ದಿನದ ಸುದ್ದಿ

ದಾವಣಗೆರೆ | ಶಿಷ್ಯವೇತಕ್ಕಾಗಿ ಪಟ್ಟು ಬಿಡದ ವೈದ್ಯಕೀಯ ವಿದ್ಯಾರ್ಥಿಗಳು : 10 ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

Published

on

ಸುದ್ದಿದಿನ,ದಾವಣಗೆರೆ :  ನಗರದ ಜಯದೇವ ಸರ್ಕಲ್ ನಲ್ಲಿ ಶಿಷ್ಯವೇತಕ್ಕಾಗಿ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ ಬುಧವಾರ ಹತ್ತನೇದಿನಕ್ಕೆ ಕಾಲಿಟ್ಟಿದೆ. ಈ ಹಿಂದೆ ವೈದ್ಯ ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವೆ ನಡೆದ ಸಂಧಾನಗಳೆಲ್ಲಾ ವಿಫಲವಾಗಿದ್ದು, ಶಿಷ್ಯವೇತನದ ಪಡೆಯದೆ ನಾವು ಮುಷ್ಕರ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

230 ವಿದ್ಯಾರ್ಥಿಗಳ 16 ತಿಂಗಳ 8 ಕೋಟಿ ಶಿಷ್ಯವೇತನ ಬಾಕಿಯಿದ್ದು, ಜೆಜೆಎಂ ಕಾಲೇಜು ಆಡಳಿತ ಮಂಡಳಿ ಮತ್ತು ಸರ್ಕಾರದ ಹಗ್ಗ ಜಗ್ಗಾಟದ ನಡುವೆ ವಿದ್ಯಾರ್ಥಿಗಳ ಬದುಕು ಬೀದಿಗೆ ಬಂದಿದೆ. ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದವರಾಗಿದ್ದಾರೆ‌. ಹಲವು ಕನಸುಗಳನ್ನು ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳು 16 ತಿಂಗಳು ಕಾಲ ಶಿಷ್ಯವೇತನ ಪಡೆಯದೆ ಪುಸ್ತಕಗಳು, ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಅಗತ್ಯ ವಸ್ತುಗಳನ್ನು ಕೊಳ್ಳಲು ಹಣವಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೋನಾ ಸಂಕಷ್ಟದಲ್ಲಿ ಕೆಲವು ವಿದ್ಯಾರ್ಥಿಗಳು ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಸಂಕಷ್ಟಕ್ಕೆ ಸರ್ಕಾರ ಮತ್ತು ಆಡಳಿತ ಮಂಡಳಿ ಸ್ಪಂದಿಸದೇ ಇರುವುದು ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದೆ. ಸಧ್ಯ ಮಳೆ ಆರಂಭವಾಗಿದ್ದು ಮಳೆಯನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ಆರಂಭ ಮಾಡಿದ ಇವರು, ಮಂಗಳವಾರ ನಾಟಕ ರೂಪಕಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಸಚಿವರು ಹೀಗೆ ಬಂದು ಹಾಗೆ ಹೋದ್ರು

ಜುಲೈ 4 ರಂದು ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಅವರು “ಮುಖ್ಯಮಂತ್ರಿಗಳು ಹಾಗೂ ವೈದ್ಯಕೀಯ ಸಚಿವರೊಂದಿಗೆ ಈ ಕುರಿತು ಸಭೆ ನಡೆಸಿ ಚರ್ಚಿಸಲಾಗಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಲಾಗುವುದು.

ಹಾಗೂ ಕಾಲೇಜಿನ ಆಡಳಿತ ಮಂಡಳಿಯೇ ಶಿಷ್ಯವೇತನ ಭರಿಸಬೇಕೆಂದು ಮುಖ್ಯಮಂತ್ರಿಗಳು ತಿಳಿಸಿರುವ ಪ್ರಕಾರ ಆಡಳಿತ ಮಂಡಳಿಯವರು ಒಪ್ಪಿಕೊಂಡಿರುತ್ತಾರೆ. ಸೋಮವಾರದ (ಜುಲೈ 06) ನಂತರ ಗೃಹವೈದ್ಯರಿಗೆ ಶಿಷ್ಯವೇತನವನ್ನು ಶೀಘ್ರವಾಗಿ ಬಿಡುಗಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.

ಆದರೆ ಜೆಜೆಎಂ ಕಾಲೇಜಿನ ಆಡಳಿತ ಮಂಡಳಿ ನಾವು ಶಿಷ್ಯವೇತನ ಕೊಡಲು ಆಗುವುದಿಲ್ಲ ಎಂದು ಮನವಿ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಸರ್ಕಾರ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸಚಿವ ಭೈರತಿ ಬಸವರಾಜ್ ವೈದ್ಯಕೀಯ ವಿದ್ಯಾರ್ಥಿಗಳನ್ನು ಭೇಟಿ ನೀಡಿದ ಸಂದರ್ಭ

ಶಿಷ್ಯ ವೇತನ ನೀಡದಿದ್ದರೂ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ

ಸರ್ಕಾರ ಶಿಷ್ಯ ವೇತನ ನೀಡದಿದ್ದರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೇ 16 ತಿಂಗಳ ಶಿಷ್ಯವೇತನ ನೀಡದೆ  ಸರ್ಕಾರ ಸತಾಯಿಸುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಮಳೆಯ ನಡುವೆಯೂ ಪ್ರತಿಭಟನೆ

ನಗರದಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿದ್ದು, ಲಿಖಿತ ರೂಪದಲ್ಲಿ ಸರ್ಕಾರ ಹೇಳಿಕೆ ಕೊಡುವವರೆಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version