ದಿನದ ಸುದ್ದಿ

ಪತ್ರಕರ್ತ ಸಂಘದ ಅಧ್ಯಕ್ಷರಾಗಿ ತಗಡೂರು ಆಯ್ಕೆ

Published

on

ಸುದ್ದಿದಿನ, ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಉಪಾಧ್ಯಕ್ಷ ಶಿವಾನಂದ
ತಗಡೂರು ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ತಮ್ಮ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿದ್ದ ಎನ್.ರಾಜು ಅವರು ನೈತಿಕ ಹೊಣೆವೊತ್ತು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂದಾಯ ಭವನದಲ್ಲಿರುವ ಪತ್ರಕರ್ತರ ಸಂಘದ ಕಚೇರಿಯಲ್ಲಿ ರಾಜ್ಯ ಕಾರ್ಯಕಾರಿ ಸಭೆ ಕರೆಯಲಾಗಿತ್ತು.

ಆರಂಭದಲ್ಲಿ ಎನ್.ರಾಜು ಅವರ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರನ್ನಾಗಿ ಶಿವಾನಂದ ತಗಡೂರು ಅವರನ್ನು ನೇಮಕ ಮಾಡಬೇಕೆಂದು ಕೆಲವರು ಸಲಹೆ ನೀಡಿದರು. ಆದರೆ, ಕಾನೂನಾತ್ಮಕ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಹಾಗೂ ಸಂಘ ಸುಗಮವಾಗಿ ತನ್ನ ಕಾರ್ಯಚಟುವಟಿಕೆ ಮುಂದುವರಿಸಲು ಖಾಯಂ ಅಧ್ಯಕ್ಷರನ್ನು ನೇಮಕ ಮಾಡುವುದು ಉತ್ತಮ ಎಂದು ಬಹುತೇಕ ಸದಸ್ಯರು ಒಕ್ಕೂರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕುರಿತು ಗಂಭೀರ, ಸುಧೀರ್ಘ ಚರ್ಚೆ ನಂತರ ಖಾಯಂ ಅಧ್ಯಕ್ಷರನ್ನಾಗಿ ಶಿವಾನಂದ ತಗಡೂರು
ಅವರ ನೇಮಕಕ್ಕೆ ಕಾರ್ಯಕಾರಿಣಿ ಸಭೆ ಸರ್ವಾನುಮತದಿಂದ ಸಮ್ಮತಿಸಿತು. ಸಂಘದ ಘನತೆ-ಗೌರವ ಮತ್ತು ಸಂಘಟನಾತ್ಮಕ, ವೃತ್ತಿಪರ ಪತ್ರಕರ್ತರ ಹಿತ ಕಾಯುವ ನಿಟ್ಟಿನಲ್ಲಿ ಸಂಘವನ್ನು ಶಿವಾನಂದ ತಗಡೂರು ನೇತೃತ್ವದಲ್ಲಿ ಮುನ್ನೆಡೆಸಿಕೊಂಡು ಹೋಗಲು
ಸಭೆ ಒಮ್ಮತದಿಂದ ತೀರ್ಮಾನವನ್ನು ಕೈಗೊಂಡಿತು.

ಸಮಿತಿ ರಚನೆ

ಎನ್.ರಾಜು ವಿರುದ್ಧ ಕೇಳಿ ಬಂದಿರುವ ಹಣಕಾಸಿನ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿಯಲು ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೊದಲು ಆಂತರಿಕ ಲೆಕ್ಕಪರಿಶೋಧನೆ ನಡೆಸಲು ಸಮಿತಿ ರಚಿಸುವಂತೆ ಸಭೆಯಲ್ಲಿ ಸಲಹೆ ಕೇಳಿಬಂದಿತು.
ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆ ಸಮ್ಮತಿ ನೀಡಿತು.

ಇದೀಗ ಕೇಳಿಬರುತ್ತಿರುವ ಆರೋಪಗಳ ಸಂಬಂಧ ಸಂಘದ ಆರ್ಥಿಕ ವ್ಯವಹಾರಗಳ ಕುರಿತು ಆಂತರಿಕ
ಪರಿಶೀಲನೆಗೆ  ಹಿರಿಯ ಪತ್ರಕರ್ತರಾದ ಶ್ರೀಯುತ ಗುಡಿಹಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಐವ್ವರು ಹಿರಿಯ ಸದಸ್ಯರ ಸಮಿತಿಯೊಂದನ್ನು ರಚಿಸಲಾಯಿತು.
ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕಾನೂನು ತೊಡಕುಗಳಿಗೆ ಅವಕಾಶವಾಗದಂತೆ ಸಂಘವನ್ನು
ನಿಯಮಾನುಸಾರ ನಡೆಸಿಕೊಂಡು ಹೋಗಲು ತೀರ್ಮಾನಿಸಿತು.

ಸಭೆಯಲ್ಲಿ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ, ಕಾರ್ಯದರ್ಶಿ ಲಿಥಕರ್ ಜೈನ್, ಸೊಗಡು
ವೆಂಕಟೇಶ್, ಮೈಸೂರು ಸಂಘದ ಜಿಲ್ಲಾಧ್ಯಕ್ಷ ಸಿ.ಕೆ.ಮಹೇಂದ್ರ, ಲೋಕೇಶ್‌ಬಾಬು, ಟೆಲೆಕ್ಸ್ ಎನ್.ರವಿಕುಮಾರ್, ರವೀಶ್, ಶ್ರೀನಿವಾಸ್, ವೆಂಕಟೇಶ್, ಚಂದ್ರಪ್ಪ, ದುರುಗೇಶ್, ಕುಟ್ಟಪ್ಪ, ಲೊಚೇನಶ್ ಹೂಗಾರ್, ನಿಂಗಪ್ಪ ಚಾವಡಿ, ಸತ್ಯನಾರಾಯಣ, ಶಿವಮೊಗ್ಗ ವೈದ್ಯ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಯ
ಜಿಲ್ಲಾಧ್ಯಕ್ಷರು, ರಾಜ್ಯ ಸಮಿತಿ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಾನಂದ ತಗಡೂರು ಹಿನ್ನೆಲೆ

ಶಿವಾನಂದ ತಗಡೂರು ಹಾಸನ ಜಿಲ್ಲೆಯಲ್ಲಿ ವಿಜಯಕರ್ನಾಟಕ ಸೇರಿದಂತೆ ವಿವಿಧ
ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ ಅನೇಕಹುದ್ದೆಗಳನ್ನು ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಎರಡು ಅವಧಿಗೆ ಉಪಾಧ್ಯಕ್ಷರಾಗಿದ್ದ ತಗಡೂರು ಅವರು, ಬರವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ತಗಡೂರು
ಅವರು, ಸಜ್ಜನ, ಸರಳತೆ, ಉತ್ತಮ ಬರವಣಿಗೆ ಹಿನ್ನೆಲೆಯಲ್ಲಿ ಹೆಚ್ಚು ಜನರ ಪ್ರೀತಿ ಗಳಿಸಿದ್ದಾರೆ.

Trending

Exit mobile version