ಅಂತರಂಗ

ಕನ್ನಡವೂ ಮುನ್ನುಡಿಯುತ್ತಿರಲಿ

Published

on

 

  • ಮೆಹಬೂಬಸಾಹೇಬ.ವಾಯ್‌.ಜೆ.
    ಕನ್ನಡ ಉಪನ್ಯಾಸಕರು, ವಿಜಯಪುರ

ನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಎಸ್ ಕಣದ್ಮನೆ ಅವರು ಮೋಹದ ಮೋಡದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ.

ಅವರ ಭಾಷೆ, ಭಾವ ನುಡಿಗಳ ಮೃದುತ್ವ, ಆಂತರ್ಯದ ಧೋರಣೆ ಅದಮ್ಯ ಹಂಬಲ ನಾಡು-ನುಡಿಗಾಗಿ ನುಡಿಯುವ ಒಳಗ ಕರಳು ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿರತವಾಗಿದೆ ಅದಕ್ಕಾಗಿಯೇ ದೇಶದ ಬೆನ್ನೆಲುಬಿಗೆ ಹೊತ್ತಿಗೆ ಅರ್ಪಿಸಿದ್ದಾರೆ.

ಬಂಡಾಯದ ಹಿನ್ನೆಲೆ ಹೊಂದಿರುವ ಡಾ ಸಿದ್ದ್ರಾಮ ಕಾರಣೀಕ ಅವರ ಮುನ್ನುಡಿ, ಹಂಪಿ ವಿವಿಯ ಕನ್ನಡ ಸಂಶೋಧಕ ಶರೀಫ್ ಹಸಮಕಲ್ಲ್ ಅವರ ಬೆನ್ನುಡಿಯನ್ನೊಳಗೊಂಡು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ಮುದ್ರಿತವಾಗಿದ್ದು,
“ಕರುಳಲ್ಲಿ ಹುಟ್ಟ್ತೈತೆ ಕನ್ನಡ
ಕಂಠದಲ್ಲಿ ಹರಿದಾಡತೈ ಗಡಗಡ”
ಎನ್ನುವ ಪದ್ಯದ ಸಾಲುಗಳು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿತೋರಿಸುವ ಮೂಲಕ ನಾಡುನುಡಿಯ ಪ್ರಖರತೆಯನ್ನು ತಲೆದೋರುವಲ್ಲಿ ಸಹಕಾರಿಯಾಗಿದೆ.

ನಾಡುನುಡಿ, ದೇಶ ಪ್ರೇಮ, ಅನ್ನದಾತರಿಗೆ ಸಲಾಮು, ಹಜರತ್ ಸುಲ್ತಾನರ ಪರಾಕ್ರಮ, ಚಂದಿರನ ಲೋಲುಪತೆ, ಪ್ರಣಯದ ಹಾಡು, ಹಕ್ಕಿಹಾಡುವ ಶೋಕಗೀತೆ, ನನ್ನದಲ್ಲದ ಲೇಖನಿ ಎನ್ನುವ ಹಲವು ಪದ್ಯಗಳು ಮತ್ತೆ ಮತ್ತೆ ಓದಿಸಿಕೊಂಡರೆ,
ಹೃದಯವನ್ನು ಗುಡಿಗೆ ಹೋಲಿಸಿ, ಸ್ನೇಹದೊಳಗೆ ದೇವರನ್ನು ಕಾಣುವ ರೂಪಕ ಅತ್ಯಾಪ್ತವಾಗಿಸುತ್ತದೆ.
“ನೆಮ್ಮದಿ ಇರದ ಜೀವನ
ಯಮನಿಗೆ ಅಹ್ವಾನ”ಎನ್ನುವ ಕವಿವಾಣಿ, ಜೀವನದಲ್ಲಿ ತೃಪ್ತಿ ಎನ್ನುವುದು ಅತೀವ ಕಾಳಜಿಯ ವಾಕ್ಯವಾಗಿ ಗುರುತಿಸಿಕೊಂಡು ಜೀವನ ಪ್ರೀತಿಯನ್ನು ಸಾರುವುದರಲ್ಲಿ ಸಹಕಾರಿಯಾಗಿದೆ.

“ಕವಿಯ ಕಲ್ಪನೆಗೆ ಎಟುಕದ ಸೌಂದರ್ಯ ನಿನ್ನದು
ನಿನಗೆಂದೆ ಕಾಯುವ ಭಾಗ್ಯ‌ ನನ್ನದು”ಈ ರಸಭರಿತ ಕಾವ್ಯ ಕಲ್ಪನೆಗೂ ನಿಲುಕದ ನಿಲುವು ಪ್ರಾಸಭರಿತವಾದ ಹೊಸ ಛಾಯೆಯಗಳ ಮಾಯೆಯನ್ನು ಬರಮಾಡಿಕೊಳ್ಳುವ,
‘ಅವಳು ನಕ್ಕರೆ ಮಲ್ಲಿಗೆಯ ಛಾಯೆ’ಎನ್ನುವಲ್ಲಿ ಪ್ರೇಮಿಯನ್ನು ಪ್ರೇಮಿಸುವ ಪರಿಯಲ್ಲಿ‌ ಹೊಸ ಪ್ರಮೇಯ ತೆರೆಯಲೆತ್ನಿಸಿದ್ದಾರೆ‌.

ಆಚಾರ ಪತ್ನಿಯೊಂದಿಗೆ ವ್ಯವಹರಿಸುವ ವಿಚಾರ ಸತಿಯ ಸೇರಿಸಿ ಅದಕೆ ಸವಿಯ ಸುರಿಸಿ ಹರಸುವ ಪರಿ ಪರೋಕ್ಷವಾಗಿ ಪ್ರಪಂಚವೆಲ್ಲಾ ಪ್ರೇಮದಲ್ಲಿದೆ ಪ್ರೀತಿ ಇಲ್ಲದ ಹೊರತು ಏನು ಇಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಚಂಪಾ ಅವರ
‘ಪ್ರೀತಿ ಇಲ್ಲದೆ ಮೇಲೆ
ಏನು ಮಾಡಲಾರೆ
ದ್ವೇಷವನ್ನು ಕೂಡಾ’ಎನ್ನುವ ಮಾತು‌ ನೆನವಿಗೆ ಬರುತ್ತದೆ.

ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ ‘ಮೌನರಾಗ’ ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ.

ತಂಗಿಗಾಗಿ, ಮೌನಯಾನ ದಂತಹ ಕೆಲವು ಪದ್ಯಗಳು ಒಡಲ ಪ್ರೇಮ, ಪ್ರಾದೇಶಿಕತೆ ದಾರ್ಶನಿಕತೆಯನ್ನು ತಿಳಿಸುವುದರೊಂದಿಗೆ ತಿಳಿಸಿ ಪ್ರಾಂತ್ಯದ ಪ್ರೀತಿಯಿಂದ ರಾಷ್ಟ್ರಪ್ರೇಮದತ್ತ ತಿರುಗುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಎನ್ನುವ ಕವಿಭಾವ ರಸದೌತ್ತತೆ ಸಾರುವಲ್ಲಿ ನಿರತವಾಗಿದೆ.

ಅಲ್ಲಲ್ಲಿ ಕೆಲಮಟ್ಟಿನ ದ್ವಂದ್ವಗಳು ಕಂಡುಬಂದರೂ ಮೊದಲ ಪ್ರಯತ್ನದ ಕವನ ಕೃಷಿಯಲ್ಲಿ ತಕ್ಕಮಟ್ಟಿನ ಕಥನ ಪ್ರಿಯತೆಯೂ ಸೃಜಿಸಿದ್ದಾರೆ. ಎಲ್ಲವೂ ಒಳಿತಾಗಲಿ ಹೊಸತನ ನಿರಂತರವಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version