ಭಾಮಿನಿ
ಆಂತರ್ಯ..!?
ದಿನವೂ ಸಂಜೆ ನಮ್ಮ ಮನೆ ಎದುರಿನ ಮನೆ ಮುಂದೆ ಅಕ್ಕ ಪಕ್ಕದ ಸುಮಾರು ಐದಾರು ಹೆಂಗಸರು ಕೂತು ಹರಟೆ ಹೊಡಿತಿರ್ತಾರೆ. ಅವರು ಸ್ವಲ್ಪ ಜೋರಾಗಿ ಮಾತಾಡಿದ್ರು ನಮಗೆ ನೀಟಾಗಿ ಕೇಳಿಸುತ್ತೆ. ಹೀಗೆ ನಿನ್ನೆ ಸಂಜೆ ಗಿಡಗಳಿಗೆ ನೀರು ಹಾಕೋವಾಗ ಅವರ ಮಾತುಗಳು ನನ್ನ ಕಿವಿಗೂ ಬಿದ್ವು. ಅವರಲ್ಲಿ ಒಬ್ಬರು ತಿಂಗಳ ಹಿಂದೆ ಅಷ್ಟೇ ತಮ್ಮ ಮಗಳ ಮದ್ವೆ ಮಾಡಿ ಗಂಡನ ಮನೆಗೆ ಕಳ್ಸಿದ್ರು.
ಈ ಬಗ್ಗೆ ವಿಚಾರಿಸ್ತಾ ಒಬ್ಬರು “ಏನಮ್ಮ ,ಮಗಳು ಬಂದಿದ್ಲ ಮನೆಗೆ?” ಅಂತ ಕೇಳಿದ್ರು, ಅದಕ್ಕೆ ಆ ತಾಯಿ ಜೋತು ಮುಖ ಹಾಕಿ “ಇಲ್ಲ ಅಕ್ಕ ” ಅಂದ್ಲು. ಅಲ್ವೇ ಒಬ್ಬಳೇ ಮಗಳು, ತಿಂಗಳಾಯಿತು ನೋಡದೆ ಹೋಗಿ ಕರ್ಕೊಂಡು ಬರ್ಬಾರ್ದ, ಅಂದಿದ್ದೆ ತಡ ಆ ತಾಯಿ ಕಣ್ಣೀರು ಹಾಕ್ತಾ ಮುಂದಿನವಾರ ಅವಳ ಹುಟ್ಟಿದಬ್ಬ ಇದೆ,ಕಳಿಸಿಕೊಡಿ ಅಂತ ಒಂದು ವಾರದಿಂದ ಕೇಳ್ತಿದ್ರೆ ಒಪ್ಪಕೊಳ್ತಾನೆ ಇಲ್ಲ ಅಂತ ಮಾತು ಮುಗ್ಸೋವಷ್ಟರಲ್ಲಿ ನನಗರಿವಿಲದೆ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು ನೋಡಿ!
ಎಷ್ಟು ವಿಪರ್ಯಾಸ ಅಲ್ಲವೇ ? ತಾವು ಹೆತ್ತು ,ಹೊತ್ತು ,ಸಾಕಿ ,ಬೆಳೆಸಿ ,ಓದಿಸಿ ,ಪ್ರೀತಿಸಿ,ಮುದ್ದಿಸಿದ ಮಗಳು, ದಿನವೂ ಮನೆ ತುಂಬಾ ಓಡಾಡ್ತಾ, ತಂದೆ ತಾಯಿಯ ಅಕ್ಕರೆಯಲ್ಲಿ ಬೆಳೆದು,ಅವರ ನೋವು ಮರೆಸಿದ ಮಗಳು, ಮದುವೆ ಆದ ತಕ್ಷಣ ವೇ ಇನ್ನೊಬ್ಬರ ಸ್ವತ್ತಾಗುತ್ತಾಳೆ ಅಲ್ವಾ? ಅದುವರೆಗೂ ತಮ್ಮ ಕಣ್ಣೆದುರೇ ಓಡಾಡಿಕೊಂಡಿದ್ದ ಮಗಳನ್ನ ಈಗ ಒಮ್ಮೆ ನೋಡಬೇಕು ಅಂತ ಅನಿಸಿದರೂ ಅತ್ತೆ ಮನೆಯವರ ಒಪ್ಪಿಗೆ ಪಡೆಯಬೇಕು.
ಅಳಿಯನ ಆಣತಿ ಪಡೆಯಬೇಕು. ಅಕಸ್ಮಾತ್ ಅವರು ಒಪ್ಪಿ ಕಳಿಸಿದರು ಕೂಡ ಇಷ್ಟೇ ದಿನಕ್ಕೆ ವಾಪಾಸ್ ಬರಬೇಕು ಅನ್ನೋ ಕಡಿವಾಣ. ತಂದೆ ತಾಯಿಯ ಮನೆಯಲ್ಲಿ ಕಷ್ಠವೋ,ಸುಖವೊ,ಮಗಳು ನೆಮ್ಮದಿಯ ಬದುಕನ್ನು ಕಂಡಿರುತ್ತಾಳೆ. ಮದುವೆಯ ನಂತರ ಅತ್ತೆಯ ಮನೆಯಲ್ಲೂ ಅದೇ ನೆಮ್ಮದಿಯ ಬದುಕನ್ನು ಬದುಕಲು ಪ್ರಯತ್ನಿಸುತ್ತಾಳೆ, ಪ್ರತಿ ಕ್ಷಣವೂ ತಂದೆ ,ತಾಯಿ,ಒಡ ಹುಟ್ಟಿದವರ ಕಾಣಲು ಹಂಬಲಿಸುತ್ತಾಳೆ..ಗಂಡನ ಮನೆಯ ಎಲ್ಲರ ಜೊತೆ ಹೊಂದಿಕೊಳ್ಳುವ,ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ, ಆಗ ಅವಳಿಗೆ ಹೊಂದೊಕೊಳ್ಳಲು ಸ್ವಲ್ಪ ಸಮಯ ಕೊಡಬೇಕು. ಇಲ್ಲವಾದಲ್ಲಿ ಮಾನಸಿಕವಾಗಿ ಅವಳು ಒತ್ತಡಗಳ ಸುಳಿಯಲ್ಲಿ ಹುದುಗಿಹೋಗುತ್ತಾಳೆ. ಆಗ ಅವಳಿಗೆ ಬೇಕಾಗಿರುವುದು ತಾಯಿಯಂಥ ಪ್ರೀತಿ,ಕಾಳಜಿ .
ಈ ಥರದ ಪರಿಸ್ಥಿತಿಯನ್ನು ಮದುವೆ ಆದ ಪ್ರತಿ ಹೆಣ್ಣು ಅನುಭವಿಸಿಯೇ ಇರುತ್ತಾಳೆ. ಪ್ರತಿ ಅತ್ತೆಯು ಮಗಳಾಗಿದ್ದು,ಮತ್ತೊಂದು ಮನೆಯ ಸೊಸೆಯಾಗಿ,ನಂತರ ಅತ್ತೆಯ ಪದವಿಗೆ ಏರಿರುತ್ತಾಳೆ. ಅವಳು ಕೂಡಾ ಈ ಎಲ್ಲ ನೋವುಗಳನ್ನು ಅನುಭವಿಸಿಯೇ ಇರುತ್ತಾಳೆ. ಆದರೂ ಅದೆಲ್ಲವನ್ನು ಮರೆತು ಸೊಸೆಯಮೇಲೆ ದರ್ಬಾರು ಮಾಡುವುದು ಎಷ್ಟು ಸರಿ ???ಅತ್ತೆ ತನ್ನನ್ನು ಮಗಳ ಹಾಗೆ ಪ್ರೀತಿಸಬೇಕು ಅನ್ನೋದು ಎಲ್ಲ ಸೊಸೆಯಂದಿರಾ ಬಯಕೆಯೇ ಆಗಿರುತ್ತದೆ.
ಇಂದಿನ ಕೂಡು ಕುಟುಂಬಗಳು ಒಡೆದು,ಚಿಕ್ಕ ಕುಟುಂಬಗಳಾಗುವಲ್ಲಿ “ಸಂಪೂರ್ಣ ಪಾತ್ರ ಸೊಸೆಯದೇ” ಅಂತ ವಾದಿಸುವ ಎಷ್ಟೋ ಬರವಣಿಗೆ ಓದಿದ್ದೇನೆ,ಹೇಳಿಕೆಗಳನ್ನು ಕೇಳಿದ್ದೇನೆ…ಒಬ್ಬ ಸೊಸೆಯಾಗಿ ನಾನೂ ಕೆಲ ವಿಚಾರಗಳನ್ನು ಇಲ್ಲಿ ಹೇಳ ಬಯಸುವೆ.
ಹೀಗೆ ಯೋಚಿಸಿ ಒಬ್ಬ ವ್ಯಕ್ತಿಗೆ ಬೇಕಾದ ಎಲ್ಲ ಪ್ರೀತಿಯು ಸಿಕ್ಕಾಗ ಅವನು ಬೇರೆ ಏನನ್ನು ಹಂಬಲಿಸಲಾರ. ಕಾರಣ ಪ್ರೀತಿ ಸಂಬಂಧಗಳನ್ನು ಕೂಡಿಸುತ್ತದೆಯೇ ಹೊರತು ಕಳೆಯುವುದಿಲ್ಲ. ಹಿರಿಯರು ಅಂತ ಇರೋ ಮನೇಲಿ ಮಗಳು, ಸೊಸೆ ಎನ್ನುವ ಭೇದ ವೇ ಈ ಸಮಸ್ಯೆಯ ಮೂಲ ಕಾರಣ. ಮದುವೆ ಆದಮೇಲೆ ಮಗನ ಪ್ರೀತಿ ಇಬ್ಭಾಗವಾಗುವುದು ಸಹಜ,ಎಂದು ತಿಳಿದಿದ್ದರೂ ಸಹ ಮದುವೆ ಮಾಡಿರುತ್ತಾರೆ ಅಂದಮೇಲೆ ಆ ಸತ್ಯವನ್ನು ಅವರೇಕೆ ಒಪ್ಪಿಕೊಳ್ಳುವುದಿಲ್ಲ..? ತಮ್ಮ ನೋವಿಗೆ ಕೇವಲ ಸೊಸೆಯನ್ನೇ ಹೊಣೆ ಮಾಡುವುದು ಎಷ್ಟು ಸರಿ ?ಸಾಮಾನ್ಯವಾಗಿ ಒಂದು ತಪ್ಪು ಮಗಳಿಂದ ಆದರೆ ಅದು ಆಕಸ್ಮಿಕ, ಅದೇ ತಪ್ಪು ಸೊಸೆಯದಾದರೆ? ಅಲ್ಲಿ ನಡೆವ ಸಂಗತಿಯೇ ಬೇರೆ. ಮಗಳಿಗೆ ಸ್ವಲ್ಪ ಜ್ವರ ಬಂದರು ಅಯ್ಯೋ ಪಾಪ ಅಂತ ಅದೆಷ್ಟು ಮರುಗುವಳೋ ಈ ಅತ್ತೆ. ಅದೇ ಸೊಸೆ ಮನೆ,ನೌಕರಿ,ಮಗು ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು ,ವಿಶ್ರಾಂತಿಯನ್ನು ಅರಿಯದೆ ಅದೆಷ್ಟು ದಣಿದರು ಮೆಚ್ಚುಗೆಯ ಒಂದು ಮಾತೂ ಇಲ್ಲ.
ಆದರೆ ಅವಳ ಎಲ್ಲ ಕೆಲಸಗಳಲ್ಲೂ ತಪ್ಪುಗಳನ್ನು ಹುಡುಕುವ ಕಾಯಕ ಮಾತ್ರ ನಿರಂತರ. ಮಗಳೊಬ್ಬಳೇ ಅಡಿಗೆ ಮನೇಲಿ ಕೆಲಸ ಮಾಡಿದರೆ ಅದೆಷ್ಟು ಬೇಗ ಹೋಗಿ ಸಹಾಯ ಮಾಡುವಾಗ ಇದ್ದ ಕಾಳಜಿ ,ಸೊಸೆಯ ಮೇಲೆ ಯಾಕಿಲ್ಲ?ಅವಳು ಕೆಲಸಕ್ಕೆ ಹೋಗುವುದು ತಿಳಿದಿದ್ದರೂ ಒಂದೇ ಒಂದು ಚಿಕ್ಕ ಸಹಾಯ ಮಾಡಬೇಕು ಅಂತ ಏಕೆ ಅನಿಸುವುದಿಲ್ಲ ? ಇಂತಹ ಪ್ರತಿ ಘಟನೆಯು ಸೊಸೆಗೆ ತನ್ನ ತಾಯಿಯ ನೆನಪಿಸದೆ ಇರವು. ಬೇಕು ಅನಿಸಿದಾಗ ಅವರನ್ನು ನೋಡಲಾಗದ ಅಸಹಾಯಕತೆ. ದಿನವೂ ಮಲಗುವಾಗ ಅವರಿಗಾಗಿ ಒಂದು ಪ್ರಾರ್ಥನೆ ಮಾಡುವಾಗ ಅವರನ್ನು ನೆನೆದು ಕಣ್ಣೀರಿಡುವುದು. ಆಗ ಅವಳ ಕಣ್ಣೊರೆಸುವುದು ಮಾತ್ರ ಅವಳ ಆಪ್ತ ಗೆಳೆಯ ಅವಳ ತಲೆದಿಂಬು. ನಿಜ, ಇಂತಹ ಅದೆಷ್ಟೊ ಕಥೆಗಳು ಈ ತಲೆದಿಂಬಿನ ಅಡಿಯಲ್ಲಿ ಹೂತು ಹೋಗಿವೆಯೋ??ಇಂತಹ ಅದೆಷ್ಟೋ ಒತ್ತಡಗಳ ಅವಳ ತಾಳ್ಮೆ ಅದೆಷ್ಟು ಸಹಿಸೀತು?
ಒಮ್ಮೆ ತಾಳ್ಮೆ ಗೆಟ್ಟು ಮಾತಾಡಿದರೆ ಅಲ್ಲಿಯೂ ತಪ್ಪು ಅವಳದ್ದೇ. ಇರಲಿ, ಹೀಗೆ ಹೇಳ್ತ ಹೋದ್ರೆ ಈ ಲೇಖನಕ್ಕೆ ಕೊನೆಯೇ ಇರಲ್ಲ . ಇದೆಲ್ಲವನ್ನು ಹೇಳುವುದರ ಉದ್ದೇಶ ಇಷ್ಟೇ. ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು..ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಗ ,ಕಷ್ಟಗಳಿಗೊಂದು ‘ಮೆಚ್ಚುಗೆ’ ಇರಲಿ. ಅವಳ ತಪ್ಪುಗಳನ್ನು ತಿದ್ದಿ ಹೇಳುವ ಗುಣ ಇರಲಿ ಹೊರತು ಅವಳ ಹಿಂದೆ ಆಡಿಕೊಳ್ಳುವ ಸಣ್ಣತನ ಇರದಿರಲಿ. ಒಂದು ಹೆಣ್ಣು ಮದುವೆಯಾದಮೇಲೆ ತನ್ನ ಇಷ್ಟದ ನ ತವರನ್ನು ಬಿಟ್ಟು ಬರುತ್ತಾಳೆ. ತನ್ನೆಲ್ಲಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಅಷ್ಟೇ ಯಾಕೆ ಅವಳ ಹೆಸರು,ಅಸ್ತಿತ್ವ ಎಲ್ಲವೂ ಬದಲಾಗುತ್ತದೆ. ಇದೆಲ್ಲದರ ಬದಲಾಗಿ ಅವಳು ಬಯಸುವುದು “ಕೊಂಚ ಪ್ರೀತಿ” ಮಾತ್ರ.
ಈ ಪ್ರೀತಿಗೇಕೆ ಮಗಳು, ಸೊಸೆ ಎನ್ನುವ ಭೇದ ಅಲ್ಲವೇ ? ಚಪ್ಪಾಳೆ ಹೇಗೆ ಒಂದೇ ಕೈ ಇಂದ ಆಗಿವುದಿಲ್ಲವೋ ಹಾಗೆ ತಪ್ಪು ಕೂಡ ಒಬ್ಬರದೇ ಆಗಿರಲು ಸಾಧ್ಯವಿಲ್ಲ.ಚಿಕ್ಕವರು ತಪ್ಪು ಮಾಡಲು ಕಾರಣ ದೊಡ್ಡವರ ನಡುವಳಿಕೆಯೇ ಕಾರಣ ಅಲ್ಲ್ವೆ??ಸ್ವಲ್ಪ ಕಾಳಜಿ ,ಕೊಂಚ ಪ್ರೀತಿ ಇದ್ದರೆ ಅದೇ ಸ್ವರ್ಗ .,…ಅಲ್ಲವೇ..?
– ಕವಿತ ವಸಂತ್
ಸಂಗೀತ ಶಿಕ್ಷಕಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401