ಭಾವ ಭೈರಾಗಿ

ಕಾವಲುಗಾರ ಹೆಗಲಿಗೆ, ದುಃಖದುಮ್ಮಾನ ಮಗಳಿಗೆ

Published

on

ಚಿತ್ರವನ್ನು ಯಾರು ತೆಗೆದಿದ್ದೊ ಏನೊ, ಆದರೆ ಇಂದಿನ ದಿನಗಳಲ್ಲಿ ಅತ್ಯಂತ ಸಾಂದರ್ಭಿಕ ಚಿತ್ರವಾಗಿದೆ. ಆಕಾಶದ ಮತ್ತು ಬಾಹ್ಯಾಕಾಶದ ಸಾಧನೆಯನ್ನೇ ತನ್ನ ಸಾಧನೆ ಎಂಬಂತೆ ಹೆಗಲಮೇಲೆ ಕೂರಿಸಿ ಮೆರೆಯುವುದು; ನೆಲಮಟ್ಟದ ಕಷ್ಟ ಕಾರ್ಪಣ್ಯಗಳನ್ನು ಮರೆಯುವುದು. ಇವೆರಡನ್ನೂ ಈ ಚಿತ್ರ ಪ್ರತಿನಿಧಿಸುತ್ತದೆ.

‘ಹಸಿವೆಯ ಸೂಚ್ಯಂಕ’ದಲ್ಲಿ ಭಾರತದ ಶ್ರೇಯಾಂಕ ತೀರಾ ಕೆಳಕ್ಕಿದೆ . 119 ದೇಶಗಳ ಪೈಕಿ ನಮ್ಮ ಶ್ರೇಯಾಂಕ 103 ಇದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ನವಜಾತ ಶಿಶುಗಳು ಸಾಯುತ್ತಿವೆ. ಬಡವರಿಗೆ ಅಷ್ಟಿಷ್ಟು ದುಡಿಮೆ ಕೊಡುತ್ತಿದ್ದ ನರೇಗಾ MNREGA ಯೋಜನೆಯಲ್ಲಿ ಕೇಂದ್ರ ಸರಕಾರ ಧನಸಹಾಯ ಕಡಿತ ಮಾಡಿದೆ. ಹಸಿದವರಿಗೆ ಅಷ್ಟಿಷ್ಟು ಊಟ ಕೊಡುತ್ತಿದ್ದ ಯೋಜನೆಗಳೂ ‘ಆಧಾರ್’ ಎಡವಟ್ಟುಗಳಿಂದಾಗಿ ಗ್ರಾಮೀಣ ಮಹಿಳೆಯರ ಕೈತಪ್ಪುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಿಂದೆಂದಿಗಿಂತ ಹದಗೆಟ್ಟಿವೆ. ಕೃಷಿಗೆ ವಿದಾಯ ಹೇಳಿ ಕೂಲಿನಾಲಿ ಹುಡುಕುವ ‘ಅಸಂಘಟಿತ ಕಾರ್ಮಿಕ’ರ ಸಂಖ್ಯೆ ಅಪಾರವಾಗಿ ಹೆಚ್ಚುತ್ತಿದೆ.

ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಭಾರತದ ಶ್ರೇಯಾಂಕ 130ರಷ್ಟು ಕೆಳಕ್ಕಿದೆ. ‘ಸಂತಸ ಶ್ರೇಯಾಂಕ’ ಕೂಡ ಅಷ್ಟೇ ಕೆಳಕ್ಕಿದೆ. (130). ಅದು ಮೇಲೇರುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ 40 ವರ್ಷಗಳಿಂದಲೂ ಕುಸಿಯುತ್ತಿದ್ದ ಗ್ರಾಮಭಾರತದ ಸ್ಥಿತಿಗತಿ ಈಗ ಇನ್ನಷ್ಟು ಕುಸಿಯುತ್ತಿದೆ. ಮೇಲಕ್ಕೆ ಏರುತ್ತಿರುವುದು ಡಾಲರ್ ಶತಕೋಟ್ಯಧೀಶರ ಸಂಖ್ಯೆ; ಅದೂ 130ರ ಆಸುಪಾಸು ಇದೆ! ಈಗ ಈ ಚಿತ್ರವನ್ನು ಮತ್ತೊಮ್ಮೆ ನೋಡಿ.
ಇಂಥ ಸಂಗತಿಗಳ ಬಗ್ಗೆ ಚಾನೆಲ್ಲುಗಳು, ಅಭ್ಯರ್ಥಿಗಳು ಚರ್ಚೆ ಮಾಡುತ್ತಿದ್ದರೆ ತಿಳಿಸಿ. ಈ ಚಿತ್ರ ತೆಗೆದವರ ಹೆಸರು ಗೊತ್ತಿದ್ದರೂ ತಿಳಿಸಿ.

ನಾಗೇಶ್ ಹೆಗಡೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version