ಬಹಿರಂಗ
ಬೌದ್ಧಿಕ ಕ್ರೌರ್ಯವೂ ಮನದ ಮಾತಿನ ಮೌನವೂ
- ನಾ ದಿವಾಕರ
ತಣ್ಣನೆಯ ಮೌನ ಎಂತಹ ಭೀಭತ್ಸ ಕ್ರೌರ್ಯವನ್ನೂ ಮೀರಿಸುವಂತಹ ಬರ್ಬರ ಮನಸ್ಥಿತಿಯ ಸಂಕೇತ. ಭಾರತ ಮೂಲತಃ ಹಿಂಸೆಯ ನಾಡು. ಇಲ್ಲಿ ಹಿಂಸೆಯ ಪರಿಭಾಷೆ ಅಗೋಚರ ತಂತುಗಳಲ್ಲಿ ಅಡಗಿರುತ್ತದೆ. ಇತಿಹಾಸ ಕಾಲದಿಂದಲೂ ಭಾರತದ ಒಡಲಲ್ಲಿ ಈ ತಂತುಗಳು ನೆಲೆ ಕಂಡುಕೊಂಡಿವೆ.
ಪ್ರತ್ಯಕ್ಷವಾಗಿ ನಡೆಯುವ ಹಿಂಸೆಯನ್ನೂ ಸಾಪೇಕ್ಷ ನೆಲೆಯಲ್ಲಿ ನೋಡುವ ಮೂಲಕ ನಾವು ನಮ್ಮ ನಡುವಿನ ಅಹಿಂಸಾತ್ಮಕ ಧೋರಣೆಯನ್ನು ಮುನ್ನೆಲೆಗೆ ತರುತ್ತೇವೆ. ನಾವು ತೊಟ್ಟ ಅಥವಾ ತೊಡುವ ಮಸೂರಗಳು ಹಿಂಸೆ ಮತ್ತು ಅಹಿಂಸೆಯನ್ನು ನಿರ್ಧರಿಸುತ್ತವೆ. ಜಾತಿ ಶ್ರೇಣೀಕರಣದ ನೆಲೆಯಲ್ಲೇ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಗಳೂ ಮೌಲ್ಯಯುತವಾಗಿಬಿಡುತ್ತವೆ.
ಭಾರತದ ಇತಿಹಾಸದಲ್ಲಿ ಅಹಿಂಸಾ ಬೋಧಕರು ಹೇರಳವಾಗಿ ಕಂಡುಬರುತ್ತಾರೆ. ಅಹಿಂಸೆಯನ್ನೇ ಮೂಲತತ್ವವನ್ನಾಗಿ ಬೋಧಿಸುವ ಜೈನ ಧರ್ಮವೂ ಭಾರತದಲ್ಲಿ ಹುಟ್ಟಿದೆ. ಇತರ ಯಾವುದೇ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅಹಿಂಸೆಯ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿದೆ. ಏಕೆಂದರೆ ಇಲ್ಲಿ ಹಿಂಸೆ ಸಮಾಜದ ಅಂತರ್ಗತ ಭಾಗವಾಗಿದೆ.
ಒಂದು ಸಂಸ್ಕøತಿಯಾಗಿದೆ. ಒಂದು ಒಪ್ಪಿತ ನಾಗರಿಕತೆಯೂ ಆಗಿದೆ. ಇಲ್ಲಿ ಹಿಂಸೆಯ ವ್ಯಾಖ್ಯಾನ, ಹಿಂಸೆಗೊಳಗಾದ ವ್ಯಕ್ತಿ, ಸಮುದಾಯ ಅಥವಾ ಅಸ್ಮಿತೆಗಳನ್ನಾಧರಿಸಿರುತ್ತದೆ. ಹಾಗಾಗಿಯೇ ಸಾರ್ವಜನಿಕ ಸಂಕಥನಗಳಲ್ಲಿ ಕೆಲವು ಹಿಂಸೆಗಳು ಸ್ವೀಕಾರಾರ್ಹ ಸಹಜ ಘಟನೆಗಳಾಗಿಬಿಡುತ್ತವೆ. ಅಥವಾ ಅನಿವಾರ್ಯ ಎನಿಸಿಬಿಡುತ್ತವೆ. ಕಾರಣ ಇಷ್ಟೆ, ಹಿಂಸೆಗೊಳಗಾದವರು ಒಂದು ಪ್ರಬಲ ವರ್ಗದ ದೃಷ್ಟಿಯಲ್ಲಿ ಅರ್ಹರೂ ಆಗಿಬಿಡುತ್ತಾರೆ. ಈ ಪ್ರಬಲ ವರ್ಗವೇ ದೇಶದ ಸಾರ್ವಜನಿಕ ಅಭಿಪ್ರಾಯದ ಜನಕ ಆಗಿರುತ್ತದೆ.
ಹಾಗಾಗಿಯೇ ಶತಮಾನಗಳ ನಂತರವೂ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಕ್ಕೆ ಒಂದು ಮಾನವೀಯ ಸಂವೇದನೆಯ ಸ್ಪರ್ಶ ಇರಲೇ ಇಲ್ಲ. ದೇಶದ ಬಹುಸಂಖ್ಯಾತ ಜನರನ್ನು , ಮೂಲ ನಿವಾಸಿಗಳನ್ನು ಶೋಷಿತರಾಗಿಯೇ ಮುಂದುವರೆಸಿ ಶಿಕ್ಷಣ ಮತ್ತು ಸಾಮಾಜಿಕ ಘನತೆಯಿಂದ ವಂಚಿತರನ್ನಾಗಿ ಮಾಡಿದ್ದು ನಮ್ಮ ಲಿಖಿತ ಇತಿಹಾಸದಲ್ಲಿ ಹಿಂಸೆಯ ಚೌಕಟ್ಟಿನಲ್ಲಿ ಚರ್ಚೆಗೊಳಗಾಗಿಲ್ಲ.
ಪೇಶ್ವೆಯರ ಆಡಳಿತದಲ್ಲಿ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳು ಇಂದಿಗೂ ಸಹ ಹಿಂಸೆಯ ಪರಿಕಲ್ಪನೆಯಲ್ಲಿ ವ್ಯಾಖ್ಯಾನಕ್ಕೊಳಗಾಗಿಲ್ಲ. ಈ ಅಮಾನುಷ ಪದ್ಧತಿಗಳನ್ನು ಭಾರತೀಯ ಸಮಾಜದ ನ್ಯೂನತೆ ಎಂದಷ್ಟೇ ಗುರುತಿಸಲಾಗುತ್ತಿದೆಯೇ ಹೊರತು, ಇದು ಭಾರತೀಯ ಶ್ರೇಣೀಕೃತ ಸಮಾಜದಲ್ಲಿ ಅಂತರ್ಗತವಾಗಿದ್ದ ಬೌದ್ಧಿಕ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಯ ಒಂದು ಆಯಾಮ ಎನ್ನುವ ವಿಶ್ಲೇಷಣೆಗಳು ಅಪರೂಪ.
ಈ ಬೌದ್ಧಿಕ ದಾರಿದ್ರ್ಯಕ್ಕೆ ಮೂಲ ಕಾರಣ ಎಂದರೆ ನಾವು ನಮ್ಮ ಸಮಾಜದಲ್ಲಿನ ಬೌದ್ಧಿಕ ಹಿಂಸೆ ಮತ್ತು ಕ್ರೌರ್ಯವನ್ನು ವ್ಯವಸ್ಥೆಯ ಒಂದು ಲೋಪ ಎಂದೇ ಭಾವಿಸಿದ್ದೇವೆಯೇ ಹೊರತು, ಇದು ಒಂದು ಸಮಾಜೋ ಸಾಂಸ್ಕೃತಿಕ ವ್ಯಸನ ಎಂದು ಭಾವಿಸಿಯೇ ಇಲ್ಲ.
ಹಾಗಾಗಿ ಸಮಕಾಲೀನ ಸಂದರ್ಭದಲ್ಲಿ ನಡೆದಿರುವ ಮತ್ತು ಈ ಹೊತ್ತಿನಲ್ಲೂ ಕಂಡುಬರುತ್ತಿರುವ ಕ್ರೌರ್ಯ ಮತ್ತು ಹಿಂಸೆ ಆಳುವ ವರ್ಗಗಳ ದೃಷ್ಟಿಯಲ್ಲಿ ಕಾನೂನು ಸಮಸ್ಯೆಯಾಗಿ ಕಂಡುಬಂದರೆ, ಸಮಾಜದ ದೃಷ್ಟಿಯಲ್ಲಿ ಸಹಜ ಸ್ವಾಭಾವಿಕ ಘಟನೆಗಳಾಗಿ ಕಂಡುಬರುತ್ತವೆ. ಹಥ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ, ಊನ ಗ್ರಾಮದಲ್ಲಿ ವ್ಯವಸ್ಥಿತ ಹಲ್ಲೆಗೊಳಗಾದ ಅಸ್ಪøಶ್ಯರು, ಒಂದು ಮಾಂಸದ ತುಂಡಿಗೆ ಬಲಿಯಾದ ಅಕ್ಲಾಖ್ ಮತ್ತು ಮಲಗುಂಡಿಯಲ್ಲಿ ಬಿದ್ದು ಅಸುನೀಗುತ್ತಿರುವ ಸ್ವಚ್ಚತಾ ಕಾರ್ಮಿಕರು ಹಿಂಸೆಯ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ.
21ನೆಯ ಶತಮಾನದ ಮೂರನೆಯ ದಶಕದಲ್ಲೂ ಅಸ್ಪೃಶ್ಯ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಭಾರತೀಯ ಸಮಾಜದ ಅಭಿಪ್ರಾಯ ಜನಕರಿಗೆ ಹಿಂಸೆ ಎನಿಸುವುದಿಲ್ಲ. ಕೇವಲ ಒಂದು ಬಗೆಹರಿಸಬಹುದಾದ ಸಮಸ್ಯೆ ಎನಿಸುತ್ತದೆ. ಕಾಶ್ಮೀರದ ಉಗ್ರಗಾಮಿಗಳಿಂದ ನಡೆಯುವ ಹತ್ಯೆಗಳು ಹಿಂಸೆಯ ಪರಾಕಾಷ್ಠೆ ಎನಿಸುತ್ತದೆ.
ಕಂಬಾಲಪಲ್ಲಿ, ಕರಂಚೇಡು, ಖೈರ್ಲಾಂಜಿ, ಲಕ್ಷ್ಮಣಪುರಬಾತೆ, ಬತಾನಿತೊಲ, ತ್ಸೆಂಡೂರು ಇವಾವುದೂ ಹಿಂಸಾಕಾಂಡ ಎನಿಸುವುದಿಲ್ಲ. ಹತ್ತಾರು ಜನರನ್ನು ಬಲಿತೆಗೆದುಕೊಂಡ ಮುಂಬೈ ಭಯೋತ್ಪಾದಕ ದಾಳಿ ಶತಮಾನಗಳ ಕಾಲ ಭಾರತದ ಭೂಪಟದಲ್ಲಿ ಕಪ್ಪುಚುಕ್ಕೆಯಾಗುವಂತಹ ಹಿಂಸಾಕಾಂಡದಂತೆ ಕಾಣುತ್ತದೆ. ಸಾವಿರಾರು ಅಮಾಯಕರನ್ನು ಬಲಿಪಡೆದ ಗುಜರಾತ್ ಹಿಂಸಾಕಾಂಡ ರಾಜಧರ್ಮದ ವೈಫಲ್ಯದಂತೆ ಮಾತ್ರವೇ ಕಾಣುತ್ತದೆ.
ಹಿಂಸೆಯನ್ನು ನಾವು ಹೇಗೇ ಸಾಪೇಕ್ಷಗೊಳಿಸಿಬಿಟ್ಟಿದ್ದೇವೆ ಎನ್ನಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ. ಹಿಂಸೆಗೊಳಗಾಗುವವರು ಯಾರು ಮತ್ತು ಹಿಂಸೆಯ ಜನಕರು ಯಾರು ಎನ್ನುವ ಪ್ರಶ್ನೆಗಳೇ ನಮ್ಮ ದೇಶದಲ್ಲಿ ಕ್ರೌರ್ಯ ಮತ್ತು ಹಿಂಸೆಯ ಸಂಕಥನವನ್ನು ರೂಪಿಸುತ್ತದೆ. ಇದು ಮನುವಾದಿ ಬ್ರಾಹ್ಮಣ್ಯದ ಒಂದು ಚಾರಿತ್ರಿಕ ಕೊಡುಗೆಯಾದರೆ ಮತ್ತೊಂದೆಡೆ ಭಾರತೀಯ ಸಮಾಜದಲ್ಲಿ ಬೇರೂರಿರುವ ಊಳಿಗಮಾನ್ಯ ಧೋರಣೆಯ ಕೊಡುಗೆಯೂ ಹೌದು. ಕೋವಿದ್ ಸಂದರ್ಭದಲ್ಲಿ ಮೂರು ತಿಂಗಳ ಲಾಕ್ ಡೌನ್ ಬಂಧನದಿಂದ ಕಂಗೆಟ್ಟು ವಿಚಲಿತವಾದ ಒಂದು ಸಮಾಜಕ್ಕೆ ಕಾಶ್ಮೀರದ ಜನತೆ ಒಂದು ವರ್ಷದ ಕಾಲ ದಿಗ್ಬಂಧನಕ್ಕೆ ಒಳಗಾಗಿದ್ದುದು ಹಿಂಸೆ ಎನಿಸಲೇ ಇಲ್ಲ.
ಕಾರಣ ಏನೆಂದರೆ ದೈಹಿಕ ಹಿಂಸೆಯನ್ನಷ್ಟೇ ನಾವು ಹಿಂಸೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತೇವೆ. ಬೌದ್ಧಿಕ ಹಿಂಸೆಯನ್ನು ಮಾನವ ಸಹಜ ಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ನರನಾಡಿಗಳಲ್ಲಿ ಹರಿಯುತ್ತಿರುವುದು ಬೌದ್ಧಿಕ ಕ್ರೌರ್ಯ ಮತ್ತು ಮಿದುಳಿನಲ್ಲಿ ಸದಾ ಜಾಗೃತವಾಗಿರುವುದು ಬೌದ್ಧಿಕ ಹಿಂಸೆ.
ಹಾಗಾಗಿಯೇ ತಲೆಯ ಮೇಲೆ ಮಲ ಹೊರುವುದು ನಮಗೆ ಕಸುಬು ಎನಿಸುತ್ತದೆ, ಹಿಂಸೆ ಎನಿಸುವುದಿಲ್ಲ. ಈ ಧೋರಣೆಯ ಒಂದು ಆಯಾಮವನ್ನು ನಾವು ಇಂದಿನ ರೈತ ಹೋರಾಟದ ನಡುವೆ ಕಾಣುತ್ತಿದ್ದೇವೆ. ಒಂದು ಪ್ರಜಾಸತ್ತಾತ್ಮಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಬೌದ್ಧಿಕ ಕ್ರೌರ್ಯ ನೆಲೆ ಮಾಡಿರುವುದನ್ನು ಭಾರತ ಸರ್ಕಾರದ ಧೋರಣೆಯಲ್ಲಿ ಕಾಣುತ್ತಿದ್ದೇವೆ.
ನವಂಬರ್ 26 , 2020ರಂದು ಆರಂಭವಾದ ರೈತರ ಪ್ರತಿಭಟನೆಗೆ ಇಂದಿಗೆ 40 ದಿನಗಳಾಗುತ್ತದೆ. ಒಂದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಾರ್ವಭೌಮ ಪ್ರಜೆಗಳ ನಡುವೆ ಉಗ್ರಗಾಮಿಗಳನ್ನು, ಭಯೋತ್ಪಾದಕರನ್ನು ಹೆಕ್ಕಿ ತೆಗೆಯುವಷ್ಟು ಕ್ರೌರ್ಯ ಭಾರತದ ಮಣ್ಣಲ್ಲಿ ಇರಲು ಸಾಧ್ಯವೇ ? ಹೌದು ಎಂದೇ ಹೇಳಬೇಕಾಗುತ್ತದೆ.
ಏಕೆಂದರೆ ಇದೇ ಆಡಳಿತ ವ್ಯವಸ್ಥೆಯಲ್ಲಿ ಹತ್ತು, ಹದಿನೈದರ ಹರೆಯದ ಮಕ್ಕಳೂ ಉಗ್ರಗಾಮಿಗಳ ಪಟ್ಟಿಗೆ ಸೇರಿ ಗುಂಡೇಟಿಗೆ ಬಲಿಯಾಗಿದ್ದಾರೆ. ಇದೇ ಆಡಳಿತ ವ್ಯವಸ್ಥೆಯಲ್ಲಿ ಸಜೀವ ದಹನಕ್ಕೊಳಗಾದ ಅಮಾಯಕ ಜೀವಗಳು ನ್ಯಾಯವಂಚಿತವಾಗುತ್ತವೆ. ತಮ್ಮ ಸಾಂವಿಧಾನಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿ ಯುವಜನರಲ್ಲಿ “ ನಗರ ನಕ್ಸಲರನ್ನು ತುಕಡೆ ತುಕಡೆ ಗುಂಪನ್ನು ” ಗುರುತಿಸಲಾಗುತ್ತದೆ.
ಇದೇ ಮಣ್ಣಲ್ಲಿ, ತಮ್ಮ ಅರಣ್ಯ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುವ ಆದಿವಾಸಿಗಳನ್ನು ಉಗ್ರಗಾಮಿಗಳಂತೆ ಕಾಣಲಾಗುತ್ತದೆ. ನಿಷ್ಕಾರುಣ್ಯವಾಗಿ ಅವರ ಶತಮಾನಗಳ ಮೂಲ ನೆಲೆಗಳನ್ನು ಧ್ವಂಸ ಮಾಡಲಾಗುತ್ತದೆ. ಇದೇ ಮಣ್ಣಿನಲ್ಲಿ ಒಂದು ಪ್ರಾಣಿಯ ಪಾವಿತ್ರ್ಯತೆಗಾಗಿ ನೂರಾರು ಮನುಜ ಜೀವಗಳನ್ನು ಬಲಿ ಕೊಡಲಾಗುತ್ತದೆ.
ಇದೇ ಮಣ್ಣಿನಲ್ಲಿ ಜಾತಿ, ಮತಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ನರಬಲಿ ನೀಡುವುದನ್ನು ಸಹಜ ಪ್ರಕ್ರಿಯೆಯಂತೆ ಸ್ವೀಕರಿಸಲಾಗಿದೆ. ಒಂದು ಪೂಜಾ ಸ್ಥಳ, ಒಂದು ಮಂದಿರ, ಒಂದು ಮಸೀದಿ ಅಥವಾ ಇಗರ್ಜಿ ಹಲವು ಜೀವಗಳಿಗೆ ಪ್ರಾಣಾಂತಿಕವಾಗುವ ಒಂದು ಸಮಾಜೋ ಸಾಂಸ್ಕøತಿಕ ವ್ಯವಸ್ಥೆಯನ್ನೂ ನಾವು ಕಂಡಿದ್ದೇವೆ. ಈ ವಿದ್ಯಮಾನಗಳಲ್ಲಿ ಕಂಡುಬರುವ ದೈಹಿಕ ಹಿಂಸೆಗಿಂತಲೂ ನಮ್ಮನ್ನು, ಅಂದರೆ ನಾಗರಿಕ ಪ್ರಜ್ಞೆ ಇರುವ ಜನರನ್ನು, ಹೆಚ್ಚು ಕಾಡಬೇಕಿರುವುದು ಈ ಮನಸುಗಳಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ.
ಈ ಬೌದ್ಧಿಕ ಕ್ರೌರ್ಯವನ್ನು ನಾವಿಂದು ಸಂಸದೀಯ ಪ್ರಜಾತಂತ್ರದ ಕಟಕಟೆಯಲ್ಲಿ ಕಾಣುತ್ತಿದ್ದೇವೆ. ಭಾರತದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯ ಆವರಣದಲ್ಲಿ ಕಾಣುತ್ತಿದ್ದೇವೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಈಗಾಗಲೇ ನಮ್ಮ ಆಡಳಿತ ವ್ಯವಸ್ಥೆಯ ನಿರ್ವೀರ್ಯತೆ, ನಿರ್ಲಜ್ಜತೆ ಮತ್ತು ಕ್ರೂರ ಮುಖವಾಡವನ್ನು ಕಳಚಿಹಾಕಿದೆ.
ರಾಜಧಾನಿಯ ನಾಲ್ಕೂ ಕಡೆ ನೆರೆದಿರುವ ಲಕ್ಷಾಂತರ ರೈತಾಪಿಯ ನಡುವೆ ಖಲಿಸ್ತಾನಿಗಳು, ಭಯೋತ್ಪಾದಕರು, ಉಗ್ರಗಾಮಿಗಳು, ನಗರ ನಕ್ಸಲರು, ದೇಶದ್ರೋಹಿಗಳು ಅಥವಾ ‘ ತುಕಡೆ ತುಕಡೆ ಗುಂಪುಗಳು’ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಈ ಹೋರಾಟಗಾರರೊಡನೆ ಕೇಂದ್ರ ಸಚಿವರು ಭೋಜನದ ಸವಿ ಉಂಡಿದ್ದಾರೆ. ಆದರೂ ಈ ನೊಂದ ಜೀವಗಳಿಗೆ ಒಂದು ಮಾನವೀಯ ಸ್ಪಂದನೆ, ಅವರ ಸಮಸ್ಯೆಗಳಿಗೆ ಸಂವೇದನಾಶೀಲ ಸ್ಪರ್ಶ ದೊರೆಯುತ್ತಿಲ್ಲ.
ಈ ಹೋರಾಟ ತಡೆಯಲಸಾಧ್ಯವಾದ ಚಳಿಯಲ್ಲಿ ನಡೆಯುತ್ತಿದೆ, ಕಳೆದ ಹಲವು ದಿನಗಳಿಂದ ಮಳೆಯ ಪ್ರಮಾಣ, ಶೀತಲ ಗಾಳಿ ಹೆಚ್ಚಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ರೈತರು ಅಸುನೀಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿ ಒಂದು ಸರ್ವಾಧಿಕಾರಿ ಆಡಳಿತವೇ ಇದ್ದಿದ್ದರೂ ಬಹುಶಃ, ಮೂರು ಕೃಷಿ ಮಸೂದೆಗಳನ್ನು ಭಿನ್ನಾಭಿಪ್ರಾಯಗಳು ಬಗೆಹರಿಯುವವರೆಗೂ ಅಮಾನತಿನಲ್ಲಿರಿಸುವ ಆಶ್ವಾಸನೆ ನೀಡಿ ಮುಷ್ಕರ ಕೊನೆಗೊಳಿಸಲು ಯತ್ನಿಸುತ್ತಿತ್ತು.
ಆದರೆ ಒಂದು ಚುನಾಯಿತ ಸರ್ಕಾರ ಈ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡಿದೆ. ಮುಷ್ಕರ ನಿರತ ರೈತರ ಬಳಿಗೆ ಖುದ್ದಾಗಿ ಒಮ್ಮೆ ಭೇಟಿ ನೀಡುವ ಸಂಯಮವೂ ಇಲ್ಲದ ಪ್ರಧಾನಮಂತ್ರಿ, ಕನಿಷ್ಟ ಮಡಿದ ರೈತರಿಗೆ ಅನುಕಂಪ ಸೂಚಿಸುವ ಮಾತುಗಳನ್ನೂ ಆಡದಿರುವುದು ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯವನ್ನು ಸೂಚಿಸುತ್ತದೆ.
ದೆಹಲಿ ಗಡಿಯಲ್ಲಿ ಸಂಭವಿಸಿರುವ ಸಾವುಗಳು ವ್ಯವಸ್ಥೆಯ ನಿಷ್ಕ್ರಿಯತೆಯ ಫಲ ಎಂದರೂ ತಪ್ಪೇನಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಠಮಾರಿ ಧೋರಣೆ ಸಲ್ಲದು ಎನ್ನುವ ಕನಿಷ್ಟ ನಾಗರಿಕ ಪ್ರಜ್ಞೆ ಆಡಳಿತ ನಿರ್ವಹಣೆ ಮಾಡುವವರಲ್ಲಿ ಇರಬೇಕಲ್ಲವೇ ? ಹೆಂಗಸರು, ಮಕ್ಕಳು, ವೃದ್ಧರು, ಯುವಕರು, ನಿವೃತ್ತ ಯೋಧರು ಹೀಗೆ ವಯೋಮಾನ, ಲಿಂಗ, ಜಾತಿ, ಧರ್ಮ ಯಾವುದೇ ಬೇಧವಿಲ್ಲದೆ ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ಕೊರೆವ ಚಳಿಯಲ್ಲಿ, ಸುರಿವ ಮಳೆಯ ನಡುವೆ ತಮ್ಮವರನ್ನು ಕಳೆದುಕೊಳ್ಳುತ್ತಿರುವ ರೈತರನ್ನು ಕುರಿತು “ ನೀವು ಮುಷ್ಕರ ಹಿಂಪಡೆಯಿರಿ, ನಿಮ್ಮ ಅನುಮಾನಗಳನ್ನು ಪರಿಶೀಲಿಸುತ್ತೇವೆ, ಅಲ್ಲಿಯವರೆಗೂ ಮೂರು ಕೃಷಿ ಮಸೂದೆಗಳ ಅನುಷ್ಟಾನವನ್ನು ತಡೆಹಿಡಿಯುತ್ತೇವೆ ” ಎಂದು ಹೇಳಿದ್ದರೂ ಸಾಕಿತ್ತು, ಈ ಸರ್ಕಾರಕ್ಕೆ ಮತ್ತು ಸರ್ಕಾರವನ್ನು ನಿರ್ವಹಿಸುವವರಿಗೆ ಮನುಷ್ಯತ್ವ ಇದೆ ಎಂದು ಹೇಳಬಹುದಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ಮಡಿದ 25ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಪರಿಹಾರ ನೀಡಲೂ ಒಪ್ಪದ ಕೇಂದ್ರ ಸರ್ಕಾರ, ಈ ಕುರಿತ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಕೈತೊಳೆದುಕೊಂಡಿತ್ತು. ಈಗ ರಾಜಧಾನಿಯ ಪಕ್ಕದಲ್ಲೇ ರೈತರು ಸಾಯುತ್ತಿದ್ದಾರೆ, ನಮ್ಮ ಪ್ರಧಾನಮಂತ್ರಿಯವರು ತಮ್ಮ ಮನದ ಮಾತಿನಲ್ಲಿ ಮಾರುಕಟ್ಟೆಗೆ ಸಾಂತ್ವನದ ಮಾತುಗಳನ್ನಾಡುತ್ತಿದ್ದಾರೆ.
25 ವರ್ಷಗಳಲ್ಲಿ ಆತ್ಮಹತ್ಯೆಗೆ ಬಲಿಯಾದ ಮೂರೂವರೆ ಲಕ್ಷ ರೈತರಿಗೆ ಅನುಕಂಪ ತೋರದ ಆಡಳಿತ ವ್ಯವಸ್ಥೆಯಿಂದ ಇಲ್ಲಿ ಸತ್ತ 50 ರೈತರಿಗೆ ಸಾಂತ್ವನ ಬಯಸುವುದೂ ಸಹ ತಪ್ಪೇನೋ ಎನಿಸುತ್ತದೆ. ಅಸಂಖ್ಯಾತ ಜನರ ಮಾರಣಹೋಮಗಳನ್ನು ಸಂಭ್ರಮಿಸುತ್ತಾ, ಅಮಾಯಕರ ಸಮಾಧಿಗಳ ಮೇಲೆ ನುಣುಪಾದ ಹಾಸುಗಲ್ಲುಗಳನ್ನು ಹರಡಿ ಅಧಿಕಾರದ ಜಗನ್ನಾಥ ರಥಚಕ್ರಗಳನ್ನು ಉರುಳಿಸಿದ ಒಂದು ಪರಂಪರೆಯಿಂದ ಮಾನವೀಯ ಸ್ಪಂದನೆ, ಸಂವೇದನೆ ಮತ್ತು ಅನುಕಂಪ ನಿರೀಕ್ಷಿಸುವುದಾದರೂ ಹೇಗೆ ? ಅನ್ಯರ ನೋವಿನಿಂದ ವಿಚಲಿತಗೊಳ್ಳದ, ಮತ್ತೊಬ್ಬರ ಸಾವನ್ನು ಸಂಭ್ರಮಿಸುವ ಮನಸ್ಸುಗಳಷ್ಟೇ ಹೀಗಿರಲು ಸಾಧ್ಯ .
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯ ಎಂದು ಪರಿಗಣಿಸಲಾಗುವ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವ ತನ್ನ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿತ್ತು, ಹಕ್ಕುಗಳನ್ನು ಕಸಿದುಕೊಂಡಿತ್ತು. ಆದರೆ ಅಂದೂ ಸಹ ಈ ರೀತಿಯ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ ಕಂಡುಬಂದಿರಲಿಲ್ಲ. ಕಣ್ಣೆದುರಿನಲ್ಲೇ ನಡೆಯುವ ಸಾವು ನೋವುಗಳಿಗೂ ಸ್ಪಂದಿಸದಿರುವಷ್ಟು ಕ್ರೌರ್ಯ ಭಾರತದ ಪ್ರಜೆಗಳು ಕಂಡಿರಲೂ ಇಲ್ಲ.
ಇಡೀ ದೇಶದ ಪ್ರಜ್ಞಾವಂತ ಮನಸುಗಳನ್ನು ವಿಚಲಿತಗೊಳಿಸುತ್ತಿರುವ ಸಾವು ನೋವಿನ ಚಿತ್ರಣಗಳು ಮನದ ಕದವ ಬಡಿಯದೆ ಇದ್ದರೆ ಆ ಮನದಿಂದ ಸಾಂತ್ವನದ, ಸಂವೇದನೆಯ ಮಾತುಗಳು ಬರುವುದಾದರೂ ಹೇಗೆ ? ಮೌನವೇ ಸಾಕು ಕ್ರೌರ್ಯದ ಛಾಯೆ ಕವಿಯಲು.
ದೆಹಲಿಯ ಗಡಿಯಲ್ಲಿ ಕವಿದಿರುವ ಕಾರ್ಮೋಡಗಳಲ್ಲಿ ತುಂಬಿರುವುದು ಜಲಬಿಂದುಗಳಲ್ಲ, ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನುಷ ಧೋರಣೆಯ ಜಲಾಗಾರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243