ವ ಮನ್ನಣೆ ದೊರೆಯುತ್ತಿದೆ ಎಂದು ಉಪರಾಷ್ಟ್ರಪತಿ ಸಂತಸ ವ್ಯಕ್ತಪಡಿಸಿದರು.

ಈ ಮಧ್ಯೆ ವರ್ಚುಯಲ್ ಮಾಧ್ಯಮದ ಮೂಲಕ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬೆಂಗಳೂರು ನಗರವು ದೇಶದ ಯುವಕರ ಗುರುತು ಹಾಗೂ ವೃತ್ತಿಪರರ ಹೆಮ್ಮೆಯಾಗಿದೆ. ಡಿಜಿಟಲ್ ಇಂಡಿಯಾದ ಬೆಂಗಳೂರಿನಲ್ಲಿ ಖೇಲೋ ಇಂಡಿಯಾದ ಕರೆ ಮುಖ್ಯವಾಗಿದೆ. ನವೋದ್ಯಮಗಳ ಜಗತ್ತಿನಲ್ಲಿ ಕ್ರೀಡೆಗಳ ಈ ಸಂಗಮ ಅದ್ಭುತವಾಗಿದೆ ಎಂದು ನುಡಿದಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸಾಂಕ್ರಾಮಿಕದ ನಂತರ ಇಂತಹ ಹೆಮ್ಮೆಯ ದೊಡ್ಡಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಪಾರಂಪರಿಕ ಕ್ರೀಡೆಗಳು ಅದರಲ್ಲೂ ಮಲ್ಲಕಂಬಕ್ಕೆ ಈ ಕ್ರೀಡಾಕೂಟದಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಖೇಲೋ ಇಂಡಿಯಾ ಕ್ರೀಡಾಕೂಟದ ಕನಸು ಕಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಯುವ ಜನತೆಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡಲು ಬಯಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version