ದಿನದ ಸುದ್ದಿ
ಕನ್ನಡ ಭಾಷೆ ಅಳಿದುಹೋಗುವ ಭಾಷೆಗಳಲ್ಲಿ ಒಂದು ಎಂಬ ಮಾತು ಶುದ್ಧ ಸುಳ್ಳು : ಡಾ. ಪ್ರಕಾಶ ಹಲಗೇರಿ
ಸುದ್ದಿದಿನ, ದಾವಣಗೆರೆ: “ಕನ್ನಡ” ಎನ್ನುವುದು ಒಂದು ಸಂಸ್ಕೃತಿ, ಬದುಕು, ಅದರಾಚೆಗೆ ಧ್ಯಾನ, ಯೋಗ, ಅನ್ನುವ ವ್ಯಾಖ್ಯಾನ ಗಳು ಕೂಡ ಮೂಡಿಬರುತ್ತಿವೆ. ಅಂದಿನ ಬಹುದೊಡ್ಡ ಚಿಂತಕರಾದ ದಂಢಿ ಹೇಳುವಂತೆ ಭಾಷೆ ಎನ್ನುವುದು ಒಂದು ಬೆಳಕು, ಭಾವ ಸಂಕೇತ, ಸನ್ನೆಗಳ ಮೂರ್ತಾಭಿವ್ಯಕ್ತಿಯೇ ಭಾಷೆ.
ಆದರೆ ಭಾಷಾತಜ್ಞ ಈಸ್ಲರ್ ಹೇಳುವಂತೆ ಆತ್ಮ ಇರುವ ಎಲ್ಲಾ ಪ್ರಾಣಿಗಳ ಅನುಭವದ ಅಭಿವ್ಯಕ್ತಿಯೇ ಭಾಷೆ. ಎಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಂತರ್ಜಾಲದ ಮೂಲಕ ಏರ್ಪಡಿಸಿರುವ ಕನ್ನಡ ನುಡಿಹಬ್ಬ ಕಾರ್ಯಕ್ರಮದ ಎಂಟನೇ ದಿನದ ಉಪನ್ಯಾಸವನ್ನು ನೀಡುತ್ತಾ ಡಾ. ಪ್ರಕಾಶ ಹಲಗೇರಿ ಯವರು ಮಾತನಾಡಿದರು.
ಗ್ಲೋಬಲೈಸೇಶನ್ ಅಂತಹ ಸಂದರ್ಭದಲ್ಲಿ ಯಾವುದೇ ಒಂದು ದೇಶಿ ಭಾಷೆ ತನ್ನ ಕಸುವನ್ನು ಮೀರಿ ಅದು ವಿಶ್ವ ಭಾಷೆ ಆಗುತ್ತಾ ದಾಪುಗಾಲಿಡ ಬೇಕಾಗಿದೆ. ದೇಶೀ ಭಾಷೆಗಳಿಗೆ ಅಸ್ಮಿತೆ ಇದೆ. ಈ ಭಾಷೆಗಳಿಗೆ ನಿಜವಾದ ಆತ್ಮಾಭಿಮಾನದ, ಸ್ವಾಭಿಮಾನದ ಸಂಕೇತ ಎನ್ನುವ ತಿಳುವಳಿಕೆಗಳು ಜರೂರಾಗಿ ಮೂಡಬೇಕಾಗಿದೆ.
ಸುಮಾರು 2000 ವರ್ಷಗಳ ಇತಿಹಾಸವುಳ್ಳ ನನ್ನ ಕನ್ನಡ ಭಾಷೆ ಅದು ಕೇವಲ ಚಿನ್ನದ ಭಾಷೆಯಲ್ಲ, ಪ್ರೊ. ಬರಗೂರು ರಾಮಚಂದ್ರಪ್ಪ ನವರು ಹೇಳುವಂತೆ ನನ್ನ ಕನ್ನಡ ಭಾಷೆ ಅನ್ನದ ಭಾಷೆಯೂ ಹೌದು ಅದು ಆಗಬೇಕು. ಇದಕ್ಕೆ ಸರ್ಕಾರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇನ್ನೂ ಅನೇಕ ಕನ್ನಡಪರ ಸಂಸ್ಥೆಗಳು ಹೆಚ್ಚು ಹೆಚ್ಚು ಜನಮುಖಿಯಾಗಿ ಸಾಗಬೇಕು.
ಕೆಲವು ಜನರ ಅಭಿಪ್ರಾಯದಂತೆ ಕನ್ನಡ ಭಾಷೆ ಅಳಿದುಹೋಗುವ ಭಾಷೆಗಳಲ್ಲಿ ಒಂದು. ಅದು ಒಪ್ಪತಕ್ಕಂತಹ ಮಾತಲ್ಲ. ಶುದ್ಧ ಸುಳ್ಳು. ಒಂದು ಭಾಷೆ ಅಳಿದು ಹೋಗಬೇಕಾದರೆ ಆ ಭಾಷೆ ಯಾಡುವ ಮನುಷ್ಯ ಅಳಿದು ಹೋಗಬೇಕು. ಅದು ಆಗದ ಮಾತು.
ಡಾಕ್ಟರ್ ಪೂರ್ಣಚಂದ್ರತೇಜಸ್ವಿ, ಡಾಕ್ಟರ್ ಚಂದ್ರಶೇಖರ ಕಂಬಾರರು ಕನ್ನಡದ ತಾಂತ್ರಿಕ ಅಂಶಗಳನ್ನು ಕುರಿತಾದ ಯೂನಿಕೋಡ್ ಬಗ್ಗೆ ಮಾತನಾಡಿದ್ದರು. ಮುಂದುವರೆದು ಎಲ್. ಹನುಮಂತಯ್ಯನವರು ಅಭಿಪ್ರಾಯದಂತೆ ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆ ಅಳವಡಿಸುವ ಕೆಲಸಕ್ಕೆ ಮತ್ತಷ್ಟು ವೇಗ ನೀಡಲಾಗುವುದು. ತಾಂತ್ರಿಕ ಕ್ಷೇತ್ರಗಳಲ್ಲಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಇತ್ಯಾದಿ ಕಡೆ ಹೆಚ್ಚು ಕನ್ನಡವನ್ನು ಬಳಸುವ ಹಾಗೆ ಮಾಡಲಾಗುವುದು. ಈ ಮಾತು ಕನ್ನಡ ಭಾಷಾ ಬೆಳವಣಿಗೆ ಮತ್ತು ಅಸ್ಮಿತೆ ವಿಚಾರದಲ್ಲಿ ಒಂದು ಆಶಾವಾದ ಹುಟ್ಟು ಹಾಕುವಂತಿದೆ.
ಕನ್ನಡ ಒಂದು ಕೇವಲ ಭಾಷೆಯಲ್ಲ, ಅದು ನುಡಿ ಬೆಳಕು, ಅದೊಂದು ಸೊಬಗಿನ ಸೋನೆ, ಬೆಡಗಿನ ಬೇನೆ, ಬೆಳಕಿನ ಖಜಾನೆಯಾಗಿದೆ ಎಂದು ಹೇಳುತ್ತಾ, ನಾವು ನಮ್ಮಲ್ಲಿರುವ ಮಡಿವಂತಿಕೆ ಬಿಟ್ಟು ಮತಿವಂತರಾಗಬೇಕು ಹಾಗೂ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಕುವೆಂಪು ರವರ ಪ್ರಕಾರ ಕನ್ನಡ ಭಾಷೆ ಭಾವೋಪಯೋಗಿ, ಜೀವನೋಪಯೋಗಿ ಲೋಕೋಪಯೋಗಿಯೂ ಹೌದು. ಹಾಗಾಗಿ ಕನ್ನಡ ಭಾಷೆ ಒಂದು ಅಗಾಧತೆಯನ್ನು ಹೊಂದಿದೆ.
ಕಲಿಯೋಕೆ ಕೋಟಿ ಭಾಷೆ, ಹಾಡೋಕೆ ಒಂದೇ ಭಾಷೆ, ಕನ್ನಡ ಕನ್ನಡ ಕನ್ನಡ ಎಂದು ತಮ್ಮ ಕನ್ನಡ ಅಭಿಮಾನದ ಮಾತುಗಳನ್ನು ಉಪನ್ಯಾಸದ ಮೂಲಕ ಡಾ ಪ್ರಕಾಶ ಹಲಗೇರಿಯವರು ನುಡಿದರು.
ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಅವರು ಮಾತನಾಡಿ,ಕನ್ನಡ ನಾಡ ಅಸ್ಮಿತೆ ಪ್ರಶ್ನೆ ಬಂದಾಗ ನಮ್ಮ ನಾಡು ಎಂಬುದು ಬೂಟಾಟಿಕೆಯ ನಾಟಕವಸ್ಟೇ ಅಲ್ಲ, ಇದು ಇಂದು ನಿರ್ಮಿಸಿ ನಾಳೆ ಕಿತ್ತು ಬಿಸಾಡುವಂತಹ ಸರ್ಕಾರ ಗಳಲ್ಲ, ಇದಕ್ಕೆ ಪರಂಪರೆಯಿದೆ ಕನ್ನಡ ಸಾಂಸ್ಕೃತಿಕ ಪರಂಪರೆಯು ತನ್ನದೇ ಆದ ಇತಿಹಾಸ ಹೊಂದಿದೆ.
ಎಂದು ಕುವೆಂಪುರವರ ಮಾತನ್ನು ಸರಿಸುತ್ತಾ ಇಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನೇ ಮುಖ್ಯಮಂತ್ರಿ, ರನ್ನ ಜನ್ನ ನಾಗವರ್ಮ, ರಾಘವಾಂಕ, ಹರಿಹರ ಬಸವೇಶ್ವರ, ನಾರಾಯಣಪ್ಪ, ಸರ್ವಜ್ಞ, ಷಡಕ್ಷರಿ ಮೊದಲಾದವರೆಲ್ಲ ಮಂತ್ರಿಮಂಡಲದ ಸದಸ್ಯರಾಗಿದ್ದಾರೆ. ಇದು ನಮ್ಮ ಸರಸ್ವತಿ ರಚಿಸಿದ ಸಚಿವ ಸಂಪುಟದ ಮಂಡಲವೆಂದು ಉದ್ಗರಿಸಿರು ವುದು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದೇ ಭಾವಿಸಿದ್ದೇನೆ ಎಂದರು.
ಕವಿ ಕುವೆಂಪುರವರು ಮುಂದುವರೆದು ಹೇಳಿರುವಂತೆ ಕರ್ನಾಟಕವೆಂಬುದು ಬರೀ ಒಂದು ಭೂಪ್ರದೇಶ ವಲ್ಲ, ಮಣ್ಣಿನ ಹೆಸರಲ್ಲ, ಕನ್ನಡಿಗರಿಗೆ ಕನ್ನಡಿಗರ ಪಾಲಿಗೆ ಅದು ಮಂತ್ರ, ಶಕ್ತಿ, ತಾಯಿ, ದೇವಿ, ಬೆಂಕಿ, ಸಿಡಿಲು, ಎಲ್ಲವೂ ಆಗಿದೆ. ಕನ್ನಡ ಒಲಿದವರಿಗೆ ದೇವಿಯೂ ಕೆಣಕಿದವರಿಗೆ ಕಾಳಿಯೂ ಆಗುತ್ತಾಳೆ.
ಇದನ್ನು ಅರಿಯುವ ಕಣ್ಣು ನಮ್ಮ ಕನ್ನಡಿಗರದ್ದಾಗಿ ಇರಬೇಕು ಎಂಬುದಾಗಿ ಸೊಗಸಾಗಿ ರಾಷ್ಟ್ರಕವಿ ಕುವೆಂಪುರವರು ಹೇಳಿದ ವಾಣಿಯನ್ನು ಸ್ಮರಿಸುತ್ತಾ ನಾವು ಕನ್ನಡಿಗರಾಗಿ ಹುಟ್ಟಿರುವುದೇ ನಮ್ಮೆಲ್ಲರ ಸುದೈವ, ಕನ್ನಡಿಗರ ಅಸ್ಮಿತೆಗೆ ಧಕ್ಕೆ ಬಂದಾಗ ನಾವು-ನೀವೆಲ್ಲರೂ ಸಿಡಿದೇಳಬೇಕು ತಮ್ಮ ಅಧ್ಯಕ್ಷೀಯ ಮಾತುಗಳ ಮೂಲಕ ಎಂದು ಕರೆಕೊಟ್ಟರು.
ಆರಂಭದಲ್ಲಿ ಎಲ್ ಜಿ ಮಧು ಕುಮಾರ್ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರು ಇವರು ಸರ್ವರನ್ನು ಸ್ವಾಗತಿಸುತ್ತಾ ಉಪನ್ಯಾಸಕರ ಕಿರು ಪರಿಚಯ ಮಾಡಿಕೊಟ್ಟರು.ಕಾರ್ಯಕ್ರಮದಲ್ಲಿ ದಾವಣಗೆರೆ ವಿದ್ಯಾನಗರ ದ ಸುಶ್ರಾವ್ಯ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಯಾದ ಶ್ರೀಮತಿ ಯಶಾ ದಿನೇಶ್ ಮತ್ತು ರಕ್ಷಾ ಸರಳಾಯ ಇವರು ಸುಗಮ ಸಂಗೀತವನ್ನು ನಡೆಸಿಕೊಟ್ಟರು.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243