ದಿನದ ಸುದ್ದಿ
ಗುಡ್ಡಗಾಡು ವಸತಿ ಪ್ರದೇಶಗಳಿಗೆ ಸೌರಶಕ್ತಿ ಅಳವಡಿಕೆ : ಸಚಿವ ವಿ. ಸುನೀಲ್‌ಕುಮಾರ್
ಸುದ್ದಿದಿನ, ಚಿಕ್ಕಮಗಳೂರು : ಮಲೆನಾಡು ಹಾಗೂ ಅರಣ್ಯದಂಚಿನ ಭಾಗದಲ್ಲಿರುವ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗದ ಮನೆಗಳಿಗೆ ಸೋಲಾರ್ ಅಳವಡಿಸಿ ವಿದ್ಯುತ್ ಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬಾಳಗಡಿ ಗ್ರಾಮದಲ್ಲಿ ನೂತನ ಮೆಸ್ಕಾಂ ವಿಭಾಗೀಯ ಕಚೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡು, ಅರಣ್ಯದಂಚಿನ ಆನೇಕ ಮನೆಗಳಿಗೆ ಡ್ರೀಮ್ಡ್ ಫಾರೆಸ್ಟ್, ಮೀಸಲು ಅರಣ್ಯಇತ್ಯಾದಿ ಕಾರಣಗಳಿಂದ ವಿದ್ಯುತ್ ಸಂಪರ್ಕ ನೀಡಲು ಅಡ್ಡಿಯಾದಲ್ಲಿ ಅಂತಹ ಮನೆಗಳಿಗೆ ಸೋಲಾರ್ ಅಳವಡಿಸಲು ಚರ್ಚೆ ನಡೆಸಲಾಗಿದೆ ಎಂದರು.
ಇಂದಿನಿಂದ ಈ ತಿಂಗಳ 15ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನವನ್ನು ಇಲಾಖೆ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ರಾಜ್ಯದಲ್ಲಿರುವ ಅಪಾಯಕಾರಿ ಪರಿವರ್ತಕಗಳನ್ನು ಗುರುತಿಸಿ ಸ್ಥಳದಲ್ಲಿಯೇ ಬದಲಾವಣೆ ಮಾಡುವ ಮೂಲಕ ಸಂಭವನೀಯ ಅಪಾಯವನ್ನು ದೂರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243