ನೆಲದನಿ

ನುಡಿಯ ಒಡಲು -07 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ

Published

on

  • ಡಾ‌.ಮೇಟಿ ಮಲ್ಲಿಕಾರ್ಜುನ,ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ – 03

ನುಷ್ಯ ಘನತೆ ಎಂಬುದು ನೈತಿಕ ಮತ್ತು ತಾತ್ವಿಕ ನಿಲುವಾಗಿದೆ. ಇದು ಹಲವು ನೆಲೆಯ ತಿರುಳುಗಳನ್ನು ಪಡೆದಿಕೊಂಡಿದೆ. ಪ್ರತೀ ತಿರುಳಿನೊಂದಿಗೆ ವಿಭಿನ್ನ ಭಾಷಿಕ ಕ್ರಿಯೆಗಳು ಪ್ರಚೂರಗೊಳ್ಳುತ್ತವೆ. ಮನುಷ್ಯ ಘನತೆ ಎಂಬೀ ಪರಿಕಲ್ಪನೆಗೆ ಪ್ರಾಪ್ತವಾಗುವ ಘನವಾದ ಅರ್ಥವು ಲೋಕಗ್ರಹಿಕೆಯನ್ನು ನೆಲೆಯಾಗಿಸಿಕೊಂಡಿರುತ್ತದೆ.

ಒಂದು ನಿರ್ದಿಷ್ಟ ಸಾಂಸ್ಕೃತಿಕ-ಸಾಮಾಜಿಕ ಗ್ರಹಿಕೆಯೊಂದು ಇಲ್ಲಿ ನೆಲೆಗೊಂಡಿರುತ್ತದೆ. ಅಂದರೆ ಸಮಾಜ/ಸಮುದಾಯದೊಂದಿಗೆ ವ್ಯಕ್ತಿಯೊಬ್ಬ ಹೊಂದಿರುವ ನೈತಿಕತೆಯ ನಿಲುವು ಇದಾಗಿರುತ್ತದೆ. ವ್ಯಕ್ತಿಯ ನೈತಿಕ ಸ್ಥೈರ್ಯವು ಎರಡು ನೆಲೆಯಲ್ಲಿ ವರ್ತಿಸುತ್ತದೆ. ಒಂದು ವೈಯಕ್ತಿಕ ನೆಲೆ ಇದನ್ನು ಬಿಡಿನೆಲೆ ಎನ್ನೋಣ. ಎರಡನೆಯದು ಸಾಮುದಾಯಿಕ ನೆಲೆ ಇದನ್ನು ಇಡಿನೆಲೆ ಎಂದು ಕರೆಯೋಣ. ಈ ಇಡಿ ಮತ್ತು ಬಿಡಿ ನೆಲೆಗಳ ನಡುವಣ ನಂಟಸ್ತಿಕೆ ಪರಸ್ಪರವಾಗಿ ಕಾರ್ಯನಿರ್ವಹಿಸುತ್ತವೆ.

ಹೀಗೆ ಪರಸ್ಪರ ವರ್ತಿಸುವ ಪ್ರಕ್ರಿಯೆಯಲ್ಲಿ ನೈತಿಕ ಮತ್ತು ತಾತ್ವಿಕ ನಿಲುವುಗಳನ್ನು ಒಂದು ಸಮುದಾಯ ಮತ್ತು ಒಬ್ಬ ವ್ಯಕ್ತಿ ಹೇಗೆ ಅನುಸರಿಸಲಾಗುತ್ತದೆ ಎನ್ನುವುದನ್ನು ಮನಗಾಣಬಹುದು. ಘನವಾದ ಅರ್ಥ ಎನ್ನುವುದು ಮಾನವೀಯ ಮೌಲ್ಯಗಳ ಮೂಲಗ್ರಹಿಕೆಗಳಿಂದ ಸಂಚಿತವಾಗಿರುತ್ತದೆ. ನಮ್ಮ ಸಾಮಾಜೀಕರಣ ಪ್ರಕ್ರಿಯೆಯೊಳಗೆಯೇ ಮೈದೆರೆಯುವ ಈ ಗ್ರಹಿಕೆಗಳು, ನಮ್ಮ ಪ್ರಜ್ಞೆಯ ಮೂಲ ನೈತಿಕ ತತ್ವಗಳಾಗಿ ಹೊರಹೊಮ್ಮುತ್ತವೆ.

ಇದು ಇಡಿಯಾಗಿ ಅನಾವರಣಗೊಳ್ಳುವ ನೈತಿಕತೆಯ ವಿನ್ಯಾಸವಾಗಿದೆ. ಈ ಮುಖೇನ ಬಿಡಿನೆಲೆಯ ನೈತಿಕ ದೃಷ್ಟಿಕೋನಗಳು ಏರ್ಪಡುತ್ತವೆ. ಪರಿಣಾಮವಾಗಿ ವ್ಯಕ್ತಿ ಘನತೆಯ ಚಹರೆಗಳನ್ನು ನಿರ್ವಚಿಸುವ ಇಲ್ಲವೇ ಅರ್ಥೈಸುವ ನಡೆಗಳು ಮುನ್ನೆಲೆಗೆ ಬರುತ್ತವೆ. ಇದನ್ನು ಬೇರು ಕಾಂಡ ಮತ್ತು ಚಿಗುರುಗಳ ನಡುವಣ ಸಾವಯವ ಸಂಬಂಧದ ರೂಪಕವನ್ನಾಗಿ ನೋಡಬಹುದು. ಇವುಗಳಿಗೆ ಮಾತೃಕೆಯಾಗಿರುವ ಭೂಮಿ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಏಕೆಂದರೆ ವಿಚಾರ ಮತ್ತು ಆಚಾರಗಳು ಕೆಲಸ ಮಾಡುವುದು ಬೀಜ ಮತ್ತು ಮಣ್ಣುಗಳ ನಡುವಿನ ಹದವಾದ ಹೊಂದಾಣಿಕೆ ಎಷ್ಟು ಬಲವಾಗಿರುತ್ತದೆಯೋ ಅದಕ್ಕೆ ಪೂರಕವಾಗಿ ಅದು ಅಷ್ಟೇ ಗಟ್ಟಿಯಾಗಿ ಬೇರೂರುತ್ತದೆ.

ನಾವು ಮಾತ್ನಾಡುವ ಬಹುತೇಕ ಸನ್ನಿವೇಶಗಳಲ್ಲಿ, ವ್ಯಕ್ತಿಗಳ ಮಾತು, ಧೋರಣೆ ಮತ್ತು ವರ್ತನೆಗಳನ್ನು ಕುರಿತು ಟೀಕೆಗಳನ್ನು ಮಾಡುತ್ತೇವೆ ಇಲ್ಲವೇ ಒಂದು ಬಗೆಯ ಹಪಾಹಪಿತನವನ್ನು ತೋರುತ್ತೇವೆ. ನಮ್ಮ ಬದುಕಿನ ಇಡೀ ನುಡಿಗಟ್ಟುಗಳು ಅಂದರೆ ನಮ್ಮ ನಡೆ ನುಡಿಗಳನ್ನು ಬಣ್ಣಿಸುವ ಅಭಿವ್ಯಕ್ತಿಯ ಮಾದರಿಗಳು ಮಾನವೀಯತೆ ಮತ್ತು ಮನುಷ್ಯ ಘನತೆಗೆ ಬಹುದೊಡ್ಡ ಕುತ್ತನ್ನು ತಂದಿವೆ ಎಂದು ಕೊರಗುತ್ತೇವೆ.

ಹಾಗಾಗಿ ನಮ್ಮ ಗತದ ಕೆಲವು ನಿರ್ದಿಷ್ಟ ನಿದರ್ಶನಗಳ ಮೂಲಕ ಈ ಹೊತ್ತಿನ ಆಪತ್ತುಗಳನ್ನು ನಿವಾರಿಸಿಕೊಳ್ಳುವ ಇರಾದೆಯನ್ನು ಹೊಂದುತ್ತೇವೆ. ಕನ್ನಡದ ಸಂದರ್ಭದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ಯಾದಿ ನೆಲೆಗಳ ಉಲ್ಲೇಖಗಳ ಮೂಲಕ ವರ್ತಮಾನದ ಓರೆಕೋರೆಗಳನ್ನು ತಿದ್ದುವ ತೀಡುವ ಬಯಕೆಯನ್ನು ವ್ಯಕ್ತಪಡಿಸುತ್ತೇವೆ. ಅತ್ಯಂತ ಸುಲಲಿತವಾಗಿ ನಿರರ್ಗಳವಾಗಿ ವಚನಗಳನ್ನು ದಾಸರ ಪದಗಳನ್ನು ಹಾಗೂ ಗಾದೆ ಮಾತುಗಳನ್ನು ವ್ಯಕ್ತಮಾಡುತ್ತೇವೆ. ಅಂದರೇನಾಯಿತು, ಸದ್ಯದ ಬಿಕ್ಕಟ್ಟುಗಳಿಗೆ ನಮ್ಮ ಗತದಲ್ಲಿ ಪರಿಹಾರಗಳಿವೆ ಎಂದು ನಂಬಲಾಗುತ್ತದೆ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಈ ನಂಬಿಕೆಯ ಬೇರುಗಳು ನೆಲೆನಿಂತ ಇದೇ ವಾತಾವರಣದಲ್ಲಿ ನಾವು ಇವತ್ತು ಆರೋಪಿಸುವ ಈ ಸಮೂಹ ವಿರೋಧಿ ಎಂದು ಹೇಳಲಾಗುವ ನಡೆ ನುಡಿಗಳು ಹೇಗೆ ಮೈದಾಳಿದವು ಎಂಬ ಮೂಲಭೂತ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ನಮ್ಮ ಸದ್ಯದ ಮಾನವೀಯ ಸಂಬಂಧಗಳ ಫತನಕ್ಕೆ ಕಾರಣವಾಗಿರುವ ಎಲ್ಲ ಬಗೆಯ ನಿರೂಪಣೆಗಳು ಮೈದಾಳುವುದಕ್ಕೆ ಏನೆಲ್ಲ ಪುರಾವೆಗಳನ್ನು ನಾವು ಈಗ ಒದಗಿಸುತ್ತೆವೋ, ಅವುಗಳು ಕೂಡ ನಮ್ಮ ಬೇರುಗಳಲ್ಲಿಯೇ ಅಂತಸ್ಥವಾಗಿರುವ ಅವಗುಣಗಳಾಗಿವೆ. ಈ ಆಯಾಮವನ್ನು ಪರಿಶೀಲಿಸಲು ನಾವು ಕನ್ನಡ ಸಾಹಿತ್ಯದ ಬೇರೆ ಬೇರೆ ಪಠ್ಯಗಳು ಹಾಗೂ ಇತರೆ ನಿರೂಪಣೆಗಳನ್ನು ಆಶ್ರಯಿಸಬೇಕಾಗುತ್ತದೆ.

ಯಾವುದೇ ಗುಣವೊಂದನ್ನು ಬಣ್ಣಿಸುವ ಇಲ್ಲವೇ ವ್ಯಾಖ್ಯಾನಿಸುವ ನಮ್ಮ ತಾತ್ವಿಕ ಚೌಕಟ್ಟುಗಳು ಬಹುತೇಕವಾಗಿ ಸಾಪೇಕ್ಷಿತ ಇಲ್ಲವೇ ಬೈನರಿಯಾಗಿರುತ್ತವೆ. ಈ ಗುಣ ಅವಗುಣಗಳನ್ನು ಬೇರ್ಪಡಿಸುವ ಇರಾದೆಯಿಂದಲೇ ವಚನ, ದಾಸಪದ, ತತ್ವಪದಗಳು ಹಾಗೂ ಗಾದೆ ಮಾತು ಮತ್ತು ಉಕ್ತಿಗಳು ತಲೆಯೆತ್ತಿರುತ್ತವೆ ಎನ್ನುವ ವಾಸ್ತವವನ್ನು ಮರೆತುಬಿಡುತ್ತೇವೆ. ಯಾವುದೇ ಸಾಮಾಜಿಕ ನಡೆ ಹಾಗೂ ಸಾಂಸ್ಕೃತಿಕ ಆಚರಣೆ ಹಲವು ಬಗೆಗಳಲ್ಲಿ ಕಾಲ ಮತ್ತು ದೇಶಗಳಿಗೆ ಅನುಗುಣವಾಗಿ ಬದಲಾಗುತ್ತವೆ.

ಉದಾ.ಗೆ ಮೌಢ್ಯತೆ ಎನ್ನುವ ಪದವನ್ನು ನೆಗೆಟ್ ಮಾಡಲು ವೈಜ್ಞಾನಿಕ ಮನೋಭಾವ ಎಂಬ ಪರಿಕಲ್ಪನೆಯನ್ನು ಬಳಸುತ್ತೇವೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಯಾವ ವೈಜ್ಞಾನಿಕ ಮನೋಭಾವದಿಂದ ಮೌಢ್ಯತೆಯನ್ನು ನಿರಾಕರಿಸುವ ನಿರ್ಧಾಗಳನ್ನು ಮಾಡುತ್ತೇವೆಯೋ, ಅದರ ಬುಡದಲ್ಲಿಯೇ ಮೌಢ್ಯತೆಯ ಬೀಜಗಳನ್ನು ಹೊಸದಾದ ರೂಪದಲ್ಲಿ ಬಿತ್ತುತ್ತೇವೆ.

ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಶಕ್ತಿಗಳು ಪ್ರಾಯೋಜಿಸುವ ಯಾವುದೇ ಜಾಹಿರಾತಿಗೆ ಯಾವ ಬಗೆಯ ವೈಜ್ಞಾನಿಕ ದೃಷ್ಟಿಕೋನಗಳನ್ನು ಲಗತ್ತಿಸಲು ಸಾಧ್ಯ. ಯಾವ ಬಗೆಯ ವೈಚಾರಿಕ ಸ್ಪಷ್ಟೀಕರಣವನ್ನು ನೀಡಲು ಸಾಧ್ಯ. ಅಂದರೆ ಪ್ರಜಾಪ್ರಭುತ್ವ ನೀತಿಗಳ ಮೂಲಕ ವ್ಯಕ್ತಿ ಮತ್ತು ಸಮೂಹಗಳ ಘನತೆಯನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿರುವಾಗಲೇ, ಬಂಡವಾಳಶಾಹಿ ಪ್ರೇರಿತ ಜಾಹಿರಾತುಗಳು ರಾರಾಜಿಸುತ್ತವೆ.

ಗತದಲ್ಲಿ ಮೈಪಡೆದ ನಡೆ ನುಡಿಗಳ ಕುರಿತ ಉಪದೇಶಗಳು ಯಾವ ಬಗೆಯ ಬಿಕ್ಕಟ್ಟನ್ನು ನಿವಾರಿಸಲು ಇವತ್ತು ಬಳಕೆಯಾಗುತ್ತವೆ. ಹೀಗೆ ಅವುಗಳನ್ನು ಮರುಉಚ್ಚರಿಸುವ ಮೂಲಕ ಯಾವ ಬಗೆಯ ಮನುಷ್ಯ ಮತ್ತು ಸಮೂಹಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಹಾಗೂ ಈ ನಿರೂಪಣೆಗಳಿಗೆ ನಾವು ಆರೋಪಿಸುವ ಅರ್ಥಗಳು ಎಂತಹವು ಹಾಗೂ ಇವುಗಳ ಮೂಲಕ ಏರ್ಪಡುವ ಸಾಮಾಜಿಕ ಕ್ರಿಯೆಗೂ ಮತ್ತು ಭಾಷಿಕ ಸಂವಹನಕ್ಕೂ ನಡುವೆ ಎಂತಹ ನಂಟಸ್ತಿಕೆ ಉಂಟಾಗುತ್ತದೆ ಅನ್ನುವುದೇ ಈಗಿನ ಸವಾಲು.

ಈ ಮಾತುಗಳ ಮೂಲಕ ಕೇವಲ ಒಂದು ಜಿಜ್ಞಾಸೆಯನ್ನು ಹುಟ್ಟು ಹಾಕುವುದಕ್ಕಾಗಿ ಇಲ್ಲಿ ಮಂಡಿಸುತ್ತಿಲ್ಲ. ಬದಲಾಗಿ ನಮ್ಮ ಬದುಕಿನ ಕ್ರಿಯಾವರ್ತುಲದೊಳಗೆ ಏರ್ಪಡುವ ಬಿಕ್ಕಟ್ಟುಗಳ ಸ್ವರೂಪವನ್ನು ಅರಿಯುವ ದಾರಿಗಳನ್ನು ಕಂಡುಕೊಳ್ಳಬೇಕಿದೆ. ಆ ಮೂಲಕ ಮನುಷ್ಯ ಘನತೆ ಮತ್ತು ಅದನ್ನು ನೆಲೆಯಾಗಿಸಿಕೊಂಡಿರುವ ನಿರೂಪಣೆಗಳ ತಾತ್ಪರ್ಯವನ್ನು ಘನಾರ್ಥದಲ್ಲಿ ಪರಿಭಾವಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಮ್ಮೀ ಇಡೀ ಬದುಕಿನ ತಾತ್ಪರ್ಯಗಳು ಕೇವಲ ಸಂಕುಚಿತ ಅರ್ಥಗಳ ಆಗರವಾಗುತ್ತದೆ.

ಘನತೆಯ ಸ್ವರೂಪ ಇರುವುದೇ ಬದುಕಿನ ವ್ಯವಹಾರಗಳು ಘನವಾದ ಅರ್ಥವನ್ನು ಪಡೆದುಕೊಳ್ಳುವ ಬಗೆಯಲ್ಲಿ. ಸಮಾನತೆ, ಗೌರವ ಮತ್ತು ಮಾತುಗಳ ನಡುವಿನ ಹೊಂದಾಣಿಕೆ ವಿಚಿತ್ರ ಸ್ವರೂಪದಲ್ಲಿರುತ್ತದೆ. ಉದಾ.ಗೆ ಗಂಡು ಹೆಣ್ಣುಗಳ ನಡುವೆ ಸಮಾನತೆಯನ್ನು ಬಯಸುವವರು ಮಾತುಕತೆಯ ವಿವರಗಳನ್ನು ಬಿಡಿಸಿನೋಡಿದರೆ, ಅಸಮಾನತೆ ಕಣ್ಣಿಗೆ ರಾಚುತ್ತದೆ.

ಪರಸ್ಪರವಾಗಿ ಗೌರವಿಸುವ ವಿಧಾನಗಳು ಹೇಗೆ ಕೆಲಸ ಮಾಡುತ್ತವೆ, ಈ ವಿಧಾನದಲ್ಲಿಯೇ ಅಸಮಾನತೆಯನ್ನು ಹೇಗೆ ಸಮ್ಮತಿಸಲಾಗುತ್ತದೆ ಎಂಬಿತ್ಯಾದಿ ನಿಲುವುಗಳನ್ನು ವಿಶ್ಲೇಷಿಸಿದರೆ, ನಡೆ ನುಡಿಗಳ ಆಳದಲ್ಲಿ ಹುದುಗಿರುವ ಕಂದಕಗಳು ನಿಚ್ಚಳವಾಗಿ ಗೋಚರಿಸುತ್ತೇವೆ. ಇಂತಹ ಕಂದಕಗಳನ್ನು ನಿವಾರಿಸುವ ಹೆಬ್ಬಯಕೆಯಿಂದ ಅವತರಿಸಿದ ವಚನ ಸಾಹಿತ್ಯದಲ್ಲಿಯೂ ಈ ಕಂದಕಗಳು ಹಾಗೇ ಮುಂದುವರೆದಿವೆ.

ಜಾತಿ, ಲಿಂಗ, ಧರ್ಮ ಮೊದಲಾದ ಸಾಮಾಜಿಕ ವಿನ್ಯಾಸಗಳನ್ನು ಕುರಿತಾದ ನಿರೂಪಣೆಗಳು ಇವತ್ತು ನಮಗೆ ಆದರ್ಶದ ವಿನ್ಯಾಸಗಳಾಗಿ ಕಾಣಿಸುತ್ತವೆ. ಹಾಗೂ ವಚನ ಸಾಹಿತ್ಯದ ಶರಣ ಪರಿಕಲ್ಪನೆಯನ್ನು ವಿವರಿಸುವುದು ಹೇಗೆ? ಸಾಮಾಜಿಕ-ಸಾಂಸ್ಕೃತಿಕ ನಿರ್ದಿಷ್ಟತೆಗಳನ್ನು ಮನಗಾಣದೇ, ಅವುಗಳನ್ನು ಕೇವಲ ಆದರ್ಶದ ಮಾದರಿಗಳನ್ನಾಗಿ ಬಿಂಬಿಸುವುದೇ, ಸಂಕುಚಿತಾರ್ಥದ ನಿಲುವುಗಳಾಗಿವೆ.

ಈಗಾಗಲೇ ಹೇಳಿದಂತೆ ಯಾವುದು ವಿಶಾಲ ಮತ್ತು ಘನವಾದ ಅರ್ಥವನ್ನು ಪಡೆಯಲಾರದೋ, ಅಂತಹ ಸನ್ನಿವೇಶಗಳಲ್ಲಿ ಮನಷ್ಯ ಅಥವಾ ಸಮೂಹ ಘನತೆಯ ಚಹರೆಗಳು ಗೌಣವಾಗುತ್ತವೆ. ನೋಡಿ ಯಾವ ಪರಂಪರೆಯನ್ನು ನಾವು ಗೌರವಿಸುತ್ತೇವೆಯೋ, ಆ ಪರಂಪರೆಯಲ್ಲಿಯೇ ಅಪಮಾನದ, ಅಸ್ಪೃಶ್ಯತೆ, ಜಾತೀಯತೆ, ಲೈಂಗಿಕತೆಯ ಕುರಿತ ನಿರೂಪಣೆಗಳು ಯಾಕೇ ಮೈದಾಳುತ್ತವೆ? ಒಂದುಪಕ್ಷ, ಮನುಷ್ಯ ಘನತೆಗೆ ಕುತ್ತು ತರುವ ಇಂತಹ ಅಪಚಾರಗಳನ್ನು ನಿವಾರಿಸಲು ರೂಪಿಸಿದ ತಾತ್ವಿಕ-ನೈತಿಕ ನಿರೂಪಣೆಗಳು ಯಾಕೆ ಫಲಿಸಲಿಲ್ಲ? ಅನ್ನುವ ಪ್ರಶ್ನೆಯನ್ನೂ ಇವತ್ತು ಬಲವಾಗಿಯೇ ಕೇಳುವ ಜರೂರಿದೆ.

ಅಂದರೆ ಮನುಷ್ಯ ಘನತೆಯನ್ನು ರೂಪಿಸುವಂತಹದಲ್ಲ ಬದಲಾಗಿ ನಮ್ಮಲ್ಲಿ ಅಂತಸ್ಥವಾಗಿರುವ ಮಾನವೀಯ ಮೌಲ್ಯಗಳನ್ನು ನಿರಂತರಗೊಳಿಸುವ ಬಗೆಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಕುವೆಂಪು ಅವರು ಹೇಳಿದಂತೆ ‘ಹುಟ್ಟುತ್ತ ವಿಶ್ವಮಾನವ ಬೆಳೆಯುತ್ತ ಅಲ್ಪ ಮಾನವ’, ‘ಮಾನವ ಜನುಮ ದೊಡ್ಡದು ಹುಚ್ಚಪ್ಪಗಳಿರಾ ಹಾನಿ ಮಾಡಬೇಡಿ’ ಎಂದು ಹೇಳಿದ ದಾಸರ ಮಾತು ಹಾಗೂ ವಚನಕಾರರು ನೆಲೆಗೊಳಿಸಿದ ‘ಅರಿವೇ ಗುರು’ ಎಂಬ ತತ್ವಗಳು ಏನನ್ನು ಉದ್ದೇಶಿಸಿವೆ ಅಂದರೆ ಮನುಷ್ಯ ಘನತೆ ಎಂಬುದು ನಮ್ಮಲ್ಲಿ ಅಂತಸ್ಥವಾಗಿರುವ ವಿದ್ಯಮಾನವೇ ಹೊರತು ಅದು ಹೊರಗಿನ ಒತ್ತಾಯಗಳಿಂದ ಮಾತ್ರ ನೆಲೆಗೊಳ್ಳುವ ಪ್ರಕ್ರಿಯೆಯಲ್ಲ. ಹಾಗಾಗಿ ನಮ್ಮೊಳಗೆ ಅಂತಸ್ಥಗೊಂಡ ಈ (ಇನ್ನರ್ ಡಿಗ್ನಿಟಿ) ಮೌಲ್ಯವನ್ನು ನಿರಂತರವಾಗಿ ಸಜ್ಜುಗೊಳಿಸುವ ಅವಶ್ಯಕತೆ ಇದ್ದೇ ಇರುತ್ತದೆ.

ಮಾನವ ಮೌಲ್ಯವನ್ನು ಕುರಿತ ಈ ಮೂಲಗ್ರಹಿಕೆಗಳ ಮೂಲಕ ಹೊರಹೊಮ್ಮಿದ ಒಂದು ವ್ಯಾಪಕ ನೈತಿಕ ದೃಷ್ಟಿಕೋನವು ಮನುಷ್ಯ ಘನತೆಯ ಮತ್ತಿತರ ಮೂರು ಪ್ರಮುಖ ಪರಿಕಲ್ಪನೆಗಳಾದ ‘ಹಕ್ಕು, ಕರ್ತವ್ಯ ಮತ್ತು ಗೌರವ’ಗಳನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಆದರೆ, ವಿಶೇಷವಾಗಿ ಭಾರತದ ಸನ್ನಿವೇಶದಲ್ಲಿ ಈ ಹಕ್ಕು, ಕರ್ತವ್ಯ ಮತ್ತು ಗೌರವಗಳನ್ನು ವ್ಯಾಖ್ಯಾನಿಸುವಾಗ ಸಾಕಷ್ಟು ಅಪಚಾರಗಳು ನಡೆದಿವೆ.

ವರ್ಣ ವ್ಯವಸ್ಥೆ ಮತ್ತು ಜಾತಿ ಶ್ರೇಣೀಕರಣಗಳ ಆಧಾರದ ಮೇಲೆ ಕಾಯಕ ಪರಿಕಲ್ಪನೆಯ ಅರ್ಥದ ಕ್ರಿಯೆಗಳು ಏರ್ಪಡುತ್ತವೆ. ಉದಾ.ಗೆ ‘ಕಾಯಕವೇ ಕೈಲಾಸ’ ಎಂಬೀ ಹೇಳಿಕೆಯ ತಾತ್ಪರ್ಯವೇನು? ಕಾಯಕದ ವ್ಯಾಖ್ಯಾನವೇನು? ಯುರೋಪಿನ ಸಂದರ್ಭದಲ್ಲಿ ಹೇಳಿದ ಡಿಗ್ನಿಟಿ ಆಫ್ ಲೇಬರ್ ಪರಿಕಲ್ಪನೆಯನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ? ಏಕೆಂದರೆ ಕಾಯಕ, ಕೆಲಸ ಇಲ್ಲವೇ ಕಸುಬು ಮೊದಲಾದ ಪರಿಭಾಷೆಗಳನ್ನು ವಿವರಿಸುವಲ್ಲಿ ಸಾಮಾಜಿಕ ಅಂತಸ್ತಿನ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಅಂದರೆ ಕಾಯಕ ಅನ್ನುವುದು ಕೇವಲ ಶ್ರಮದ ಪರಿಕಲ್ಪನೆ ಮಾತ್ರವಾಗದೇ, ಶ್ರಮ ವಿಭಜನೆಯ ತತ್ವವಾಗಿದೆ.

ಕರಕುಶಲ, ವಾಸ್ತುಶಿಲ್ಪ, ಕೃಷಿ, ನಿರ್ಮಾಣ, ಉತ್ಪಾದನೆಯ ಸ್ವರೂಪ ಇತ್ಯಾದಿ ವಲಯಗಳಲ್ಲಿ ನಾವು ಯಾವ ತಾತ್ವಿಕ ಮತ್ತು ನೈತಿಕ ನಿಲುವುಗಳನ್ನು ಆಧರಿಸಿ ಈ ಶ್ರಮ ವಿಭಜನೆಯನ್ನು ಮಾಡುತ್ತೇವೆ. ಅಂದರೆ, ಜಾತಿ, ಧರ್ಮ, ಲಿಂಗಗಳಂತಹ ಸಾಮಾಜಿಕ ರಚನೆಗಳ ಮೂಲಕ ಶ್ರಮ ಮತ್ತು ಕಾಯಕಗಳ ಸಂಬಂಧವನ್ನು ನಿರ್ವಚಿಸುತ್ತೇವೆ. ಈ ನಿರ್ವಚನೆಯಲ್ಲಿ ಬರೀ ವೈಶಿಷ್ಟ್ಯಗಳನ್ನು ಮಾತ್ರ ಪರಿಗಣಿಸದೇ, ಸಾಮಾಜಿಕ ಕಳಂಕಗಳಾಗಿರುವ ಈ ಜಾತಿ, ಧರ್ಮ ಮತ್ತು ಲಿಂಗಗಳನ್ನು ನೆಲೆಯಾಗಿಸುತ್ತೇವೆ.

ಇವುಗಳಿಗೆ ಅಂಟಿದ ಇದೇ ಕಳಂಕವೇ ಈ ಜಾತಿ, ಧರ್ಮ ಮತ್ತು ಲಿಂಗಗಳಿಗೆ ಅನುಗುಣವಾಗಿ ಆಯಾ ಕಾಯಕಗಳಿಗೆ ಆರೋಪಿಸಲಾಗುತ್ತದೆ. ಡಿಗ್ನಿಟಿ ಆಫ್ ಲೇಬರ್ ಇರಬಹುದು ಇಲ್ಲವೇ ಕಾಯಕವೇ ಕೈಲಾಸ ಇರಬಹುದು, ಮನುಷ್ಯರೊಳಗೆ ಅಂತರ್ನಿಹಿತವಾಗಿರುವ ಘನತೆಯನ್ನು ಮರೆಮಾಚಿ, ನಮ್ಮ ಕಾಯಕವನ್ನು ಕಸುಬುಗಳನ್ನಾಗಿ ರೂಪಿಸಲಾಗುತ್ತದೆ. ಕಸುಬುಗಳೆಂದು ಹೇಳಲು ಕಾರಣ ಈ ಪದವನ್ನು ಸಂಕುಚಿತ ನೆಲೆಯ ರೂಪಕವನ್ನಾಗಿಯೂ ಬಳಸಲಾಗುತ್ತದೆ.

ಈ ಇಡೀ ವಿನ್ಯಾಸವನ್ನು ಸಾಮಾಜಿಕ ಅಸಮಾನ ಅಂತಸ್ತುಗಳನ್ನು ಆಧರಿಸಿಕೊಂಡು ರೂಪಿಸಲಾಗುತ್ತದೆ. ಒಟ್ಟಿನಲ್ಲಿ ಈ ಸಾಮಾಜಿಕ ನಕ್ಷೆಯು ಅಸಮಾನತೆಯನ್ನೇ ತನ್ನ ಮೂಲತತ್ವವನ್ನಾಗಿಸಿಕೊಂಡಿದೆ. ಆದ್ದರಿಂದ ವ್ಯಕ್ತಿಗಳ ಘನತೆ ಅವರ ಅಸ್ತಿತ್ವದಿಂದ ಏರ್ಪಡದೇ, ಕೇವಲ ಸಾಮಾಜಿಕ ಅಸಮಾನ ನೀತಿಯಿಂದ ಉಂಟಾಗುತ್ತವೆ. ಸಹಜವಾಗಿ ನಮ್ಮ ಸಂವಹನ ಕ್ರಿಯೆ, ಮಾತುಕತೆಗಳ ವರಸೆ, ವರ್ತನೆ ಹಾಗೂ ನಾವು ಪರಸ್ಪರ ವ್ಯವಹರಿಸುವಾಗ ಈ ಅಸಮಾನ (ಸಾಮಾಜಿಕ) ವಿನ್ಯಾಸಗಳನ್ನೇ ಪ್ರಧಾನ ತತ್ವಗಳನ್ನಾಗಿಸಿಕೊಂಡು, ನಮ್ಮ ಭಾಷಿಕ ಅರ್ಥ ನಿರ್ವಚನೆಗಳನ್ನು ರೂಪಿಸುತ್ತೇವೆ ಇಲ್ಲವೇ ಅವುಗಳೇ ಘಟಿಸುತ್ತವೆ.

ಪುರುಷಪ್ರಧಾನ ಇಲ್ಲವೇ ಪಿತೃ ಪ್ರಧಾನ ಎನ್ನುವುದು ಸಮಾಜದ ಮೇಲ್ವರ್ಗಗಳ ಪ್ರಾಬಲ್ಯವೇ ಆಗಿರುತ್ತದೆ. ಹಾಗಾಗಿ ಶ್ರಮದ ಮೌಲ್ಯವನ್ನು ನಿರ್ಧರಿಸುವಲ್ಲಿ ಸಾಮಾಜಿಕ ತರತಮ ನೀತಿಗಳು ಬಹುಮುಖ್ಯ ಪರಿಕರಗಳು ಆಗುತ್ತವೆ. ಯಾವ ಕಸುಬಿಗೆ ಯಾವ ಸ್ಥಾನ, ಯಾವ ಜಾತಿಗೆ ಯಾವ ಹಕ್ಕು ಹಾಗೂ ಯಾವ ಸಮೂಹಕ್ಕೆ ಯಾವ ಬಗೆಯ ಗೌರವ ಎಂಬುದನ್ನೆಲ್ಲ ನಿರ್ವಚಿಸಿದ್ದು ಕೇವಲ ವರ್ಣ ವ್ಯವಸ್ಥೆಯ ಪ್ರಭಾವ ಮತ್ತು ಪರಿಣಾಮದಿಂದ.

ಭಾಷೆಯು ನಿರ್ವಾತದಲ್ಲಿ ವ್ಯವಹರಿಸುವುದಿಲ್ಲ ಅದು ಕೂಡ ಇಂತಹ ತರತಮದಿಂದ ಕೂಡಿದ ಸನ್ನಿವೇಶದಲ್ಲಿ ತನ್ನ ಅರ್ಥಗಳನ್ನು ಪ್ರಕಟಿಸುವುದರಿಂದ, ಆಯಾ ಸಾಮಾಜಿಕ ಮನ್ನೆಣೆಗೆ ಅನುಗುಣವಾಗಿ ಅರ್ಥಗಳು ಪ್ರಾಪ್ತವಾಗುತ್ತವೆ. ಪ್ರಜಾಸತ್ತಾತ್ಮಕ ಸವಲತ್ತುಗಳು ಯಾರಿಗೆ? ಹೇಗೆ? ಎಲ್ಲಿ? ಯಾವಾಗ? ಸಿಗುತ್ತವೆ ಎಂಬ ಪ್ರಶ್ನೆಯನ್ನು ಕೇಳಿದಾಗ, ನಮ್ಮ ಹಕ್ಕು, ಕರ್ತವ್ಯ ಮತ್ತು ಗೌರವಗಳೂ ಹಾಗೇ ಅವರವರ ಯೋಗ್ಯತೆ, ಅಂತಸ್ತುಗಳಿಗೆ ಪೂರಕವಾಗಿ ಲಭಿಸುತ್ತವೆ.

ಮತ್ತೇ ಇಲ್ಲಿ ಈ ಯೋಗ್ಯತೆ ಮತ್ತು ಅಂತಸ್ತು ಅನ್ನುವುದು ನಿರ್ಧಾರವಾಗುವುದು ಅದೇ ಸಾಮಾಜಿಕತೆಯ ನಿಲುವುಗಳಿಂದ. ಆದ್ದರಿಂದ ವಿಭಿನ್ನ ಸಮೂಹಗಳ ನಡುವೇ ಅವರವರ ಕಸುಬುಗಳಿಗೆ ಹೊರತಾಗಿ ಕೇವಲ ಮನುಷ್ಯನ ಅಸ್ತಿತ್ವದ ಆಧಾರದ ಮೇಲೆ ಸಾಮಾಜಿಕ ಐಕ್ಯತೆ ಮತ್ತು ಸಾಂಗತ್ಯ ಏರ್ಪಡುವುದಿಲ್ಲ. ಹಕ್ಕು, ಕಾಯಕ (ಕರ್ತವ್ಯ) ಮತ್ತು ಗೌರವಗಳ ನಡುವಣ ಸಂಬಂಧವು ಸಾವಯವ ಸಂಬಂಧವಾಗಬೇಕು. ಅಂದರೆ ಬೇರು ಕಾಂಡ ಮತ್ತು ಚಿಗುರುಗಳ ನಡುವಿನ ಸಾವಯವ ಸಂಬಂಧವೂ ಇಲ್ಲಿ ಏರ್ಪಡಬೇಕು. ಆವಾಗ ಮಾತ್ರ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯ ಸಾಧ್ಯ.

ಇಂತಹ ಸನ್ನಿವೇಶದಲ್ಲಿ ಪ್ರಕಟವಾಗುವ ಅರ್ಥಗಳು ಸಹಜವಾಗಿ ಸಾಮಾಜಿಕ ಸಾಂಗತ್ಯದ ರೂಪಕವಾಗುತ್ತವೆ. ಇಲ್ಲವಾದಲ್ಲಿ ವಾಕ್ ಮತ್ತು ಅರ್ಥಗಳ ಅಂತರ ಇನ್ನಷ್ಟು ಬಿಗಡಾಯಿಸುತ್ತದೆ. ಕಾಳಿದಾಸ ಇದನ್ನು ‘ವಾಗಾರ್ಥ’ ಎಂಬ ಐಕ್ಯಪದವನ್ನು ಬಳಸಿದ್ದರೂ ವಾಕ್ (ರೂಪು) ಹೆಣ್ಣಾಗಿಯೂ ಮತ್ತು ಅರ್ಥ (ನಿರ್ಧಾರ/ನಿರ್ಣಯ) ಗಂಡಾಗಿಯೂ ಇಲ್ಲಿ ಧ್ವನಿಸುತ್ತದೆ. ಅದಕ್ಕಾಗಿಯೇ ಈ ವಾಗಾರ್ಥವನ್ನು ಪಾರ್ವತಿ ಮತ್ತು ಪರಮೇಶ್ವರರ ಒಗ್ಗಟ್ಟಿನ ರೂಪಕವನ್ನಾಗಿ ಕೊಟ್ಟಿರುವುದು. ಭಾಷಿಕ ರೂಪಗಳಿಗೆ ಸ್ವಾಯತ್ತ ಅಸ್ತಿತ್ವ ಇರುವುದಿಲ್ಲ, ಅವುಗಳ ಅಸ್ತಿತ್ವ ಅರ್ಥ ನಿರ್ಣಯದಲ್ಲಿರುತ್ತದೆ.

ಈ ಅರ್ಥ ನಿರ್ಣಯವನ್ನು ಮಾಡುವುದು ಪುರುಷಪ್ರಧಾನ ವ್ಯವಸ್ಥೆಯಲ್ಲಿಯೇ ನಡೆಯುತ್ತದೆ. ಭಾಷಿಕ/ವಾಕ್ (ಪಾರ್ವತಿ) ರೂಪಗಳಿಗೆ ಅರ್ಥ (ಪರಮೇಶ್ವರ)ಗಳು ಏರ್ಪಡುವುದೇ ಗಂಡು ಕೇಂದ್ರಿತ ಚಿಂತನೆಯಾಗಿದೆ. ಆದ್ದರಿಂದ ಹಕ್ಕು, ಕರ್ತವ್ಯ ಮತ್ತು ಗೌರಗಳು ಪರಸ್ಪರವಾಗಿ ವ್ಯವಹರಿಸದೇ ಸಾಮಾಜಿಕ ಅಧಿಕಾರ ಸಂಬಂಧಗಳ ಮೂಲಕ ಘಟಿಸುತ್ತವೆ. ಇವುಗಳ ನಡುವೇ ಯಾವುದೇ ಸಾವಯವ ಸಂಬಂಧವನ್ನು ನೋಡಲು ಸಾಧ್ಯವಿಲ್ಲ. ಬೇರು, ಕಾಂಡ ಮತ್ತು ಚಿಗುರುಗಳು ಇಲ್ಲಿ ವಿಘಟನೆಯ ರೂಪಕಗಳಾಗಿ ನೆಲೆನಿಂತಿವೆ.

ದಿಟ ಮರದ ಯಾವುದೇ ಒಂದು ಭಾಗಕ್ಕೆ ಪೆಟ್ಟು ಬಿದ್ದರೆ ಇಡೀ ಮರದ ಅಸ್ತಿತ್ವವನ್ನು ನಾಶಪಡಿಸಲಾರದು. ಆದರೆ ಸಾಂಗತ್ಯ ಮತ್ತು ಐಕ್ಯತೆಯ ಪ್ರಶ್ನೆ ಇರುವುದು ಕೇವಲ ಯಾವುದೇ ಒಂದು ಅಂಗದಲ್ಲಿ ಅಲ್ಲ ಅದು ಅಖಂಡತೆಯ ರೂಪಕವಾಗಿದೆ. ಸಮಾಜದ ಅಖಂಡತೆಯನ್ನು ಕಾಪಾಡುವುದೆಂದರೆ, ಅರ್ಥಗಳ ಅಖಂಡತೆಯನ್ನೂ ಕಾಪಾಡುವುದು ಆಗಿರುತ್ತದೆ. ಮನುಷ್ಯ ಘನತೆಯನ್ನು ನಿರೂಪಿಸುವ ಇಲ್ಲವೇ ನಿರ್ವಚಿಸುವ ವಿಧಾನಗಳು ಸಾಮಾಜಿಕ ಅಖಂಡತ್ವದಿಂದ ಘಟಿಸುತ್ತವೆ.

ಇದೇನೂ ಸಾಮಾಜಿಕ ಸಮೀಕರಣದ ಮಾದರಿಯಲ್ಲ ಬದಲಾಗಿ ನಮ್ಮ ನಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳ ನಡುವಣ ಸಾಮರಸ್ಯದ ಬಗೆಯಾಗಿದೆ. ಈ ಸಾಮರಸ್ಯವು ಹಕ್ಕು, ಕರ್ತವ್ಯ ಮತ್ತು ಗೌರವಗಳ ನಡುವಿನ ಡಿಸ್ಟಿಂಗ್ಸೆನ್ ಆಗಿರುತ್ತದೆ. ಇದು ಮರದ ಬೇರುಗಳನ್ನು ಬಲಪಡಿಸುವ ಬಗೆಯಾಗಿದೆ. ಈ ಮೂಲಕ ಮನುಷ್ಯ ಘನತೆಯ ಘನವಾದ/ ಇಡಿಯಾದ ಅರ್ಥಗಳು ಮುನ್ನೆಲೆಗೆ ಬರುತ್ತವೆ. ಹಾಗಾಗಿ ಡಿಸ್ಟಿಂಗ್ಸೆನ್ ಎನ್ನುವುದು ಡೈಕಾಟಮಿಯಲ್ಲ ಬದಲಾಗಿ ಅವುಗಳಿಗೆ ಆರೋಪಿಸಲಾಗುವ ಅರ್ಥಗಳ ನಡುವೇ ಅಸಮಾನತೆ ಇರಕೂಡದು ಅಷ್ಟೇ.

ಅಂದರೆ ಸಾಮಾಜಿಕ ಸಾಂಸ್ಕೃತಿಕ ಸಮತೋಲವನ್ನು ಕಾಪಾಡುವ ಬಗೆಯಲ್ಲಿ ವ್ಯಾಖ್ಯಾನಗಳು, ಅರ್ಥ ಸಾಧ್ಯತೆಗಳು ಏರ್ಪಡಬೇಕು. ಹೌದು ಈ ಯಾವ ಪರಿಕಲ್ಪನೆಯೂ ಕೂಡ ಆತ್ಯಂತಿಕವಲ್ಲ ಆದರೆ ಅವುಗಳಿಗೆ ದೊರೆಯಬಹುದಾದ ಸಾಮಾಜಿಕ-ಸಾಂಸ್ಕೃತಿಕ ಮಾನ್ಯತೆಯಲ್ಲಿ ಸಮತೋಲನ ಇರಬೇಕೆಂಬ ಒತ್ತಾಯ ಮಾತ್ರ. ಈ ನಡೆ ಕೇವಲ ರಾಜಕೀಯ ಸರಿತನದ ವಿನ್ಯಾಸವಲ್ಲ. ಇದು ವಾಸ್ತವದಲ್ಲಿ ಸಾಂಸ್ಕೃತಿಕ ಸರಿತನದ ನಿಲುವೂ ಆಗಿದೆ. ಮನುಷ್ಯ ಘನತೆ ಎನ್ನುವುದು ಸಾಂಸ್ಕೃತಿಕ ಸಮತೋಲನ ಮತ್ತು ಸರಿತನದ ವಿದ್ಯಮಾನವಾಗಿದೆ. ಹೊರತು ಅದು ರಾಜಕೀಯ ಮೇಲಾಟದ ವಿನ್ಯಾಸವನ್ನಾಗಿ ಮಾತ್ರ ನೋಡ ಕೂಡದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version