ದಿನದ ಸುದ್ದಿ
ನೂತನ ಸಂಸದರನ್ನು ಸ್ವಾಗತಿಸಲು ಲೋಕಸಭಾ ಕಾರ್ಯಾಲಯ ಸಜ್ಜು ; ಸಂಸದರಿಗೆ ಇಷ್ಟೆಲ್ಲಾ ಸವಲತ್ತುಗಳು..!
ಸುದ್ದಿದಿನ ಡೆಸ್ಕ್ : ಲೋಕಸಭೆಯ ಅಂತಿಮ ಚರಣದ ಮತದಾನ ದಿನ ಹಾಗೂ ನಂತರ ಚುನಾವಣಾ ಫಲಿತಾಂಶವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಂಸದರನ್ನು ಬರ ಮಾಡಿಕೊಳ್ಳಲು ಲೋಕಸಭಾ ಕಾರ್ಯಾಲಯ ವ್ಯಾಪಕ ವ್ಯವಸ್ಥೆಯಿಂದ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಚುನಾಯಿತ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ನೂತನ ಅಭ್ಯರ್ಥಿಗಳ ಆಗಮನ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ಪ್ರಯಾಣಕ್ಕೆ ಮುನ್ನವೇ ಲೋಕಸಭೆ ಕಾರ್ಯಾಲಯದ ನೋಡಲ್ ಅಧಿಕಾರಿಗಳು ಅವರನ್ನು ಸಂಪರ್ಕಿಸುತ್ತಾರೆ. ಐಜಿಐ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ವಿವಿಧ ಟರ್ಮಿನಲ್‌ಗಳಲ್ಲಿ ವಿಶೇಷ ಸ್ವಾಗತ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಂಸದರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗದಿತ ಕೇಂದ್ರಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ.
ಸಂಸತ್ತಿನ ಅನೆಕ್ಸೆ ವಿಸ್ತೃತ ಕಟ್ಟಡದ ಸ್ವಾಗತ ಕೇಂದ್ರಕ್ಕೆ ಆಗಮಿಸಿದ ನಂತರ ಅವರಿಗೆ ದೂರವಾಣಿ ಸಂಪರ್ಕ, ಹೊಸಬ್ಯಾಂಕ್ ಖಾತೆ, ಸಂಸತ್ ಕಟ್ಟಡಕ್ಕೆ ಪ್ರವೇಶ ಪಡೆಯಲು ಸ್ಮಾರ್ಟ್ ಆಕ್ಸೆಸ್ ಕಾರ್ಡ್, ಅವರ ವಾಹನಗಳಿಗಾಗಿ ಫಾಸ್ಟ್ ಟ್ಯಾಗ್ ಸ್ಟಿಕರ್ ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಅತಿಥಿ ಭವನ ಹಾಗೂ ಪಶ್ಚಿಮ ನ್ಯಾಯಾಲಯ ಹಾಸ್ಟೇಲ್ ಸಂಕೀರ್ಣದಲ್ಲಿ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸ ಸದಸ್ಯರಿಗೆ ಸಂವಿಧಾನದ ಪ್ರತಿ ನೀತಿ ಮತ್ತು ಕಲಾಪ, ಪ್ರಕ್ರಿಯೆ, ನಿಯಮಾವಳಿ ಕೈಪಿಡಿಗಳನ್ನು ಅನುಸರಿಸಲು ನೀಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243