ಅಂತರಂಗ

ಅರಿಮೆಯ ಅರಿವಿರಲಿ-9 : ಆತ್ಮರತಿ

Published

on

  • ಯೋಗೇಶ್ ಮಾಸ್ಟರ್

ವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ. ಅವಳ ಶಾಪವೋ ಅವಳಿಗೆ ತನ್ನ ಮಾತನ್ನು ತಾನು ಹೇಳಲಾಗದು. ಇತರರ ಮಾತನ್ನು ಪ್ರತಿಧ್ವನಿಸಬೇಕು. ಹಾಗಾಗಿ ಅವಳಿಗೆ ಗ್ರೀಕ್ ಬೇಟೆಗಾರನಿಗೆ ತನ್ನ ಪ್ರೀತಿಯ ಮಾತುಗಳನ್ನು ಹೇಳಲಾಗದು, ತನ್ನ ಪ್ರಶಂಸೆಯನ್ನೂ ತಿಳಿಸಲಾಗದು. ಅವನೋ ಇವಳ ಕಡೆ ಕಣ್ಣೆತ್ತಿಯೂ ನೋಡದೇ ಓಡಾಡುತ್ತಿರುತ್ತಾನೆ.

ಒಮ್ಮೆ ತಿಳಿಯಾದ ನೀರಿನಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾನೆ. ತನ್ನದೇ ಸೌಂದರ್ಯವನ್ನು ತಾನೇ ನೋಡಿಕೊಂಡು ಪರವಶನಾಗುತ್ತಾನೆ. ಆ ನೀಳ ಮೂಗು, ಹೊಳಪಿನ ಕಣ್ಣುಗಳು, ಗುಲಾಬಿ ದಳದಂತಹ ತುಟಿಗಳು, ನಕ್ಕರೆ ಅರಳಿದ ಹೂವಿನಂತಹ ಮುಖ; ಆಹಾ! ಅದನ್ನು ಮುದ್ದಿಸುವಷ್ಟು ಆಕರ್ಷಕ, ಮೋಹಕ. ಒಂದೇ ಕಣ್ಣೋಟಕೆ ಪ್ರೇಮಿಸಲಾಗುವಂತೆ, ಒಮ್ಮಿಂದೊಮ್ಮೆಲೇ ಮರುಳಾಗಿ ಅಪ್ಪಿ ಇನ್ನಿಲ್ಲವಾಗುವಂತಹ ಸೆಳೆತ. ಅವನು ತನ್ನ ಬಿಂಬಕ್ಕೆ ತಾನೇ ಮೋಹಿತನಾಗಿ ಮುದಪಡೆಯಲು, ಸರಸದಿಂದ ಮುಟ್ಟುತ್ತಾನೆ. ನೀರು ಕಲಕುತ್ತಿದ್ದಂತೆ ಬಿಂಬ ಚದರುತ್ತದೆ. ಇಲ್ಲವಾಗುತ್ತದೆ. ಅಯ್ಯೋ, ತನ್ನ ಮೋಹಕ, ಪ್ರೇಮಪೂರ್ಣ ತನ್ನನ್ನು ಪಡೆಯಲು ನೀರಿಗೆ ಧುಮುಕುತ್ತಾನೆ. ಆದರೆ ಸಿಗುವುದಿಲ್ಲ. ದಡದಲ್ಲೊಂದು ಅವನ ಪ್ರೇಮಕ್ಕೆ ಸಾಕ್ಷಿಯಾಗಿ ಹೂಗಿಡವೊಂದು ಮೂಡುತ್ತದೆ. ಆ ಹೂವಿಗೂ ಅವನದೇ ಹೆಸರು. ನಾರ್ಸಿಸಸ್.

ಆತ್ಮರತಿಯಲೆಗಳು

ನಾರ್ಸಿಸಸ್ ತನ್ನ ತಾನು ಮೋಹಿಸಿಕೊಳ್ಳುವ, ತನಗೆ ತಾನು ಪರವಶವಾಗುವ, ತನ್ನನ್ನು ತಾನೇ ಪ್ರೀತಿಸಿಕೊಳ್ಳುವ ಆತ್ಮರತಿಗೆ ಪ್ರತಿಮೆಯಾಗಿ ನಿಲ್ಲುತ್ತಾನೆ. ಈ ಅರಿಮೆಯೇ ಆತ್ಮರತಿ. ಅವರಿವರ ಅತಿಕ್ರಮಣ ಪ್ರವೇಶವಿರದಿದ್ದಾಗ ಏಕಾಂತದಲ್ಲಿ ಕನ್ನಡಿಯ ಮುಂದೆ ಕುಳಿತುಕೊಂಡು ತನ್ನನ್ನೇ ತಾನೇ ನೋಡಿಕೊಂಡು, ಕಾಣುವ ಎಲ್ಲಾ ವಿವರಗಳನ್ನು ಗಮನಿಸುತ್ತಾ, ಪ್ರಶಂಸಿಸುತ್ತಾ, ನಸುನಗುತ್ತಾ, ಮೋಹಗೊಳ್ಳುತ್ತಾ ಪರವಶವಾಗುವ ಅನುಭವವಿರುವವರಿಗೆ ನಾರ್ಸಿಸಸ್ ನೀರಿನಲ್ಲಿ ತನ್ನ ಬಿಂಬವನ್ನು ಹೇಗೆ ನೋಡಿಕೊಂಡಿದ್ದಿರಬಹುದು ಎಂದು ಅರಿವಾಗುತ್ತದೆ.

ಫೇಸ್ಬುಕ್ ಅಥವಾ ಇನ್ಟಾಗ್ರಾಂನಲ್ಲೋ ಕಣ್ಣಾಡಿಸಿದರೆ ಆತ್ಮರತಿಯ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಮುಖಪುಟವಂತೂ ಆತ್ಮರತಿಯ ಮಹಾಸಾಗರ. ನಾರ್ಸಿಸಿಸಂ ಅಥವಾ ಆತ್ಮರತಿಯ ಅರಿಮೆಯ ಅಲೆಗಳು ಎದ್ದೆದ್ದು ಬರುತ್ತಲೇ ಇರುತ್ತವೆ. ಅಷ್ಟು ಸಾಮಾನ್ಯ. ನಮಗೆ ಹೆಜ್ಜೆಹೆಜ್ಜೆಗೂ ಕಣ್ಣಿಗಪ್ಪಳಿಸುತ್ತಿರುತ್ತವೆ.

ಅದ್ಯಾವುದೋ ಊರ ಹಬ್ಬಕ್ಕೆ ಶುಭಾಶಯ ಕೋರುವ ರಾಜಕಾರಣಿಯ ಅಥವಾ ಮುಂದೆ ನಿಲ್ಲಬಹುದಾದ ಚುನಾವಣಾ ಅಭ್ಯರ್ಥಿಯ ಫ್ಲೆಕ್ಸ್ ನೋಡಿ. ಹೆಸರಿನ ಹಿಂದೆ ಒಂದಿಷ್ಟು ಬಿರುದು ಬಾವಲಿಗಳು, ಗ್ರಾಫಿಕ್ಸ್‍ನಲ್ಲಿ ಹುಲಿ ಸಿಂಹಗಳೂ ಅತ್ತಿತ್ತ ಇದ್ದರೆ ಆಶ್ಚರ್ಯವಿಲ್ಲ. ಈತನೆಂದು ಗುರುತಿಸಲು ಬರಿಯ ಮುಖ ಸಾಕಾದರೂ, ಅವರಿಗೆ ಆತ ತೊಟ್ಟಿರುವ ಬೂಟಿನವರೆಗೂ, ಜೊತೆಗೆ ನಡೆಯ ಭಂಗಿಯನ್ನೂ ತೋರುವ ತವಕ. ಅದನ್ನು ನೋಡಿ, ಆಹಾ, ಆ ಸುಂದರವಾದ ಹೊಳಪುಳ್ಳ ಉಂಗುರವನ್ನು ನೋಡು, ಆಹಾ, ಆ ಚೆಂದದ ಶರ್ಟಿನ ಬಣ್ಣವನ್ನು ನೋಡು.

ಇಂಥವೆಲ್ಲಾ ತೊಟ್ಟಿರುವ, ಹೀಗೆಲ್ಲಾ ಕಾಣುವ ಇವನೇ ನಮ್ಮ ನಾಯಕನಾಗಬೇಕು ಎಂದು ಅವನ ಸೌಂದರ್ಯೋಪಾಸನೆಯಿಂದ ರಸ್ತೆಯಲ್ಲಿ ಓಡಾಡುತ್ತಿರುವವರಾರಾದರೂ ಪರವಶವಾಗುತ್ತಾರೆಂದುಕೊಂಡಿದ್ದೀರಾ?
ಫೇಸ್ಬುಕ್ಕಿನಲ್ಲಿ ಕೆಲವರು ಎಡಕ್ಕೆ ತಿರುಗಿ ಒಂದು ಪಟ, ಬಲಕ್ಕೆ ತಿರುಗೊಂದು ಪಟ, ಹೀಂಗೊಂದು ಪಟ, ಹಾಗೊಂದು ಪಟ. ಮೇಲಿಂದೊಂದು, ಕೆಳಗಿಂದೊಂದು; ನಾನಾ ಭಾವಗಳಲ್ಲಿ, ಭಂಗಿಗಳಲ್ಲಿ ವಿಜೃಂಭಿಸುತ್ತಿರುತ್ತವೆ. ಕೆಲವು ಸಲ ಬರಿಯ ನೋಡುಗರಿಗೆ ಪಟ ಹಾಕಿದವರಿಗೆ ಕಂಡ ವ್ಯತ್ಯಾಸಗಳಾವುವೂ ಕಾಣುವುದೂ ಇಲ್ಲ. ಎಲ್ಲವೂ ಒಂದೇ ಎಂಬಂತೆ ಕಾಣುತ್ತಿರುತ್ತದೆ.

ಇನ್ನೂ ಮುಂದುವರಿದು ತಾವು ತೊಟ್ಟಿರುವ ಪ್ರತಿ ಬಟ್ಟೆಯ ಪಟಗಳನ್ನು ಫೇಸ್ಬುಕ್ಕಿನಲ್ಲಿ ಪೇರಿಸುವುದು ಸಾಲದೆಂದು ಅವರ ಸ್ನೇಹಿತರೆಲ್ಲಿ ನೋಡುವುದರಿಂದ ವಂಚಿತರಾಗಿಬಿಡುತ್ತಾರೋ ಎಂದು ಪ್ರಶಂಸಿಸಬಹುದಾದ ಸ್ನೇಹಿತರಿಗೆಲ್ಲಾ ತಗುಲಿ ಹಾಕಿರುತ್ತಾರೆ. ಲೈಕಿಸಲಿ, ಪ್ರೀತಿಸಲಿ, ವಾವ್ ಎಂದು ಕಣ್ಣು ಬಾಯಿ ಬಿಡಲೆಂಬ ಹೆಬ್ಬಯಕೆ. ಒಂದು ನಾರ್ಸಿಸಸ್ ಮತ್ತೊಂದು ನಾರ್ಸಿಸಸ್ಸನ್ನು ನೋಡುವುದಿಲ್ಲ.

ಆಗ ಈ ನಾರ್ಸಿಸಸ್ ಬಡಪೆಟ್ಟಿಗೆ ಬಗ್ಗದೆ ಆ ನಾರ್ಸಿಸಸ್ ಒಳಪೆಟ್ಟಿಗೆಗೆ ಸಂದೇಶ ಕಳುಹಿಸಿ ಮೆಚ್ಚಿಸಿಕೊಳ್ಳುವವರೆಗೂ ಬಿಡುವುದಿಲ್ಲ.
ಆಹಾ, ಈ ಮುಖ ಎಡಗಡೆಯಿಂದ ಎಷ್ಟು ಸುಂದರ, ಹಾ, ಹಾಗೆಯೇ ಬಲದಿಂದಲೂ ಸುಂದರ ಎಂದು ನಾನಾ ಬಗೆಗಳಿಂದಲೂ ನೋಡುತ್ತಾ ಆನಂದದಿಂದ ರಸಾನುಭೂತಿಯಲ್ಲಿ ಮಿಂದೆದ್ದು ನೋಡುಗಳು ಸುರಸವಾದ ಸಾರ್ಥಕ ಪಡೆಯುತ್ತಾರೆಂದುಕೊಂಡಿದ್ದೀರಾ?
ಬಹಳಷ್ಟು ಸೆಲ್ಫೀ ಅಥವಾ ಸ್ವಂತೀ ಪಟಗಳು ಆತ್ಮರತಿಯ ಬಿಂಬಗಳು.

ಸಾಮಾನ್ಯ ಸಮಸ್ಯೆ

ಆತ್ಮರತಿ ಎಂದರೆ ಆತ್ಮವಿಶ್ವಾಸ ಅಥವಾ ಸ್ವಕೇಂದ್ರಿತ ವ್ಯಕ್ತಿತ್ವವೇನಲ್ಲ. ಅದೊಂದು ಮಾನಸಿಕ ಸಮಸ್ಯೆ. ಕಾರಣ ಮತ್ತು ಪರಿಣಾಮಗಳಿರುವಂತಹ ಬಹಳ ಗುರುತರವಾದಂತಹ ಹಾಗೂ ಗಂಭೀರವಾದ ಸಮಸ್ಯೆಯೇ. ಈ ಆತ್ಮರತಿಯ ಅರಿಮೆಗೆ narcissistic personality disorder (NPD)
ಎಂದು ಕರೆಯುತ್ತಾರೆ. ಆಗಲೇ ಹೇಳಿದಂತೆ ಇದು ನಮ್ಮಲ್ಲಿ ಬಹು ವ್ಯಾಪಕವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳು ಸಮಸ್ಯೆಗಳನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗೆ ಗುರುತಿಸಿಕೊಂಡರೆ ಅವು ಕೊಂಚವಾದರೂ ನಿಯಂತ್ರಣಕ್ಕೆ ಬರುತ್ತವೆ. ನನ್ನಲ್ಲಿ ಆತ್ಮರತಿಯ ಅರಿಮೆ ಇದೆ ಎಂದು ಗುರುತಿಸಿಕೊಂಡರೆ ಪ್ರದರ್ಶನಗಳು ಕೊಂಚ ಕಡಿಮೆಯಾಗಬಹುದು. ಅಥವಾ ಪ್ರದರ್ಶನಗಳಿಗೊಂದು ನಿಯಂತ್ರಣ ಬರಬಹುದು.

ಒಟ್ಟಾರೆ ಆತ್ಮರತಿಯ ಅರಿಮೆಯನ್ನು ಇತರರಲ್ಲಿ ಗುರುತಿಸಲು ಮತ್ತು ತನ್ನಲ್ಲಿ ಗುರುತಿಸಿಕೊಳ್ಳಲು ಫೇಸ್ಬುಕ್ ಮತ್ತು ಫ್ಲೆಕ್ಸುಗಳು ಒಳ್ಳೆಯ ಸಾಧನವಾಗಿವೆ. ಆದರೆ ಈ ಆತ್ಮರತಿಯ ಸಮಸ್ಯೆ ಬರೀ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದರೆ ನಸುನಕ್ಕು ಸುಮ್ಮನಾಗಿಬಿಡಬಹುದಿತ್ತು. ಆದರೆ ಅದು ಗಂಭೀರವಾದ ಒಳಸುಳಿಗಳನ್ನು ಹೊಂದಿವೆ. ಮುಂದೆ ಹೇಳಲಾಗುವ ಎಲ್ಲಾ ಲಕ್ಷಣಗಳೂ ಇರಲೇ ಬೇಕೆಂದೇನಿಲ್ಲ. ಆದರೆ ಇವು ಸಾಮಾನ್ಯ ಲಕ್ಷಣಗಳು. ಇವುಗಳಲ್ಲಿ ಕೆಲವು ಇರಬಹುದು. ಇಲ್ಲದೇ ಇರಬಹುದು. ಕೆಲವರಿಗೆ ಇವುಗಳ ಜೊತೆಗೆ ಇನ್ನೂ ಹಲವಿರಬಹುದು.
ತನಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಪಹಪಿಸುವ ಬಯಕೆ.

ತನ್ನ ಕಡೆಗೆ ಗಮನ ಸೆಳೆಯುವ ಮತ್ತು ಪ್ರಶಂಸೆ ಪಡೆಯುವ ಅದುಮಿಡಲಾಗದ ಆಳದೊಳಗಿಂದೇಳುತ್ತಲೇ ಇರುವ ಆಸೆ. ಬೇರೆಯವರ ಬಗ್ಗೆ ಸಹಾನುಭೂತಿ(empathy)ಇಲ್ಲದಿರುವುದು. ಸಂಬಂಧಗಳಲ್ಲಿ ಸಮಸ್ಯೆಗಳು, ಸ್ವಾರ್ಥ, ಇತರರ ಭಾವನೆಗಳನ್ನು ಪರಿಗಣಿಸದಿರುವುದು.
ಒಟ್ಟಾರೆ ಈ ಆತ್ಮರತಿ ಅರಿಮೆಯು ಕಪ್ಪು ಬಿಳಿಪಿನಷ್ಟು ಸ್ಪಷ್ಟವಾಗಿ ವಿಭಜಿಸಿ ಸ್ಪಷ್ಟೀಕರಿಸಲಾಗದ್ದು. ಬೆಳಕಿನ ವಕ್ರೀಭವನದಿಂದ ಅನೇಕ ಬಣ್ಣಗಳು ಮೂಡುವಂತೆ ವಿವಿಧ ರಂಗುಗಳನ್ನು ಪಡೆದುಕೊಳ್ಳುವಂತಹ ಅರಿಮೆ.
ಇನ್ನೂ ಕೆಲವರಲ್ಲಿ ನೀವು ಗಮನಿಸಬಹುದು.

ತಮ್ಮ ಬಗ್ಗೆ ಅತ್ಯಂತ ಮಹೋನ್ನತದ ಎತ್ತರದ ಭವಿಷ್ಯತ್ತಿನ ಭ್ರಮೆಯಲ್ಲಿ ಬಡಬಡಿಸುತ್ತಿರುವರು. ಅವರ ವಿಶ್ವಾಸಕ್ಕೆ, ಯಶಸ್ಸಿಗೆ, ಅಧಿಕಾರಕ್ಕೆ, ಬುದ್ಧಿಮತ್ತೆಗೆ, ಸೌಂದರ್ಯಕ್ಕೆ, ಪ್ರೇಮಕ್ಕೆ ಸಾಟಿಯೇ ಇಲ್ಲವೆಂಬಂತೆ ಹೇಳಿಕೊಳ್ಳುತ್ತಿರುವರು.

ಬರಹಗಾರನೊಬ್ಬ ತಾನು ರಚಿಸಿದ ಕವನ, ಕತೆ ಅಥವಾ ಲೇಖನವನ್ನು ಸಹಜವಾಗಿ ಪ್ರಕಟಿಸುತ್ತಾನೆ. ಬರಿದೇ ಪ್ರಸ್ತುತ ಪಡಿಸುವುದು ಅಥವಾ ಹಂಚಿಕೊಳ್ಳುವುದೇಕೆಂದರೆ ಅದು ಓರ್ವ ವ್ಯಕ್ತಿಯ ಅಥವಾ ಸಮಾಜದ ಅಭಿಪ್ರಾಯವನ್ನು ಅಥವಾ ಒಲವು ನಿಲುವುಗಳನ್ನು ಅಭಿವ್ಯಕ್ತಿಗೊಳಿಸುತ್ತಿರುತ್ತವೆ. ಹಾಗಾಗಿ ಅದನ್ನು ಅವನು ಹಂಚಿಕೊಳ್ಳುವುದು ಸಹಜ. ಈ ಹಂಚಿಕೊಳ್ಳುವಿಕೆಯಲ್ಲಿ ಪ್ರಶಂಸೆಯ ಹಸಿವಿರಲಾರದು. ಆದರೆ, ತಾವೊಂದು ಸುಂದರವಾದ ಮತ್ತು ಅಪರೂಪವಾದ ಅಥವಾ ವಿಶಿಷ್ಟವಾದ ಕತೆಯೊಂದನ್ನು ಅಥವಾ ಕವನವೊಂದನ್ನು ಬರೆದಿದ್ದೇನೆ ಎಂದು ನಿಮ್ಮ ವಾಟ್ಸಪ್ಪಿಗೋ ಅಥವಾ ಇನ್‍ಬಾಕ್ಸಿಗೋ ಯಾರಾದರೂ ಕಳುಹಿಸಿದ್ದಾರೆಂದರೆ, ಅವರು ಬರಿದೇ ಹಂಚಿಕೊಳ್ಳಲು ಕಳುಹಿಸಿಲ್ಲ. ನಿಮಗೂ ವಿಷಯ ತಿಳಿದಿರಲಿ ಎಂಬ ಸಾಧಾರಣ ಧೋರಣೆಯಲ್ಲ.

ಪ್ರಶಂಸೆಗಳನ್ನು ಉಣಬಡಿಸಿ ನನ್ನ ಆತ್ಮರತಿಯ ಹಸಿವನ್ನು ತಣಿಸಿ ಎಂದು. ಪ್ರಶಂಸೆಗಳಿಗಾಗಿ ಪರಿತಪಿಸುವುದು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಹೆಣಗಾಡಿ ಎಂತಾದರೂ ಪಡೆಯುವುದು, ಕಮಿಷನ್ ಕೊಟ್ಟಾದರೂ ಡಾಕ್ಟರೇಟ್ ಪಡೆದು ಡಾ. ಹಾಕಿಕೊಂಡು ಆನಂದಿಸುವುದು; “ಅದು ಸಾಮಾನ್ಯ” ಕೆಟಗರಿಗೆ ತಳ್ಳಬೇಡಿ. ಆತ್ಮರತಿಯ ಹಸಿವೆಯಿಂದ ಬಳಲುತ್ತಿರುವ ಅರಿಮೆ ಎಂಬ ಅರಿವಿರಲಿ. ಅರಿಮೆಗಳಿರುವುದು ಸಾಮಾನ್ಯವಲ್ಲ. ಸಾಮಾನ್ಯವಾಗಿರುವ ಸಮಸ್ಯೆಗಳು.

ನನಗೆ ಅವರು ಗೊತ್ತು

ಒಂದೆರಡು ವರ್ಷಗಳ ಹಿಂದೆ, ನಮ್ಮ ಮನೆಯ ಹತ್ತಿರವೇ ಮರವೊಂದರ ಕೆಳಗೆ ಧೂಮಪಾನ ಮತ್ತು ಮದ್ಯಪಾನದಲ್ಲಿ ನಿರತರಾಗಿದ್ದ ಯುವಕರ ತಂಡವೊಂದು ಮನೆಯೊಳಗಿದ್ದವರಿಗೆ ಕಿರಿಕಿರಿ ಮಾಡುವಷ್ಟು ಉತ್ಸಾಹದಲ್ಲಿ ಊಳಿಡುತ್ತಿದ್ದರು. ನಿದ್ರೆ ಮಾಡುತ್ತಿದ್ದ ನನಗೆ ಭಂಗವಾಗಬಾರದೆಂದು ನನ್ನ ಹೆಂಡತಿ ಅವರ ಬಳಿಗೆ ಹೋಗಿ, “ನೀವು ಹೀಗೆಲ್ಲಾ ಇಲ್ಲಿ ಗಲಾಟೆ ಮಾಡಬಾರದು. ಎದ್ದು ಬಾರ್ ಅಥವಾ ಪಬ್ ಗೆ ಹೋಗಿ” ಎಂದು ಹೇಳಿದಳು. ಅವರಲ್ಲೊಬ್ಬ ಹೇಳಿದನಂತೆ, “ರೀ ಮೇಡಂ, ನಾವ್ಯಾರು ಗೊತ್ತಾ? ರಾಮ ಲಕ್ಷ್ಮಣರ ಹುಡುಗರು” ಎಂದು. “ಯಾವ ರಾಮ ಲಕ್ಷ್ಮಣ? ರಾಮ ಲಕ್ಷ್ಮಣರ ಹುಡುಗರಾದರೆ ಭಜನೆ ಮಾಡ್ಕೊಂಡು ಕೂತ್ಕೊಳ್ಳಿ. ಇಲ್ಯಾಕೆ ಬಂದು ಹೀಗೆ ಗಲಾಟೆ ಮಾಡ್ತೀರಿ” ಎಂದವಳೇ ಮನೆಗೆ ಬಂದು ಪೋಲಿಸರಿಗೆ ಫೋನ್ ಮಾಡಿ, ಅವರು ಬಂದು ರಾಮ ಲಕ್ಷ್ಮಣರ ಹುಡುಗರಿಗೆ ಬೈದು ಬೆತ್ತದ ರುಚಿಯನ್ನೋ ತೋರಿಸಿ ಕಳುಹಿಸಿದ್ದರು.

ರಾಮ ಲಕ್ಷ್ಮಣರಿಬ್ಬರೂ ರೌಡಿಗಳು ಎಂದು ಪೋಲಿಸರು ರಾಮಾಯಣದ ರಾಮ ಲಕ್ಷ್ಮಣರಷ್ಟೇ ತಿಳಿದಿದ್ದ ನನ್ನ ಹೆಂಡತಿಗೆ ತಿಳಿಸಿದರು. ಅವಳಿಗೆ ಅರ್ಥವಾಗದೇ ಹೋಗಿದ್ದು, ಅವರಿಬ್ಬರ ಹೆಸರು ಹೇಳಿದರೆ ತಾನೇಕೆ ಸುಮ್ಮನಾಗಬೇಕೆಂದು ಅವರು ಬಯಸಿದರು ಎಂದು.

ಆತ್ಮರತಿಯ ಸ್ವಕುಚ ಮರ್ಧನದವರದು ಇದಿನ್ನೊಂದು ಲಕ್ಷಣ. ನನಗೆ ಆ ಮಿನಿಸ್ಟರ್ ಗೊತ್ತು, ಈ ಹೀರೋ ಮೊದಲು ನಮ್ಮನೇಲೇ ಬಾಡಿಗೆಗೆ ಇದ್ದ, ಆ ಹೀರೋಯಿನ್ ನನ್ನ ಫ್ರೆಂಡ್‍ಗೆ ಫ್ರೆಂಡು, ಆ ಸಾಧಕ ನಮ್ಮ ಸಂಬಂಧಿಗಳೇ ಆಗಬೇಕು; ಎಂದೆಲ್ಲಾ ಪ್ರಖ್ಯಾತ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಜೊತೆಗೆ ತಮ್ಮ ಗುರುತುಗಳನ್ನು ಅಗತ್ಯವಿಲ್ಲದಿದ್ದರೂ ಪ್ರದರ್ಶಿಸುತ್ತಿರುವುದು.

ಆತ್ಮಪೋಷಣೆ

ಗೌರಿಹಬ್ಬದ ದಿನದಂದು ಸಂಗೀತ ನಿರ್ದೆಶಕ ಹಂಸಲೇಖ ಮತ್ತವರ ಮನೆಯವರು ನಮ್ಮ ಮನೆಗೆ ಬಂದಿದ್ದರು. ನಾನೆಲ್ಲೋ ಒಳಗಿದ್ದೆ. ನಮ್ಮ ತಾಯಿಯ ಜೊತೆ ಫೋನಿನಲ್ಲಷ್ಟೇ ಮಾತಾಡಿದ್ದ ಹಂಸಲೇಖರವರಿಗೆ ಅಮ್ಮನ ಮುಖ ಪರಿಚಯವಿಲ್ಲ. ವರಾಂಡದಲ್ಲಿ ನಿಂತಿದ್ದ ಅತ್ತೆಯವರ ಬಳಿಗೆ ಬಂದು “ಅಮ್ಮಾ ನಮಸ್ಕಾರ” ಎಂದರು. ಅವರನ್ನು ನಮ್ಮ ತಾಯಿ ಎಂದು ತಿಳಿದಿದ್ದರು. ಹಲ್ಲಿಗೆ ಕಡ್ಡಿ ಚುಚ್ಚಿಕೊಳ್ಳುತ್ತಿದ್ದ ಅವರು “ಆ” ಎಂದರು, ಅಂದರೆ ‘ಸರಿ’ ಅಂತ ಅರ್ಥ. “ನಾನು ಹಂಸಲೇಖ” ಎಂದರು. ಆ ಧ್ವನಿಯಲ್ಲಿ ನಿಮಗೆ ಗೊತ್ತೇ ಇರಬೇಕಾದ ಪರಿಚಯ ಎಂಬ ಧೋರಣೆ. ಆದರೆ ಅವರು ಅಂದಿದ್ದು, “ಅದಕ್ಕೆ?” ಅಂತ. ಹಂಸಲೇಖರಿಗೆ ಒಂದು ಕ್ಷಣ ಕಕ್ಕಾಬಿಕ್ಕಿ. “ನಾನು ಹಂಸಲೇಖ” ಎಂಬ ಭಾವಕ್ಕೆ ತಟ್ಟಂತ ತಡೆ.

ಒಳಗಿಂದ ಬಂದ ನನ್ನ ತಾಯಿ, “ಓ ಹಂಸಲೇಖ ಬನ್ನಿ ಬನ್ನಿ” ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಅವರ ಮುಜುಗರವನ್ನು ತಿಳಿಗೊಳಿಸಿಕೊಳ್ಳಲು ಸಾಧ್ಯವಾಯಿತು. ನಮ್ಮತ್ತೆಗೆ ಹಂಸಲೇಖ ಎಂದರೆ ಯಾರೆಂದೇ ಗೊತ್ತಿರಲಿಲ್ಲ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗೊತ್ತಿರುವ ಏಕೈಕ ವ್ಯಕ್ತಿ ಎಂದರೆ ಅವರು ರಾಜ್ ಕುಮಾರ್ ಮಾತ್ರ.

“ನಾನು ಹಂಸಲೇಖ ಎಂಬ ಗರ್ವವನ್ನು ಆ ತಾಯಿ ಮುರಿದರು” ಎಂದು ಹಂಸಲೇಖ ಆಗಾಗ್ಗೆ ನೆನಪು ಬಂದಾಗ ನನ್ನ ಅತ್ತೆಯನ್ನು ನೆನೆಸಿಕೊಳ್ಳುತ್ತಿದ್ದರು. ಆತ್ಮರತಿಯ ಅಭಿವ್ಯಕ್ತಿಯನ್ನು ಪೋಷಿಸಿದಾಗ ಅದು ಉಬ್ಬುವುದು. ಪೋಷಣೆ ಸಿಗದಿದ್ದಾಗ ಅದು ಕುಗ್ಗುವುದು. ಕೆಲವು ಸಲ ಖಿನ್ನತೆಗೇ ಜಾರುವುದು.

ಜನಪ್ರಿಯ ಕಲಾವಿದರೂ ಅದೆಷ್ಟು ಎತ್ತರಕ್ಕೆ ಬೆಳೆದಿದ್ದರೂ, “ನನ್ನ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಯನ್ನು ಕೊಟ್ಟಿಲ್ಲ” ಎಂದು ಸಂದರ್ಶನಗಳಲ್ಲಿ ಅವಲತ್ತುಕೊಳ್ಳುತ್ತಿದ್ದಾಗ ನಾರ್ಸಿಸಸ್‍ನ ಪ್ರಲಾಪದಂತೆ ಕಂಡರೆ ತಪ್ಪೇನೂ ಅಲ್ಲ. ನಾರ್ಸಿಸಸ್ ಅಲ್ಲದಿದ್ದರೂ ನಾರ್ಸಿಸಸ್ ಸಂಬಂಧಿಕರೇ ಆಗಿರುತ್ತಾರೆ.

ಬಹುಪರಾಕ್

ಕೆಲವೊಂದು ಫ್ಲೆಕ್ಸ್‍ಗಳಲ್ಲಿ ಯಾವುದ್ಯಾವುದೋ ಕನ್ನಡ ಹೋರಾಟಗಾರರೆಂದು ಗುರುತಿಸಿಕೊಂಡವರ ಚಿತ್ರಗಳ ಕೆಳಗೆ ಸಮಸ್ತ ಕನ್ನಡಿಗರ ಹೃದಯ ಸಿಂಹಾಸನಾಧೀಶ ಎಂದೇನಾದರೂ ಹಾಕಿದ್ದರೆ ತಕ್ಷಣವೇ ನಾನು ನನ್ನ ಪಕ್ಕದವರಿಗೆ ಹೇಳುತ್ತೇನೆ. ಅದು ನನ್ನ ಹೃದಯದ ಹೊರತು ಎಂದು. ತಮ್ಮ ಹೆಸರಿನ ಹಿಂದೆ ಬಿರುದುಬಾವಲಿಗಳನ್ನು ಹಚ್ಚಿಕೊಳ್ಳುವುದು, ಸ್ವಾಮೀಜಿಗಳು ತಮ್ಮ ಆಟೋಗ್ರಾಫ್ ಹಾಕುವಾಗಲೂ ಜಗದ್ಗುರು ಶ್ರೀ ಶ್ರೀ ಶ್ರೀ ಎಂದು ಬರೆದುಕೊಂಡು ತಮ್ಮ ಹೆಸರನ್ನು ಬರೆಯುವುದು ಆತ್ಮರತಿಯ ಮತ್ತೊಂದು ಮಗ್ಗುಲೇ.

ಕೆಲವೊಂದು ಸ್ವಾಮಿಗಳ ಆತ್ಮರತಿಯ ಲಕ್ಷಣಗಳು ಅಳತೆ ಮೀರಿದ್ದಾಗಿರುತ್ತದೆ. ನಮಸ್ಕಾರಕ್ಕೆ ಪ್ರತಿನಮಸ್ಕಾರ ಹೇಳದಿರುವಷ್ಟು. ಅವರನ್ನು ನೋಡಲು ಯಾರಾದರೂ ಬಂದರೆಂದರೆ ಮುಗಿಸಿಕೊಳ್ಳಲು ಪಾದಗಳನ್ನು ಮುಂದೆ ಸರಿಸುವಷ್ಟು. ತಮ್ಮ ಕಿರೀಟಧಾರಿ ಫೋಟೋ, ತಮ್ಮ ತಲೆಯ ಹಿಂದೆ ಫೋಟೋಶಾಪಿನಲ್ಲಿ ಪ್ರಭಾವಳಿಯನ್ನು ಬಿಡಿಸಿಕೊಂಡು ನಗುನಗುತ್ತಾ ಅಭಯ ಹಸ್ತವನ್ನು ತೋರುವ ದೈವೀಪಟವನ್ನು ಮಾಡಿಸಿಕೊಳ್ಳುವಷ್ಟು.ಆತ್ಮರತಿಯರಿಮೆಯವರೋ ಬಹುಬಹು ಪರಾಕು ಪ್ರಿಯರು.

ಈ ಆತ್ಮರತಿಯರಿಮೆಯ ಮತ್ತೊಂದು ಲಕ್ಷಣವೆಂದರೆ ಇತರರದನ್ನು ಪ್ರಶಂಸಿಸಲು ಅಷ್ಟು ಮನಸೊಪ್ಪದಿರುವುದು. ತಾವು ಯಾವುದೋ ಒಂದು ಆ ಕೆಲಸವನ್ನು ಎಂದಿಗೂ ಮಾಡದಿದ್ದರೂ “ಅದೇನು ಮಹಾ. ನಾನೂ ಮಾಡುತ್ತೇನೆ” ಎನ್ನುವುದು. ಸಾಲದಕ್ಕೆ ಅಸೂಯಾಪರವಾಗಿವುದು. ಆತ್ಮರತಿಯೆಂಬ ಅರಿಮೆಗೆ ಅನೇಕಾನೇಕ ಗೀಳುಗಳು ಮತ್ತು ವ್ಯಸನಗಳು ಆಪ್ತ ಸ್ನೇಹಿತರು.

ಫೇಸ್ಬುಕ್ಕಿನಲ್ಲಿ ತಮಗೇ ಆಸಕ್ತಿ ಇರುವ ವಿಷಯವನ್ನೋ ಅಥವಾ ಸಂಗತಿಯನ್ನೋ ಇನ್ನಾರಾದರೂ ತಮಗಿಂತ ಮುಂಚೆಯೇ ಪ್ರಕಟಿಸಿಬಿಟ್ಟರೆ, ಅಥವಾ ತಾವು ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬಂತಹ ಬರಹವನ್ನೋ ಅಥವಾ ವಿಷಯವನ್ನೋ ಗೋಡೆಗೆ ಅಂಟಿ ಹಾಕಿಕೊಂಡಿದ್ದರೆ, ಅದನ್ನು ನೋಡಿದರೂ ಹಾಗೆಯೇ ಮುಂದೆ ಹೋಗುತ್ತಾರೆ. ಅದು ತಮಗೂ ಇಷ್ಟವಾದ ಅಥವಾ ಆಸಕ್ತಿಯ ವಿಷಯವಾಗಿದ್ದರೂ ಲೈಕಿಸುವುದಿಲ್ಲ ಅಥವಾ ಕಮೆಂಟಿಸುವುದಿಲ್ಲ. ಅಸೂಯಾಗ್ನಿಯು ಅವರಿಗೆ ಏನನ್ನೂ ಮಾಡದಂತೆ ತಡೆಯುತ್ತದೆ. ಇನ್ನು ‘ನಾನೂ ಇದೇ ವಿಚಾರ ಮಾಡಿದ್ದೆ. ಆದರೆ ನೀವು ಮಾಡಿದ್ದೀರಿ. ಅಭಿನಂದನೆಗಳು’ ಎಂದು ತಿಳಿಸುವುದು ಬಹಳ ದುಬಾರಿಯ ವ್ಯಾಪಾರ ಅವರಿಗೆ.

ಓ, ಆತ್ಮರತಿಯ ಆಯಾಮಗಳು ಅಗಣಿತ. ಆದರೂ ಒಂದಷ್ಟು ಗುಣಿಸಿದ್ದೇನೆ ಮತ್ತು ಪರಿಗಣಿಸಿದ್ದೇನೆ ಮನೋವೈಜ್ಞಾನಿಕ ತಳಹದಿಯಿಂದ. ಮುಂದೆ ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version