ದಿನದ ಸುದ್ದಿ
ಕೊಡಗು ಪ್ರವಾಹ : ಸಂತ್ರಸ್ತರ ತಪಾಸಣಾ ಕಾಲಾವಧಿ ವಿಸ್ತರಣೆ
ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬ ವೈಯುಕ್ತಿಕ ವಿವರಗಳನ್ನು (ಅವಲಂಬಿತರು, ಪ್ರಾಣ ಹಾನಿ, ಮನೆ ಹಾನಿ, ಜಾನುವಾರು ಹಾನಿ, ಬೆಳೆ ಹಾನಿ) ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೆ ಒಳಪಟ್ಟವರು ಸರ್ಕಾರದ ವತಿಯಿಂದ ಕೋರುವ ಇತರೆ ಸೌಲಭ್ಯಗಳು ಸಂಬಂಧಿಸಿದ ಕುಟುಂಬದ ಮುಖ್ಯಸ್ಥರು/ ಸದಸ್ಯರು ನಿಗಧಿತ ನಮೂನೆಯಲ್ಲಿ ಸಂಬಂಧಿಸಿದ ಆಯಾಯ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಲೆಕ್ಕಿಗರಿಂದ ಆಗಸ್ಟ್, 31 ರೊಳಗಾಗಿ ಜಂಟಿ ತಪಾಸಣೆ ನಡೆಸಲಾಗುವುದು ಈಗಾಗಲೇ ಪ್ರಕಟಿಸಲಾಗಿದ್ದು.
ಆದರೆ ತಪಾಸಣೆಯ ಕಾಲಾವಧಿಯನ್ನು ಸೆಪ್ಟೆಂಬರ್, 03 ರವರೆಗೆ ವಿಸ್ತರಿಸಲಾಗಿದೆ. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬದ ಹಾಗೂ ವೈಯುಕ್ತಿಕ ವಿವರಗಳನ್ನು ಪಡೆಯಲು ತಯಾರಿಸಲಾದ ನಮೂನೆಯಲ್ಲಿ ಗುರುತಿನ ಚೀಟಿ ವಿವರಗಳನ್ನು ಭರ್ತಿ ಮಾಡಲು ನಿರಾಶ್ರಿತರ ಬಳಿ ಯಾವುದಾದರು ಗುರುತಿನ ಚೀಟಿ ವಿವರಗಳು ಲಭ್ಯವಿದ್ದಲ್ಲಿ ಮಾತ್ರ ಮಾಹಿತಿ ನೀಡಬೇಕು ಹಾಗೂ ದಾಖಲೆಗಳನ್ನು ನೀಡುವುದು ಕಡ್ಡಾಯವಲ್ಲ.
ಕಾಫಿ, ಭತ್ತ, ಕರಿಮೆಣಸು ಇತ್ಯಾದಿ ಬೆಳೆಗಳ ನಷ್ಟಕ್ಕೆ, ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯವನ್ನು ವೈಜ್ಞಾನಿಕವಾಗಿ ತಂಡಗಳೊಂದಿಗೆ ಪ್ರತ್ಯೇಕ ನಡೆಸಲಾಗುವುದು. ಈ ಸರ್ವೆ ಕಾರ್ಯವು ಪ್ರಮುಖವಾಗಿ ನಿರಾಶ್ರಿತರಿಗೆ ಪುರ್ನವಸತಿ ಕಲ್ಪಿಸುವ ಉದ್ದೇಶಕ್ಕಾಗಿ ಅವರ ಅಭಿಪ್ರಾಯ ಸಂಗ್ರಹಣೆಗಾಗಿ ಮಾಡಲಾಗಿರುತ್ತದೆ.
ಆದ ಕಾರಣ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಸ್ಥರು ತಾವು ಇರುವ ತಾತ್ಕಾಲಿಕ ಶಿಬಿರಗಳಲ್ಲಿ ಅಥವಾ ಗ್ರಾಮಗಳಲ್ಲಿ ಹಾಗೂ ಗ್ರಾಮದಲ್ಲಿ/ ಶಿಬಿರದಲ್ಲಿ ಇರದೆ ಬೇರೆ ಕಡೆ ಇರುವ ಸಂತ್ರಸ್ಥರು ಸಂಬಂಧಪಟ್ಟ ನಾಡ ಕಚೇರಿ, ತಾಲ್ಲೂಕು ಕಚೇರಿ ಅಥವಾ ತಹಶೀಲ್ದಾರ್‍ರವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 08272-221077/ 221088/ 221099, ತಹಶೀಲ್ದಾರ್- 9845887257 ನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401