ಬಹಿರಂಗ
ಆರ್ಥಿಕ ಸಂಕಟಗಳ ಜತೆ ಈಗ ಬೆಲೆಯೇರಿಕೆಯ ಹೊರೆ
- ನವ-ಉದಾರವಾದಿ ಧೋರಣೆಗಳಿಂದ ಉಂಟಾಗಿರುವ ಕೆಟ್ಟಪರಿಸ್ಥಿತಿ ನೋಟುರದ್ಧತಿ ಮತ್ತು ಕೆಟ್ಟದಾಗಿ ರೂಪಿಸಿ, ಜಾರಿಗೊಳಿಸಿದ ಜಿಎಸ್‌ಟಿಯಿಂದಾಗಿ ಮತ್ತಷ್ಟು ಉಲ್ಬಣಗೊಂಡು ಆರ್ಥಿಕ ಬೆಳವಣಿಗೆ ಕುಸಿಯುವಂತೆ ಮಾಡಿದೆ. ಈಗ ಅದಕ್ಕೆ ಜೀವನಾವಶ್ಯಕ ಸಾಮಗ್ರಿಗಳಲ್ಲಿ ತೀವ್ರ ಹಣದುಬ್ಬರದ ಸಮಸ್ಯೆಯೂ ಸೇರಿಕೊಂಡಿದೆ. ಜನಸಾಮಾನ್ಯರು ಒಂದೆಡೆಯಲ್ಲಿ, ಇಳಿಯುತ್ತಿರುವ ಕೂಲಿ-ಸಂಬಳಗಳು ಮತ್ತು ಏರುತ್ತಿರುವ ನಿರುದ್ಯೋಗ, ಇನ್ನೊಂದೆಡೆಯಲ್ಲಿ ಆಹಾರ ಸಾಮಗ್ರಿಗಳು ಮತ್ತು ಇತರ ಆವಶ್ಯಕ ಸರಕುಗಳ ಬೆಲೆಯೇರಿಕೆಗಳ ಎರಡೆರಡು ಹೊರೆಗಳನ್ನು ಹೊರಬೇಕಾಗಿ ಬಂದಿದೆ. ಮೋದಿ ಸರಕಾರದ ಹಾನಿಕಾರಕ ಧೋರಣೆಗಳಿಗೆ ಜನಗಳ ಪ್ರತಿರೋಧವನ್ನು ಕಟ್ಟಿ ಬೆಳೆಸುವುದು ಮತ್ತು ವರ್ಗ ಹಾಗೂ ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವುದಲ್ಲದೆ ಈಗ ಬೇರೆ ಯಾವ ಮಾರ್ಗವೂ ಇಲ್ಲವಾಗಿದೆ.
-ಪ್ರಕಾಶ ಕಾರಟ್
ಭಾರತೀಯ ಅರ್ಥವ್ಯವಸ್ಥೆ ಭೀಷಣ ಇಕ್ಕಟ್ಟಿನಲ್ಲಿ ಸಿಲುಕಿದೆ. ಸರಕಾರ 2019-20ರಲ್ಲಿ ಜಿಡಿಪಿ ಬೆಳವಣಿಗೆ ದರ 5% ಇರಬಹುದು ಎಂದು ಲೆಕ್ಕ ಹಾಕಿ ಹೇಳಿದೆ. ಇದು ಜುಲೈ 2019ರಲ್ಲಿ ಮಂಡಿಸಿದ ಬಜೆಟಿನಲ್ಲಿ ಅಂದಾಜು ಮಾಡಿದ್ದ ದರಕ್ಕಿಂತ ಪೂರ್ಣ 2%ದಷ್ಟು ಕಡಿಮೆ. ಬಹುಶಃ ವಾಸ್ತವ ಜಿಡಿಪಿ ದರ ಇನ್ನೂ ಕೆಟ್ಟದಾಗಿರಬಹುದು, ಏಕೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಬೆಳವಣಿಗೆ ದರ 4.6% ಇರಬಹುದು ಎಂಬ ಅಂದಾಜಿಗೆ ಬಂದಿದೆ. ಆದರೆ ಆರ್ಥಿಕ ರಂಗದಲ್ಲಿನ ಮೋದಿ ಅನಾಹುತದ ಕತೆ ಇಲ್ಲಿಗೇ ಮುಗಿಯುವುದಿಲ್ಲ.
ಇತ್ತೀಚಿನ ಸುದ್ದಿ ಎಂದರೆ ಹಣದುಬ್ಬರ ದರ ಡಿಸೆಂಬರ್ 2019ರಲ್ಲಿ 7.35%ಕ್ಕೆ ಏರಿದೆ. ಇದು ಜುಲೈ 2014ರ ನಂತರದ ಅತಿ ಹೆಚ್ಚಿನ ಹಣದುಬ್ಬರ ದರ. ಬಳಕೆದಾರ ಸೂಚ್ಯಂಕ ಈ ದರದಲ್ಲಿ ಏರಿದ್ದರೆ, ಆಹಾರ ಸಾಮಗ್ರಿಗಳ ಸೂಚ್ಯಂಕ ಇನ್ನೂ ಹೆಚ್ಚು, 14.12% ದಷ್ಟು. ಈರುಳ್ಳಿ, ಆಲೂಗಡ್ಡೆ, ತರಕಾರಿಗಳು ಹಾಗೂ ಬೇಳೆಕಾಳುಗಳ ಬೆಲೆಗಳಲ್ಲಿ ತೀವ್ರ ಏರಿಕೆ ಉಂಟಾಗಿದೆ. ಸಗಟು ಬೆಲೆ ಸೂಚ್ಯಂಕ ಡಿಸೆಂಬರ್‌ನಲ್ಲಿ 2.6%ಕ್ಕೇರಿದೆ.
ಇದು ಕೂಡ ಕಳೆದ ಏಳು ತಿಂಗಳಲ್ಲೇ ಅತಿ ಹೆಚ್ಚಿನ ದರ. ಪೆಟ್ರೋಲ್ ಮತ್ತು ಡಿಸೆಲ್ ದರಗಳು 2019ರ ಇಡೀ ವರ್ಷದಲ್ಲಿ ಸತತವಾಗಿ ಏರುತ್ತ ಬಂದಿವೆ, ಡೀಸೆಲ್ ಬೆಲೆಯಲ್ಲಿ ಲೀಟರಿಗೆ ರೂ.5.10 ಮತ್ತು ಪೆಟ್ರೋಲ್ ಬೆಲೆಗಳಲ್ಲಿ ರೂ.6.30 ಏರಿಕೆಯಾಗಿದೆ. ಇದು ಹಣದುಬ್ಬರವನ್ನು ಹೆಚ್ಚಿಸಿದೆ. ಮಧ್ಯ-ಪ್ರಾಚ್ಯ ಪ್ರದೇಶದಲ್ಲಿ ಇರಾನ್ ಬಗ್ಗೆ ಅಮೆರಿಕಾದ ಆಕ್ರಮಣಕಾರೀ ನಿಲುವಿನಿಂದಾಗಿ ಉಂಟಾಗಿರುವ ಸೆಳೆತಗಳನ್ನು ನೋಡಿದರೆ, ಈ ವಿಷಯದಲ್ಲಿಯೂ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳು ಕಾಣುತ್ತಿಲ್ಲ.
ಭಾರತೀಯ ಅರ್ಥವ್ಯವಸ್ಥೆ ಒಂದು ಸ್ಥಗಿತತೆಯತ್ತ ಜಾರುತ್ತಿದೆಯಷ್ಟೇ ಅಲ್ಲ, ಅದೇ ವೇಳೆಗೆ ಹಣದುಬ್ಬರವನ್ನೂ ಎದುರಿಸುತ್ತಿದೆ ಎಂದು ಹಲವು ಆರ್ಥಿಕ ತಜ್ಞರು ಗಮನಿಸಿದ್ದಾರೆ. ಅಂದರೆ, ಭಾರತದ ಅರ್ಥವ್ಯವಸ್ಥೆ ಈಗ ಸ್ಥಗಿತುಬ್ಬರ(ಸ್ಟಾಗ್‌ಫ್ಲೇಶನ್)ವನ್ನು ಅನುಭವಿಸುತ್ತಿದೆ- ಬೆಲೆಗಳು ಏರುತ್ತಿವೆ ಮತ್ತು ಉತ್ಪಾದನೆಯ ಬೆಳವಣಿಗೆ ನಿಧಾನಗೊಳ್ಳುತ್ತಿದೆ.
ಹಣಕಾಸು ಮಂತ್ರಿಗಳು ಜುಲೈ 2019ರಲ್ಲಿ ಮಂಡಿಸಿದ ಬಜೆಟ್ ಚಿಂದಿಯಾಗಿ ಬಿಟ್ಟಿದೆ. ಅದರಲ್ಲಿ ಪ್ರಸ್ತುತ ಪಡಿಸಿದ ಅಂಕೆ-ಸಂಖ್ಯೆಗಳೆಲ್ಲವೂ ಸಂಪೂರ್ಣವಾಗಿ ಏರುಪೇರಾಗಿವೆ- ಅಲ್ಲಿ ಹೇಳಿರುವ ಮೊತ್ತಕ್ಕೂ ಈಗ ಕಾಣುತ್ತಿರುವ ಮೊತ್ತಕ್ಕೂ ಅಪಾರ ಅಂತರ ಉಂಟಾಗಿದೆ. ಸರಕಾರ, ಅರ್ಥವ್ಯವಸ್ಥೆ ನಿಧಾನಗೊಳ್ಳುತ್ತಿದೆ ಎಂದು ಅಧಿಕೃತವಾಗಿ ಒಪ್ಪಿಕೊಳ್ಳದಿದ್ದರೂ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲಿಕ್ಕೆಂದು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳುತ್ತಿದೆ.
ಆದರೆ ಅವೆಲ್ಲವೂ ಭಾರತೀಯ ದೊಡ್ಡ ಬಂಡವಳಿಗರು ಮತ್ತು ವಿದೇಶಿ ಹಣಕಾಸು ಬಂಡವಾಳಕ್ಕೆ ಅಪಾರ ತೆರಿಗೆ ರಿಯಾಯ್ತಿಗಳನ್ನು ಒದಗಿಸುವ ಕ್ರಮಗಳಷ್ಟೇ. ಅದು ಕೈಗೊಂಡ ಮೊದಲ ಕ್ರಮವೆಂದರೆ ಬಜೆಟಿನಲ್ಲಿ ವಿಧಿಸಿದ್ದ ಬಂಡವಾಳ ಗಳಿಕೆ ತೆರಿಗೆಯ ಮೇಲಿನ ಸರ್ಚಾರ್ಜನ್ನು ತೆಗೆದು ವಿದೇಶಿ ಹೂಡಿಕೆದಾರರನ್ನು ಸಮಾಧಾನಗೊಳಿಸುವುದು. ನಂತರ, ರಫ್ತುಗಳಿಗೆ 50,000ಕೋಟಿ ರೂ.ಗಳ ಮತ್ತು ರಿಯಲ್ ಎಸ್ಟೇಟ್ ಮತ್ತು ವಸತಿ ವಲಯಕ್ಕೆ 20,000 ಕೋಟಿ ರೂ.ಗಳ ಸಬ್ಸಿಡಿಗಳ ಪ್ರಕಟಣೆ ಮಾಡಲಾಯಿತು.
ಅರ್ಥವ್ಯವಸ್ಥೆ ಏನೇನೂ ಉತ್ತಮಗೊಳ್ಳದಿದ್ದಾಗ, ಕಾರ್ಪೊರೇಟ್ ತೆರಿಗೆ ದರವನ್ನು 22%ಕ್ಕೆ ಇಳಿಸಿ ಕಾರ್ಪೊರೇಟ್ ವಲಯಕ್ಕೆ 1.45 ಲಕ್ಷ ಕೋಟಿ ರೂ.ಗಳ ಭಾರೀ ಕೊಡುಗೆಯನ್ನು ನೀಡಲಾಯಿತು. ಇದಕ್ಕೆ ಮೊದಲು 400 ಕೋಟಿ ರೂ,ಗಳಿಗಿಂತ ಹೆಚ್ಚಿನ ವಹಿವಾಟು ಇದ್ದ ಕಂಪನಿಗಳಿಗೆ 30% ಮತ್ತು ಇತರೆಲ್ಲ ಕಂಪನಿಗಳಿಗೆ 25% ಕಾರ್ಪೊರೇಟ್ ತೆರಿಗೆ ಇತ್ತು. ಇದರ ಫಲಿತಾಂಶವೆಂದರೆ, ರಿಝರ್ವ್ ಬ್ಯಾಂಕ್‌ನ್ನು ದಬಾಯಿಸಿ ಅದರ ಗಳಿಕೆಯ 1.76ಲಕ್ಷ ಕೋಟಿ ರೂ.ಗಳನ್ನು ಪಡೆದುಕೊಂಡ ನಂತರವೂ ಸರಕಾರದ ಹಣಕಾಸು ಕೊರತೆ ಮತ್ತಷ್ಟು ಹೆಚ್ಚುವಂತಾಗಿದೆ.
ಅರ್ಥವ್ಯವಸ್ಥೆ ನಿಧಾನಗೊಳ್ಳುತ್ತಿರುವುದರಿಮದಾಗಿ ತೆರಿಗೆ ಸಂಗ್ರಹಗಳೂ ಬಜೆಟಿನಲ್ಲಿ ಅಂದಾಜು ಮಾಡಿದ್ದಕ್ಕಿಂತ ಬಹಳ ಕೆಳಮಟ್ಟದಲ್ಲಿವೆ. ಇದು ಮುಖ್ಯವಾಗಿ ರಾಜ್ಯಗಳನ್ನು ಬಾಧಿಸಿದೆ, ಏಕೆಂದರೆ ಇದರಿಂದಾಗಿ ಅವುಗಳಿಗೆ ಕೇಂದ್ರ ಸರಕಾರ ತಾನು ಕೊಡಬೇಕಾಗಿರುವ ಜಿಎಸ್‌ಟಿ ಪರಿಹಾರ ಪಾವತಿಗಳನ್ನು ಮುಂದೂಡಿದೆ. ಸರಕಾರದ ಕ್ರಮಗಳು ಅರ್ಥವ್ಯವಸ್ಥೆಯಲ್ಲಿನ ಬೇಡಿಕೆಯ ಬಿಕ್ಕಟ್ಟನ್ನು ನಿಭಾಯಿಸಲು ಏನೂ ಮಾಡಲಿಲ್ಲ, ಆದರೆ ಸರಕಾರದ ಆದಾಯಗಳನ್ನು ಮಾತ್ರ ಇಳಿಸಿತು.
ಮನರೇಗ ಯೋಜನೆಗೆ ಹಣಕಾಸು ನೀಡಿಕೆಯನ್ನು ವಿಸ್ತರಿಸುವುದು, ಕೃಷಿ, ಗ್ರಾಮೀಣ ಮೂಲರಚನೆ ಮತ್ತು ಸಾಮಾಜಿಕ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವುದು ಮತ್ತು ನಗರಪ್ರದೇಶಗಳಲ್ಲೂ ಒಂದು ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸುವುದು ಮುಂತಾದ ಜನಗಳ ಕೈಗಳಲ್ಲಿ ಹಣವನ್ನು ಇಡಬಹುದಾಗಿದ್ದ ಕ್ರಮಗಳನ್ನು ಅನುಸರಿಸುವ ಬದಲು, ಆಮೂಲಕ ಕೃಷಿಯ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಬದಲು, ಸರಕಾರ ಈ ಎಲ್ಲ ವಲಯಗಳಲ್ಲೂ ಹಣನೀಡಿಕೆಯಲ್ಲಿ ಕಡಿತ ಮಾಡುತ್ತಿದೆ.
ಮುಂದಿನ ಆರು ವರ್ಷಗಳಲ್ಲಿ ಮೂಲರಚನೆಯಲ್ಲಿ 102 ಲಕ್ಷ ಕೋಟಿ ರೂ.ಗಳನ್ನು ಹೂಡಲಾಗುವುದು ಎಂದು ಬಹಳಷ್ಟು ಪ್ರಚಾರ ಮಾಡಲಾಯಿತು. ಆದರೆ ಐದು ವರ್ಷಗಳಲ್ಲಿ ಹಾಗೆ ಮಾಡುವ ವಚನ ದುರ್ಬಲಗೊಂಡಿದೆ, ಮಾತ್ರವಲ್ಲ, ಅದು ಪ್ರಚಾರ ಮಾಡಿದ ಪ್ರಮಾಣದ ಹತ್ತಿರವೂ ಬರುವಂತೆ ಕಾಣುತ್ತಿಲ್ಲ. ಇದಕ್ಕೆ 39% ಮಾತ್ರ ಭಾರತ ಸರಕಾರದಿಂದ ಬರುತ್ತದೆ, 39% ಎಲ್ಲ ರಾಜ್ಯಗಳಿಂದ ಬರುತ್ತದೆ ಮತ್ತು ಉಳಿದ 22% ಖಾಸಗಿ ವಲಯದಿಂದ ಬರುತ್ತದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.
ಆದರೆ ಈಗ ನೋಟುರದ್ಧತಿ, ಜಿಎಸ್‌ಟಿಯ ಒಡ್ಡೊಡ್ಡಾದ ಜಾರಿ ಮತ್ತು ಕಾರ್ಪೊರೇಟ್‌ಗಳಿಗೆ ಕೇಂದ್ರ ಸರಕಾರದ ತೆರಿಗೆ ಬಕ್ಷೀಸುಗಳು ರಾಜ್ಯಗಳ ಹಣಕಾಸು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬಿಗಡಾಯಿಸಿರುವಾಗ, ಮತ್ತು ಆರ್ಥಿಕ ಸ್ಥಗಿತತೆಯ ಅಂಚಿನಲ್ಲಿ ಬಂದು ನಿಂತಿರುವಾಗ ಹಾಗೂ ಸ್ಥಗಿತುಬ್ಬರವನ್ನು ಅನುಭವಿಸುತ್ತಿರುವಾಗ, ಈ ದೊಡ್ಡ ಯೋಜನೆಯ ಪ್ರಕಟಣೆ ಬಹುಮಟ್ಟಿಗೆ ಟೊಳ್ಳು ಬಡಾಯಿಯೇ ಆಗಿದೆ.
ಸರಕಾರ ಈಗ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ತನ್ನ ಪಾಲನ್ನು ಬೃಹತ್ ಪ್ರಮಾಣದಲ್ಲಿ ಮತ್ತು ಅತ್ಯಂತ ಕಡಿಮೆ ಬೆಲೆಗಳಲ್ಲಿ ಮಾರಿಕೊಳ್ಳಲು ಮುಂದಾಗಿದೆ. ಹಲವು ಲಾಭದಾಯಕ ಉದ್ದಿಮೆಗಳನ್ನು ಕಡಿದು ಹಾಕಿ ದೇಶಕ್ಕೆ ಸದ್ಯದಲ್ಲೂ ಮತ್ತು ಭವಿಷ್ಯದಲ್ಲೂ ಅಪಾರ ಹಾನಿಗಳನ್ನು ತರುತ್ತಿದೆ. ಇದನ್ನು ಯಾವ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಸರಕಾರದ ಮಾಹಿತಿಗಳೇ ಬೃಹತ್ ಪ್ರಮಾಣದ ನಿರುದ್ಯೋಗ ಇದೆ, ಕೃಷಿ ಸಂಕಟ ಮುಂದುವರೆಯುತ್ತಿದೆ ಮತ್ತು ತಲಾಬಳಕೆ ಖರ್ಚು ಇಳಿಮುಖಗೊಂಡಿದೆ, ಗ್ರಾಮೀಣ ಭಾರತದಲ್ಲಿ 2011-12ರಿಂದ 2017-18ರ ನಡುವೆ 8.8% ದಷ್ಟು ಇಳಿದಿದೆ ಎಂದು ತೋರಿಸುತ್ತಿವೆ. ಪ್ರಥಮತಃ ನವ-ಉದಾರವಾದಿ ಧೋರಣೆಗಳಿಂದ ಉಂಟಾಗಿರುವ ಇಂತಹ ಕೆಟ್ಟಪರಿಸ್ಥಿತಿ ನೋಟುರದ್ಧತಿ ಮತ್ತು ಕೆಟ್ಟದಾಗಿ ರೂಪಿಸಿ, ಜಾರಿಗೊಳಿಸಿದ ಜಿಎಸ್‌ಟಿಯಿಂದಾಗಿ ಮತ್ತಷ್ಟು ಉಲ್ಬಣಗೊಂಡು ಆರ್ಥಿಕ ಬೆಳವಣಿಗೆ ಕುಸಿಯುವಂತೆ ಮಾಡಿದೆ.
ಈಗ ಅದಕ್ಕೆ ಜೀವನಾವಶ್ಯಕ ಸಾಮಗ್ರಿಗಳಲ್ಲಿ ತೀವ್ರ ಹಣದುಬ್ಬರದ ಸಮಸ್ಯೆಯೂ ಸೇರಿಕೊಂಡಿದೆ. ಈ ಸರಕಾರ ತನ್ನ ಸ್ವಭಾವದಿಂದಾಗಿ, ಇಂತಹ ಧೋರಣೆಗಳನ್ನು ಕೈಬಿಟ್ಟು, ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಸ್ಫುರಿಸುವ ಹಾಗೂ ಬೃಹತ್‌ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಗಳ ಮೂಲಕ ಪೂರೈಕೆಯ ಮೂಲರಚನೆಗಳನ್ನು ಉತ್ತಮ ಪಡಿಸಬೇಕು ಎನ್ನುವ ಸಲಹೆಗಳಿಗೆ ಕಿವಿಗೊಡುವುದಿಲ್ಲ. ತದ್ವಿರುದ್ಧವಾಗಿ ಅದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೇಶೀ ಗುತ್ತೇದಾರಿ ಬಂಡವಾಳದ ಆಗ್ರಹದಂತೆ ಶ್ರಮ ಮಾರುಕಟ್ಟೆ ಹಾಗೂ ಭೂಮಿ ಮಾರುಕಟ್ಟೆಯನ್ನು ಮತ್ತಷ್ಟು ಉದಾರೀಕರಿಸುವ ಪ್ರಯತ್ನವನ್ನೇ ಮಾಡುತ್ತದೆ.
ಜನಸಾಮಾನ್ಯರು ಒಂದೆಡೆಯಲ್ಲಿ, ಇಳಿಯುತ್ತಿರುವ ಕೂಲಿ-ಸಂಬಳಗಳು ಮತ್ತು ಏರುತ್ತಿರುವ ನಿರುದ್ಯೋಗ, ಇನ್ನೊಂದೆಡೆಯಲ್ಲಿ ಆಹಾರ ಸಾಮಗ್ರಿಗಳು ಮತ್ತು ಇತರ ಆವಶ್ಯಕ ಸರಕುಗಳ ಬೆಲೆಯೇರಿಕೆಗಳ ಎರಡೆರಡು ಹೊರೆಗಳನ್ನು ಹೊರಬೇಕಾಗಿ ಬಂದಿದೆ.
ಮೋದಿ ಸರಕಾರದ ಹಾನಿಕಾರಕ ಧೋರಣೆಗಳಿಗೆ ಜನಗಳ ಪ್ರತಿರೋಧವನ್ನು ಕಟ್ಟಿ ಬೆಳೆಸುವುದು ಮತ್ತು ವರ್ಗ ಹಾಗೂ ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವುದಲ್ಲದೆ ಈಗ ಬೇರೆ ಯಾವ ಮಾರ್ಗವೂ ಇಲ್ಲವಾಗಿದೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243