ಅಂತರಂಗ

ಹೆಣ್ಣಾಗಬೇಕು ನಾ ಹೆಣ್ಣಾಗಬೇಕು, ಹೂವಾಗಬೇಕು ನಾ ಹೂವಾಗಬೇಕು

Published

on

ಲೇಖಕಿ : ವೀಣಾ ಮಹಾಂತೇಶ್
  • ವೀಣಾ ಮಹಾಂತೇಶ್ ,ದಾವಣಗೆರೆ

ಜಗದ ಸೊಬಗು ನಾನು,ಮನೆಯ ಸೊಬಗು ನಾನು,ತಿಳಿದಿರಲಿ ಜಗಕೆ ಕಣ್ಣು ಹೆಣ್ಣು

ಬಿಟ್ಟು ಬಿಡಿ ಅವಳು ಪುರುಷನಿಗಿಂತ ಒಂದು ಕೈಮೇಲು ಗೊತ್ತೇ. ಅವಳ ಆಸೆಗಳನ್ನೇಕೆ ಕೊಲ್ಲುವಿರಿ ಗುರಿಗಳನ್ನೇ ಹಿಸುಕುವಿರಿ, ಅವಳನ್ನೇ ಏಕೆ ಕೇಂದ್ರಬಿಂದುವನ್ನಾಗಿಸುವಿರಿ. ಭಾಷಣದಿಂದ ಹೊಗಳಿದರೆ ಸಾಲದು ಅವಳಿಗಾಗಿ ವೇದಿಕೆಯನ್ನು ಸಜ್ಜು ಮಾಡಿ ಕನಸನ್ನು ತೆರೆದಿಡಿ. ಗುರಿ ಮುಟ್ಟುವವರೆಗೆ ಎತ್ತಿಹಿಡಿಯಿರಿ.ಪುರುಷನಂತೆ ಸ್ತ್ರೀ ಗಟ್ಟಿಗಿತ್ತಿ ಧೈರ್ಯವಂತಳು ಬಲಶಾಲಿ ಜ್ಞಾನಿ ಪಾತಾಳವನ್ನು ಅರಿತಿರುವಳು ಆಕಾಶದೆತ್ತರವನ್ನೂ ಬಲ್ಲಳು. ಹಾರಲು ಬಲ್ಲಳು ತೇಲಲೂ ಬಲ್ಲಳು ಮುಳುಗಲೂ ಬಲ್ಲಳು ಆಕೆಯನ್ನು ಬಿಟ್ಟುಬಿಡಿ.

‌ನಟನೆಯೂ ಬಲ್ಲಳು ಹಾಡಲೂ ಬಲ್ಲಳು ಕುಣಿಯುವುದನ್ನು ಕಲಿತಿರುವಳು, ಖಾಕಿಯು ಕಾವಿಯು ಗೊತ್ತು ರಾಜಕೀಯವೂ ಗೊತ್ತು.ಸೌಟನ್ನು ಹಿಡಿದಂತೆ ಗನ್ನನ್ನು ಹಿಡಿಯುವಳು. ಅಬಲೆಯಲ್ಲ ಅವಳು ಹಿಂಡದಿರಿ ಮನವನ್ನು ವಾಹನಗಳ ಚಕ್ರವನ್ನು ತಿರುಗಿಸಬಲ್ಲಳು. ಆಕೆಯನ್ನು ಕಟ್ಟಿಹಾಕಿದಷ್ಟು ರೊಚ್ಚಿಗೇಳಬಹುದು. ತಂತ್ರಜ್ಞಾನ ವಿಜ್ಞಾನ ಮುಂದುವರೆದರೂ ಆಕೆಯನ್ನು ರಕ್ಷಿಸಿ ಕೊಳ್ಳಲು ಆಗುತ್ತಿಲ್ಲ ಕ್ರೂರ ಮೃಗಗಳಿಂದ ಅತ್ಯಾಚಾರ ಕೊಲೆ ಅವಹೇಳನ ನಿಂದನೆ ಹೀಯಾಳಿಕೆ ಆಕೆಯನ್ನು ಹೆಣ್ಣೆಂದು ಚುಚ್ಚುತ್ತಲೇ ಇರುವರು ಬಿಟ್ಟುಬಿಡಿ ಅವಳನ್ನು ಆಕೆ ಕಲಿಯಬಲ್ಲಳು ಬದುಕನ್ನು .

‌ಕಚ್ಚೆ ಕಟ್ಟಿ ಕೆಸರಲ್ಲಿ ಕಳೇ ಎಳೆವಳು ಪ್ಯಾಂಟನ್ನು ಏರಿಸಿ ವಿಮಾನವನ್ನು ಏರುವಳು ಅವಳಿಚ್ಛೆಯಂತೆ ಬಿಟ್ಟುಬಿಡಿ. ಹೆಣ್ಣು ಹೆಣ್ಣೆಂದು ಹಣ್ಣಾಗಿಸದಿರಿ.’ ಹೆಣ್ಣಿಲ್ಲದೆ ಜಗವಿಲ್ಲ ಹೆಣ್ಣಿಲ್ಲದ ಮನೆ ಮನೆ ಅಲ್ಲ’ಜಗವು ಹೊಡೆದಾಡಿದ್ದು ಹೆಣ್ಣಿಗಾಗಿ ಮಣ್ಣಿಗಾಗಿ ಈಕಿ ವಿಶಿಷ್ಟ ಶಕ್ತಿಗಳ ಸಂಗಮ, ಅವಿನಾಶಿ ,ಸಂಜಿವಿನಿ ,ಹೊಗಳಿದರೆ ಸಾಲದು ಆಕೆಗೊಂದು ಸ್ಥಾನವನ್ನು ಕೊಟ್ಟು ಬಿಡಿ ‌ಲೇಖನಿಯೆಂಬ ಖಡ್ಗ ಕತ್ತಿ ಹಿಡಿಸಿದ್ದು ಸರಸ್ವತಿ ತಾಯಿ ಮೊದಲ ಪಾಠಶಾಲೆ ಎಂಬಂತೆ ಆಟದಲ್ಲಿ ಮುಂದೆ ಪಾಠದಲ್ಲಿ ಮುಂದೆ ಪೂಜೆ ,ಪುನಸ್ಕಾರ ಆಚಾರಧರ್ಮ ಧಾರ್ಮಿಕ ಸಂಸ್ಕೃತಿ ,ಸಂಸ್ಕಾರ ಮುಂದೆ ವೇದಿಕೆಗೆ ಕಾಲಿಟ್ಟರೆ ಸಮಯವೇ ಅರಿಯದೆ ಕೊಡುವಳು ಭಾಷಣ ಪ್ರವಚನ. ಬಿಟ್ಟುಬಿಡಿ ಅವಳನ್ನು .

‌ಪುರುಷನಿಗಿಂತ ರಸಿಕಳು ಒಂದು ಹೆಜ್ಜೆ

ಕನಸುಗಳಿವೆ ಶೃಂಗಾರವಿದೆ ಒಲವಿದೆ ರಸಿಕತನ ಇದೆ ಹಸಿ ಹುಸಿ ಎದೆಯ ಆಸೆಯಿದೆ ಮಿಡಿತವಿದೆ ಮೃದು ಮನಸಿನೊಳಗೆ ನೋವಿದೆ ಕಣ್ಣಿನಲ್ಲಿ ಕಾತರವಿದೆ ಕೆಚ್ಚೆದೆ ಛಲವಿದೆ ಹೋರಾಟಲ್ಲಿ. ಕಾಯುವುದರಲ್ಲಿ ತಾಳ್ಮೆ ಇದೆ.
‌ಪ್ರೀತಿಯಿಂದ ತಬ್ಬುವ ಆಸೆಯಿದೆ .ಸ್ಪರ್ಶದಲ್ಲಿ ಮಿಡಿತವಿದೆ. ಕೋಮಲದ ಮನಸ್ಸಿದೆ ಆಳ್ವಿಕೆಯಲ್ಲಿ ದಿಟ್ಟತನವಿದೆ. ಹೆಮ್ಮೆಯಿದೆ ,ಕರುಣೆಯ ಕ್ಷಮೆಯಿದೆ, ತುತ್ತಿನಲ್ಲಿ ತಾಯ್ತನ ,ಬದುಕಿನಲ್ಲಿ ಹುಮ್ಮಸ್ಸಿದೆ, ತೋರಿಸಲಾಗದ ಪ್ರೀತಿಯ ಗೂಡು ಇದೆ ಬಯಕೆಗಳನ್ನು ಈಡೇರಿಸುವ ಜೇನು ಕಾಳಜಿಯ ಕಾರಂಜಿ . ತಂದೆ ಭಾಗ್ಯದ ಮಗುವನ್ನೆತ್ತಿ ತಾಯ್ತನದ ನೀಡುವ ಸಿರಿವಂತೆ. ಮನದ ದೇವತಿ .ಸಾಗರದ ಮಡಿಲ ಹೊತ್ತವಳು. ಹೆಣ್ಣೆಂದರೆ ಅನಂತ ಸ್ಫೂರ್ತಿ ಬೆಳಕಿನಂಥ ನಗು ಸರ್ವಗುಣಸಂಪನ್ನವು ಸಾಂತ್ವಾನ ಸಖಿ ಈಕೆಯ ಬದುಕೆ ಒಡಕು ಅಂತೆ.

‌ಅವಳು ಜಗಳಗಂಟಿ ಅಲ್ಲ

‌ಆಕೆಯ ಹೊಡೆದಾಟ ಸಂಸಾರಕ್ಕೆ ಆಕೆಯ ಜಗಳ ಮಕ್ಕಳಿಗೆ ನನ್ನವನು ನನಗೆ ಎಂಬ ಹೆಮ್ಮೆ ರೊಚ್ಚು ಕಿಚ್ಚು ತರಿಸದಿರಿ ಕಟ್ಟಿಹಾಕಿ.ಒಲಿದರೆ ನಾರಿ ಮುನಿದರೆ ಮಾರಿ ಶೀಲಕ್ಕೆ ಹೆದರಿ ಮುದುರಿ ಕೊಳ್ಳುವಳು ಮೂಲೆಯಲ್ಲಿ ಮಾತ್ರ ದಿಟ್ಟತನದಿ ಎದುರು ಕೂತಿಹಳು‍ ದಿನವೂ ಅನುವಿನಲಿ.

ಎಲ್ಲದಕ್ಕೂ ಹೆಣ್ಣನ್ನು ಮುಂದಿಡುವಿರಿ ಆಕೆಗೆ ಏನೂ ಗೊತ್ತಿಲ್ಲ,ಆಕೆಗೆ ಏನೂ ಬರುವುದಿಲ್ಲ ಎಂದು,ಅದೆಷ್ಟೇ ವಿದ್ಯಾಭ್ಯಾಸ ಕೊಡಿಸಿದರು ಆಕೆಯನ್ನು ಬಾವಿಯೊಳಗೆ ಬಿಡುತ್ತಾರೆ,ಅದೆಷ್ಟು ನಿಂದನೆಗಳು ಅದೆಷ್ಟು ಹೀನಾಯ ಕೃತ್ಯಗಳು ಅದೆಷ್ಟೋ ಅವಮಾನಗಳು ಮಾನಸಿಕವಾಗಿ ಕೊಡುವ ಚಿತ್ರಹಿಂಸೆಗಳು ಇಲ್ಲಸಲ್ಲದ ಆರೋಪಗಳು ಸರಿ ತಪ್ಪೆನ್ನುವರು ,ತಪ್ಪು ಸರಿ ಎನ್ನುವವರು, ಆಸರೆಯ ಕೊಡುವಿರೆಂದು ಮೋಸವ ಮಾಡುವರು.

‌ಮದುವೆ ಆದರೆ ಒಂದು ಕಷ್ಟವಾದರೆ,ಆಗದಿದ್ದರೆ ಇನ್ನೊಂದು ಸಂಕಟ,ಸರಿ ಇದ್ದರೆ ಸಂಸಾರ ಇಲ್ಲವಾದರೆ ಬದುಕಿನ ಉದ್ದಕ್ಕೂ ಗೊಣಗಾಟ ತಪ್ಪಿಲ್ಲದೆ ತಪ್ಪಿಗೆ ನಿಂದನೆ ಚುಚ್ಚುಮಾತುಗಳು ಧೈರ್ಯವಾಗಿ ನುಗ್ಗಿದರೆ ಗಂಡುಬೀರಿ ಎನ್ನುವರು.ಮೂಲೆಯಲ್ಲಿ ಕುಳಿತರೆ ಅಮಾಯಕಿಎನ್ನುವವರು. ಯಾರ ತಪ್ಪಿಗೆ ಯಾರಿಗೋ ಶಿಕ್ಷೆ,ಸಂಸಾರಕ್ಕೆ ಬಾಯಿ ಮಾಡಿದರೂ ಬೊಂಬಾಯಿ ಪಟ್ಟ ಗೂಳಿ ಪಟ್ಟ ,ಊರ ಬಸವಿಯ ಪಟ್ಟ ಹೆಣ್ಣಿಗೆ ಏಕೆ ಈ ಎಲ್ಲವನ್ನು ಕಟ್ಟಿಹಾಕಿ ಬಿಡುವರು ಗೂಟಕ್ಕೆ ಬಿಟ್ಟುಬಿಡಿ ಅವಳನ್ನು ಗಂಡಿನಂತೆ ಹೆಣ್ಣು ಕೂಡ.

‌ಹೆಣ್ಣು ಹೆರಬೇಕು ಹೊರಬೇಕು ನೋವುಂಡು ದಣಿಯಬೇಕು ತಿಂಗಳ ಗರ್ಭದ ಮುಟ್ಟಿಗೆ ಕಟ್ಟಬೇಕು ಹೊಟ್ಟೆ ಸೊಂಟ .ಸುರಿಯುವುದು ತಿಂಗಳ ಆದಂತೆ ತಿಂಗಳಿಗೆ ಯೋನಿಯೊಳಗಿನ ರಕ್ತ ಈಕೆ ಒಂದು ದೇಹವಲ್ಲ ಇಲ್ಲದಿರುವ ಇರುವ ಭಾಗಗಳನ್ನು ಹೊತ್ತು ಮಹಾತಾಯಿ ಜಗದ ನೋವುಗಳನ್ನರಿತ ಅಗಾಧ ಮನಸ್ಸು ದಿನವಿಡೀ ಮನೆಯಿಂದ ಆಫೀಸಿನವರೆಗೆ ಕಲ್ಲಿನಿಂದ ಮುಳ್ಳಿನ ವರೆಗೆ ಜೀವ ತೇಯುತ ಗಂಧದ ಕೊರಡು ಆ ಗಂಧದ ಕೊರಡನ್ನು ಒಮ್ಮೆ ಅಪ್ಪಿಕೊಳ್ಳಿ ಒಂದು ದೈವ ಶಕ್ತಿ ಎಂದು ಆರಾಧಿಸಿ .ಆಕೆಗೊಂದು ಕೃತಜ್ಞತೆಯನ್ನು ಸಲ್ಲಿಸಿ.

‌ಮಾನ ಮುಚ್ಚಿದರಾಯಿತು

‌ಅವಳು ಉಡುವ ಬಟ್ಟೆಗೇಕೆ ಅಡ್ಡಿ ಬರುವಿರಿ ಅವಳ ಇಚ್ಛೆಯಂತೆ ಇರಲಿ ಊಟದಂತೆ ಉಡುಪಿರಲಿ ಕೆಟ್ಟರೆ ಅವಳಿಗೆ ಅನುಭವ ಆದೀತು ಹೆಣ್ಣಿನ ಸೀರೆ ಗಂಡಿನ ಪಂಚೆ ಒಂದೇ ಅವಳ ರಕ್ಷಣೆಗೆ ಅವಳಿಷ್ಟದಂತೆ ತುಂಬು ಬಟ್ಟೆಯನ್ನು ಧರಿಸಲು ಬಿಟ್ಟುಬಿಡಿ.

‌ಉಳಿದದ್ದು ಉಂಡು ಮಲಗುವಳು

‌ಅದೆಷ್ಟು ರುಚಿಕಟ್ಟಾಗಿ ಬೆಣ್ಣೆ ತುಪ್ಪ ಹಾಕಿ ಗಮಗಮಿಸುವ ಸಾಸಿವೆಯನ್ನು ಸಿಡಿಸಿ ಒಗ್ಗರಣೆ ಹಾಕಿ ಗಂಡ ಮಕ್ಕಳಿಗೆ ಬಂಧು ಬಳಗಕ್ಕೆ ನಾಜೂಕಾಗಿ ಅಚ್ಚುಕಟ್ಟಾಗಿ ಅಡುಗೆಯನ್ನು ಉಣಬಡಿಸಿ ಹಣ್ಣು ಹಂಪಲುಗಳನ್ನಿಟ್ಟು ತಾಂಬೂಲವನ್ನು ನೀಡುವಳು ಕೊನೆಗೆ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಾ ಗೃಹಿಣಿ ಎನಿಸಿಕೊಂಡವಳು ಅಚ್ಚುಕಟ್ಟಾಗಿ ಅಡುಗೆ ಹಾಳಾಗದಂತೆ ಉಳಿದದ್ದು ಉಂಡು ಗಳಗಳನೆ ನೀರು ಕುಡಿದು ನಿಟ್ಟುಸಿರು ಬಿಡುವಳು.ಇಷ್ಟಾದರೂ ಮಾತುಗಳ ಗುಲ್ಲೇ ಕೇಳುವಿರಿ ಕುಡಿದ ಗಂಡನಿಂದ ಸಂಸಾರದಿಂದ ಸಮಾಜದಿಂದ ಏಟು ತಿಂದರೂ ಬಿದ್ದರೂ ಎದ್ದು ನಿಲ್ಲುವಳು ತಾಳ್ಮೆಯನ್ನು ಹೊತ್ತು ಭೂತಾಯಿಯಂತೆ ಹೆಣ್ಣು ಬಿಟ್ಟುಬಿಡಿ ಅವಳನ್ನು.

‌ಬ್ರಿಟಿಷರಿಗೆ ಅಡ್ಡಹಾಕಿ ನೀರುಣಿಸಿದ ಹೆಂಗಳೆಯರು ಕೋಟೆಯನ್ನು ಭದ್ರಗೊಳಿಸಿದ ಹೆಣ್ಣು ದೇಶ ಆಳಿದ ಹೆಣ್ಣು ಮುಸುರೆ ತೊಳೆದು ಹೆಣ್ಣು ಹತ್ತು ಹನ್ನೆರಡು ಮಕ್ಕಳನ್ನು ಹೆತ್ತ ಹೆಣ್ಣು , ಕಣ್ಣೀರ ತರಿಸದೆ ಹೆತ್ತವರೇ ಹೊತ್ತವರೇ ಕೈಹಿಡಿದವರಿಗೆ ಮಗಳಾಗಿ ಹೆಂಡತಿ ತಾಯಿಯಾಗಿ ಸೊಸೆಯಾಗಿ ಅಜ್ಜಿಯಾಗಿ ಸ್ವಾರ್ಥ ಇಲ್ಲದೆ ಮಕ್ಕಳು ಮೊಮ್ಮಕ್ಕಳೆಂದು ಜೀವ ಬಿಡುವ ಈ ಹೆಣ್ಣು ದೇಹಕ್ಕೆ ನೋಯಿಸದಿರಿ ಬಿಟ್ಟುಬಿಡಿ ಅವಳನ್ನು ಬಿಟ್ಟರೆ ಏನೆಲ್ಲ ಜಯಿಸಿ ನಿಲ್ಲುವಳು ಗೆಲ್ಲುವಳು ಈ ದೇಶವನ್ನು ಸಮಾಜವನ್ನು ಸಂಸಾರವನ್ನು .ಹೆಣ್ಣು ಪೋಷಣೆಗೆ ಗಂಡು ರಕ್ಷಣೆಗೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version