ಅಂಕಣ

ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

Published

on

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

ವಸ್ತು ಪ್ರದರ್ಶನ

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

ದೇಸೀ ಆಟಗಳು

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮ‌ಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ‌ಉತ್ಸವ’-2025.
| ಡಾ.ಬಿ‌.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

Trending

Exit mobile version