ಲೋಕಾರೂಢಿ

ಈಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು..!?

Published

on

ಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು, ಸೈಟು ಮನೆ ಕೊಳ್ಳಬಹುದು, ಬಿಸ್ನೆಸ್ ನಡೆಸಬಹುದು ಎಂದು ಹಲವರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರದಲ್ಲಿ ಭಾರತೀಯರಲ್ಲಿ ಬೆಳೆಸಲಾಗಿರುವ predator ಮನಸ್ಥಿತಿಯ ಪರಿಣಾಮ ಇದು.

ಇದೇ ಪ್ರಿಡೇಟರ್ ಮನಸ್ಥಿತಿಯಿಂದ ಬೆಂಗಳೂರು ಮತ್ತು ಕರ್ನಾಟಕಕ್ಕೆ ನುಗ್ಗಿರುವ ಮಾರ್ವಾಡಿಗಳು, ಆಂಧ್ರದ ರೆಡ್ಡಿಗಳು ಕನ್ನಡಿಗರಿಗೆ ಏನಾದರೂ ಉಳಿಸಿದ್ದಾರೆಯೇ ಎಂದು ನೋಡುವ ಸ್ಥಿತಿಯಲ್ಲಿ ನಾವಿದ್ದೇವೆ. ಅಂತಹ ಒಂದು ಕಿತ್ತು ತಿನ್ನುವ, ಕೊಂದು ಬೆಳೆಯುವ ಮನಸ್ಥಿತಿಯ ಬಲಿಪಶುಗಳಾಗಿ ಕನ್ನಡ ನಾಡು ಬಲಿಯಾಗಿದ್ದರೂ ಸಹ ಕಾಶ್ಮೀರವನ್ನು ಕಿತ್ತು ತಿನ್ನಬೇಕು ಎಂಬ ಮನಸ್ಥಿತಿಯನ್ನು ಒಪ್ಪಿಕೊಂಡಿದ್ದೇವೆ… ಆದರೆ ಅಲ್ಲಿಗೆ ಹೋಗುವವರು ಅದೇ ಮಾರ್ವಾಡಿ, ಬನಿಯಾಗಳೇ ಹೊರತು ಸಾಮಾನ್ಯ ಭಾರತೀಯರಲ್ಲ ಎಂಬ ಪರಿವೆಯೂ ಜನಕ್ಕಿಲ್ಲ.

ಅದು ಕಾಶ್ಮೀರ ಇರಲಿ, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ಇರಲಿ, ಕರ್ನಾಟಕ, ತಮಿಳುನಾಡು, ಗುಜರಾತ್ ಇರಲಿ, ಕೊಡಗು, ತುಳುನಾಡೇ ಉರಲಿ ಇವೆಲ್ಲ ಚಾರಿತ್ರಿಕವಾಗಿ ತಮ್ಮದೇ ವಿಶಿಷ್ಟ ಗುಣಗಳನ್ನು ಹೊಂದಿರುವ, ವಿಭಿನ್ನ ಚಾರಿತ್ರಿಕ ಹಿನ್ನೆಲೆ ಇರುವ ರಾಷ್ಟ್ರೀಯತೆಗಳು (Nationalities) ಹಾಗೂ ಭಾರತ ಉಪಖಂಡ ಇಂತಹ ನೂರಾರು ರಾಷ್ಟ್ರೀಯತೆಗಳ ಒಂದು ಒಕ್ಕೂಟ (Union). ಇಲ್ಲಿ ಪರಸ್ಪರ ರಾಷ್ಟ್ರೀಯತೆಗಳ ನಡುವೆ ಸೌಹಾರ್ದ, ಸಾಮರಸ್ಯ, ಸಹಕಾರಿ ಸಂಬಂಧವೇರ್ಪಡಬೇಕು, ಆದರೆ ಆಯಾ ರಾಜ್ಯದ ಭವಿಷ್ಯ ನಿರ್ಣಯದ ಹಕ್ಕು ಮಾತ್ರ ಅವರ ಕೈಯಲ್ಲೇ ಇರಬೇಕು. ಮತ್ತೊಂದು ರಾಜ್ಯವಾಗಲೀ, ಕೇಂದ್ರ ವಾಗಲೀ, ಮತ್ತೊಂದು ದೇಶವಾಗಲೀ ಅದರ ಆಡಳಿತದ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸಲು ಅವಕಾಶ ಇರಕೂಡದು. ನೆರೆಯ ದೇಶಗಳು ಆಕ್ರಮಣಕ್ಕೆ ಬಂದರೆ ಇಡೀ ಒಕ್ಕೂಟ ಒಂದಾಗಿ ನಿಲ್ಲಬೇಕು. ಮಿಕ್ಕಂತೆ ಹೆಚ್ಚಿನ ಸ್ವಾಯತ್ತತೆ, ಸ್ವಾವಲಂಬನೆ ಕಾಶ್ಮೀರದಿಂದ ಕರ್ನಾಟಕ, ತಮಿಳುನಾಡಿನವರೆಗಿನ ಎಲ್ಲ ರಾಜ್ಯಗಳಿಗೆ ಇರಬೇಕು. ಇದೇ ತತ್ವಕ್ಕೆ ಮನ್ನಣೆ ನೀಡಿ ಹಲವು ಕೇಂದ್ರಾಡಳಿತ ಪ್ರದೇಶಗಳು ಇಂದು ರಾಜ್ಯಗಳಾಗಿರುವುದನ್ನು ನೋಡಬಹುದು‌‌.ಇದಕ್ಕೆ ಸ್ಪಷ್ಟ ವಿರುದ್ಧ ಗತಿಯಲ್ಲಿ ಹೋಗುತ್ತಾ ಇರುವ ಮೋದಿ-ಶಾ ಸರ್ಕಾರದ ನಡೆ ಭಾರತೀಯರಲ್ಲಿ ಕಿತ್ತು ತಿನ್ನುವ, ಕೊಂದು ಬದುಕುವ ತತ್ವಕ್ಕೆ ಪ್ರೇರಣೆ ನೀಡಿದೆ ಅಷ್ಟೇ.

Article 370 ರಿಂದ ಭಾರತಕ್ಕೆ ಏನು ಲಾಭ ಎಂದು ಕೆಲವರು ಕೇಳುತ್ತಿದ್ದಾರೆ. ಅರೆ, ಅದು ಯಾರ ಲಾಭಕ್ಕಾಗಿ ಮಾಡಿದ್ದಲ್ಲ ಮಾರಾಯರೆ. ಕಾಶ್ಮೀರ ಭಾರತಕ್ಕೆ ಸೇರುವಾಗ ಕೇಂದ್ರ ಸರ್ಕಾರಕ್ಕೂ ಕಾಶ್ಮೀರಿ ಜನರಿಗೂ ಆದ ಒಪ್ಪಂದದ ಪ್ರಕಾರ 370ನೇ ವಿಧಿ ಕಾಶ್ಮೀರಿಗಳ ಹಕ್ಕು. ಅದು ಭಾರತ ನೀಡಿದ ಉಡುಗೊರೆಯಲ್ಲ. ಅದರ ಭವಿಷ್ಯ ನಿರ್ಧರಿಸಬೇಕಾಗಿದ್ದು ಮೋದಿ, ಶಾ ಅಥವಾ ಭಾರತದ ಇತರ ಜನರಲ್ಲ. ಸ್ವತಃ ಕಾಶ್ಮೀರದ ಜನತೆ, ಅಲ್ಲಿನ ಜನಪ್ರತಿನಿಧಿಗಳು… ಈಗ ಅವರೆಲ್ಲರ ಮೇಲೆ ತುರ್ತುಪರಿಸ್ಥಿತಿ ಹೇರಿ ಸರ್ಕಾರ ಕಾಶ್ಮೀರಿಗಳ ಹಕ್ಕನ್ನು ಕಿತ್ತುಕೊಂಡಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿತ್ತು.

ಆದರೆ ಮೇಲೆ ಹೇಳಿದ predator ಮನಸ್ಥಿತಿ, ಇದನ್ನು ಪ್ರಚುರ ಪಡಿಸುವ ಟೀವಿ ಚಾನಲ್ ಗಳು ವಿರುದ್ಧ ದಿಕ್ಕಿನಲ್ಲಿ ಯೋಚಿಸುವಂತೆ, ಕಾಶ್ಮೀರದ ಹಕ್ಕನ್ನು ಕಿತ್ತುಕೊಂಡಿರುವುದನ್ನು ಸಂಭ್ರಮಿಸುವಂತೆ ಮಾಡುತ್ತಿವೆ… ಇಡೀ ದೇಶ ರೋಗಗ್ರಸ್ತವಾಗುತ್ತಿರುವುದರ ಸಿಂಪ್ಟಮ್ ಇದೆಂದು ಹೇಳಬಹುದು.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version