ಅಂತರಂಗ
ವರ್ಣಭೇದ, ಧರ್ಮಭೇದ, ಜಾತಿಬೇಧದ ವಿರುದ್ಧ ಒಂದಾಗೋಣ ನಾವೆಲ್ಲಾ..!
- ಕ್ರಾಂತಿರಾಜ್ ಒಡೆಯರ್ ಎಂ,ಸಹಾಯಕ ಪ್ರಾಧ್ಯಾಪಕರು,ವ್ಯವಹಾರ ನಿರ್ವಹಣಾ ವಿಭಾಗ,ಸೇಪಿಯೆಂಟ್ ಕಾಲೇಜು,ಮೈಸೂರು
ಇಂದು ಇಡೀ ಅಮೇರಿಕಾ ದೇಶ ಒಟ್ಟಾಗಿ ನಿಂತಿದೆ. ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ – ಅಮೆರಿಕನ್ ವ್ಯಕ್ತಿ ಮೆಟಾಪೊಲಿಸ್ ಪ್ರಾಂತ್ಯದ ಪೊಲೀಸ್ ಅಧಿಕಾರಿಯಿಂದ ಅಮಾನುಷವಾಗಿ ಕೊಲ್ಲಲ್ಪಟ್ಟಿದ್ದು, ಇದನ್ನು ವಿರೋಧಿಸಿ ಅಮೆರಿಕಾದ ಎಲ್ಲಾ ವರ್ಣೀಯರು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಸಾರಿ, ಮೃತ ಜಾರ್ಜ್ ಫ್ಲಾಯ್ಡ್ ಗೆ ನ್ಯಾಯ ಕೊಡಿಸಲು ಪಣತೊಟ್ಟಿದ್ದಾರೆ.
ಅಮೇರಿಕಾ ದೇಶದಲ್ಲಿ ಇಂದು ಆಗುತ್ತಿರುವ ಪ್ರತಿಭಟನೆಗಳನ್ನು ಮಾಧ್ಯಮಗಳಲ್ಲಿ ನೋಡುತ್ತಾ ಇದ್ದೆ. ಒಂದು ಕಡೆ ವ್ಯವಸ್ಥೆಯ ಬಗ್ಗೆ ಕೆಟ್ಟ ಕೋಪ. ಮತ್ತೊಂದೆಡೆ ಜಾರ್ಜ್ ಫ್ಲಾಯ್ಡ್ ನಂತೆ ಭೇದವನ್ನು ಅನುಭವಿಸುತ್ತಿರುವವರನ್ನು ನೆನೆದು ಕಣ್ಣಲ್ಲಿ ನೀರು.
ನೆನ್ನೆ ನನ್ನ ಸ್ನೇಹಿತರೊಬ್ಬರಿಗೆ ಬಾಡಿಗೆ ಮನೆ ಹುಡುಕುತ್ತಿದ್ದ ಸಂದರ್ಭ. ಮನೆಯ ಮುಂದೆ “ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ” ಎಂಬ ಬೋರ್ಡು. ನಮೂದಿಸಿದ್ದ ಫೋನ್ ನಂಬರಿಗೆ ಕರೆ ಮಾಡಿದಾಗ ಆ ಮನೆಯ ಮಾಲೀಕರೊಡನೆ ನೆಡೆದ ಸಂಭಾಷಣೆ.
ನಾನು: ಸರ್ ನಮಸ್ಕಾರ. ನಿಮ್ಮ ಮನೆ ಬಾಡಿಗೆಗೆ ಇದೆ ಅಂತ ಬೋರ್ಡ್ ಹಾಕಿದೆ. ನಮ್ಮ ಸ್ನೇಹಿತರೊಬ್ಬರಿಗೆ ಬೇಕಾಗಿತ್ತು. ಅವರು ಜಿಲ್ಲಾ ಪಂಚಾಯತ್ ಅಲ್ಲಿ ಆಫೀಸರ್ ಆಗಿದ್ದಾರೆ. ಎಷ್ಟು ಸರ್ ಬಾಡಿಗೆ.
ಮನೆಯ ಮಾಲೀಕ: ಬಾಡಿಗೆ 15000. ಮೊದಲು ಮನೆ ನೋಡಿ. ಇಷ್ಟ ಆದರೆ ಬಾಡಿಗೆ ಮಾತನಾಡುವ.
ನಾನು: ಸರಿ ಸರ್. ಹಾಗಾದ್ರೆ ಎಷ್ಟೋತ್ತಿಗೆ ಬರ್ಲಿ ಮನೆ ನೋಡೋಕೆ! ಮನೆ ಕೀ ಯಾರ ಹತ್ತಿರ ಇದೆ!
ಮನೆಯ ಮಾಲೀಕ: ಸರ್ ನೀವು ವೇಜ್ಜೋ ನಾನ್ ವೇಜ್ಜೊ!
ನಾನು: ನಾನ್ ವೆಜ್ಜು ಸರ್.
ಮನೆಯ ಮಾಲೀಕ: ನಾವು ವೆಜ್ ಅವರಿಗೆ ಕೊಡೋಣ ಅನ್ಕೊಂಡಿದ್ವಿ. ಅವರನ್ನೇ ಪ್ರಿಫರ್ ಮಾಡೋದು.
ನಾನು: ಪ್ರಾಬ್ಲಮ್ ಇಲ್ಲ ಸರ್. ನಿಮ್ಮ ಇಷ್ಟ. ನಾವು ಬೇರೆ ಮನೆ ನೋಡ್ಕೋತೀವಿ. ಥ್ಯಾಂಕ್ ಯು.
ಮನೆಯ ಮಾಲೀಕ: ಸರ್, ನಾನ್ ವೆಜ್ ಅವರಾದ್ರೂ ಒಕೆ. ನೀವು ಗೌಡರಾ ಅಥವಾ!
ನಾನು: ಇಲ್ಲ ಸರ್. ನಾವು ಅವರಲ್ಲ.
ಮನೆಯ ಮಾಲೀಕ: ಮತ್ತೆ ಯಾರು!
ನಾನು: ನಾವು ಗೌಡ್ರಲ್ಲ.
ಮನೆಯ ಮಾಲೀಕ: ಸರ್, ನಾವು ವೆಜ್ ಅವರನ್ನ ಪ್ರಿಫರ್ ಮಾಡ್ತಾ ಇದೀವಿ. ಸಾರಿ.
ನಾನು: ನೀವು ವೆಜ್ ಅವರನ್ನೇ ಪ್ರಿಫರ್ ಮಾಡ್ತಾ ಇದ್ರೆ, ನೀವು ಗೌಡ್ರ ಅಂತ ಯಾಕೆ ಕೇಳಿದ್ದು! ಸರಿ ಬಿಡಿ. ಧನ್ಯವಾದಗಳು.
ನಾವು ನೆನ್ನೆ ನೋಡಿದ ಬಾಡಿಗೆ ಮನೆಯ ಮಾಲೀಕರೆಲ್ಲರದ್ದೂ ಇದೇ ಚಾಳಿ. “ನಾವು ನಾನ್ ವೆಜ್ ಅವರಿಗೆ ಮನೆ ಕೊಡೋದಿಲ್ಲ”.
ದೇಶ ಆರ್ಥಿಕವಾಗಿ ಎಷ್ಟು ಅಭಿವೃದ್ಧಿ ಹೊಂದಿದರೆ ಏನಂತೆ! ಯಾವ ದೇಶದ ಜನರು ವರ್ಣಭೇದ, ಧರ್ಮಭೇದ, ಜಾತಿಭೇದದಂಥ ಪದ್ದತಿಗಳನ್ನು ಎಲ್ಲಿಯವರೆಗೆ ಆಚರಣೆ ಮಾಡುತ್ತಿರುತ್ತಾರೋ ಹಾಗೂ ಒಂದು ದೇಶವಾಗಿ ನಾವು ಎಲ್ಲಿಯವರೆಗೆ ಜನರಿಗೆ ಅಭಿವೃದ್ಧಿಯ ಜೊತೆಗೆ ತಾರತಮ್ಯ ಹೋಗಲಾಡಿಸುವ ಶಿಕ್ಷಣ ಕೊಡುವುದಿಲ್ಲವೋ, ಅಂತಹ ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ಸತ್ತಂತೆ.
ಜಾರ್ಜ್ ಫ್ಲಾಯ್ಡ್ ಗೆ ಆದ ಅನ್ಯಾಯ ಖಂಡಿಸಲು ಹಾಗು ವರ್ಣಬೇದವನ್ನು ಖಂಡಿಸಲು ಅಮೆರಿಕಾದ ಜನರೆಲ್ಲರೂ ಹೇಗೆ ಜೊತೆಯಾಗಿ ನಿಂತಿದ್ದಾರೋ ಹಾಗೆ ನಮ್ಮ ದೇಶದಲ್ಲೂ ಸಾಮಾಜಿಕ ಭೇದವನ್ನು ಖಂಡಿಸಲು ಜಾತಿ ಧರ್ಮ ವರ್ಣವನ್ನು ಮೀರಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂಬುದು ನನ್ನ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243