ದಿನದ ಸುದ್ದಿ
ನಾಳೆ ಕರ್ನಾಟಕವೂ ಮೂರು ಭಾಗವಾದರೆ..!?
ಭಾರತ ಸರ್ಕಾರದ ಜಮ್ಮು ಕಾಶ್ಮೀರದ ಬಗೆಗಿನ ನಿರ್ಧಾರ ಕಂಡು ಸಂಭ್ರಮಿಸುತ್ತಾ ಇರುವವರು ಗುರುತಿಸುತ್ತಿಲ್ಲದ ಅಂಶವೆಂದರೆ ಅದನ್ನು ಹೇಗೆ ಜಾರಿ ಮಾಡಲಾಗುತ್ತಿದೆ ಎನ್ನುವುದು. ರಾಜ್ಯಸರ್ಕಾರವೇ ಇಲ್ಲದೆ ರಾಷ್ಟ್ರಪತಿ ಆಳ್ವಿಕೆ ಇದ್ದಾಗ ರಾಜ್ಯಸರ್ಕಾರದ ಸಹಮತಿ ಪಡೆದು, ಹೀಗೆ ಬದಲಾಯಿಸಿದ್ದೇವೆ ಎನ್ನುತ್ತಿದೆ ಸರ್ಕಾರದ ಆದೇಶ..
ರಾಜ್ಯದ ಒಪ್ಪಿಗೆ ಇಲ್ಲದೆ ಒಂದು ರಾಜ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಗುರುತಿಸಿ. ಅಂದು ಆಂಧ್ರಪ್ರದೇಶವನ್ನು ಹೋಳು ಮಾಡಿದಾಗಲೂ ಆಂಧ್ರದ ಸಂಸದರನ್ನು ಹೊರಗಿಟ್ಟು, ಸಂಸತ್ತಿನ ಕಿಟಕಿ ಬಾಗಿಲು ಮುಚ್ಚಿ, ಮಾಧ್ಯಮಗಳನ್ನು ಮುಸುಕು ಮುಚ್ಚಿ ತೆಲಂಗಾಣ ಹುಟ್ಟುಹಾಕಲಾಗಿತ್ತು..
ಕಾಶ್ಮೀರ ಸಮಸ್ಯೆ ಇಂದಿನ ನಡೆಯಿಂದ ಬಗೆ ಹರಿಯುತ್ತದೋ ಇಲ್ಲವೋ ಕಾಲ ಉತ್ತರಿಸುತ್ತದೆ. ಇಂದಿನ ನಡೆ ಪರಿಹಾರವೇ ಆಗಿರಬಹುದು.. ಅದು ಬೇರೆಯೇ ವಿಷಯ. ಆದರೆ ನಾಳೆ ಕರ್ನಾಟಕವನ್ನು ಮೂರು ಭಾಗ ಮಾಡುವ ಸಾಧ್ಯತೆ ಇರುವುದನ್ನು ಗಮನಿಸಬೇಕಿದೆ. ಜನರ ಯಾವ ಪ್ರತಿರೋಧವನ್ನೂ ಲೆಕ್ಕಿಸದೆ, ಬಗ್ಗು ಬಡಿಯಲು, ನಮಗೆ ಅನ್ನಿಸಿದ್ದನ್ನು ಮಾಡಲು ನಾವು ಸಿದ್ಧ ಎನ್ನುವ ಸಂದೇಶ ಗುರುತಿಸಿ.. ಪ್ರಜಾಪ್ರಭುತ್ವ ಎಂದರೆ ಬಹುಸಂಖ್ಯಾತರ ಮೇಲುಗೈ ಎನ್ನುವ ಅಪಾಯ ಗುರುತಿಸಿ.
ಇಂಥದ್ದೊಂದು ಅನುಭವ ಕನ್ನಡಿಗರಿಗೆ ಮೊದಲಬಾರಿಗೆ ಈ ಹಿಂದೆ ಆದದ್ದು ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂದರ್ಭದಲ್ಲಿ, ಇದನ್ನು ವಿರೋಧಿಸಿದ ಕನ್ನಡ ಪರ ಹೋರಾಟಗಾರರನ್ನು ಮುನ್ನಾದಿನ, ಯಾವ ಹೋರಾಟ ಮಾಡಿಲ್ಲದೆ ಇದ್ದಾಗ್ಯೂ ರಾತ್ರಿ ಮನೆಗೆ ನುಗ್ಗಿ ಬಂಧಿಸಿ ಜೈಲಿಗೆ ಕಳಿಸಿ ಮರುದಿನ ಪ್ರತಿಮೆ ಉದ್ಘಾಟನೆ ಮಾಡಲಾಗಿತ್ತು.
ಮುಂದಿನ ದಿನಗಳು ಹೇಗಿರಬಹುದು ಎನ್ನುವುದನ್ನು ಊಹಿಸಿ.. ಯಾವ ಹೋರಾಟವನ್ನು ಬೇಕಾದರೂ ಬಗ್ಗು ಬಡಿದು ತಮಗೆ ಬೇಕಾದ್ದನ್ನು ಸರ್ಕಾರಗಳು ಮಾಡಲು ಮುಂದಾದರೆ.. ಗತಿ ಏನು?
ಈ ಬೆಳವಣಿಗೆ ನೋಡಿದರೆ.. ಕನ್ನಡಿಗರ ಗುಲಾಮಗಿರಿಯ ಸಂಕೋಲೆ ಮತ್ತಷ್ಟು ಬಿಗಿ ಆಗಬಹುದೇ ಹೊರತು ತನ್ನಾಳ್ವಿಕೆ ಉಂಟಾಗದು. ನೆರೆಮನೆಯ ಬೆಂಕಿ ನೋಡಿ ಬೆಳಕೆಂದು ಹಿಗ್ಗುವ ಮುನ್ನ ಅದು ನಮ್ಮೆಡೆಗೆ ಕೈಚಾಚುವ ಅಪಾಯ ಇದೆ ಎನ್ನುವುದನ್ನು ಮನಗಾಣಿರಿ.
– ಆನಂದ್ ಗುರು
(ಈ ಬರಹ Sruthi Hm ಅವರ ಫೇಸ್‌ಬುಕ್ ಗೋಡೆಯಿಂದ ತೆಗೆದುಕೊಂಡದ್ದು.)
ಸುದ್ದಿದಿನ.ಕಾಂ|ವಾಟ್ಸಾಪ್|9980346243